ವರ್ಕೌಟ್ ಮಾಡುವಾಗ ಹಾರ್ಟ್ ಅಟ್ಯಾಕ್ ಆಗೋದ್ಯಾಕೆ ?
ಕೋವಿಡ್ ನಂತರ ಇತ್ತೀಚೆಗೆ ವ್ಯಾಯಾಮ ಮಾಡುತ್ತಲೇ ಕುಸಿದು ಬಿದ್ದು ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆಯೇ ತೆಲಂಗಾಣದಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತವಾಗಿ ಕುಸಿದುಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಹೈದರಾಬಾದ್: ತೆಲಂಗಾಣದ ಸಿಕಂದರಾಬಾದ್‌ನ ಬೋಯಿನಪಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ 24 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ವ್ಯಕ್ತಿ ವ್ಯಾಯಾಮ ಮಾಡುತ್ತಿದ್ದ ಸಂದರ್ಭ ಏಕಾಏಕಿ ಉಸಿರು ಬಿಗಿ ಹಿಡಿದು ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ಇಡೀ ಘಟನೆ ಜಿಮ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೃತನನ್ನು ವಿಶಾಲ್ ಎಂದು ಗುರುತಿಸಲಾಗಿದೆ. ಈತ ಮೊಂಡಾ ಮಾರುಕಟ್ಟೆ ಪ್ರದೇಶದ ಘಾನ್ಸಿ ಬಜಾರ್ ನಿವಾಸಿಯಾಗಿದ್ದಾನೆ. ಮಾತ್ರವಲ್ಲ 2020ರ ಬ್ಯಾಚ್‌ನಲ್ಲಿ ಕಾನ್‌ಸ್ಟೇಬಲ್ ಹುದ್ದೆಯನ್ನು ಪಡೆದಿದ್ದನು ಮತ್ತು ಆಸಿಫ್ ನಗರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲ್ಪಟ್ಟಿದ್ದನು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಸಿಕಂದರಾಬಾದ್‌ನ ಜಿಮ್‌ನಲ್ಲಿ ವ್ಯಾಯಾಮ (Exercise) ಮಾಡುವಾಗ ಹೃದಯ ಸ್ತಂಭನದಿಂದ ವಿಶಾಲ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ವರದಿಯಾದ ಹಠಾತ್ ಹೃದಯ ಸಾವಿನ (Death) ಮತ್ತೊಂದು ಪ್ರಕರಣವಾಗಿದೆ.
ಹಾರ್ಟ್ ಅಟ್ಯಾಕ್ ಆದಾಗ ನೋವಿನ ಅನುಭವ ಹೇಗಿರುತ್ತೆ? ಬದುಕುಳಿದವರು ಹೇಳಿದ್ದಿಷ್ಟು
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (NCBI) ಪ್ರಕಾರ, ಭಾರತದಲ್ಲಿನ ಐದನೇ ಒಂದು ಭಾಗದಷ್ಟು ಸಾವುಗಳು ಹೃದಯಾಘಾತಗಳು, ಹೃದಯ ಸ್ತಂಭನಗಳು ಮತ್ತು ಪಾರ್ಶ್ವವಾಯುಗಳಿಂದ ಉಂಟಾಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ (Social media) ಕಾಣಿಸಿಕೊಂಡಿರುವ ವಿಡಿಯೋದಲ್ಲಿ ವಿಶಾಲ್ ಪುಷ್-ಅಪ್ ಮಾಡುತ್ತಿರುವುದು ಕಂಡು ಬರುತ್ತದೆ. ನಂತರ ಆತ ಎಕ್ಸರ್‌ಸೈಸ್ ಮುಗಿಸಿ ಇನ್ನೊಂದು ಕಡೆಗೆ ತೆರಳುತ್ತಾನೆ. ಈ ಸಂದರ್ಭದಲ್ಲಿ ವ್ಯಕ್ತಿ ಮುಂದಕ್ಕೆ ವಾಲುತ್ತಿರುವುದು ಹಾಗೂ ಕೆಮ್ಮುವುದು ಕಂಡು ಬರುತ್ತದೆ. ಕೂಡಲೇ ವಿಶಾಲ್ ಆಧಾರಕ್ಕಾಗಿ ಹತ್ತಿರದಲ್ಲಿರುವ ಮೆಷಿನ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾನೆ. ನಂತರ ಸ್ವಲ್ಪ ಸಮಯದ ನಂತರ ನೆಲದ ಮೇಲೆ ಕುಳಿತು ಕುಸಿದು ಬೀಳುತ್ತಾನೆ.
ಜಿಮ್‌ನಲ್ಲಿ ವರ್ಕ್‌ಟ್ ಮಾಡುವಾಗ ಕುಸಿದುಬಿದ್ದ ವೀಡಿಯೋ ವೈರಲ್
ಕೂಡಲೇ ಕೆಲವರು ನೆಲದ ಮೇಲೆ ಬಿದ್ದಿರುವ ಯುವಕನಿಗೆ ಸಹಾಯ ಮಾಡಲು ಧಾವಿಸುತ್ತಾರೆ. ಅವರಲ್ಲಿ ಒಬ್ಬರು ಜಿಮ್ ತರಬೇತುದಾರನನ್ನು ಕರೆಯುತ್ತಾರೆ. ಎಲ್ಲರೂ ಸೇರಿ ವ್ಯಕ್ತಿಗೆ ಸಹಾಯ ಮಾಡುವುದನ್ನು ನೋಡಬಹುದು. ಈ ಘಟನೆ ಜಿಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಮಯ ರಾತ್ರಿ 8.04 ಎಂದು ತೋರಿಸುತ್ತದೆ. ಜಿಮ್ ಮೇಟ್‌ಗಳು ವಿಶಾಲ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದರು ಎಂದು ತಿಳಿದುಬಂದಿದೆ.
ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತದಿಂದ ಮೃತಪಟ್ಟ 32 ವರ್ಷದ ಯುವಕ..!
ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತವಾಗೋದು ಯಾಕೆ ?
ಆರೋಗ್ಯ ತಜ್ಞರ ಪ್ರಕಾರ, ತಮ್ಮ ದೇಹವು (Body) ನಿಭಾಯಿಸಬಲ್ಲದಕ್ಕಿಂತ ಹೆಚ್ಚಿನ ವ್ಯಾಯಾಮ ಮಾಡುವ ಜನರು ಪರಿಧಮನಿಯ ಕ್ಯಾಲ್ಸಿಫಿಕೇಶನ್ ಸಮಸ್ಯೆ ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ ಎಂದು ಅನೇಕ ಅಧ್ಯಯನಗಳು (Study) ಕಂಡುಹಿಡಿದಿದೆ. ವಾರಕ್ಕೆ 450 ನಿಮಿಷಗಳ ಮಧ್ಯಮ ಚಟುವಟಿಕೆಯನ್ನು ಮಾಡುವ ವಯಸ್ಕರು, ಕಡಿಮೆ ವ್ಯಾಯಾಮ ಮಾಡಿದವರಿಗೆ ಹೋಲಿಸಿದರೆ, ಆರೋಗ್ಯ ಸಮಸ್ಯೆ ಅಭಿವೃದ್ಧಿಪಡಿಸುವ ಅಪಾಯವನ್ನು 27 ಪ್ರತಿಶತದಷ್ಟು ಹೊಂದಿರುತ್ತಾರೆ ಎಂದು ತಿಳಿದುಬಂದಿದೆ.
ಹೃದಯಾಘಾತವು ತುಂಬಾ ಆರೋಗ್ಯಕರವಾಗಿರುವ, ಉತ್ತಮ ಆಹಾರಕ್ರಮವನ್ನು ಅನುಸರಿಸುವ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವವರಲ್ಲಿಯೂ ಸಹ ಸಾಮಾನ್ಯವಾಗಿದೆ. ಜಿಮ್‌ನಲ್ಲಿ ಭಾರವಾದ ಭಾರವನ್ನು (Weight) ಎತ್ತುವುದು ಮತ್ತು ದೇಹವನ್ನು ಒಮ್ಮೆಗೆ ಹೆಚ್ಚಿನ ಒತ್ತಡಕ್ಕೆ ಒಳಪಡಿಸುವುದರಿಂದ ದೇಹದ ಆಮ್ಲಜನಕದ ಬೇಡಿಕೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ರಕ್ತನಾಳಗಳಲ್ಲಿ ರಕ್ತ ಪೂರೈಕೆಯ ವೇಗವು ಹೆಚ್ಚಾಗುತ್ತದೆ ಮತ್ತು ನಾಳಗಳು ಹಾನಿಗೊಳಗಾಗುವ ಸಾಧ್ಯತೆಯಿದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹಾಗಾಗಿ ನಮ್ಮ ಮಿತಿ ಮೀರಿದ ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.