ವಿಟಮಿನ್ ಡಿ ನಮ್ಮ ದೇಹಕ್ಕೆ ಅತ್ಯಗತ್ಯ, ಮುಖ್ಯವಾಗಿ ಸೂರ್ಯನ ಬಿಸಿಲು ಮತ್ತು ಕೆಲವು ಆಹಾರಗಳಿಂದ ಪಡೆಯುತ್ತೇವೆ. ವಿಟಮಿನ್ ಡಿ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಮೂಳೆಗಳ ಆರೋಗ್ಯ ಕಾಪಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಡಿ(Vitamin D) ನಮಗೆ ದೊರೆಯುವುದು ಮುಖ್ಯವಾಗಿ ಸೂರ್ಯನ ಬಿಸಿಲಿನಿಂದ ಮತ್ತು ಕೆಲವು ಆಹಾರ ಪದಾರ್ಥಗಳಿಂದ. ವಿಟಮಿನ್ ಡಿ ಎನ್ನುವಂತದ್ದು ನಮ್ಮ ದೇಹಕ್ಕೆ ಮೂಲಭೂತವಾದಂತಹ ವಿಟಮಿನ್‌ಗಳಲ್ಲಿ ಒಂದು. ಒಂದು ವರದಿಯ ಪ್ರಕಾರ ಪ್ರಪಂಚದಾದ್ಯಂತ ಸುಮಾರು 1 ಬಿಲಿಯನ್ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಈ ಪ್ರಮುಖ ವಿಟಮಿನ್ ನಮ್ಮ ಮೂಳೆಗಳನ್ನು ಬಲವಾಗಿಡುವಲ್ಲಿ ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ಕೊರತೆ ಎನ್ನುವಂತದ್ದು ಸಾಮಾನ್ಯ ವಿಷಯ ಎಂದು ತಿಳಿಯುವವರಿದ್ದಾರೆ. ಆದರೆ ಇದರ ಕೊರತೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಪರಿಣಾಮ ಬೀರುತ್ತದೆ.
ವಿಟಮಿನ್ ಡಿ(Vitamin D) ಎಂದರೆ ಕ್ಯಾಲ್ಸಿಫೆರಾಲ್ ಎಂದು ಔಪಚಾರಿಕವಾಗಿ ಕರೆಯಲ್ಪಡುವ ವಿಟಮಿನ್ ಡಿ, ಕೊಬ್ಬು ಕರಗುವ ಪೋಷಕಾಂಶವಾಗಿದ್ದು, ಇದು ಎರಡು ಪ್ರಮುಖ ಅಂಶಗಳನ್ನ ಹೊಂದಿದೆ. ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು(Bone) ತಲುಪಿ ಬಲವಾಗಿಸಲು ಸಹಾಯ ಮಾಡುವುದರ ಜೊತೆಗೆ ಅವುಗಳನ್ನು ಸದೃಢಗೊಳಿಸುತ್ತವೆ. ಮತ್ತು ನಮ್ಮ ದೇಹಕ್ಕೆ ರೋಗನಿರೋಧ ಶಕ್ತಿಯನ್ನ ಹೆಚ್ಚಿಸುತ್ತದೆ. ನಮ್ಮ ದೇಹವು ಸಾಕಷ್ಟು ವಿಟಮಿನ್ ಡಿ ಹೊಂದಿದ್ದರೆ, ಅದರ ಒಟ್ಟಾರೆ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ 30% ರಿಂದ 40% ರಷ್ಟಿರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ ವಿಟಮಿನ್ ಡಿ ಮಟ್ಟಗಳು ಕಡಿಮೆಯಾದಾಗ, ಆಹಾರದಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕೇವಲ 10% ರಿಂದ 15% ರಷ್ಟಿರುತ್ತದೆ. ಸಾಕಷ್ಟು ವಿಟಮಿನ್ ಡಿ ಸಿಗದಿದ್ದರೆ ಅದು ನಿಮ್ಮ ದೇಹದ ಮೇಲೆ ಹಾನಿಯನ್ನುಂಟುಮಾಡಬಹುದು, ಇದು ಮನಸ್ಥಿತಿ ಬದಲಾವಣೆ, ಸ್ನಾಯು ಸೆಳೆತ ಮತ್ತು ಆಯಾಸದಂತಹ ಲಕ್ಷಣಗಳಿಂದ ಪ್ರಾರಂಭವಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಮೂಳೆ ಮುರಿತದ ಅಪಾಯ ಸೇರಿದಂತೆ ನಿಮ್ಮ ಮೂಳೆಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ವಿಟಮಿನ್ ಡಿ ನಮ್ಮ ದೇಹಕ್ಕೆ ಹೇರಳವಾಗಿ ಸಿಗುವುದು ಒಂದು ಸೂರ್ಯನ ಬಿಸಿಲಿನಿಂದ(SunLight), ಸೂರ್ಯೋದಯ ಹಾಗೂ ಸೂರ್ಯಾಸ್ತದ ಬಿಸಿಲು ದೇಹಕ್ಕೆ ಬಹಳ ಉತ್ತಮ. ಬೆಳಗ್ಗೆ ಮತ್ತು ಸಾಯಂಕಾಲದ ಬಿಸಿಲಿನಲ್ಲಿ ಹೇರಳವಾಗಿ ವಿಟಾಮಿನ್ ಡಿ ಇರುತ್ತದೆ. ಹಾಗೇ ಬೆಳಗ್ಗೆ ಮತ್ತು ಸಾಯಂಕಾಲದ ಬಿಸಿಲಿನಲ್ಲಿ ಚರ್ಮಕ್ಕೆ ಹಾನಿಯಾಗುವಂತಹ ಯಾವುದೇ ಹಾನಿಕಾರಕ ಅಂಶಗಳು ಇರುವುದಿಲ್ಲ. ಆದರೆ ನಮ್ಮ ಇಂದಿನ ಆಧುನಿಕ ಬದುಕಿನಲ್ಲಿ ಕೆಲಸದ ಒತ್ತಡದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಅನುಭವವನ್ನೇ ಮರೆತು ಬಿಟ್ಟಿದ್ದೇವೆ. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಆಫೀಸ್ ಕಛೇರಿಗಳಿಗೆ ಸೇರುವ ನಾವು ಸೂರ್ಯಾಸ್ತದ ನಂತರ ಮನೆಗೆ ಸೇರಿಕೊಳ್ಳುವ ನಮಗೆ ಸೂರ್ಯನಿಂದ ಸಿಗುವ ವಿಟಮಿನ್ ಡಿ ಎಲ್ಲಿಂದ ಸಿಗಬೇಕು. ಹಾಗೇ ಆಹಾರದಲ್ಲಿಯೂ ಸಹ ಹೆಚ್ಚಾಗಿ ಫಾಸ್ಟ್‌ಫುಡ್‌ಗಳತ್ತ ಮೊರೆ ಹೋಗುವುದರಿಂದ ಆಹಾರದಿಂದ ಸಿಗುವಂತಹ ವಿಟಮಿನ್ ಡಿ ಸಹ ಸಿಗುವುದಿಲ್ಲ.
ವಿಟಮಿನ್ ಡಿ ಕೊರತೆಯು ನಿರ್ಲಕ್ಷ್ಯ ಮಾಡಿದರೆ ಹೈಪೋಕಾಲ್ಸೆಮಿಯಾ(Hypokalemia) ಎಂಬ ಸ್ಥಿತಿಗೆ ಕಾರಣವಾಗಬಹುದು , ಅಂದರೆ ನಿಮ್ಮ ರಕ್ತದಲ್ಲಿ ಸಾಕಷ್ಟು ಕ್ಯಾಲ್ಸಿಯಂ(Calcium) ಇರೊದಿಲ್ಲ. ಇದು ಮೂಳೆಗಳಲ್ಲಿ ಹೆಚ್ಚು ಶಕ್ತಿ ಇರಿಸುವುದಿಲ್ಲ. ಮತ್ತು ಮೂಳೆ ಮುರಿಯುವ ಸಾಧ್ಯತೆಗಳು ಇರುತ್ತದೆ. ಒಂದು ಅಧ್ಯಯನದಲ್ಲಿ, ಆಸ್ಟಿಯೋಪೊರೋಸಿಸ್(Osteoporosis) ಹೊಂದಿರುವ ಅರ್ಧಕ್ಕಿಂತ ಹೆಚ್ಚು ಋತುಬಂಧಕ್ಕೊಳಗಾದ ಮಹಿಳೆಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಸೂರ್ಯನ ಬಿಸಿಲಿಗೆ ಮೈಯೋಡ್ಡಿಕೊಳ್ಳುವುದು ಉತ್ತಮ, ಹೆಚ್ಚಾಗಿ ಎಸಿ ಜಾಗಗಳಲ್ಲಿ ಕೂತು ಕೆಲಸ ಮಾಡುವವರು ಈ ವಿಟಮಿನ್ ಡಿಯ ಕೊರತೆ ಎದುರಿಸುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಅಂತವರು ಸಾಧ್ಯವಾದಷ್ಟು ಬಿಸಿಲಿಗೆ ಒಡ್ಡಿಕೊಳ್ಳುವುದರ ಜೊತೆಗೆ ವಿಟಮಿನ್ ಡಿ (Vitamin D)ಇರುವ ಆಹಾರಗಳನ್ನ ಸೇವಿಸಬೇಕು. ಮೊಟ್ಟೆ, ಮೀನು, ಹಾಲು ಅಣಬೆಗಳಲ್ಲಿ ಹೇರಳವಾಗಿ ವಿಟಮಿನ್ ಡಿ ಅಂಶ ಇರುತ್ತದೆ. ವಿಟಮಿನ್ ಡಿ ಕೊರತೆ ಕೇವಲ ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸಿದರೆ ಮುಂದೊಂದು ದಿನ ಅದು ಅದೇ ದೊಡ್ಡ ಸಮಸ್ಯೆ ಆಗಿ ಪರಿಣಮಿಸಬಹುದು.
