ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಆಗಾಗ ಬೆಚ್ಚಗಿನ ಪಾನೀಯ ಸೇವಿಸುವುದರಿಂದ ಗಂಟಲಿನ ಕಿರಿಕಿರಿ ಕಡಿಮೆಯಾಗಬಹುದು. ಹೊಗೆ, ಧೂಳು ಮತ್ತು ಕೆಮ್ಮನ್ನು ಪ್ರಚೋದಿಸುವ ವಾಸನೆಗಳಿಂದ ದೂರವಿರುವುದು ಸಹ ಸಹಾಯಕ. ಪರಿಹಾರಕ್ಕೆ ಸ್ಡಿಟೋರಿ ನೋಡಿ..

ವೈರಲ್ ಸೋಂಕು ಬಂದಾಗ ಜ್ವರ, ಮೈಕೈ ನೋವು, ಗಂಟಲು ನೋವು, ಮೂಗು ಕಟ್ಟುವಿಕೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವು ದಿನಗಳಲ್ಲಿ ಈ ಲಕ್ಷಣಗಳು ಕಡಿಮೆಯಾದರೂ, ಕೆಮ್ಮು ಮಾತ್ರ ಇನ್ನೂ ಕೆಲವು ವಾರಗಳ ಕಾಲ ಕಾಡುವುದು ಹಲವರ ಅನುಭವ. ಸೋಂಕು ಗುಣವಾದ ಬಳಿಕವೂ ಕೆಮ್ಮು ಮುಂದುವರಿಯುವುದನ್ನು ಸಾಮಾನ್ಯವಾಗಿ ‘ಪೋಸ್ಟ್-ಇನ್ಫೆಕ್ಷಿಯಸ್ ಕಫ್’ ಎಂದು ಕರೆಯಲಾಗುತ್ತದೆ.

ವೈರಸ್ ದೇಹದಿಂದ ಹೊರಹೋದ ನಂತರವೂ ಗಂಟಲು ಮತ್ತು ಉಸಿರಾಟದ ಮಾರ್ಗಗಳಲ್ಲಿ ಉರಿಯೂತ ಹಾಗೂ ಸಂವೇದನಾಶೀಲತೆ ಸ್ವಲ್ಪ ಸಮಯ ಉಳಿಯಬಹುದು. ಹೀಗಾಗಿ ತಣ್ಣನೆಯ ಗಾಳಿ, ಧೂಳು, ಮಾತನಾಡುವುದು, ನಗುವುದು ಅಥವಾ ತೀವ್ರ ವಾಸನೆಯಂತಹ ಸಣ್ಣ ಪ್ರಚೋದನೆಗಳಿಗೂ ಕೆಮ್ಮು ಆರಂಭವಾಗಬಹುದು. ಸೋಂಕಿನ ಸಂದರ್ಭದಲ್ಲಿ ಉತ್ಪತ್ತಿಯಾದ ಹೆಚ್ಚುವರಿ ಮ್ಯೂಕಸ್ ಕೂಡ ಇದಕ್ಕೆ ಕಾರಣವಾಗಬಹುದು.

ಇದರ ಜೊತೆಗೆ ಮೂಗು ಅಥವಾ ಸೈನಸ್‌ನಿಂದ ಕಫ ಗಂಟಲಿನ ಹಿಂಭಾಗಕ್ಕೆ ಹರಿಯುವ ‘ಪೋಸ್ಟ್-ನೇಸಲ್ ಡ್ರಿಪ್’ ಸಮಸ್ಯೆಯೂ ಕೆಮ್ಮನ್ನು ಹೆಚ್ಚಿಸಬಹುದು. ವಿಶೇಷವಾಗಿ ರಾತ್ರಿ ಮಲಗುವಾಗ ಗಂಟಲಿನಲ್ಲಿ ಕಿರಿಕಿರಿ ಉಂಟಾಗಿ ಕೆಮ್ಮು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಕೆಮ್ಮು ಎಷ್ಟು ದಿನ ಇರುವುದು ಸಾಮಾನ್ಯ?

ವೈರಲ್ ಉಸಿರಾಟದ ಸೋಂಕಿನ ನಂತರ 3ರಿಂದ 8 ವಾರಗಳವರೆಗೆ ಮುಂದುವರಿಯುವ ಕೆಮ್ಮನ್ನು ಪೋಸ್ಟ್-ಇನ್ಫೆಕ್ಷಿಯಸ್ ಅಥವಾ ಸಬ್‌ಅಕ್ಯೂಟ್ ಕಫ್ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಸಮಯ ಕಳೆದಂತೆ ಕೆಮ್ಮಿನ ತೀವ್ರತೆ ನಿಧಾನವಾಗಿ ಕಡಿಮೆಯಾಗುತ್ತದೆ. ಆದರೆ 8 ವಾರಗಳಿಗೂ ಹೆಚ್ಚು ಕಾಲ ಕೆಮ್ಮು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ ಕಾರಣ ತಿಳಿದುಕೊಳ್ಳುವುದು ಅಗತ್ಯ. ಆಸ್ತಮಾ, ಆಸಿಡ್ ರಿಫ್ಲಕ್ಸ್, ದೀರ್ಘಕಾಲದ ಮೂಗಿನ ಸಮಸ್ಯೆಗಳು ಅಥವಾ ಇತರ ಶ್ವಾಸಕೋಶದ ಕಾಯಿಲೆಗಳನ್ನೂ ಪರಿಶೀಲಿಸಬೇಕಾಗಬಹುದು.

ಕೆಮ್ಮಿಗೆ ಆ್ಯಂಟಿಬಯಾಟಿಕ್ ಬೇಕೇ?

ವೈರಲ್ ಸೋಂಕಿನ ಬಳಿಕ ಕಾಣಿಸಿಕೊಳ್ಳುವ ಕೆಮ್ಮಿಗೆ ಸ್ವಯಂಪ್ರೇರಿತವಾಗಿ ಆ್ಯಂಟಿಬಯಾಟಿಕ್ ತೆಗೆದುಕೊಳ್ಳುವುದು ಸರಿಯಲ್ಲ. ಆ್ಯಂಟಿಬಯಾಟಿಕ್ ವೈರಸ್ ವಿರುದ್ಧ ಪರಿಣಾಮಕಾರಿಯಾಗುವುದಿಲ್ಲ. ಅಗತ್ಯವಿಲ್ಲದೆ ಬಳಸಿದರೆ ಅಡ್ಡಪರಿಣಾಮಗಳ ಜೊತೆಗೆ ಆ್ಯಂಟಿಬಯಾಟಿಕ್ ರೆಸಿಸ್ಟೆನ್ಸ್ ಅಪಾಯವೂ ಹೆಚ್ಚಬಹುದು. ಬ್ಯಾಕ್ಟೀರಿಯಲ್ ನ್ಯುಮೋನಿಯಾ, ಬ್ಯಾಕ್ಟೀರಿಯಲ್ ಸೈನಸೈಟಿಸ್ ಅಥವಾ ವೂಪಿಂಗ್ ಕಫ್‌ನಂತಹ ಸಮಸ್ಯೆಗಳ ಅನುಮಾನವಿದ್ದರೆ ಮಾತ್ರ ವೈದ್ಯರ ಸಲಹೆಯ ಮೇರೆಗೆ ಔಷಧಿ ತೆಗೆದುಕೊಳ್ಳಬೇಕು.

ಕೆಮ್ಮು ಕಡಿಮೆಯಾಗಲು ಏನು ಮಾಡಬಹುದು?

ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಆಗಾಗ ಬೆಚ್ಚಗಿನ ಪಾನೀಯ ಸೇವಿಸುವುದರಿಂದ ಗಂಟಲಿನ ಕಿರಿಕಿರಿ ಕಡಿಮೆಯಾಗಬಹುದು. ಹೊಗೆ, ಧೂಳು ಮತ್ತು ಕೆಮ್ಮನ್ನು ಪ್ರಚೋದಿಸುವ ವಾಸನೆಗಳಿಂದ ದೂರವಿರುವುದು ಸಹ ಸಹಾಯಕ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮತ್ತು ವಯಸ್ಕರಿಗೆ ಜೇನುತುಪ್ಪವನ್ನು ಬಳಸಬಹುದು. ಮೂಗು ಕಟ್ಟುವಿಕೆ ಅಥವಾ ಮೂಗಿನ ಸಮಸ್ಯೆ ಇದ್ದರೆ ಸಾಲೈನ್ ನಾಸಲ್ ರಿನ್ಸ್ ಸಹ ಕೆಲವರಿಗೆ ಆರಾಮ ನೀಡಬಹುದು.

ಸ್ಟೀಮ್ ತೆಗೆದುಕೊಳ್ಳುವುದರಿಂದ ಕೆಲವರಿಗೆ ತಾತ್ಕಾಲಿಕವಾಗಿ ಆರಾಮ ಸಿಗಬಹುದು. ಆದರೆ ಬಿಸಿ ನೀರಿನಿಂದ ಸುಟ್ಟ ಗಾಯಗಳಾಗದಂತೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

ಕೆಮ್ಮು ದಿನದಿಂದ ದಿನಕ್ಕೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದ್ದರೆ ಅಥವಾ ಮೂರು ವಾರಗಳ ನಂತರವೂ ಸುಧಾರಣೆ ಕಾಣದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಉಸಿರಾಟದ ತೊಂದರೆ, ಎದೆನೋವು, ವೀಸಿಂಗ್, ಹೆಚ್ಚಿನ ಜ್ವರ, ಕಫದಲ್ಲಿ ರಕ್ತ, ಕಾರಣವಿಲ್ಲದೆ ತೂಕ ಇಳಿಕೆ, ಧ್ವನಿಯಲ್ಲಿ ಬದಲಾವಣೆ ಅಥವಾ ತೀವ್ರ ದೌರ್ಬಲ್ಯದಂತಹ ಲಕ್ಷಣಗಳು ಕಂಡುಬಂದರೆ ವೈದ್ಯಕೀಯ ತಪಾಸಣೆಯನ್ನು ವಿಳಂಬ ಮಾಡಬಾರದು.

ಅಗತ್ಯವಿದ್ದರೆ ವೈದ್ಯರು ಕ್ಲಿನಿಕಲ್ ಪರೀಕ್ಷೆಯ ಜೊತೆಗೆ ಎದೆ ಎಕ್ಸ್-ರೇ ಅಥವಾ ಲಂಗ್ ಫಂಕ್ಷನ್ ಟೆಸ್ಟ್‌ನಂತಹ ಪರೀಕ್ಷೆಗಳನ್ನು ಸೂಚಿಸಬಹುದು. ಹೀಗಾಗಿ ವೈರಲ್ ಸೋಂಕಿನ ನಂತರ ಉಳಿಯುವ ಕೆಮ್ಮು ಯಾವಾಗಲೂ ಗಂಭೀರ ಸಮಸ್ಯೆ ಎಂದರ್ಥವಲ್ಲ. ಆದರೆ ಅದು ದೀರ್ಘಕಾಲ ಮುಂದುವರಿದರೆ ಅಥವಾ ಇತರ ಎಚ್ಚರಿಕೆಯ ಲಕ್ಷಣಗಳೊಂದಿಗೆ ಕಾಣಿಸಿಕೊಂಡರೆ ಕಾರಣವನ್ನು ಪತ್ತೆಹಚ್ಚಲು ವೈದ್ಯರ ಸಲಹೆ ಪಡೆಯುವುದು ಮುಖ್ಯ.