ಊಟ ಆದ್ಮೇಲೆ ಏನಾದ್ರೂ ಸಿಹಿ ಬೇಕು. ಕೆಲವೊಮ್ಮೆ ಮನಸ್ಸು ಉಪ್ಪಿನ ಚಿಪ್ಸ್ ಕೇಳುತ್ತೆ. ಅದಕ್ಕೆ ಕಾರಣ ಏನು? ಪರಿಹಾರ ಏನು?
ಅದೆಷ್ಟೇ ರುಚಿಯಾದ ಅಡುಗೆ ತಿನ್ನಿ, ಹೊಟ್ಟೆ ತುಂಬಿದೆ ಇನ್ನೊಂದು ತುತ್ತು ಹೊಟ್ಟೆಗೆ ಹೋಗೋಕೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದ್ರೂ ಬಾಯಿ, ಮನಸ್ಸು ಸಿಹಿ ತಿಂಡಿಯನ್ನು ಕೇಳುತ್ತೆ. ಅನೇಕರು ಊಟವಾದ ಮೇಲೆ ಚಾಕೋಲೇಟ್, ಸ್ವೀಟ್ ಅಂತ ಡಬ್ಬ ಹುಡುಕ್ತಾರೆ. ಕೊನೆಗೆ ಸಕ್ಕರೆ (Sugar)ಯಾದ್ರೂ ಸರಿ. ಬಾಯಿಗೆ ಸಿಹಿ ಬಿದ್ರೆ ಮನಸ್ಸಿಗೆ ಸಮಾಧಾನ. ಇನ್ನು ಕೆಲವರಿಗೆ ಮಧ್ಯಾಹ್ನದ ಟೈಂನಲ್ಲಿ ಖಾರದ ಸ್ನ್ಯಾಕ್ಸ್ ತಿನ್ನೋ ಆಸೆಯಾಗುತ್ತೆ. ನಿಮಗೂ ಈ ಅಭ್ಯಾಸ ಇದ್ರೆ ಟೆನ್ಷನ್ ಬೇಡ. ಬರೀ ನೀವು ಮಾತ್ರ ಅಲ್ಲ ನಿಮ್ಮಂಗೆ ಅನೇಕರಿಗೆ ಈ ಕ್ರೇವ್ ಇರುತ್ತೆ.
ಈ ಕ್ರೇವ್ ಗೆ ಹಲವಾರು ಶಾರೀರಿಕ ಮತ್ತು ಮಾನಸಿಕ ಕಾರಣಗಳಿದ್ದರೂ, ನಿಮ್ಮ ದೇಹದಲ್ಲಿ ಆಗಿರುವ ಅಸಮತೋಲನಗಳು ಸಹ ಕಾರಣವಾಗಿರಬಹುದು. ಉಪ್ಪು ಮತ್ತು ಸಿಹಿ ಕ್ರೇವ್ ಏನನ್ನು ಸೂಚಿಸುತ್ತೆ? ಅವುಗಳನ್ನು ನಿಯಂತ್ರಣದಲ್ಲಿಡಲು ಏನು ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ.
ಸಿಹಿ (Sweet) ಮತ್ತು ಉಪ್ಪಿನ ಕ್ರೇವ್ (Salt craving) ಎಂದರೇನು? : ನಿಮ್ಮ ದೇಹ ವಾಹನದಂತೆ. ಸರಾಗವಾಗಿ ಕೆಲ್ಸ ಮಾಡೋಕೆ ಅದಕ್ಕೆ ಇಂಧನ ಬೇಕು. ಇಲ್ಲಿ ಇಂಧನ ಅಂದ್ರೆ ಮೆಗ್ನೀಸಿಯಮ್ನಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿದ ಸಮತೋಲಿತ ಆಹಾರವನ್ನು ಸೂಚಿಸುತ್ತೆ. ಆದ್ರೆ ದೇಹಕ್ಕೆ ಅಗತ್ಯವಿರುವ ಈ ಪೋಷಕಾಂಶ ಸಿಗದೆ ಹೋದಾಗ ಕ್ರೇವ್ ನಿಮ್ಮನ್ನು ಕಾಡುತ್ತದೆ. ಸಿಹಿ ಅಥವಾ ಖಾರದ ಆಹಾರ ತಿನ್ನುವಂತೆ ಒತ್ತಡ ಹೇರುತ್ತದೆ.
ಶುಗರ್ ಕ್ರೇವ್ ಗೆ ಕಾರಣ ಏನು? : ಇತರ ಸರಳ ಕಾರ್ಬೋಹೈಡ್ರೇಟ್ಗಳಂತೆ ಸಿಹಿಯು ದೇಹವನ್ನು ಸಿರೊಟೋನಿನ್ ಮತ್ತು ಡೋಪಮೈನ್ನಂತಹ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಅತಿಯಾದ ಸಕ್ಕರೆ ಆಹಾರಗಳನ್ನು ನೀವು ಆಗಾಗ ಸೇವನೆ ಮಾಡ್ತಿದ್ದರೆ ನಿಮ್ಮ ದೇಹ ಸಿಹಿಗೆ ಒಗ್ಗಿಕೊಳ್ಳುತ್ತದೆ. ಇದು ಮೆದುಳಿನಲ್ಲಿ ನರರಾಸಾಯನಿಕ ಬದಲಾವಣೆಗಳಿಗೆ ಕಾರಣವಾಗಬಹುದು. ಇದ್ರಿಂದ ಆಗಾಗ ಕ್ರೇವ್ ಕಾಡುತ್ತದೆ.
• ಊಟದ ನಂತ್ರ ಸಿಹಿ ಕ್ರೇವ್ ನಿಮ್ಮನ್ನು ಕಾಡ್ತಿದೆ ಅಂದ್ರೆ ನೀವು ಕಾರ್ಬೋಹೈಡ್ರೇಟ್ಗಳ ಹೆಚ್ಚಿರುವ ಊಟ ಸೇವಿಸುತ್ತೀರಿ ಎಂದರ್ಥ. ಸಕ್ಕರೆ ಕ್ರೇವ್, ಪ್ರೋಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳ ಅಸಮತೋಲನ ಸೂಚಿಸುತ್ತದೆ.
• ನಮ್ಮ ದೇಹದಲ್ಲಿ ನೀರು ಕಡಿಮೆ ಆದಾಗ ಮೆದುಳು ಏನಾದ್ರೂ ತಿನ್ನುವ ಸೂಚನೆ ರವಾನೆ ಮಾಡುತ್ತದೆ. ಗ್ಲೈಕೋಜೆನ್ ಚಯಾಪಚಯಕ್ಕೆ ಸಾಕಷ್ಟು ಶಕ್ತಿ ಬೇಕು. ನೀರು ಇಲ್ಲವೆ ಸಕ್ಕರೆಯಿಂದ ಇದು ಸಾಧ್ಯ. ಹಾಗಾಗಿ ಸಿಹಿ ಕ್ರೇವ್ ನಮಗೆ ಶುರುವಾಗುತ್ತದೆ. ಮುಂದಿನ ಬಾರಿ ಕ್ರೇವ್ ಶುರುವಾದಾಗ ಸಕ್ಕರೆ ಬದಲು ನೀರು, ಎಳ ನೀರನ್ನು ಸೇವಿಸಿ.
• ಒತ್ತಡ ಜನರಲ್ಲಿ ಹಸಿವು ಮತ್ತು ಕ್ರೇವ್ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಸಕ್ಕರೆ ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ತಾತ್ಕಾಲಿಕ ಆನಂದವನ್ನು ನೀಡುತ್ತದೆ. ಈ ಸಂತೋಷಕ್ಕಾಗಿ ಜನರು ಸಿಹಿ ಸೇವನೆ ಮಾಡ್ತಾರೆ.
ಉಪ್ಪಿನ ಕ್ರೇವ್ ಏಕೆ? :
• ಉಪ್ಪಿನ ಅಸಮತೋಲನ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನದ ಸ್ಪಷ್ಟ ಲಕ್ಷಣವಾಗಿದೆ. ಇದರಿಂದ ಅತಿಯಾದ ನಿರ್ಜಲೀಕರಣ ಉಂಟಾಗ್ಬಹುದು.
• ಒತ್ತಡದಂತೆ ನಿದ್ರೆ ಕೊರತೆ ನಿಮ್ಮ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಇದು ಉಪ್ಪಿನ ಕ್ರೇವ್ ಗೆ ಕಾರಣವಾಗುತ್ತದೆ. ನಿದ್ರೆ ಕಡಿಮೆ ಆದಾಗ ಅಥವಾ ದಣಿದಾಗ ಸಿರೊಟೋನಿನ್ ಮಟ್ಟ ಕಡಿಮೆಯಾಗುತ್ತವೆ. ಆಗ ದೇಹ ಸಿಹಿ ಅಥವಾ ಉಪ್ಪಿನ ಆಹಾರವನ್ನು ಬಯಸುತ್ತದೆ.
• ಅಡಿಸನ್ ಕಾಯಿಲೆ ಕೂಡ ಉಪ್ಪಿನ ಕ್ರೇವ್ ಹೆಚ್ಚು ಮಾಡುತ್ತದೆ.
ಇದಕ್ಕೆ ಪರಿಹಾರ ಏನು? :
• ಹೆಚ್ಚಿನ ಮಟ್ಟದಲ್ಲಿ ನೀರು ಸೇವನೆ. ದಿನಕ್ಕೆ 2 -3 ಲೀಟರ್ ನೀರು ಕುಡಿಯುವುದು.
• ಸಮತೋಲಿತ ಆಹಾರ ಸೇವನೆ
• ಆರೋಗ್ಯಕರ ಸಿಹಿ ಆಹಾರ ಸೇವನೆ.
• ಪ್ರತಿ ದಿನ ಕನಿಷ್ಠ 6 -7 ಗಂಟೆ ನಿದ್ರೆ
• ನಿತ್ಯ ವ್ಯಾಯಾಮ. ವಾಕಿಂಗ್ ಇಲ್ಲವೆ ರನ್ನಿಂಗ್
