ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಕೃತಕ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇಬ್ಬರು ರೋಗಿಗಳಿಗೆ ಸರ್ಜರಿ ಮಾಡಲಾಗಿದೆ. ಇದು ಬ್ಯಾಟರಿ ಚಾಲಿತ ಹೃದಯವಾಗಿದೆ. ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ನಡೆದ ಮೈಲಿಗಲ್ಲೇನು?
ಬೆಂಗಳೂರು(ಮೇ 06) : ಆಸ್ಪತ್ರೆ ಹಾಗೂ ಆರೋಗ್ಯ ಮೂಲ ಸೌಕರ್ಯದಲ್ಲಿ ಬೆಂಗಳೂರು ಸದಾ ಮುಂದಿದೆ. ವಿಶ್ವ ದರ್ಜೆ ಆಸ್ಪತ್ರೆಗಳು ಹಾಗೂ ಚಿಕಿತ್ಸೆ ಬೆಂಗಳೂರಿನಲ್ಲಿ ಲಭ್ಯವಿದೆ. ಇದೀಗ ರಾಜ್ಯದಲ್ಲೇ ಮೊದಲ ಬಾರಿಗೆ ಕೃತಕ ಹೃದಯ ಕಸಿ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಹೆಗ್ಗಳಿಕೆಗೆ ಬೆಂಗಳೂರಿನ ಆಸ್ಪತ್ರೆ ಪಾತ್ರವಾಗಿದೆ. ಹೃದಯ ವೈಫಲ್ಯಕ್ಕೆ ಒಳಗಾಗಿದ್ದ ಇಬ್ಬರು ರೋಗಿಗಳಿಗೆ ಸ್ಪರ್ಶ್ ಆಸ್ಪತ್ರೆಯಲ್ಲಿ ಕೃತಕ ಹೃದಯ ಕಸಿ ನೆರವೇರಿಸಿದ್ದು, ಇದು ರಾಜ್ಯದಲ್ಲೇ ಮೊದಲ ಯಶಸ್ವಿ ಪ್ರಯತ್ನವಾಗಿದೆ.
ಹೃದಯದ ಎಡ ಹೃತ್ಕರ್ಣದ ಹಾರ್ಟ್‌ಮೇಟ್ 3 ಉಪಕರಣ-(ಮೂರನೇ ತಲೆಮಾರಿನ)ವನ್ನು ಮೆಗ್ಲೆವ್ ಫ್ಲೋ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಉತ್ತರ ಕರ್ನಾಟಕ ಮೂಲದ ಗುರಪ್ಪ ಗೋಣಿ ಹಾಗೂ ಗುರುಲಿಂಗಪ್ಪ ಕಲ್ಯಾಣಶೆಟ್ಟಿ ಎಂಬ ಇಬ್ಬರು ಇಳಿವಯಸ್ಸಿನ ರೋಗಿಗಳಿಗೆ ಕೃತಕ ಹೃದಯ ಕಸಿ ನೆರವೇರಿಸಲಾಗಿದೆ. ಇದು ಅತ್ಯಂತ ಸಂಕೀರ್ಣ ಹಾಗೂ ಅಪರೂಪದ ಹೃದಯ ಕಸಿ ಶಸ್ತ್ರಚಿಕಿತ್ಸೆಯಾಗಿದೆ ಎಂದು ಆರ್‌ಆರ್ ನಗರ ಸ್ಪರ್ಶ್ ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ಅಶ್ವಿನ್ ಹೇಳಿದ್ದಾರೆ.
ಏಮ್ಸ್ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ, 3 ವರ್ಷ ಮಗುವಿನ ತಲೆಯಲ್ಲಿದ್ದ ಅವಳಿ ದೇಹದ ಬಾಗ ಸರ್ಜರಿ
ಈ ಇಬ್ಬರು ರೋಗಿಗಳು ತೀರ ಗಂಭೀರಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಬಿಪಿ ನಿಯಂತ್ರಿಸಲು ಬಲೂನ್ ಪಂಪ್ ಅಳವಡಿಸಿದರೂ, ಸುಧಾರಣೆ ಕಾಣಲಿಲ್ಲ, ಕ್ರಮೇಣ ಬಹುಅಂಗಾಂಗ ವೈಫಲ್ಯ ಸಾಧ್ಯತೆ ಕಂಡುಬಂತು. ಅವರಿಬ್ಬರಿಗೂ ಕೂಡಲೇ ಹೃದಯ ಕಸಿ ಮಾಡುವುದು ಅನಿವಾರ್ಯವಾಗಿತ್ತು ಆದರೆ, ಇವರಿಗೆ ಹೊಂದಾಣಿಕೆಯಾಗುವ ಹೃದಯ ಸಿಗಲಿಲ್ಲ. ಕೂಡಲೇ ಅವರಿಗೆ ಹೃದಯ ಕಸಿ ಮಾಡದೇ ಹೋದಲ್ಲಿ ಜೀವಕ್ಕೇ ಅಪಾಯವಿತ್ತು. ಈ ಇಬ್ಬರು ರೋಗಿಗಳ ಹೃದಯ ಸ್ನಾಯುಗಳು ಸಂಪೂರ್ಣವಾಗಿ ನಿರ್ಜೀವವಾಗಿತ್ತು. ಹೀಗಾಗಿ ಅವರಿಗೆ 3ನೇ ಜನರೇಷನ್‌ನ ಹಾರ್ಟ್‌ಮೇಟ್ 3 ಎಲ್‌ವಿಎಡಿ ಎಡ ಹೃತ್ಕರ್ಣ ಸಹಾಯಕ (ಸಂಪೂರ್ಣ ಕೃತಕ) ಕೃತಕ ಹೃದಯ ಕಸಿಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ವಿವರಿಸಿದರು.
ಸ್ಪರ್ಶ್ ಆಸ್ಪತ್ರೆ ಆರ್.ಆರ್.ನಗರದ ಸಿಒಒ ಕ.ರಾಹುಲ್ ತಿವಾರಿ ಮಾತನಾಡಿ, ಇಂದು ಅಂಗಾಂಗ ದಾನಿಗಳ ಸಂಖ್ಯೆಗಿಂತಲೂ ಅಂಗಾಂಗ ಅವಶ್ಯಕತೆ ಇರುವವರೇ ಹೆಚ್ಚಿದ್ದಾರೆ, ಇವರಿಗೆಲ್ಲಾ ಇಂತಹ ಕೃತಕ ಅಂಗಾಂಗ ಕಸಿ ಭರವಸೆಯ ಬೆಳಕಾಗಿದೆ. ಈ ನಿಟ್ಟಿನಲ್ಲಿ ಕೃತಕ ಹೃದಯ ಕಸಿಯನ್ನೂ ನಮ್ಮ ಆಸ್ಪತ್ರೆ ನೆರವೇರಿಸಿದೆ. ಹೃದಯದ ಸ್ನಾಯು ಸಂಪೂರ್ಣ ನಿಶ್ಕ್ರಿಯಯಾದ ಬಳಿಕವಷ್ಟೇ ಈ ಕೃತಕ ಹೃದಯ ಕಸಿ ಮಾಡಬಹುದು.
ಕೃತಕ ಹೃದಯ ಹೇಗೆ ಕಾರ್ಯನಿರ್ವಹಿಸಲಿದೆ?:
ಈ ಕೃತಕ ಹೃದಯವು ಸಾಮಾನ್ಯ ಹೃದಯದಂತೆಯೇ ಕಾರ್ಯ ನಿರ್ವಹಿಸಲಿದೆ. ನಿರ್ಜೀವ ಹೃದಯದ ಒಳಗಡೆ ಮಷಿನ್ ಅಳವಡಿಸಿ, ಪೈಪ್ ಮೂಲಕವಾಗಿ ಹೊರಗಡೆಗೆ ಬ್ಯಾಟರಿ ಹೊಂದಿಸಲಾಗಿರುತ್ತದೆ. ಈ ಬ್ಯಾಟರಿ 18 ರಿಂದ 24 ಗಂಟೆಗಳ ಕಾಲ ಬರಲಿದ್ದು, ಬಳಿಕ ಬ್ಯಾಟರಿಯನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಲೋ ಬ್ಯಾಟರಿಯಾದ ವೇಳೆ ಎಚ್ಚರಿಕೆಯ ಅಲರಾಂ ಬರಲಿದೆ. ಕೂಡಲೇ ಅದನ್ನು ಬದಲಿಸಬಹುದು, ಇಂತಹ 8 ಬ್ಯಾಟರಿಗಳನ್ನು ರೋಗಿಗಳಿಗೆ ನೀಡಲಾಗಿರುತ್ತದೆ. ಇನ್ನು, ಈ ಬ್ಯಾಟರಿ ವಾಟರ್‌ಫ್ರೂಫ್ ಆಗಿರಲಿದ್ದು, ರೋಗಿ ಎಲ್ಲಿಯೇ ತೆರಳಿದರೂ ಆ ಬ್ಯಾಟರಿ ಬ್ಯಾಗ್ ಜೊತೆಗಿರಬೇಕು ಎಂದು ವಿವರಿಸಿದರು. ಹಿರಿಯ ಹೃದಯ ಸಮಾಲೋಚಕರಾದ ಡಾ.ವಿಕ್ರಾಂತ್ ವೀರಣ್ನ ಹಿರಿಯ ಶಸ್ತ್ರಚಿಕಿತ್ಸಕ ಡಾ,ಮಧುಸೂದನ್, ಡಾ.ಶಿವಪ್ರಕಾಶ್ ಹಾಗೂ ಡಾ.ಸುನಿಲ್ ಕ್ರಿಸ್ಟೋಫರ್ ಉಪಸ್ಥಿತರಿದ್ದರು.
47 ವರ್ಷದ ಡಿಆರ್‌ಡಿಓ ವಿಜ್ಞಾನಿಗೆ 3ನೇ ಕಿಡ್ನಿ ಕಸಿ; ಈಗ ಇವರ ದೇಹದಲ್ಲಿದೆ 5 ಮೂತ್ರಪಿಂಡ!


