ಕೋಲ್ಕತ್ತಾದಲ್ಲಿ ಹ್ಯೂಮನ್ ಕೊರೊನಾ ವೈರಸ್ HKU1 ಪತ್ತೆಯಾಗಿದ್ದು, ಇದು ಉಸಿರಾಟದ ಸಮಸ್ಯೆಯನ್ನು ಉಂಟುಮಾಡುತ್ತದೆ. ಜ್ವರ, ಕೆಮ್ಮು, ಶೀತದಂತಹ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆಯಿಂದಿರಿ ಹಾಗೂ ವೈದ್ಯರನ್ನು ಸಂಪರ್ಕಿಸಿ.
ಕೋವಿಡ್ ನಂತರ ಈಗ ಮತ್ತೊಂದು ವೈರಸ್‌ವೊಂದು ಪತ್ತೆಯಾಗಿದೆ. ಮಾನವ ಕೊರೊನಾ ವೈರಸ್ ಅಥವಾ ಹ್ಯುಮನ್ ಕೊರೊನಾ ವೈರಸ್ ಅಥವಾ HKU1 ಎಂದು ಕರೆಯಲ್ಪಡುವ ವೈರಸೊಂದು ಕೋಲ್ಕತ್ತಾ ಮೂಲದ ಮಹಿಳೆಯಲ್ಲಿ ಕಾಣಿಸಿಕೊಂಡಿದ್ದು, ಇದು ಕೂಡ ಉಸಿರಾಟಕ್ಕೆ ಸಮಸ್ಯೆ ತಂಡೊಡ್ಡುವ ಕಾಯಿಲೆಯಾಗಿದೆ. ಇದು ತೀವ್ರ ಸ್ವರೂಪ ಪಡೆದಲ್ಲಿ ಶೀತ ಹಾಗೂ ನ್ಯುಮೋನಿಯಾ ಉಂಟು ಮಾಡಬಹುದು. ಆದರೆ ಭಯಪಡುವ ಅಗತ್ಯವಿಲ್ಲ ಆದರು ಬಹಳ ಎಚ್ಚರಿಕೆಯಿಂದ ಇರುವಂತೆ ಎಂದು ತಜ್ಞರು ಸೂಚಿಸಿದ್ದಾರೆ.
ಕೋಲ್ಕತ್ತಾದ ಗರಿಯಾ ನಿವಾಸಿಯಾದ 45 ವರ್ಷದ ಮಹಿಳೆಯೊಬ್ಬರಿಗೆ ಹ್ಯೂಮನ್ ಕೊರೊನಾ ವೈರಸ್ ( HKU1) ಸೋಂಕು ತಗುಲಿದೆ. ಸೋಂಕಿನಿಂದ ಬಳಲುತ್ತಿರುವ ಅವರಿಗೆ ದಕ್ಷಿಣ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಕಳೆದ 15 ದಿನಗಳಿಂದ ಜ್ವರ, ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದರು, ಆದರೆ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಈ ವೈರಸ್ COVID-19 ನಷ್ಟು ಕುಖ್ಯಾತವಲ್ಲದಿದ್ದರೂ ಇದೂ ಕೂಡ ಉಸಿರಾಟದ ಸೋಂಕನ್ನು ಉಂಟುಮಾಡಬಹುದು ಆದರೂ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಹಾಗಿದ್ದರೆ ಈ ಹ್ಯೂಮನ್ ಕೋವಿಡ್ ವೈರಸ್‌ನ ಲಕ್ಷಣಗಳು ಹಾಗೂ ಅಪಾಯಗಳೇನು ಎಂಬ ಬಗ್ಗೆ ತಿಳಿಯೋಣ.
ನೀರು ಕಡಿಮೆ ಕುಡಿದ್ರೆ ಸಮಸ್ಯೆ… ಜಾಸ್ತಿ ಕುಡಿದ್ರೂ ತುಂಬಾನೆ ಸಮಸ್ಯೆ
ಹ್ಯೂಮನ್ ಕೊರೊನಾವೈರಸ್ HKU1 ಎಂದರೇನು?
ಹ್ಯೂಮನ್ ಕೊರೊನಾವೈರಸ್ HKU1 ಬೀಟಾಕೊರೊನಾವೈರಸ್ ಕುಟುಂಬಕ್ಕೆ ಸೇರಿದ್ದು, ಸಾರ್ಸ್(SARS) ಹಾಗೂ ಮ್ಯಾರ್ಸ್ (MERS) ವೈರಸ್‌ಗಳನ್ನು ಒಳಗೊಂಡಿರುವ ಅದೇ ಗುಂಪಿಗೆ ಸೇರುತ್ತದೆ. ಆದರೂ ಕೋವಿಡ್ 19ಗೆ ಕಾರಣವಾಗುವ SARS-CoV-2 ಗಿಂತ ಭಿನ್ನವಾಗಿದೆ. ಹ್ಯೂಮನ್ ಕೊರೊನಾವೈರಸ್ ಸಾಮಾನ್ಯವಾಗಿ ಸಣ್ಣ ಸಮಸ್ಯೆಗೆ ಸಂಬಂಧಿಸಿದಾಗಿದೆ. ಈ ವೈರಸ್ ಆರಂಭದಲ್ಲಿ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ, ಸಾಮಾನ್ಯ ಶೀತದಂತೆಯೇ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ, ಆದರೂ ಇದು ಕೆಲವೊಮ್ಮೆ ನ್ಯುಮೋನಿಯಾ ಅಥವಾ ಬ್ರಾಂಕಿಯೋಲೈಟಿಸ್‌ನಂತಹ ಹೆಚ್ಚು ಗಂಭೀರವಾದ ಶ್ವಾಸಕೋಶದ ಸೋಂಕುಗಳಿಗೆ ಕಾರಣವಾಗಬಹುದು.
ಹ್ಯೂಮನ್ ಕೊರೊನಾವೈರಸ್ ಲಕ್ಷಣಗಳು
ಈ ಹ್ಯೂಮನ್ ಕೊರೊನಾ ವೈರಸ್ ಸಾಮಾನ್ಯವಾಗಿ ಜ್ವರದಂತಹ ಲಕ್ಷಣಗಳನ್ನು ಹೊಂದಿವೆ. ಅದರ ಜೊತೆಗೆ ನಿರಂತರ ಕೆಮ್ಮು, ಮೂದಿನಲ್ಲಿ ನಿರಂತರ ಸೋರಿಕೆ ಅಥವಾ ಮೂಗು ಬಂದ್ ಆಗುವುದು , ಗಂಟಲು ನೋವು, ಜ್ವರ, ಸೀನ, ಆಯಾಸ, ತಲೆನೋವು, ಹಾಗೆಯೇ ವಿಕೋಪಕ್ಕೆ ಹೋದಲ್ಲಿ ಉಸಿರಾಟದ ತೊಂದರೆ, ನ್ಯುಮೋನಿಯಾ ಅಥವಾ ಬ್ರಾಂಕೈಟಿಸ್ ಮುಂತಾದ ಸಮಸ್ಯೆಗಳು ಶುರುವಾಗಬಹುದು. ಕೆಲವೊಮ್ಮೆ ಇದು ತಾನಾಗಿಯೇ ಗುಣವಾದರೂ ಹಿರಿಯ ನಾಗರಿಕರು, ಚಿಕ್ಕ ಮಕ್ಕಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚು ತೀವ್ರವಾದ ತೊಂದರೆಗೆ ಒಳಗಾಗಬಹುದು.
ನಡಿಗೆ: ವಾಕಿಂಗ್ ಮಾಡ್ತಾ ತೂಕ ಇಳಿಸ್ಬೇಕಾ? ಹಾಗಾದ್ರೆ ಹೀಗೆ ಮಾಡಿ, ವರ್ಕ್ ಆಗುತ್ತೆ...
ಯಾರಿಗೆ ಅಪಾಯ:
ಇದು ಕೋವಿಡ್‌ನಷ್ಟು ಗಂಭೀರವಲ್ಲದಿದ್ದರೂ ಹಿರಿಯ ನಾಗರಿಕರು (60 ವರ್ಷಕ್ಕಿಂತ ಮೇಲ್ಪಟ್ಟವರು). ಶಿಶುಗಳು ಮತ್ತು ಚಿಕ್ಕ ಮಕ್ಕಳು, ಆಸ್ತಮಾ ಅಥವಾ COPD ಯಂತಹ ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಇರುವ ಜನರು.
ಇಮ್ಯುನೊಕೊಂಪ್ರೊಮೈಸ್ಡ್ ಜನರು (ಉದಾ ಕಿಮೊಥೆರಪಿಗೆ ಒಳಗಾಗುವವರು, ಅಂಗಾಂಗ ಕಸಿ ರೋಗಿಗಳು ಅಥವಾ HIV/AIDS ಇರುವವರು). ಮಧುಮೇಹ ಅಥವಾ ಹೃದ್ರೋಗದಂತಹ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ಜನರು ಇದರಿಂದ ತೀವ್ರ ತೊಂದರೆಗೊಳಗಾಗುವ ಸಾಧ್ಯತೆ ಇದೆ. ಆರೋಗ್ಯವಂತರಿಗೆ ಇದು ಸಾಮಾನ್ಯ ಶೀತದಂತೆಯೇ ಸೌಮ್ಯ ಲಕ್ಷಣಗಳನ್ನು ಉಂಟು ಮಾಡುತ್ತದೆ, ಆದರೆ ಸೋಂಕು ನ್ಯುಮೋನಿಯಾಕ್ಕೆ ಮುಂದುವರಿದರೆ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಾಗಬಹುದು.
ಇದು ಹೇಗೆ ಹರಡುತ್ತದೆ?
ಇತರ ಉಸಿರಾಟದ ವೈರಸ್‌ಗಳಂತೆ HKU1 ಸೋಂಕಿತ ಉಸಿರಾಟದ ನೇರ ಸಂಪರ್ಕದಿಂದ ಅಂದರೆ ಸೋಂಕಿತರ ಕೆಮ್ಮು ಸೀನುವಿನಿಂದ, ಕಲುಷಿತ ಜಾಗವನ್ನು ಸ್ಪರ್ಶಿಸಿ ನಂತರ ಮುಖ, ಬಾಯಿ ಅಥವಾ ಮೂಗನ್ನು ಸ್ಪರ್ಶಿಸುವುದರಿಂದ ಹರಡುವುದು ಹಾಗೆಯೇ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದಲೂ ಹರಡುತ್ತದೆ.
ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ?
ಮಾನವ ಕೊರೊನಾವೈರಸ್ HKU1 ಗೆ ನಿರ್ದಿಷ್ಟ ಲಸಿಕೆ ಅಥವಾ ಆಂಟಿವೈರಲ್ ಚಿಕಿತ್ಸೆ ಇಲ್ಲದಿದ್ದರೂ, ಮೂಲಭೂತ ನೈರ್ಮಲ್ಯ ಮತ್ತು ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್ ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯಿರಿ
ಜನದಟ್ಟಣೆ ಅಥವಾ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ
ಸೋಂಕಿನ ಲಕ್ಷಣಗಳನ್ನು ತೋರಿಸುವ ಜನರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ
ಮೊಬೈಲ್ ಫೋನ್‌ಗಳು ಮತ್ತು ಕೌಂಟರ್‌ಟಾಪ್‌ಗಳಂತಹ ಆಗಾಗ್ಗೆ ಸ್ಪರ್ಶಿಸಲಾದ ಮೇಲ್ಮೈಗಳನ್ನು ಸ್ಯಾನಿಟೈಸ್ ಮಾಡಿ
ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ
ಸಮತೋಲಿತ ಆಹಾರವನ್ನು ಸೇವಿಸಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಿ
ಸಾಕಷ್ಟು ವಿಶ್ರಾಂತಿ ಪಡೆಯುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ.
