ಡಾ. ಸುರೇಂದ್ರ ಕುಮಾರ್ ಅವರ ಪ್ರಕಾರ, ದೈನಂದಿನ ದಿನಚರಿ ಮತ್ತು ಆರೋಗ್ಯಕರ ಅಭ್ಯಾಸಗಳಲ್ಲಿ ಕೆಲವು ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ಯಶಸ್ವಿಯಾಗಬಹುದು. 

ಇಂದು ಜನ ಎಷ್ಟು ಬ್ಯೂಸಿ ಅಂದ್ರೆ ಜಿಮ್‌ಗೆ ಹೋಗೋಕೂ ಅವರಿಗೆ ಪುರುಸೊತ್ತಿಲ್ಲ. ಕೆಲಸ, ಕುಟುಂಬ ಮತ್ತು ಜವಾಬ್ದಾರಿಗಳ ನಡುವೆ ತನಗಾಗಿ ಸಮಯ ಕಂಡುಕೊಳ್ಳುವುದು ಕಷ್ಟ. ಹಾಗಾಗಿ ತೂಕ ಇಳಿಸಿಕೊಳ್ಳಲು, ಫಿಟ್ ಆಗಿರಲು ಜಿಮ್ ಹೋಗೋಕೆ ಸಾಧ್ಯವಾಗುತ್ತಿಲ್ಲ ಎಂಬುದು ಬಹುತೇಕರ ಅಳಲು. ಆದ್ರೆ ಜಿಮ್‌ಗೆ ಹೋದ್ರೆನೇ ನಾವು ಫಿಟ್ ಆಗಿರಲು ಸಾಧ್ಯ ಎಂಬುದು ಈಗಿನವರ ಮಾತು. ಹಾಗೆ ನೋಡಿದರೆ ದೈನಂದಿನ ದಿನಚರಿ ಮತ್ತು ಆರೋಗ್ಯಕರ ಅಭ್ಯಾಸಗಳಲ್ಲಿ ಕೆಲವು ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ಯಶಸ್ವಿಯಾಗಬಹುದು. ನವದೆಹಲಿಯ ಜನರಲ್ ಫಿಸಿಶಿಯನ್, ಎಂಬಿಬಿಎಸ್ ಡಾ. ಸುರೇಂದ್ರ ಕುಮಾರ್ ಅವರ ಪ್ರಕಾರ, ತೂಕ ಇಳಿಸಿಕೊಳ್ಳಲು ಗಂಟೆಗಟ್ಟಲೆ ಬೆವರು ಸುರಿಸಬೇಕಾಗಿಲ್ಲ, ಆದರೆ ಸರಿಯಾದ ಆಹಾರ ಪದ್ಧತಿ, ದಿನಚರಿ ಮತ್ತು ಕೆಲವು ಸಮಂಜಸವಾದ ಕ್ರಮಗಳು ನಮ್ಮ ಆರೋಗ್ಯವನ್ನು ಸುಧಾರಿಸಬಹುದು. ಈ 5 ಸುಲಭ ಸಲಹೆಗಳ ಸಹಾಯದಿಂದ ಅನೇಕ ಜನರು ಜಿಮ್‌ಗೆ ಹೋಗದೆಯೇ ತಮ್ಮನ್ನು ತಾವು ಫಿಟ್ ಮತ್ತು ಸ್ಲಿಮ್ ಆಗಿ ಮಾಡಿಕೊಂಡಿದ್ದಾರೆ.

ಈ ಲೇಖನದಲ್ಲಿ, ಯಾವುದೇ ಹೆಚ್ಚುವರಿ ವೆಚ್ಚ ಅಥವಾ ಸಲಕರಣೆಗಳಿಲ್ಲದೆ ತೂಕ ಇಳಿಸಿಕೊಳ್ಳಲು ನೀವು ಅಳವಡಿಸಿಕೊಳ್ಳಬಹುದಾದ 5 ಪರಿಣಾಮಕಾರಿ ಮತ್ತು ಸುಲಭ ಸಲಹೆಗಳ ಬಗ್ಗೆ ತಿಳಿಯೋಣ. ಜೊತೆಗೆ ಜಿಮ್‌ಗೆ ಹೋಗದೆಯೂ ತೂಕ ಇಳಿಸಿಕೊಳ್ಳಲು ಒಂದು ಸ್ಮಾರ್ಟ್ ಮಾರ್ಗವನ್ನು ಅಳವಡಿಸಿಕೊಳ್ಳೋಣ.

ನಡೆದರೂ ಕಡಿಮೆಯಾಗುತ್ತೆ ತೂಕ
ನೀವು ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದರೆ, ನಡೆಯುವುದು, ಮೆಟ್ಟಿಲುಗಳನ್ನು ಹತ್ತುವುದು, ಮನೆಕೆಲಸ ಮಾಡುವಂತಹ ಸಣ್ಣ ದೈಹಿಕ ಚಟುವಟಿಕೆಗಳು ಸಹ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತವೆ . ಪ್ರತಿದಿನ 7000-10000 ಹೆಜ್ಜೆಗಳು ನಡೆಯುವುದು ಅಥವಾ 30 ನಿಮಿಷಗಳ ಲಘು ಚಟುವಟಿಕೆಯು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕ್ಯಾಲೊರಿಗಳನ್ನು ಬರ್ನ್ ಮಾಡುವುದಲ್ಲದೆ, ದೇಹವನ್ನು ಸಕ್ರಿಯವಾಗಿ ಮತ್ತು ಎಚ್ಚರವಾಗಿರಿಸುತ್ತದೆ. ದಿನವಿಡೀ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಬದಲು, ಪ್ರತಿ ಗಂಟೆಗೆ ಸ್ವಲ್ಪ ನಡೆಯುವುದು, ಗುಡಿಸುವುದು ಮತ್ತು ಒರೆಸುವಂತಹ ಮನೆಕೆಲಸಗಳನ್ನು ಮಾಡುವುದರಿಂದ ನಿಮ್ಮನ್ನು ಫಿಟ್ ಆಗಿ ಇರಿಸಬಹುದು.

ಹೀಗಿರಲಿ ಆಹಾರಕ್ರಮ
ನಿಮ್ಮ ಆಹಾರಕ್ರಮವು ಜಿಮ್‌ಗಿಂತ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಹೌದು, ಸಂಸ್ಕರಿಸಿದ ಆಹಾರ, ಹೆಚ್ಚುವರಿ ಎಣ್ಣೆ ಮತ್ತು ಸಕ್ಕರೆಯನ್ನು ತಪ್ಪಿಸಿ ನೋಡಿ. ನಂತರ ನಿಮ್ಮ ದೈನಂದಿನ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು ಮತ್ತು ಫೈಬರ್ ಭರಿತ ಆಹಾರಗಳನ್ನು ಸೇರಿಸಿ. ಸಣ್ಣ ತಟ್ಟೆಯಲ್ಲಿ ತಿನ್ನಿರಿ. ಸಾಕಷ್ಟು ನೀರು ಕುಡಿಯಿರಿ, ಲೈಟ್ ಆಗಿರುವ ಫುಡ್ ಸೇವಿಸಲು ಪ್ರಯತ್ನಿಸಿ. ಇಂತಹ ಪರಿಣಾಮಕಾರಿ ಬದಲಾವಣೆಗಳು ನಿಮ್ಮ ತೂಕ ನಷ್ಟದಲ್ಲಿ ದೊಡ್ಡ ಪಾತ್ರವನ್ನು ವಹಿಸಬಹುದು.

ಒಳ್ಳೆಯ ನಿದ್ರೆ
ಒಳ್ಳೆಯ ನಿದ್ರೆ ದೇಹಕ್ಕೆ ವಿಶ್ರಾಂತಿ ಕೊಡುವುದಲ್ಲದೆ, ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿದ್ರೆಯ ಕೊರತೆಯು ದೇಹದಲ್ಲಿ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಇದು ಹಸಿವನ್ನು ಹೆಚ್ಚಿಸುತ್ತದೆ. ತಿನ್ನುವುದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲದಂತಾಗುತ್ತದೆ. ಪ್ರತಿದಿನ 7-8 ಗಂಟೆಗಳ ಗುಣಮಟ್ಟದ ನಿದ್ರೆ ನಿಮ್ಮ ಚಯಾಪಚಯ ಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ತೂಕ ಇಳಿಸುವ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ. ಸಾಕಷ್ಟು ನಿದ್ರೆ ಇಲ್ಲದಿದ್ದರೆ, ಇತರ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಬಹುದು.

ಊಟ ಮಾಡುವ ವಿಧಾನ
ಹೊಟ್ಟೆ ತುಂಬಿಸಿಕೊಳ್ಳಲೆಂದೇ ಊಟ ಮಾಡಬೇಡಿ, ಬದಲಾಗಿ ಎಚ್ಚರಿಕೆಯಿಂದ, ನಿಧಾನವಾಗಿ ಮತ್ತು ಗೊಂದಲವಿಲ್ಲದೆ ಊಟ ಮಾಡಿ. ಟಿವಿ ನೋಡುತ್ತಾ ಅಥವಾ ಫೋನ್ ಬಳಸುತ್ತಾ ಊಟ ಮಾಡುವುದರಿಂದ ಅತಿಯಾಗಿ ತಿನ್ನಲು ಶುರು ಮಾಡುತ್ತೇವೆ. ನೀವು ಎಚ್ಚರಿಕೆಯಿಂದ ಊಟ ಮಾಡಿದಾಗ, ದೇಹದ ಹಸಿವು ಮತ್ತು ತೃಪ್ತಿಯ ಸಂಕೇತಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಇದು ನಿಮ್ಮನ್ನು ಕಡಿಮೆ ತಿನ್ನುವಂತೆ ಮಾಡುತ್ತದೆ, ಆದರೆ ತೃಪ್ತರಾಗಿರುವಂತೆ ಮಾಡುತ್ತದೆ ಮತ್ತು ತೂಕ ಕ್ರಮೇಣ ಕಡಿಮೆಯಾಗುತ್ತದೆ.

ಕಡಿಮೆ ಒತ್ತಡ = ಕಡಿಮೆ ತೂಕ
ಒತ್ತಡವು ಕೇವಲ ಮಾನಸಿಕ ಸಮಸ್ಯೆಯಲ್ಲ, ಅದು ನಿಮ್ಮ ತೂಕದ ಮೇಲೂ ಪರಿಣಾಮ ಬೀರುತ್ತದೆ. ಒತ್ತಡ ಉಂಟಾದಾಗ ದೇಹವು ಹೆಚ್ಚು ಕಾರ್ಟಿಸೋಲ್ ಹಾರ್ಮೋನ್ ಅನ್ನು ಉತ್ಪಾದಿಸುವುದರಿಂದ ಇದು ಕೊಬ್ಬನ್ನು ಸಂಗ್ರಹಿಸುತ್ತದೆ. ದೈನಂದಿನ ಧ್ಯಾನ, ಆಳವಾದ ಉಸಿರಾಟ ಅಥವಾ ಸ್ವಲ್ಪ ಸಮಯದವರೆಗೆ ನಿಮ್ಮೊಂದಿಗೆ ಏಕಾಂಗಿಯಾಗಿ ಕುಳಿತುಕೊಳ್ಳುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಬಯಸಿದರೆ, ಯೋಗ, ನೃತ್ಯ ಅಥವಾ ಸಂಗೀತದ ಸಹಾಯವನ್ನು ಸಹ ಪಡೆಯಬಹುದು.

ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಂಡು ನಡೆಯುವುದು ಒಳ್ಳೆಯದು. ಆದರೆ ಅವುಗಳನ್ನು ಸಾಧಿಸುವುದು ಕಷ್ಟಕರವೆಂದು ತೋರಿದರೆ ಸ್ವಲ್ಪ ನಿರಾಶೆಯಾಗಬಹುದು. ಆದ್ದರಿಂದ ಪ್ರತಿದಿನ 15 ನಿಮಿಷಗಳ ಕಾಲ ನಡೆಯುವುದು ಅಥವಾ ರಾತ್ರಿ 8 ಗಂಟೆಯ ನಂತರ ಊಟ ಮಾಡದಿರುವುದು ಮುಂತಾದ ಸಣ್ಣ ಮತ್ತು ಸುಲಭವಾದ ಗುರಿಗಳನ್ನು ಹೊಂದಿಸಿ. ನೀವು ಈ ಗುರಿಗಳನ್ನು ಸಾಧಿಸಿದಾಗ, ಪ್ರೇರಣೆ ಹೆಚ್ಚಾಗುತ್ತದೆ ಮತ್ತು ನಿಮ್ಮ ದೇಹವು ಸಹ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಹೀಗೆ ಮಾಡುವುದರಿಂದ, ಜಿಮ್‌ಗೆ ಹೋಗದೆಯೇ ನೀವು ಕ್ರಮೇಣ ಫಿಟ್‌ನೆಸ್‌ಗೆ ಸರಿಯಾದ ಹಾದಿಯಲ್ಲಿ ಪ್ರಾರಂಭಿಸುತ್ತೀರಿ.