ನಿರಂತರ ಮಳೆಗೆ ಮಕ್ಕಳಲ್ಲಿ ಹೆಚ್ಚಿದ ಅನಾರೋಗ್ಯ ಎರಡು ವಾರ ರಜೆ ನೀಡಿದ ಬ್ರೈನಿ ಸ್ಟಾರ್ಸ್‌ ಶಾಲೆ ಕೋವಿಡ್‌ ಸಂದರ್ಭದಂತೆ ಆನ್‌ಲೈನ್‌ ತರಗತಿಗೆ ಮೊರೆ

ಬೆಂಗಳೂರು (ಆ.8) : ನಿರಂತರ ಮಳೆ, ಹವಾಮಾನ ಬದಲಾವಣೆಯಿಂದಾಗಿ ಶಾಲಾ ಮಕ್ಕಳಲ್ಲಿ ಜ್ವರ, ಕೆಮ್ಮು, ಹುಣ್ಣು ಮತ್ತಿತರ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಕೆಲ ಶಾಲೆಗಳು ಕೋವಿಡ್‌(Covid) ಸಂದರ್ಭದಂತೆ ರಜೆ ನೀಡಿ ಆನ್‌ಲೈನ್‌ ತರಗತಿ(Online Class) ಮೊರೆ ಹೋಗಲಾರಂಭಿಸಿವೆ. ಜಯನಗರದ ‘ಬ್ರೈನಿ ಸ್ಟಾರ್ಸ್‌ ಸ್ಕೂಲ್‌’(Brainy Stars School)ನ ಅನೇಕ ಮಕ್ಕಳಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಆಗಸ್ಟ್‌ 21ರವರೆಗೆ ಭೌತಿಕ ತರಗತಿಗಳನ್ನು ಬಂದ್‌ ಮಾಡಿ ರಜೆ ಘೋಷಿಸಿದೆ. ಆದರೆ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್‌ಲೈನ್‌ ತರಗತಿಗಳನ್ನು ನಡೆಸುವುದಾಗಿ ಪೋಷಕರಿಗೆ ಮಾಹಿತಿ ರವಾನಿಸಿದೆ.

ಮೊದಲ ಮಳೆಯಲ್ಲಿ ನೆನಯೋ ಕಾತುರ, ಅನಾರೋಗ್ಯಕ್ಕೆ ಆಗಬಹುದು ಕಾರಣ

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಶಾಲೆಯ ಆಡಳಿತ ವಿಭಾಗದ ಮುಖ್ಯಸ್ಥರೊಬ್ಬರು ಶಾಲೆಯ ಶೇ.50ರಷ್ಟುಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮಿನಂತಹ ಸಮಸ್ಯೆಗಳಿಂದ ನಿತ್ಯ ಗೈರು ಹಾಜರಾತ್ತಿದ್ದಾರೆ. ಒಬ್ಬ ವಿದ್ಯಾರ್ಥಿ ಹುಷಾರಾಗಿ ಮರಳಿದರೆ ಮತ್ತೆ ಕೆಲ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಾರೆ. ಕಳೆದ ಕೆಲ ವಾರದಿಂದ ನಿತ್ಯ ಈ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. ಕೆಲ ಸಿಬ್ಬಂದಿಯೂ ಅನಾರೋಗ್ಯಕ್ಕೀಡಾಗಿದ್ದಾರೆ. ಎಲ್‌ಕೆಜಿಯಿಂದ 7ನೇ ತರಗತಿ ವರೆಗೆ ಮಕ್ಕಳಿದ್ದಾರೆ. ಹೆಚ್ಚಿನ ಮಕ್ಕಳು ಪೂರ್ಣ ಪ್ರಾಥಮಿಕ ತರಗತಿಗಳಲ್ಲಿದ್ದಾರೆ. ಹವಾಮಾನ ಇಲಾಖೆ ಆ.21ರವರೆಗೆ ಮಳೆಯ ಮುನ್ಸೂಚನೆ ನೀಡಿದೆ. ಈ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ನೀಡಿ, ಆನ್‌ಲೈನ್‌ ತರಗತಿ ನಡೆಸುತ್ತೇವೆ ಎಂದು ತಿಳಿಸಿದರು.

ನಿರಂತರ ಮಳೆಗೆ ಮತ್ತೆ ಗುಂಡಿ ಬಿದ್ದ ರಸ್ತೆಗಳು

ಇಂತಹ ಸಮಸ್ಯೆ ಬೇರೆ ಶಾಲೆಗಳಲ್ಲಿ ಸಹ ಕಂಡು ಬಂದಿದೆ. ಕಳೆದ ಕೆಲ ವಾರಗಳಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಸೂರ್ಯನ ಬಿಸಿಲೇ ಕಾಣದೆ ಮೋಡಮುಸುಕಿದ ವಾತಾವರಣದಿಂದಾಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗತೊಡಗಿವೆ. ಪ್ರಮುಖವಾಗಿ ಜ್ವರ, ಕೆಮ್ಮು, ಶೀತ, ಟೈಫೈಡ್‌, ಕಣ್ಣಿನ ಸೋಂಕು, ಅಲರ್ಜಿ (ಚಿಕನ್‌ ಪಾಕ್ಸ್‌) ಕೈ, ಕಾಲು ಮತ್ತು ಬಾಯಿ ಹುಣ್ಣು (ಎಚ್‌ಎಫ್‌ಎಂಡಿ) ಸೇರಿದಂತೆ ಇನ್ನಿತರೆ ಸಮಸ್ಯೆಗಳು ಎಲ್ಲೆಡೆ ಮಕ್ಕಳಲ್ಲಿ ಹೆಚ್ಚುತ್ತಿವೆ. ಈ ಸಮಸ್ಯೆಗಳು ಮೊದಲಿನಂತೆ ಒಂದು ಮಗುವಿಗೆ ಬಂದು ವಾಸಿಯಾಗದೆ ಅಂಟುರೋಗದಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವುದು ಕೂಡ ಕಂಡುಬರುತ್ತಿದೆ. ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎನ್ನುತ್ತಾರೆ ವೈದ್ಯರು.

ಹವಾಮಾನ ಬದಲಾವಣೆಯಿಂದ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಇದು ಗಾಬರಿಯಾಗುವಂತಹ ಕೋವಿಡ್‌ನಂತಹ ಸಾಂಕ್ರಾಮಿಕ ಅಲ್ಲ. ಇದನ್ನು ಮುಂದಿಟ್ಟುಕೊಂಡು ಯಾವುದೋ ಒಂದು ಶಾಲೆ ವೈಯಕ್ತಿಕ ನಿರ್ಧಾರ ಕೈಗೊಂಡು ರಜೆ ನೀಡಿ ಇತರೆ ಪೋಷಕರು, ಮಕ್ಕಳಲ್ಲಿ ಆತಂಕ ಹುಟ್ಟಿಸುವುದು ಸರಿಯಲ್ಲ. ಆದರೂ ಶಿಕ್ಷಣ ಇಲಾಖೆ ಕೂಡಲೇ ಮಕ್ಕಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸುತ್ತಿವೆಯೇ ಎಂದು ಪರಿಶೀಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.

- ಡಿ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌)