ನಿರಂತರ ಮಳೆಗೆ ಮತ್ತೆ ಗುಂಡಿ ಬಿದ್ದ ರಸ್ತೆಗಳು
ಹೈಕೋರ್ಚ್ ಛೀಮಾರಿ ಹಾಕಿದರೂ ಬುದ್ಧಿ ಕಲಿಯದ ಬಿಬಿಎಂಪಿ. ನಗರದಲ್ಲಿ ಹಲವೆಡೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ಹಿಂದೆ ಮುಚ್ಚಲಾಗಿದ್ದ ರಸ್ತೆ ಗುಂಡಿಗಳು ಮತ್ತೆ ಬಾಯ್ತೆರೆದಿದ್ದು, ವಾಹನ ಸವಾರರು ಆತಂಕದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು (ಆ.7) : ನಗರದಲ್ಲಿ ಹಲವೆಡೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ಹಿಂದೆ ಮುಚ್ಚಲಾಗಿದ್ದ ರಸ್ತೆ ಗುಂಡಿಗಳು ಮತ್ತೆ ಬಾಯ್ತೆರೆದಿದ್ದು, ವಾಹನ ಸವಾರರು ಆತಂಕದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂ.ಎಸ್.ಪಾಳ್ಯ(M.S.Palya), ಭೂಪಸಂದ್ರ(Bhoopasandra) ಮುಖ್ಯರಸ್ತೆ, ವಿಶ್ವನಾಥ ನಾಗೇನಹಳ್ಳಿ,(Vishwanathj Nagenahalli) ಯಶವಂತಪುರ(Yashwantapur), ಮಲ್ಲೇಶ್ವರ(Malleshwar), ನ್ಯೂಬೆಮೆಲ್ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಹೆಬ್ಬಾಳದಿಂದ ನಾಗವಾರ ಹೋಗುವ ರಸ್ತೆ, ಜಯನಗರ 3ನೇ ಹಂತ, ಭದ್ರಪ್ಪ ಲೇಔಟ್, ಸ್ವಾಮಿ ವಿವೇಕಾನಂದ ರಸ್ತೆ, ಬೊಮ್ಮನಹಳ್ಳಿಯ ಹಲವು ವಾರ್ಡ್ ರಸ್ತೆಗಳು, ಪೀಣ್ಯ ಕೈಗಾರಿಕಾ ಪ್ರದೇಶ, ವೆಸ್ಟ್‌ಆಫ್ ಕಾರ್ಡ್ ರಸ್ತೆ ಸೇರಿದಂತೆ ಹಲವೆಡೆ ರಸ್ತೆ ಗುಂಡಿಗಳಾಗಿವೆ.
Bengaluru: ರಸ್ತೆ ಗುಂಡಿ ಮುಚ್ಚಲು ಮಿಲಿಟರಿಗೆ ವಹಿಸ್ತೀವಿ: ಹೈಕೋರ್ಟ್ ಸಿಡಿಮಿಡಿ
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿಗಳು, ಮಳೆಗಾಲಕ್ಕೂ ಮುನ್ನವೇ ಬಿಬಿಎಂಪಿ(BBMP) ರಸ್ತೆ ಗುಂಡಿಗಳನ್ನು ಮುಚ್ಚಿ ಸರಿಪಡಿಸುವ ಕೆಲಸ ಮಾಡಬೇಕಿತ್ತು. ಆದರೆ ಹೈಕೋರ್ಚ್ ತರಾಟೆಗೆ ತೆಗೆದುಕೊಂಡ ನಂತರ ಎಚ್ಚೆತ್ತ ಬಿಬಿಎಂಪಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಕೈ ಹಾಕಿದೆ ಎಂದು ದೂರಿದರು.
ಮಳೆಗಾಲದ ಅವಧಿಯಲ್ಲಿ ರಸ್ತೆ ಗುಂಡಿಗಳಿಗೆ ತಾತ್ಕಾಲಿಕ ತೇಪೆ ಹಾಕಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ತೇಪೆ ಹಾಕಿದ್ದ ರಸ್ತೆ ಗುಂಡಿಗಳಿಂದ ಜಲ್ಲಿ ಕಲ್ಲುಗಳು ಎದ್ದು ಬಂದಿವೆ. ವಾಹನಗಳು ರಸ್ತೆ ಗುಂಡಿ ತಪ್ಪಿಸಲು ಹೋದರೆ ಈ ಜಲ್ಲಿ ಕಲ್ಲುಗಳಿಂದ ವಾಹನಗಳು ಜಾರುತ್ತಿವೆ. ಜೊತೆಗೆ ಮಳೆ ನೀರಿನಿಂದ ಕೊಚ್ಚಿಕೊಂಡು ಬಂದಿರುವ ಜಲ್ಲಿ ಕಲ್ಲುಗಳು ರಸ್ತೆಯ ಇಕ್ಕೆಲುಗಳಲ್ಲಿ ಹರಡಿಕೊಂಡಿದ್ದು ಪಾದಚಾರಿಗಳು ಓಡಾಡದಂತಾಗಿದೆ.
ಈಗಾಗಲೇ ಬಿಬಿಎಂಪಿ ನಗರದ ಹಲವೆಡೆ ಸುಮಾರು 10 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದೆ. ಆದರೆ, ಮಳೆಯಿಂದಾಗಿ ಬಹುತೇಕ ಕಡೆಗಳಲ್ಲಿ ಈಗಾಗಲೇ ಮುಚ್ಚಿದ ರಸ್ತೆ ಗುಂಡಿಗಳೇ ಕಿತ್ತುಬಂದಿವೆ. ಕೆಲವೆಡೆ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದು, ಭಾರೀ ವಾಹನಗಳು ಓಡಾಟ ನಡೆಸುತ್ತಿರುವುದರಿಂದ ಹೊಸದಾಗಿಯೂ ಗುಂಡಿಗಳು ಬಿದ್ದಿದ್ದು ಬಿಬಿಎಂಪಿಗೆ ತಲೆನೋವು ತರಿಸಿದೆ.
ರಸ್ತೆ ಗುಂಡಿ ಅಪಘಾತ ಪರಿಹಾರ : ಕೋರ್ಟಿಂದ ಎಚ್ಚರಿಕೆ
ಕೋಲ್ಡ್‌ಮಿಕ್ಸ್ ಬಳಕೆ: ಈ ಹಿಂದೆ ಮುಚ್ಚಿದ್ದ ಜಾಗದಲ್ಲೇ ರಸ್ತೆ ಗುಂಡಿಗಳು ಬೀಳುತ್ತಿರುವ ಮಾಹಿತಿ ಇದೆ. ಸಂಚಾರಿ ಪೊಲೀಸರಿಗೆ ಹೊಸದಾಗಿ ರಸ್ತೆ ಗುಂಡಿಗಳು ಬಿದ್ದಿರುವ ಮಾಹಿತಿ ಕೊಡಿ ಎಂದು ಮನವಿ ಮಾಡಿದ್ದೇವೆ. ಎಷ್ಟುರಸ್ತೆಗುಂಡಿಗಳು ಆಗಿವೆ ಎಂಬುದರ ಲೆಕ್ಕಾಚಾರಕ್ಕಿಂತ ರಸ್ತೆಯನ್ನು ಗುಂಡಿ ಮುಕ್ತ ಮಾಡಬೇಕೆಂಬುದು ನಮ್ಮ ಧ್ಯೇಯ. ಸದ್ಯ ಮಳೆ ಸುರಿಯುತ್ತಿರುವುದರಿಂದ ಡಾಂಬರೀಕರಣ ಕಾಮಗಾರಿ ನಡೆಸುವುದು ಕಷ್ಟ. ಕೋಲ್ಡ್ ಮಿಕ್ಸ್ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಚಿಂತನೆ ನಡೆಸಿದ್ದೇವೆ. ಈಗಾಗಲೇ ಫ್ಲಾಂಟ್‌ನಲ್ಲಿ ಕೋಲ್ಡ್‌ಮಿಕ್ಸ್ ಕುರಿತು ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್(ರಸ್ತೆ ಮತ್ತು ಮೂಲಸೌಕರ್ಯ) ಪ್ರಹ್ಲಾದ್ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.