ಜಮ್ಮು ಕಾಶ್ಮೀರದಲ್ಲಿ ನಿಗೂಢ ಕಾಯಿಲೆಗೆ ಮತ್ತೆರಡು ಬಲಿ, ಸಾವಿನ ಸಂಖ್ಯೆ 14ಕ್ಕೆ ಏರಿಕೆ!
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಧಾಲ್ ಗ್ರಾಮದಲ್ಲಿ ನಿಗೂಢ ಕಾಯಿಲೆಯಿಂದ ಕಳೆದ 24 ಗಂಟೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಡಿಸೆಂಬರ್‌ನಿಂದ ಈ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದೆ. ತನಿಖೆಗಾಗಿ ಹೆಚ್ಚುವರಿ ತಜ್ಞರ ತಂಡಗಳು ಬಾಧಾಲ್‌ಗೆ ಭೇಟಿ ನೀಡಲಿವೆ.
ನವದೆಹಲಿ (ಜ.15): ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಧಾಲ್ ಗ್ರಾಮದ ನಿವಾಸಿಗಳನ್ನು ಕಾಡುತ್ತಿರುವ ನಿಗೂಢ ಕಾಯಿಲೆಯಿಂದ ಕಳೆದ 24 ಗಂಟೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಮತ್ತು ಚೆನ್ನೈನ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ಎರಡು ಹೆಚ್ಚುವರಿ ತಜ್ಞರ ತಂಡಗಳು ಈ ನಿಗೂಢ ಕಾಯಿಲೆಯ ತನಿಖೆಗಾಗಿ ಬಾಧಾಲ್‌ಗೆ ಭೇಟಿ ನೀಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಂಡಗಳು ಪರಿಸ್ಥಿತಿಯನ್ನು ನಿರ್ಣಯಿಸಿ ಸಾವಿನ ಹಿಂದಿನ ಕಾರಣವನ್ನು ನಿರ್ಧರಿಸಲಿವೆ. ಆರು ವರ್ಷದ ಬಾಲಕಿ ಸಫೀನಾ ಕೌಸರ್ ಮತ್ತು ಆಕೆಯ 62 ವರ್ಷದ ಸಂಬಂಧಿಯ ಸಾವಿನೊಂದಿಗೆ, ಕಳೆದ ವರ್ಷ ಡಿಸೆಂಬರ್‌ನಿಂದ ಈ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದೆ. ಸೋಮವಾರ ರಾತ್ರಿ 9.40 ರ ಸುಮಾರಿಗೆ ಜಿಎಂಸಿ ರಾಜೌರಿಯಲ್ಲಿ ತನ್ನ ತಂದೆಯ ಚಿಕ್ಕಪ್ಪ ಮೊಹಮ್ಮದ್ ಯೂಸುಫ್ ನಿಧನರಾದ ಕೆಲವೇ ಗಂಟೆಗಳ ನಂತರ, ಮಂಗಳವಾರ ಜಮ್ಮುವಿನ ಎಸ್‌ಎಂಜಿಎಸ್ ಆಸ್ಪತ್ರೆಯಲ್ಲಿ ಸಫೀನಾ ಕೌಸರ್ ಸಾವು ಕಂಡಿದ್ದಾಳೆ. ರಾಜೌರಿಯ ಕೊಟ್ರಂಕಾ ಪ್ರದೇಶದಲ್ಲಿ ಬರುವ ಈ ಗ್ರಾಮದಲ್ಲಿ ಭಾನುವಾರದಿಂದೀಚೆಗೆ ಜ್ವರದಿಂದ ನಾಲ್ವರು ಒಡಹುಟ್ಟಿದವರು ಸಾವನ್ನಪ್ಪಿದ್ದಾರೆ.
ಅಚ್ಚರಿಯ ವಿಚಾರ ನೆಂದರೆ, ಬಾಧಾಲ್‌ನಲ್ಲಿ ವಾಸಿಸುವ ಸಫೀನಾ ಅವರ ಕುಟುಂಬ ಮತ್ತು ಅವರ ಸಂಬಂಧಿಕರು ಮಾತ್ರ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತರ ಯಾವುದೇ ನಿವಾಸಿಗೂ ಈ ಕಾಯಿಲೆ ಬಾಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಿದ್ದರೂ, ಡಿಸೆಂಬರ್‌ನಲ್ಲಿ ಸಾವನ್ನಪ್ಪಿದವರ ಎಫ್‌ಎಸ್‌ಎಲ್ ವರದಿಗಳನ್ನು ಅಧಿಕಾರಿಗಳು ಇನ್ನೂ ಪಡೆದುಕೊಂಡಿಲ್ಲ. ನಿಗೂಢ ಕಾಯಿಲೆ ಮತ್ತು ಸಾವುಗಳು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಡಿಸೆಂಬರ್ ಆರಂಭದಲ್ಲಿ ಎರಡು ಕುಟುಂಬಗಳ ಒಂಬತ್ತು ಸದಸ್ಯರು ಇದೇ ರೀತಿಯ ರೋಗಲಕ್ಷಣಗಳಿಂದ ಸಾವನ್ನಪ್ಪಿದ್ದರು. ಎರಡೂ ಕುಟುಂಬಗಳು ಸಫೀನಾಳ ಕುಟುಂಬಕ್ಕೆ ಸಂಬಂಧಿಸಿದ್ದವಾಗಿದೆ.
ಭಾನುವಾರ ಸಫೀನಾ ಮತ್ತು ಅವರ ಐದು ಸಹೋದರ-ಸಹೋದರಿಯನ್ನು ಅವರ ಸಜ್ಜ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇಲ್ಲಿ ಫಾತಿಹಾ ಹೆಸರಿನ ಸಿಹಿ ಅನ್ನ ಸೇವಿಸಿದ ಬಳಿಕ ಇವರಿಗೆ ಜ್ವರ, ಬೆವರು, ವಾಂತಿ ಮತ್ತು ನಿರ್ಜಲೀಕರಣದ ಲಕ್ಷಣಗಳೊಂದಿಗೆ ಜಿಎಂಸಿ ರಾಜೌರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಹದಗೆಟ್ಟ ನಂತರ, ಸಹೋದರ ಸಹೋದರಿಯರನ್ನು ಜಮ್ಮುವಿನ ಎಸ್‌ಎಂಜಿಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ನಟ ಸರಿಗಮ ವಿಜಿ ಇನ್ನಿಲ್ಲ: ಹಿರಿಯ ನಟನ ಹೆಸರಲ್ಲಿ ಸರಿಗಮ ಸೇರಿಕೊಂಡಿದ್ದು ಹೇಗೆ?
ಭಾನುವಾರ ಮಧ್ಯಾಹ್ನ 1.45 ರ ಸುಮಾರಿಗೆ ನವೀನಾ ಕೌಸರ್ (5) ಸಾವು ಕಂಡಿದ್ದರೆ, ನಂತರ ಅವರ ಸಹೋದರ ಜಹೂರ್ ಅಹ್ಮದ್ (14) ಅದೇ ದಿನ ಸಂಜೆ 4.30 ಕ್ಕೆ ಮೃತರಾದರು. ಮೂರನೇ ಸಹೋದರ ಮೊಹಮ್ಮದ್ ಮರೂಫ್ (8) ಸೋಮವಾರ ಬೆಳಿಗ್ಗೆ 9.25 ರ ಸುಮಾರಿಗೆ ಅನಾರೋಗ್ಯದಿಂದ ಸಾವನ್ನಪ್ಪಿದರೆ, ಸಫಿನಾ (6) ಮಂಗಳವಾರ ನಿಧನಳಾಗಿದ್ದಾಳೆ.
Maha Kumbh 2025: ಪ್ರಯಾಗ್‌ರಾಜ್ ತೀರ್ಥಸ್ನಾನದ ವೇಳೆ ನದಿಯಲ್ಲೇ ಹೃದಯಾಘಾತ, ಎನ್‌ಸಿಪಿ ನಾಯಕ ನಿಧನ
ಜಮ್ಮುವಿನ ಆರೋಗ್ಯ ನಿರ್ದೇಶಕ ಡಾ. ರಾಕೇಶ್ ಮಂಗೋತ್ರ ಮತ್ತು ರಾಜೌರಿಯ ಮುಖ್ಯ ವೈದ್ಯಾಧಿಕಾರಿ ಡಾ. ಮನೋಹರ್ ರಾಣಾ ಅವರೊಂದಿಗೆ ಆರೋಗ್ಯ ಇಲಾಖೆಯ ಸಮರ್ಪಿತ ತಂಡವು ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಕೊಟ್ರಂಕಾದಲ್ಲಿ ನೆಲೆಸಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಮೊಬೈಲ್ ವೈದ್ಯಕೀಯ ಘಟಕ ಮತ್ತು ಆಂಬ್ಯುಲೆನ್ಸ್ ಸಹ ಸಿದ್ಧವಾಗಿದೆ.