ಬೆಂಗಳೂರಲ್ಲಿ ಹೆಚ್ಚುತ್ತಿರುವ ಕೊರೋನಾ ಕೇಸ್, ರಾಜಧಾನಿಗೆ ಎಂಟ್ರಿ ಕೊಡ್ತಾ ಕೋವಿಡ್ ನಾಲ್ಕನೇ ಅಲೆ?
ಬೆಂಗಳೂರಿನಲ್ಲಿ ಒಮಿಕ್ರಾನ್‌ನ ಎರಡು ಹೊಸ ತಳಿಯ ವೈರಸ್ ಪತ್ತೆಯಾಗಿವೆ. ಈ ಮಧ್ಯೆ ರಾಜಧಾನಿಯಲ್ಲಿ ಇನ್ನು 3 ವಾರಗಳಲ್ಲಿ ಕೋವಿಡ್ ನಾಲ್ಕನೇ ಅಲೆ ಆರಂಭವಾಗುತ್ತೆ ಅಂತಿದ್ದಾರೆ ವೈದ್ಯರು.
ಕೊರೋನಾ ಕಷ್ಟ ಕಾಲ ಅಂತೂ ಮುಗೀತು ಉಸ್ಸಪ್ಪಾ ಎಂದು ಎಲ್ಲರೂ ಮಾಸ್ಕ್ ಎಸೆದು ನಿಟ್ಟುಸಿರು ಬಿಡುತ್ತಿರೋ ಹೊತ್ತಲ್ಲೇ ಮತ್ತೆ ನಾಲ್ಕನೇ ಅಲೆ ಬರೋ ಸುದ್ದಿ ಸದ್ದು ಮಾಡ್ತಿದೆ. ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಹಾಗೆ ಒಂದು ಸಾಲದೆಂಬಂತೆ ಎರಡು ಒಮಿಕ್ರಾನ್ ನ ಹೊಸ ರೂಪಾಂತರಿ ತಳಿಗಳು ಬೆಂಗಳೂರಿನಲ್ಲಿ ಪತ್ತೆಯಾಗಿವೆ.
ಹೌದು, ಇನ್ನೇನು ಕೊರೋನಾ ವೈರಸ್, ಒಮಿಕ್ರಾನ್ ಎಲ್ಲವೂ ಮಾಯವಾದ್ವು ಅನ್ಕೊಂಡು ಮತ್ತೆ ಕಚೇರಿ ಬಾಗಿಲುಗಳೆಲ್ಲ ತೆರೆದು ಧೂಳು ಹೊಡೆಯುತ್ತಿರುವ ಹೊತ್ತಲ್ಲೇ ಬೆಂಗಳೂರಿನಲ್ಲಿ ಒಮಿಕ್ರಾನ್ ನ ರೂಪಾಂತರಿ ತಳಿಗಳಾದ BA.2.10 ಮತ್ತು BA.2.12 ಪತ್ತೆಯಾಗಿವೆ. ದೆಹಲಿ ಹಾಗೂ ಮುಂಬೈನಲ್ಲೂ ಹೊಸ ತಳಿ ಈ ಹಿಂದೆ ಪತ್ತೆಯಾಗಿತ್ತು. ಈ ಸುದ್ದಿಯಿಂದ ಮತ್ತೆ ಆತಂಕ ಎದುರಾಗಿರುವ ಬೆನ್ನಲ್ಲೇ ನಾಲ್ಕನೇ ಅಲೆ ಬರುವುದು ನಿಶ್ಚಯ ಅಂತಿದ್ದಾರೆ ತಜ್ಞ ವೈದ್ಯ ಡಾ ಸಿಎನ್ ಮಂಜುನಾಥ್!
ಇನ್ನೇನು, ಮೂರು ನಾಲ್ಕು ವಾರಗಳಲ್ಲಿ ಕೋವಿಡ್ 4ನೇ ಅಲೆ ಬಂದಪ್ಪಳಿಸಲಿದೆ, ಈಗಾಗಲೆ ದೆಹಲಿ ಸೇರಿದಂತೆ ಬೇರೆ ರಾಜ್ಯಕ್ಕೆ ಕೋವಿಡ್ ನಾಲ್ಕನೆ ಅಲೆ ಬಂದಾಗಿದೆ, 3ನೇ ಅಲೆಯಲ್ಲಿದ್ದ ರೋಗ ಗುಣ ಲಕ್ಷಣಗಳು ಈ ತಳಿ ಹೊಕ್ಕವರನ್ನು ಬಾಧಿಸುವ ಸಾಧ್ಯತೆಯಿದೆ ಅಂತ ಹೇಳ್ತಿದ್ದಾರೆ ಡಾ ಸಿ. ಎನ್. ಮಂಜುನಾಥ್.
ಇವೆಲ್ಲವೂ ನಿಜವಾಗುವುದು ಎಂಬಂಥ ಸೂಚನೆ ಕೊಡ್ತಿರೋದು ಇಂದು ದೇಶದಲ್ಲಿ ಕಂಡು ಬಂದ ಕೊರೋನಾ ಕೇಸ್‌ಗಳ ಸಂಖ್ಯೆ. ಕಳೆದ 24 ಗಂಟೆಗಳಲ್ಲಿ 2527 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದರೆ, 33 ಜನ ಇದರಿಂದಾಗಿ ಸಾವನ್ನಪ್ಪಿದ್ದಾರೆ. ರಾಜಧಾನಿ ಹೊಸ ದಿಲ್ಲಿಯಲ್ಲಿ 1042 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಭೀತಿ ಹೆಚ್ಚಾದ ಬೆನ್ನಲ್ಲೇ ಬೆಂಗಳೂರಲ್ಲೂ ಒಮಿಕ್ರಾನ್ ಹೊಸ ತಳಿಗಳು ಕಂಡು ಬಂದಿರುವುದು ಆತಂಕ ಹೆಚ್ಚಿಸಿದೆ.
ಕೋವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ: ಕೋರ್ಟ್‌ಗೆ ಡಿಕೆಶಿ ಹಾಜರು
ಸಧ್ಯ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಏಳು ಮಂದಿ ಕೋವಿಡ್-19 ಕಾರಣದಿಂದ ದಾಖಲಾಗಿದ್ದು, ಅದರಲ್ಲೊಬ್ಬರು ವೆಂಟಿಲೇಟರ್‌ನಲ್ಲಿದ್ದಾರೆ. ನಗರದಲ್ಲಿ ಶುಕ್ರವಾರ 85 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 39 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1,520 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 3667 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.2.3 ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು ಆರು ಇಳಿಕೆಯಾಗಿವೆ. (ಗುರುವಾರ 91 ಕೇಸ್, ಸಾವು ಶೂನ್ಯ).
ಈ ಮಧ್ಯೆ, ಕೋವಿಡ್ 4ನೇ ಅಲೆ(Covid 4th Wave) ತಪ್ಪಿಸಿಕೊಳ್ಳಬೇಕು, ಯಾವುದೇ ತೊಂದರೆ ಆಗಬಾರದು ಎಂದರೆ ಎಲ್ಲರೂ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್(Dr K Sudhakar) ಹೇಳಿದ್ದಾರೆ.
Corona Crisis: ಸತತ 2ನೇ ದಿನ ಶೇ.2ಕ್ಕಿಂತ ಅಧಿಕ ಕೊರೋನಾ ಪಾಸಿಟಿವಿಟಿ ದರ
ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ನಮ್ಮ ಜನರು ಸಂಪೂರ್ಣ ಲಸಿಕಾಕರಣಕ್ಕೆ ಒಳಪಡಬೇಕು. ಒಂದನೇ ಡೋಸ್ ಪಡೆದಿರುವವರು ಅಸಡ್ಡೆ ಮಾಡದೇ ಎರಡನೇ ಡೋಸ್ ಪಡೆದುಕೊಳ್ಳಬೇಕು. ಮೂರನೇ ಡೋಸ್ ಪಡೆಯಲು ಅರ್ಹತೆ ಹೊಂದಿರುವವರು ತಡ ಮಾಡದೇ ಲಸಿಕೆ(Vaccine) ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಸದ್ಯದಲ್ಲೇ ಕೋವಿಡ್ ಲಸಿಕೆ ನೀಡಲಾಗುತ್ತದೆ. ಎಳೆಯ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು(Central Governmnet) ಪೂರಕವಾದ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಈಗಾಗಲೇ 12 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.