Asianet Suvarna News Asianet Suvarna News

3 ವರ್ಷದ ಪಾಪು ಬ್ಯಾಟರಿ ನುಂಗಿಬಿಡ್ತು! ಆಮೇಲೆ..?

ಮಕ್ಕಳ ಕಡೆಗೆ ಎಷ್ಟುಅಂತ ಗಮನ ಕೊಡಲಿಕ್ಕಾಗುತ್ತೆ, ಸ್ವಲ್ಪ ನಾವು ಅತ್ತಿತ್ತ ಹೋಗಿ ಬಂದರೂ ಪಾಪು ಏನಾದರೊಂದು ಅವಾಂತರ ಮಾಡಿರುತ್ತೆ. ಅದು ಮಗುವಿನ ಕಲಿಯೋ ವಯಸ್ಸು. ಆದರೆ ತಿಳುವಳಿಕೆ ಇಲ್ಲದೇ ಮಾಡೋ ಈ ಕೆಲಸದಂದ ಆಗೋ ಅನಾಹುತ ಒಂದೆರಡಲ್ಲ. ಅಂಥದ್ದೇ ಒಂದು ಅಪಾಯಕ್ಕೆ ಸಿಕ್ಕ ಪಾಪುವಿನ ಬಗ್ಗೆ ಈ ಬರಹ ಇದೆ.

Moms experience about kids swallowing batteries
Author
Bangalore, First Published Mar 2, 2020, 3:25 PM IST

ಅಮ್ಮನ ಡೈರಿಯ ಪುಟಗಳು..

ಅವತ್ತು ಶುಕ್ರವಾರ. ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದೆ. ಸಣ್ಣಗೆ ತಲೆ ನೋಯುತ್ತಿತ್ತು. ಒಮ್ಮೆ ತಲೆ ಸುತ್ತಿದ ಹಾಗಾಯ್ತು. ಹಾಗಾಗಿ ಮಾಡುತ್ತಿದ್ದ ಕೆಲಸ ನಿಲ್ಲಿಸಿ ಮಗಳನ್ನು ನೋಡಿಕೊಳ್ಳುವಂತೆ ಗಂಡನ ಬಳಿ ಹೇಳಿ ಮಲಗಿಕೊಂಡೆ. ನನ್ನ ಹಸ್ಬೆಂಡ್‌ ಕೆಲವು ದಿನ ವರ್ಕ್ ಫ್ರಂ ಹೋಮ್‌ ಮಾಡ್ತಾರೆ. ಮಗಳು ನಡು ನಡುವೆ ಅವನ ಜೊತೆಗೆ ಆಟ ಆಡ್ತಾ ಇರ್ತಾಳೆ. ನಾನು ಮಲಗಿದ ಸ್ವಲ್ಪ ಹೊತ್ತಲ್ಲೇ ಅಪ್ಪ ಮಗಳು ಜೋರು ಜೋರು ಸ್ವರದಲ್ಲಿ ಮಾತಾಡೋದು ಕೇಳಿತು.‘ಬ್ಯಾಟ್ರಿ ನುಂಗಿದ್ದೀಯಾ..ನಿಜ ಹೇಳು’ ಅಂತ ಅವನು ಕಿರಿಚುತ್ತಿದ್ದ. ಅವಳು ಏನೇನೋ ಹೇಳ್ತಿದ್ದಳು. ದೇವ್ರೇ ಇದು ಕನಸಾಗಿರಲಿ ಅಂದುಕೊಂಡೆ. ದುರಾದೃಷ್ಟವಶಾತ್‌ ಅದು ನಿಜವೇ ಆಗಿತ್ತು. ಮಗಳು ಅವಳ ಕೋಣೆಯಿಂದ ಅಪ್ಪನ ಆಫೀಸ್‌ಗೆ ಆಟಿಕೆಗಳನ್ನು ಶಿಫ್ಟ್‌ ಮಾಡುವಾಗ ಒಂದು ಆಟಿಕೆಯಿಂದ ಬ್ಯಾಟರಿ ಕೆಳ ಬಿದ್ದಿದೆ. ಅದನ್ನೆತ್ತಿ ಬಾಯಿಗೆ ಹಾಕಿಕೊಂಡಿದ್ದಾಳೆ. ಯಾವುದೋ ಧ್ಯಾನದಲ್ಲಿ ನುಂಗಿಬಿಟ್ಟಿದ್ದಾಳೆ. ಆಮೇಲೆ ಬಂದು ಅವಳ ಅಪ್ಪನಿಗೆ ಹೇಳಿದ್ದಾಳೆ. ಅಪ್ಪ ಗಾಬರಿಯಿಂದ ಬೈದಿದ್ದು ಕಂಡು ಹೆದರಿ ತಿಂದಿಲ್ಲ ಅನ್ನಲಿಕ್ಕೆ ಶುರುಮಾಡಿದ್ದಾಳೆ.

ದೊಡ್ಡವನಾದ್ರೂ ಬಾತ್‌ರೂಂ ಓಪನ್‌ ಮಾಡ್ಕೊಂಡೇ ಸೂಸೂ ಮಾಡ್ತಾನೆ; ಏನಿದು ಪ್ರಾಬ್ಲಂ?

ಹೆಚ್ಚು ಸಮಯ ಇರಲಿಲ್ಲ. ಕೂಡಲೇ ಪಕ್ಕದ ಡಾಕ್ಟರ್‌ ಶಾಪ್‌ ಗೆ ಎತ್ಕೊಂಡು ಹೋದ್ವಿ. ಎಕ್ಸ್‌ರೇ ಮಾಡಿ ನೋಡಿದಾಗ ಅವಳು ಬ್ಯಾಟರಿ ನುಂಗಿದ್ದು ಹೌದು ಅಂತ ಗೊತ್ತಾಯ್ತು. ಅವಳಿಗೆ ಮೆಡಿಸಿನ್‌ ಕೊಟ್ಟಡಾಕ್ಟರ್‌ ನಾಳೆ ಮೋಶನ್‌ ಪಾಸ್‌ ಮಾಡುವಾಗ ಹೊರ ಹೋಗುತ್ತೆ ಅಂದರು. ಆದರೆ ಮಲದಲ್ಲಿ ಬ್ಯಾಟರಿ ಇರಲಿಲ್ಲ. ಮತ್ತೆ ಎಕ್ಸ್‌ ರೇ ಮಾಡಿದ್ರೆ ಬ್ಯಾಟರಿ ಅಲ್ಲೇ ಇದೆ. ಶನಿವಾರ ನಮ್ಮ ಪಾಲಿಗೆ ಕರಾಳ ದಿನವಾಗಿತ್ತು. ಅದೆಷ್ಟುಬಾರಿ ಅತ್ತಿದ್ದೆನೋ ಗೊತ್ತಿಲ್ಲ. ಭಾನುವಾರ ಮತ್ತೆ ಎಕ್ಸ್‌ ರೇ ಮಾಡಿದರೆ ಬ್ಯಾಟರಿ ಇದ್ದ ಜಾಗದಿಂದ ಕದಲಿರಲಿಲ್ಲ. ಅವಳನ್ನು ನೋಡುತ್ತಿದ್ದ ಪೀಡಿಯಾಟ್ರಿಶಿಯನ್‌ಗೂ ಗಾಬರಿಯಾಯ್ತು. ಅವತ್ತು ರಾತ್ರಿಯೊಳಗೆ ಆ ಬ್ಯಾಟರಿ ಹೊರ ತೆಗೆಯದಿದ್ದರೆ ಅದು ಲೀಕ್‌ ಆಗುವ ಸಾಧ್ಯತೆ ಇತ್ತು. ಮಗುವಿಗೆ ಎಂಡೋಸ್ಕೊಪಿ ಮಾಡಬೇಕು ಅಂತ ಡಾಕ್ಟರ್‌ ಹೇಳಿದರು.

ಪುಟಾಣಿ ಕಂದಮ್ಮಗಳೇಕೆ ಕೂಕ್ ಆಟಕ್ಕೆ ಕೇಕೆ ಹಾಕುತ್ತವೆ?

ನನ್ನ ಎಳೆಯ ಕಂದಮ್ಮ ಮತ್ತೊಂದು ಆಸ್ಪತ್ರೆಯಲ್ಲಿ ಎಂಡೋಸ್ಕೊಪಿಗೆ ಸಿದ್ಧಳಾದಳು. ಎಂಡೊಸ್ಕೊಪಿ ಮಾಡಿದ ಬಳಿಕ ಡಾಕ್ಟರ್‌ ಹೇಳಿದರು. ಬ್ಯಾಟರಿ ಬಹುಶಃ ನಾಳೆ ಬೆಳಗ್ಗೆ ಹೊರ ಬರಬಹುದು ಅಂತ. ನಮ್ಮ ಟೆನ್ಶನ್‌ ಹೆಚ್ಚಾಯ್ತು. ಏಕೆಂದರೆ ಹೊಟ್ಟೆಯೊಳಗಿನ ಆ್ಯಸಿಡಿಕ್‌ ವಾತಾವರಣದಲ್ಲಿ ಅದು ಕರಗಬಹುದು. ಅದರೊಳಗಿರುವ ರಾಸಾಯನಿಕ ಮಗುವಿಗೆ ಬಹಳ ಅಪಾಯಕಾರಿ. ನಾನು ನನ್ನ ಗಂಡ ಮುಂದೇನು ಅಂತ ತಲೆ ಮೇಲೆ ಕೈ ಕೂತೆವು. ಡಾಕ್ಟರ್‌ ಏನೋ ನಾಳೆ ಬೆಳಗ್ಗೆ ಹೊರ ಹೋಗಬಹುದು ಅಂತಿದ್ದಾರೆ. ಆದರೆ ಎಲ್ಲಾದರೂ ಹೊರ ಹೋಗದಿದ್ದರೆ ಸರ್ಜರಿ ಅನಿವಾರ್ಯ. ಮೂರು ವರ್ಷದ ಮಗುವಿಗೆ ಸರ್ಜರಿ ಮಾಡೋದು ಅಂದರೆ .. ಯೋಚಿಸಿದಷ್ಟೂತಲೆ ಕೆಡುತ್ತಿತ್ತು.

ಮರುದಿನ ಬೆಳಗ್ಗೆ ಅವಳ ಮೋಶನ್‌ ನಲ್ಲಿ ಬ್ಯಾಟರಿ ಹೊರ ಹೋಗಲಿಲ್ಲ. ಮತ್ತೆ ಎಕ್ಸರೇ ಮಾಡಿದಾಗ ಮಲದ್ವಾರದವರೆಗೆ ಹೋಗಿದ್ದು ಕಾಣಿಸಿತು. ಸುಮಾರು 11 ಗಂಟೆಯಷ್ಟುಹೊತ್ತಿಗೆ ಮತ್ತೊಮ್ಮೆ ಮೋಶನ್‌ ಪಾಸ್‌ ಮಾಡಿಸಿ ಬ್ಯಾಟರಿ ಹೊರ ತೆಗೆಯಲಾಯಿತು. ಖುಷಿಗೋ, ಆವರೆಗಿನ ಟೆನ್ಶನ್‌ಗೋ ಮತ್ತೆ ಮತ್ತೆ ಕಣ್ಣೀರು ಬರುತ್ತಿತ್ತು.

ನಿಮ್ಮ ಮಗುವಿನ ಐಕ್ಯೂ ಹೆಚ್ಚಿಸುವುದು ಹೇಗೆ?

ಇದು ನಿಮಗೆ ಗೊತ್ತಿರೋದೇ, ಆದರೂ ಇನ್ನೊಮ್ಮೆ ನೆನಪಿಸ್ತೀನಿ

- ನಾಣ್ಯಗಳು, ಬ್ಯಾಟರಿ, ಬ್ಲೇಡ್‌, ಹರಿತವಾದ ಸಾಧನಗಳು, ಪ್ಲಾಸ್ಟಿಕ್‌ ಐಟಂ ಇತ್ಯಾದಿಗಳನ್ನು ದಯಮಾಡಿ ಎಳೆಯ ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ.

- ಆಟಿಕೆಯೊಳಗೆ ಬ್ಯಾಟರಿ ಇದ್ದರೆ ಅದನ್ನ ಮಗು ತೆರೆಯದಂತೆ ಗಮ್‌ಟೇಪ್‌ ಹಾಕಿ.

- ಮಗು ಏನನ್ನಾದರೂ ನುಂಗಿದ್ದು ಗಮನಕ್ಕೆ ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ. ಮನೆಯಲ್ಲಿ ಏನೋ ಮಾಡಲು ಹೋಗಿ ಮತ್ತೇನೋ ಆಗೋದು ಬೇಡ.

- ಮಗು ಏನನ್ನಾದರೂ ನುಂಗಿದ್ದು ಗೊತ್ತಾದ ಕೂಡಲೇ ಬಾಳೆಹಣ್ಣು, ಪಪ್ಪಾಯಿ ತಿನ್ನಿಸಿ.

(ಕೃಪೆ :ಮಾಮ್ಸ್‌ಪ್ರೆಸ್ಸೋ)

Follow Us:
Download App:
  • android
  • ios