ಸಂಶೋಧನೆ ಮತ್ತು ತಜ್ಞರ ಅಭಿಪ್ರಾಯದಲ್ಲಿ ಬೆಳಗಿನ ಅಭ್ಯಾಸಗಳು ಇಡೀ ದಿನಚರಿಯ ಮೇಲೆ ಏಕೆ ಮತ್ತು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೋಡೋಣ...

ಬೆಳಗ್ಗೆ ಸರಿಯಾಗಿ ಆರಂಭವಾಗದಿದ್ದರೆ ಇಡೀ ದಿನ ವ್ಯರ್ಥ ಎಂದು ನೀವು ಎಂದಾದರೂ ಭಾವಿಸಿದ್ದೀರಾ?. ಅದು ನಿಜವೂ ಹೌದು. ನಿದ್ದೆಯಿಂದ ಎದ್ದ ನಂತರದ ಮೊದಲ 90 ನಿಮಿಷಗಳು ನಿಮ್ಮ ಮನಸ್ಥಿತಿ, ಶಕ್ತಿಯ ಮಟ್ಟ, ಮಾನಸಿಕ ಸ್ಪಷ್ಟತೆ ಮತ್ತು ಕೆಲಸದ ದಿಕ್ಕನ್ನು ನಿರ್ಧರಿಸುತ್ತವೆ ಎಂದು ವಿಜ್ಞಾನಿಗಳು ಮತ್ತು ಮಾನಸಿಕ ಆರೋಗ್ಯ ತಜ್ಞರು ಒಪ್ಪುತ್ತಾರೆ. ಈ ಸಮಯವನ್ನು ಸರಿಯಾಗಿ ನಿರ್ವಹಿಸಿದರೆ ಉತ್ಪಾದಕತೆ ಹೆಚ್ಚಾಗುವುದಲ್ಲದೆ, ಮಾನಸಿಕ ಆರೋಗ್ಯ ಮತ್ತು ದೇಹದ ಗಡಿಯಾರವೂ ಸ್ಥಿರವಾಗಿರುತ್ತದೆ. ಸಂಶೋಧನೆ ಮತ್ತು ತಜ್ಞರ ಅಭಿಪ್ರಾಯದಲ್ಲಿ ಬೆಳಗಿನ ಅಭ್ಯಾಸಗಳು ಇಡೀ ದಿನಚರಿಯ ಮೇಲೆ ಏಕೆ ಮತ್ತು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೋಡೋಣ...

ಸ್ಲೀಪ್ ಫೌಂಡೇಶನ್ ಮತ್ತು ನೇಚರ್ ಎಂಬ ವೈದ್ಯಕೀಯ ಜರ್ನಲ್ ಪ್ರಕಾರ, ನಿದ್ರೆಯ ಕೊರತೆಯು ಬೆಳಗ್ಗೆ ಎದ್ದ ನಂತರ ಮೆದುಳಿನ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಏಕಾಗ್ರತೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸ್ಮರಣೆ. ಅಂದರೆ "ನಿದ್ರೆಯ ಜಡತ್ವ" (Sleep inertia) ಎಂಬ ಸಮಸ್ಯೆಯೊಂದಿಗೆ ಸಂಬಂಧಿಸಿದೆ. ಇದರಲ್ಲಿ ಮನಸ್ಸು ಮತ್ತು ದೇಹವು ಎಚ್ಚರವಾದ ನಂತರ 30-90 ನಿಮಿಷಗಳ ಕಾಲ ಜಡವಾಗಿರುತ್ತದೆ. ಒಂದು ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮರುದಿನ ಸಮಸ್ಯೆ ಪರಿಹರಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಆಗುತ್ತದೆ ಎಂದು ಸಂಶೋಧನಾ ಪ್ರಬಂಧ arXiv ಹೇಳುತ್ತದೆ.

ಬೆಳಗ್ಗೆದ್ದು ಏನು ಮಾಡಬೇಕು?
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಲೇಖನವೊಂದು, ಎಚ್ಚರವಾದ ನಂತರ ಮೊದಲ 90 ನಿಮಿಷಗಳಲ್ಲಿ ಕೆಫೀನ್ ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಿದೆ. ಈ ಸಮಯದಲ್ಲಿ ನೀವು ಕೆಲವು ನಿಮಿಷಗಳನ್ನು ಬಿಸಿಲಿನಲ್ಲಿ ಕಳೆದರೆ, ಲಘು ವ್ಯಾಯಾಮ ಮಾಡಿದರೆ ಮತ್ತು ಪರದೆಯಿಂದ ದೂರವಿರುವುದರಿಂದ, ದೇಹದ ಆಂತರಿಕ ಗಡಿಯಾರ ಅಂದರೆ ಸಿರ್ಕಾಡಿಯನ್ ಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಜಾಗೃತಿ ಮತ್ತು ಗಮನವನ್ನು ಕಾಪಾಡಿಕೊಳ್ಳಲು ನೈಸರ್ಗಿಕ ಬೆಳಗಿನ ಬೆಳಕು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಬೆಳಗಿನ ವ್ಯಾಯಾಮದ ಪ್ರಯೋಜನಗಳೇನು?
* ಮೊದಲನೆಯದಾಗಿ ಎದ್ದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
* ಇದರ ನಂತರ ಲಘು ವ್ಯಾಯಾಮ ಅಥವಾ ನಡಿಗೆ ಅಭ್ಯಾಸವಿರಲಿ.
* ನಂತರ ಸಮತೋಲಿತ ಉಪಹಾರ ಸೇವಿಸಿ.

ಈ ಅಭ್ಯಾಸಗಳನ್ನು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಅವನ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ ಮತ್ತು ಮಧ್ಯಾಹ್ನ ಬರುವ ಆಲಸ್ಯ ಕಡಿಮೆಯಾಗುತ್ತದೆ ಎಂದು ಅನೇಕ ಸಂಶೋಧನೆಗಳು ತೋರಿಸಿವೆ. ಇದಲ್ಲದೆ, ಬೆಳಗಿನ ದಿನಚರಿ ಸ್ಥಿರವಾಗಿದ್ದರೆ ಅದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಸ್ವಯಂ ನಿಯಂತ್ರಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬೆಳಗಿನ ಅಭ್ಯಾಸವೇ ಯಶಸ್ಸಿನ ಗುಟ್ಟು
ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಸಮಯಕ್ಕೆ ಸರಿಯಾಗಿ ಮಲಗಿ ಎಚ್ಚರಗೊಳ್ಳುವ ಜನರು ಹೆಚ್ಚಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇದು ಅಗತ್ಯಕ್ಕಿಂತ ಸ್ವಲ್ಪ ಕಡಿಮೆ ನಿದ್ರೆ ಮಾಡಿದರೂ ದಿನವಿಡೀ ಸಕ್ರಿಯವಾಗಿರಲು ಸುಲಭಗೊಳಿಸುತ್ತದೆ. ಒಂದು ವರದಿಯ ಪ್ರಕಾರ, ಶೇಕಡ 37 ರಷ್ಟು ಜನರು ಎದ್ದ ಮೊದಲ 10 ನಿಮಿಷಗಳಲ್ಲಿ ತಮ್ಮ ಇಡೀ ದಿನವನ್ನು ಯೋಜಿಸಲು ಪ್ರಾರಂಭಿಸುತ್ತಾರೆ. ಆದರೆ ಶೇಕಡ 49 ರಷ್ಟು ಜನರು ಬೆಳಗ್ಗೆ ಕೆಟ್ಟದಾಗಿದ್ದರೆ ಇಡೀ ದಿನ ಹಾಳಾಗುತ್ತದೆ ಎಂದು ನಂಬುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಏನು?
ವಿಶ್ವ ಆರೋಗ್ಯ ಸಂಸ್ಥೆ 2019 ರಲ್ಲಿ ಒಂದು ಮಾರ್ಗಸೂಚಿಯನ್ನು ಹೊರಡಿಸಿತು. ಇದರ ಪ್ರಕಾರ, 0-5 ವರ್ಷದೊಳಗಿನ ಮಕ್ಕಳು ದೈಹಿಕ ಚಟುವಟಿಕೆ, ಸ್ಕ್ರೀನ್ ಸಮಯ ಮತ್ತು ನಿದ್ರೆಯ ಬಗ್ಗೆ ಗಮನ ಹರಿಸಿದರೆ, ದಿನವಿಡೀ ಶಕ್ತಿ ಹಾಗೆ ಇರುತ್ತದೆ. ಇದಕ್ಕಾಗಿ, ಅವರು 10–13 ಗಂಟೆಗಳ ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯುವುದು ಅವಶ್ಯಕ. ಅವರು ಮಲಗುವ ಮತ್ತು ಎಚ್ಚರಗೊಳ್ಳುವ ಸಮಯವನ್ನು ಕಾಪಾಡಿಕೊಳ್ಳಬೇಕು. ಹಗಲಿನಲ್ಲಿ ಆಟವಾಡುವ ಸಮಯವನ್ನು ಹೆಚ್ಚಿಸಬೇಕು. ಅಷ್ಟೇ ಅಲ್ಲ, ನಿದ್ರೆ ಮತ್ತು ಎಚ್ಚರಗೊಳ್ಳುವ ನಿಯಮಿತ ಸಮಯವನ್ನು ನಿಗದಿಪಡಿಸುವುದು ಸಿರ್ಕಾಡಿಯನ್ ಲಯವನ್ನು ಉತ್ತಮವಾಗಿರಿಸುತ್ತದೆ. ಇದು ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗವಾಗಿದೆ. ಇದು ನಿಮ್ಮ ದಿನವನ್ನು ಶಕ್ತಿಯಿಂದ ತುಂಬಿರಿಸುತ್ತದೆ ಮಾತ್ರವಲ್ಲದೆ ನಿಮ್ಮ ಕೆಲಸದ ಸಾಮರ್ಥ್ಯವನ್ನು ಉತ್ತಮ ಮನಸ್ಥಿತಿಯೊಂದಿಗೆ ಸುಧಾರಿಸುತ್ತದೆ.