ಮನೆಯಲ್ಲಿರುವ ಹಳೆಯ ಔಷಧಿಗಳನ್ನು ಬಳಸುವ ಮುನ್ನ ಎಚ್ಚರ. ಔಷಧಿಯ ಬಾಟಲಿ ಒಮ್ಮೆ ತೆರೆದ ನಂತರ ಅದರ ಎಕ್ಸ್‌ಪೈರಿ ಡೇಟ್ ಬದಲಾಗುತ್ತದೆ, ಇದು ಗಾಳಿ ಮತ್ತು ಬ್ಯಾಕ್ಟೀರಿಯಾಗಳಿಗೆ ತೆರೆದುಕೊಳ್ಳುವುದರಿಂದ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅದರಲ್ಲೂ ಅಂಟಿಬಯೋಟಿಕ್ ಸಿರಪ್ ಮತ್ತು ಐ ಡ್ರಾಪ್ಸ್ ಗಳಂತಹ ಔಷಧಿಗಳನ್ನು ನಿಗದಿತ ಅವಧಿಯ ನಂತರ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ.

ನವದೆಹಲಿ: ನಮ್ಮಲ್ಲಿ ಅನೇಕರು ಮನೆಯಲ್ಲಿ ಅರ್ಧ ಖಾಲಿಯಾದ ಸಿರಪ್ ಅಥವಾ ಐ ಡ್ರಾಪ್ಸ್ ಬಾಟಲಿಗಳನ್ನು ಹಾಗೆಯೇ ಇಟ್ಟಿರುತ್ತೇವೆ. ಸ್ವಲ್ಪ ಜ್ವರ ಅಥವಾ ಕೆಮ್ಮು ಬಂದಾಗ ಎಕ್ಸ್‌ಪೈರಿ ಡೇಟ್ ಇನ್ನೂ ಇದೆ ಎಂದು ನೋಡಿ ಅದೇ ಹಳೆಯ ಔಷಧಿಯನ್ನು ಬಳಸುತ್ತೇವೆ. ಆದರೆ ವೈದ್ಯರ ಪ್ರಕಾರ, ಕೇವಲ ಎಕ್ಸ್‌ಪೈರಿ ಡೇಟ್ ನೋಡುವುದು ಸಾಲದು. ಬಾಟಲಿಯ ಮುಚ್ಚಳ ಒಮ್ಮೆ ತೆರೆದ ಮೇಲೆ ಔಷಧಿಯ ಆಯಸ್ಸು ಬದಲಾಗುತ್ತದೆ ಎಂಬ ಸತ್ಯ ನಿಮಗೆ ಗೊತ್ತಿರಲಿ.

ಮುಚ್ಚಳ ತೆರೆದ ಮೇಲೆ ಏನಾಗುತ್ತದೆ?

ಔಷಧಿಯ ಬಾಟಲಿ ಅಥವಾ ಟ್ಯೂಬ್ ಅನ್ನು ಒಮ್ಮೆ ತೆರೆದರೆ ಸಾಕು, ಅದು ಗಾಳಿ, ತೇವಾಂಶ ಮತ್ತು ವಾತಾವರಣದಲ್ಲಿನ ಬ್ಯಾಕ್ಟೀರಿಯಾಗಳಿಗೆ ತೆರೆದುಕೊಳ್ಳುತ್ತದೆ. ಕಾಲಕ್ರಮೇಣ ಇದು ಔಷಧಿಯ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ ಅಥವಾ ಔಷಧಿಯನ್ನು ಕಲುಷಿತಗೊಳಿಸುತ್ತದೆ. ಔಷಧಿಯು ಬಣ್ಣ ಬದಲಾಗಿದ್ದರೆ, ವಾಸನೆ ಬರುತ್ತಿದ್ದರೆ ಅಥವಾ ಮಾತ್ರೆಗಳು ಮೆತ್ತಗಾಗಿದ್ದರೆ ಅದನ್ನು ತಕ್ಷಣ ಎಸೆಯುವುದು ಉತ್ತಮ.

ಬಹಳಷ್ಟು ಜನರು ಔಷಧಿ ಬಾಟಲಿ ಓಪನ್ ಮಾಡಿದ 28 ರಿಂದ 30 ದಿನಗಳ ನಂತರ ಅದನ್ನು ಎಸೆಯಬೇಕು ಎಂದು ಭಾವಿಸುತ್ತಾರೆ. ಆದರೆ ಇದು ಎಲ್ಲಾ ಔಷಧಿಗಳಿಗೂ ಅನ್ವಯಿಸುವುದಿಲ್ಲ ಎನ್ನುತ್ತಾರೆ ತಜ್ಞ ವೈದ್ಯರು. ಪ್ಯಾರಸಿಟಮಾಲ್, ವಿಟಮಿನ್ ಸಿರಪ್ ಅಥವಾ ಕೆಮ್ಮಿನ ಸಿರಪ್‌ಗಳನ್ನು ಸರಿಯಾದ ತಾಪಮಾನದಲ್ಲಿ (ಬಿಸಿಲು ಮತ್ತು ತೇವಾಂಶವಿಲ್ಲದ ಜಾಗದಲ್ಲಿ) ಶೇಖರಿಸಿಟ್ಟರೆ, ಬಾಟಲಿಯ ಮೇಲಿರುವ ಎಕ್ಸ್‌ಪೈರಿ ಡೇಟ್‌ವರೆಗೆ ಬಳಸಬಹುದು. ಮಾತ್ರೆಗಳು ಮತ್ತು ಕ್ಯಾಪ್ಸುಲ್‌ಗಳು ಅವುಗಳ ಮೂಲ ಪ್ಯಾಕಿಂಗ್‌ನಲ್ಲಿದ್ದರೆ (Blister packs) ಎಕ್ಸ್‌ಪೈರಿ ಡೇಟ್‌ವರೆಗೆ ಸುರಕ್ಷಿತವಾಗಿರುತ್ತದೆ.

ಅಂಟಿಬಯೋಟಿಕ್ ಸಿರಪ್ ಬಗ್ಗೆ ಎಚ್ಚರ

ಮಕ್ಕಳಿಗೆ ನೀಡುವ ಅಂಟಿಬಯೋಟಿಕ್ ಸಿರಪ್‌ಗಳು ಹೆಚ್ಚಾಗಿ ಪೌಡರ್ ರೂಪದಲ್ಲಿರುತ್ತವೆ. ಇದಕ್ಕೆ ನೀರು ಬೆರೆಸಿ ಸಿರಪ್ ತಯಾರಿಸಿದ ನಂತರ, ಅದನ್ನು ಕೇವಲ 7 ರಿಂದ 14 ದಿನಗಳವರೆಗೆ ಮಾತ್ರ ಬಳಸಬೇಕು. ಅದರಲ್ಲಿ ಔಷಧ ಬಾಕಿ ಉಳಿದಿದ್ದರೂ ಸಹ 14 ದಿನಗಳ ನಂತರ ಅದನ್ನು ಕಡ್ಡಾಯವಾಗಿ ಎಸೆಯಬೇಕು.

ಐ ಡ್ರಾಪ್ಸ್ ಮತ್ತು ಇನ್ಸುಲಿನ್

ಕಣ್ಣಿಗೆ ಹಾಕುವ ಹನಿಗಳನ್ನು ಒಮ್ಮೆ ಓಪನ್ ಮಾಡಿದ ಮೇಲೆ ಕೇವಲ 28 ದಿನಗಳ ಒಳಗಾಗಿ ಬಳಸಬೇಕು. ಏಕೆಂದರೆ ಅದರ ಡ್ರಾಪರ್ ಮೂಲಕ ಬ್ಯಾಕ್ಟೀರಿಯಾಗಳು ಒಳ ಸೇರುವ ಸಾಧ್ಯತೆ ಇರುತ್ತದೆ. ಇನ್ಸುಲಿನ್ ಮತ್ತು ಚುಚ್ಚುಮದ್ದಿನ ಔಷಧಿಗಳಿಗೆ ನಿರ್ದಿಷ್ಟ ಶೇಖರಣಾ ನಿಯಮಗಳಿರುತ್ತವೆ. ಇವುಗಳನ್ನು ಓಪನ್ ಮಾಡಿದ ನಂತರ ವೈದ್ಯರು ಸೂಚಿಸಿದ ಅವಧಿಯೊಳಗೆ ಮಾತ್ರ ಬಳಸಬೇಕು.

ನೀವು ಮೊದಲ ಬಾರಿಗೆ ಔಷಧಿಯ ಬಾಟಲಿಯನ್ನು ಯಾವಾಗ ಓಪನ್ ಮಾಡಿದ್ದೀರಿ ಎಂಬ ದಿನಾಂಕವನ್ನು ಬಾಟಲಿಯ ಮೇಲೆ ಮಾರ್ಕರ್‌ನಿಂದ ಬರೆದಿಡಿ. ಕೆಲವು ಔಷಧಿಗಳನ್ನು ಫ್ರಿಜ್‌ನಲ್ಲಿ ಇಡಬೇಕಾಗುತ್ತದೆ, ಇನ್ನು ಕೆಲವನ್ನು ಕತ್ತಲೆಯಾದ ಜಾಗದಲ್ಲಿ ಇಡಬೇಕಾಗುತ್ತದೆ. ಲೇಬಲ್ ಮೇಲೆ ನೀಡಿರುವ ಸೂಚನೆಯನ್ನು ತಪ್ಪದೇ ಪಾಲಿಸಿ.

ಔಷಧಿಯ ಬಳಕೆ ಬಗ್ಗೆ ಸಂಶಯವಿದ್ದರೆ ನಿಮ್ಮ ಫಾರ್ಮಸಿಸ್ಟ್ ಅಥವಾ ವೈದ್ಯರನ್ನು ಕೇಳಿ. ಸಂಶಯವಿದ್ದರೆ ಅದನ್ನು ಎಸೆಯುವುದೇ ಲೇಸು. ಎಕ್ಸ್‌ಪೈರಿ ಡೇಟ್ ಮುಗಿಯದಿದ್ದರೂ, ಓಪನ್ ಮಾಡಿದ ನಂತರ ಬಣ್ಣ ಅಥವಾ ವಾಸನೆಯಲ್ಲಿ ಬದಲಾವಣೆಯಾಗಿದ್ದರೆ ಅಂತಹ ಔಷಧಿಯನ್ನು ಬಳಸಿ ಜೀವದ ಜೊತೆ ಚೆಲ್ಲಾಟವಾಡಬೇಡಿ.