Healthy Lifestyle: ಆಫೀಸ್ ಒತ್ತಡ ಇಲ್ಲದಿದ್ದರೆ ಹೇಗ್ ಹೇಳಿ, ಆದನ್ನು ನಿಭಾಯಿಸೋದು ಕಲೀರಿ!
ನಮ್ಮಿಂದ ಒಳ್ಳೆ ಕೆಲಸ ಆಗ್ಬೇಕೆಂದ್ರೆ ನಾವು ಆರೋಗ್ಯವಾಗಿರಬೇಕು. ಇದು ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯವನ್ನು ಅವಲಂಬಿಸಿರುತ್ತದೆ. ಬಿಡುವಿಲ್ಲದ ಕಚೇರಿ ಕೆಲಸದ ಮಧ್ಯೆಯೂ ನಾವು ರಿಲ್ಯಾಕ್ಸ್ ಆಗಿರ್ತೇವೆ ಅಂದ್ರೆ ಅದಕ್ಕೆ ನಮ್ಮ ಲೈಫ್ ಸ್ಟೈಲ್ ಕಾರಣವಾಗುತ್ತದೆ.
ಒಂದ್ಕಡೆ ಕಚೇರಿ ಕೆಲಸ, ಇನ್ನೊಂದು ಕಡೆ ಮನೆ ಕೆಲಸ, ಮತ್ತೊಂದು ಕಡೆ ಮಕ್ಕಳ ಜವಾಬ್ದಾರಿ ಇಷ್ಟರ ಮಧ್ಯೆ ಕುಟುಂಬದ ಹಿರಿಯರ ಹದಗೆಡುವ ಆರೋಗ್ಯದ ಬಗ್ಗೆ ಗಮನ ಹರಿಸ್ತಾ, ಟ್ರಾಫಿಕ್ ಜಾಮ್ ನಲ್ಲಿ ಜೀವನ ನಡೆಸೋದು ಹೇಳಿದಷ್ಟು ಸುಲಭದ ಕೆಲಸವಲ್ಲ. ಈ ಎಲ್ಲ ಕೆಲಸದ ಮಧ್ಯೆ ಜನರಿಗೆ ತಮ್ಮ ಆರೋಗ್ಯ ನೋಡಿಕೊಳ್ಳೋಕೆ ಪುರುಸೊತ್ತು ಇರೋದಿಲ್ಲ. ಕಚೇರಿ ಕೆಲಸ ಕೆಲವರಿಗೆ ದೊಡ್ಡ ಭಾರವೆನ್ನಿಸಲು ಶುರುವಾಗಿರುತ್ತದೆ. ಉದ್ಯೋಗ ಮಾಡದೆ ಹೋದ್ರೆ ಆರ್ಥಿಕ ಸಂಕಷ್ಟ, ಉದ್ಯೋಗ ಮಾಡಿದ್ರೆ ಮಾನಸಿಕ ಹಿಂಸೆ. ಏನು ಮಾಡ್ಬೇಕು ಎಂಬ ಗೊಂದಲದಲ್ಲಿಯೇ ಆರೋಗ್ಯ ಹದಗೆಟ್ಟಿರುತ್ತದೆ.
ಮಲ್ಟಿಟಾಸ್ಕ್ (Multitask) ಮಾಡ್ಬೇಕೆಂದ್ರೆ ಮನಸ್ಸು, ದೇಹ ಎರಡೂ ಗಟ್ಟಿಯಾಗಿರಬೇಕು. ಕಚೇರಿ ಕೆಲಸವನ್ನು ನಗ್ತಾ ನಗ್ತಾ ಹೂವಿನಂತೆ ಮಾಡಿ ಮುಗಿಸಿ, ಮನೆ, ಮಕ್ಕಳ ಜೊತೆಯೂ ಎಂಜಾಯ್ (Enjoy) ಮಾಡ್ಬೇಕೆಂದ್ರೆ ನಮ್ಮಮ್ಮ ನಾವು ಸದೃಢವಾಗಿಟ್ಟುಕೊಳ್ಳಬೇಕು. ನೀವೂ ಕಚೇರಿ ಒತ್ತಡದ ವೇಳಾಪಟ್ಟಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದರೆ, ನಿಮ್ಮನ್ನು ಕೂಲ್ ಆಗಿಡಲು ಕೆಲ ಟ್ರಿಕ್ಸ್ ಫಾಲೋ ಮಾಡಿ.
ಸರಳವಾದ್ರೂ ಪರಿಣಾಮಕಾರಿ ಈ ಚಿಕಿತ್ಸಾ ವಿಧಾನಗಳು..
ಆರೋಗ್ಯ (Health) ಕ್ಕೆ ಆಹಾರ : ಅನೇಕರು ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಸೇವನೆ ಮಾಡ್ತಾರೆ. ಯಾವ ಸಮಯದಲ್ಲಿ ಏನು ತಿನ್ನುತ್ತಿದ್ದೇವೆ ಎಂಬ ಜ್ಞಾನವೂ ಇರೋದಿಲ್ಲ. ಕೆಲಸದ ಮಧ್ಯೆ ಏನೋ ಒಂದನ್ನು ತಿಂದು ಹೊಟ್ಟೆ (Stomach) ತುಂಬಿಸಿಕೊಂಡಿರುತ್ತಾರೆ. ಇದು ತಪ್ಪು. ನೀವು ಸಾಧ್ಯವಾದ್ರೆ ಮನೆಯಿಂದಲೇ ಬಾಕ್ಸ್ ಕಟ್ಟಿಕೊಂಡು ಹೋಗುವ ಅಭ್ಯಾಸ ಮಾಡಿಕೊಳ್ಳಿ. ಸಮಯ ಸಿಗ್ತಿಲ್ಲ ಎಂದಾದ್ರೆ ಕಚೇರಿಯಲ್ಲಿ ಸಿಗುವ ಆರೋಗ್ಯಕರ ಆಹಾರವನ್ನೇ ಸೇವನೆ ಮಾಡಿ. ಬೆಳಿಗ್ಗೆ ಹಾಗೂ ಮಧ್ಯಾಹ್ನದ ಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಿ. ನೀವು ಮಧ್ಯಾಹ್ನದ ಊಟದಲ್ಲಿ ಮೊಸರು, ದಾಲ್, ಅನ್ನ, ರೊಟ್ಟಿ ಮತ್ತು ಹಸಿರು ತರಕಾರಿಗಳು ಮತ್ತು ರೈತಾ ಇರುವಂತೆ ನೋಡಿಕೊಳ್ಳಿ. ಬೆಳಗಿನ ಉಪಾಹಾರದಲ್ಲಿ ಹಣ್ಣು, ಸಲಾಡ್, ಜ್ಯೂಸ್ ಮುಂತಾದವುಗಳನ್ನು ಸೇವಿಸಿ.
ಸ್ನ್ಯಾಕ್ಸ್ (Snacks) ಬೇಡ : ನಮಗೆ ಗೊತ್ತು, ಹಸಿವಾದಾಗ ಮನಸ್ಸು ಮೊದಲು ಓಡೋದು ಸ್ನ್ಯಾಕ್ಸ್ ಬಳಿ. ಆದ್ರೆ ಈ ಸ್ನ್ಯಾಕ್ಸ್ ಎಷ್ಟು ರುಚಿಯೋ ಅಷ್ಟೇ ಅಪಾಯಕಾರಿ. ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದ್ರೆ ಆರೋಗ್ಯ ಹದಗೆಡೋದ್ರಲ್ಲಿ ಎರಡು ಮಾತಿಲ್ಲ. ಕರಿದ, ಮಸಾಲೆಯುಕ್ತ ಆಹಾರವನ್ನು ಮಿತವಾಗಿ ಸೇವನೆ ಮಾಡಿ. ಬೊಜ್ಜಿನ ಸಮಸ್ಯೆ, ನಿದ್ರಾಹೀನತೆ ಈ ಆಹಾರದಿಂದ ನಿಮ್ಮನ್ನು ಬಾಧಿಸುತ್ತದೆ. ಅದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ನೀವು ನಿಮ್ಮ ಕಚೇರಿ ಕೆಲಸವನ್ನು ಸರಿಯಾದ ಸಮಯದಲ್ಲಿ ಮುಗಿಸಲು ಸಾಧ್ಯವಾಗೋದಿಲ್ಲ.
ನೀವು ಎಷ್ಟು ಟೈಮ್ ಬದುಕುವಿರಿ? ಈ ರೀತಿ ಟೆಸ್ಟ್ ಮಾಡಿ
ಕಾಫಿ (Coffee) ಚಟ ಬಿಡಿ : ಕಚೇರಿಯಲ್ಲಿ ಕೆಲಸದ ಒತ್ತಡವಿದೆ ಎಂದಾಗ ನಾಲ್ಕೈದು ಕಪ್ ಕಾಫಿ ಹೊಟ್ಟೆ ಸೇರಿರುತ್ತದೆ. ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇರುತ್ತದೆ. ಇದು ಆ ಕ್ಷಣಕ್ಕೆ ಹಿತವೆನ್ನಿಸಿದ್ರೂ ನಿಮ್ಮ ದೀರ್ಘಾರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಹಾಗಾಗಿ ಇದ್ರಿಂದ ದೂರವಿರುವುದು ಒಳ್ಳೆಯದು. ಅಗತ್ಯವೆನ್ನಿಸಿದ್ರೆ ಕಾಫಿ ಬದಲು ತಾಜಾ ಹಣ್ಣಿನ ಜ್ಯೂಸ್ ಸೇವನೆ ಮಾಡಿ.
ಯೋಗ – ವ್ಯಾಯಾಮ (Yoga Exercise) : ಕಚೇರಿ ಕೆಲಸಕ್ಕೆ ಸಮಯವಿಲ್ಲ ಇನ್ನೆಲ್ಲಿ ವ್ಯಾಯಾಮ ಅಂತಾ ನೀವು ಹೇಳಬಹುದು. ಸಮಯ ಹೊಂದಿಸಿಕೊಳ್ಳೋದು ನಿಮ್ಮ ಜವಾಬ್ದಾರಿ. ಕಚೇರಿಯಲ್ಲಿ ಕೆಲಸದ ಮಧ್ಯೆಯೇ ನೀವು ಸಣ್ಣ ವ್ಯಾಯಾಮ ಮಾಡಬಹುದು. ಕುರ್ಚಿ ಮೇಲೆ ಕುಳಿತೇ ನೀವು ನಿಮ್ಮ ದೇಹಕ್ಕೆ ವ್ಯಾಯಾಮ ನೀಡಬಹುದು. 15 – 20 ನಿಮಿಷಕ್ಕೊಮ್ಮೆ ಬ್ರೇಕ್ ಪಡೆದು, ಕಣ್ಣು ಮಿಟುಕಿಸಿ, ಕೈ, ಕಾಲುಗಳನ್ನು ಅಲುಗಾಡಿಸಿ, ಅಲ್ಲೇ ಸಣ್ಣ ವಾಕ್ ಮಾಡಿ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ನೀಡಬಹುದು. ಇದ್ರಿಂದ ಉದ್ವೇಗ, ಒತ್ತಡ ದೂರವಾಗಿ, ಮನಸ್ಸು ಶಾಂತವಾಗುತ್ತದೆ. ಮತ್ತಷ್ಟು ಕೆಲಸ ಮಾಡುವ ಹುಮ್ಮಸ್ಸು ಬರುತ್ತದೆ.
ಕೆಲಸ ಮಾಡುವ ವೇಳೆ ಇದು ನೆನಪಿರಲಿ : ಕೆಲಸ ಮಾಡಲುಲು ಪ್ರಾರಂಭಿಸುವ ಮುನ್ನ ಇಂದು ಯಾವೆಲ್ಲ ಕೆಲಸ ಮಾಡ್ಬೇಕು ಎಂಬುದರ ಪ್ಲಾನ್ ಮಾಡಿ. ಅದರಂತೆ ಕೆಲಸ ಮಾಡಿ. ತಾಳ್ಮೆ ಕಳೆದುಕೊಂಡು, ಒತ್ತಡದಲ್ಲಿ ಕೆಲಸ ಮಾಡಿದ್ರೆ ಮಾಡಿದ ಕೆಲಸ ಹಾಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ನಿಧಾನವಾಗಿ, ಪರ್ಫೆಕ್ಟ್ ಆಗಿ ಕೆಲಸ ಮಾಡಲು ಪ್ರಯತ್ನಿಸಿ. ನಿರಂತರ ಕೆಲಸ ಮಾಡುವ ಅಗತ್ಯವಿಲ್ಲ. ಆಗಾಗ ಬ್ರೇಕ್ ಪಡೆದು ಕೆಲಸ ಮಾಡಿದ್ರೆ ದೈಹಿಕ ಹಾಗೂ ಮಾನಸಿಕ ಎರಡೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.