ನ್ಯೂ ಜನರೇಶನ್, ಹೊಸ ಹೊಸ ರಿಲೇಶನ್‌ಶಿಪ್ ಟ್ರೆಂಡ್, ಆರೋಗ್ಯ ಸವಾಲುಗಳು ನಡುವೆ ಅಪ್ಪನಾಗಲು ಸೂಕ್ತ ವಯಸ್ಸು ಇದೆಯಾ? ಮದುವೆ ಬಳಿಕ ಯಾವಾಗ ತಂದೆಯಾಗಬಹುದು? ಯಾವೆಲ್ಲಾ ಅಂಶ ಪರಿಗಣಿಸಬೇಕಾಗುತ್ತೆ?
ಮದುವೆಯಾಗಿ ಕೆಲ ತಿಂಗಳು ಕಳೆಯುತ್ತಿದ್ದಂತೆ ಗುಡ್‌ನ್ಯೂಸ್ ಇಲ್ವಾ ಎಂದು ಕೇಳುವವರೇ ಹೆಚ್ಚು....ಈಗಿನ ಜನರೇಶನ್ ಜೋಡಿ ನಾವೂ ಇನ್ನೂ ಪ್ಲ್ಯಾನ್ ಮಾಡಿಲ್ಲ, ಇನ್ನೂ ಆರ್ಥಿಕವಾಗಿ ಸೆಟ್ಲ್ ಆಗಿಲ್ಲ ಎಂಬ ಕಾರಣಗಳನ್ನು ನೀಡುತ್ತಾರೆ, ಅದರಲ್ಲಿಯೂ ಪೋಷಕರಾಗಲು ಗಂಡಸರು ಹೆಚ್ಚು ಹಿಂದೇಟು ಹಾಕುತ್ತಾರೆ, ಬೇಗ ಮಗುವಾದರೆ ಆ ಜವಾಬ್ದಾರಿ ನಿಭಾಯಿಸುವುದು ಕಷ್ಟ ಎಂಬ ಕಾರಣಕ್ಕೆ ಈಗಲೇ ನಮಗೆ ಮಗು ಬೇಡ ಎಂದು ಹೇಳುವ ಜೋಡಿಗಳೇ ಹೆಚ್ಚು. ತಂದೆ ಎಂಬುವುದು ತುಂಬಾ ದೊಡ್ಡ ಜವಾಬ್ದಾರಿ, ಯಾವಾಗ ಆ ಜವಾಬ್ದಾರಿ ನಿಭಾಯಿಸಲು ಸಾಧ್ಯ ಅಂತ ಪುರುಷನಿಗೆ ಅನಿಸುವುದೋ ಆವಾಗ ಮಗು ಮಾಡಿಕೊಳ್ಳುವುದು ಎಂಬ ನಿರ್ಧಾರ ತುಂಬಾ ಒಳ್ಳೆಯದು, ಏಕೆಂದರೆ ಯಾವಾಗ ತಂದೆಯಾಗಬೇಕು ಎಂಬುವುದು ವಯಸ್ಸು ಮಾತ್ರವಲ್ಲ, ಅನೇಕ ಅಂಶಗಳು ಪ್ರಮುಖ ಪಾತ್ರವಹಿಸುತ್ತದೆ:
ಆರೋಗ್ಯ, ವೀರ್ಯಾಣುಗಳ ಸಂಖ್ಯೆ:
ಬಂಜೆತನ ಎಂಬುವುದು ಮಹಿಳೆಯರನ್ನು ಮಾತ್ರವಲ್ಲ, ಪುರುಷರನ್ನೂ ಕಾಡುತ್ತಿದೆ. ಬದಲಾವ ಜೀವನಶೈಲಿ ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಿಸುತ್ತಿದೆ. ಅಲ್ಲದೆ ಆರೋಗ್ಯ ಸಮಸ್ಯೆ, ಒಬೆಸಿಟಿ ಕೂಡ ಪುರುಷರ ವೀರ್ಯಾಣುಗಳ ಸಂಖ್ಯೆ ಕುಗ್ಗಿಸುತ್ತಿದೆ, ಹಾಗಾಗಿ ಪುರುಷರು ತಮ್ಮ ದೈಹಿಕ ಆರೋಗ್ಯದ ಕಡೆಗೆ ಹಚ್ಚು ಗಮನ ಹರಿಸಬೇಕು. ಹೆಚ್ಚು ಒತ್ತಡದ ಬದುಕು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ತಮ್ಮ ಆರೊಗ್ಯದ ಕಡೆಗೆ ತುಂಬಸನೇ ಗಮನಹರಿಸಬೇಕು. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ, ವ್ಯಾಯಾಮ ಮಾಡುವುದು ಒಳ್ಳೆಯದು. ಆರೋಗ್ಯಕರ ಆಹಾರ ಕ್ರಮ, ನಿಯಮಿತ ವ್ಯಾಯಾಮ ಪುರುಷ ಸಾಮರ್ಥ್ಯ ವೃದ್ಧಿಸಲು ಸಹಕಾರಿ. ತುಂಬಾ ಸಮಯದಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಅದು ಪತ್ನಿಯಲ್ಲಿನ ದೋಷ ಎಂದು ತಿಳಿಯದೆ ಪತಿ-ಪತ್ನಿ ಇಬ್ಬರು ಪರೀಕ್ಷೆ ಮಾಡಿಸಿದರೆ ಸಮಸ್ಯೆ ಬಗೆಹರಿಸಿ ಮಗುವನ್ನು ಪಡೆಯಬಹುದು.
ಗರ್ಭಾವಸ್ಥೆಯಲ್ಲೇ ಅಂಡಾಶಯದ ಕ್ಯಾನ್ಸರ್: ತಾಯಿಯ ಚಿಕಿತ್ಸೆಗಾಗಿ ಎರಡೆರಡು ಬಾರಿ ಜನಿಸಿದ ಮಗು!
ಆರೋಗ್ಯವಾಗಿ ಚೆನ್ನಾಗಿದ್ದರೆ ಯಾವುದೇ ವಯಸ್ಸಿನಲ್ಲಿಯೂ ಮಗುವನ್ನು ಪಡೆಯಬಹುದು, ಮಹಿಳೆಯರಿಗೆ ಮೆನೋಪಾಸ್ ಹಂತ ಕಳೆದ ಮೇಲೆ ಗರ್ಭಧಾರಣೆ ಆಗಲ್ಲ, ಆದರೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗದಿದ್ದರೆ ಯಾವುದೇ ವಯಸ್ಸಿನಲ್ಲಿಯೂ ತಂದೆಯಾಗಬಹುದು. ಮಗುವಿನ ಸಂಪೂರ್ಣ ಜವಾಬ್ದಾರಿ ನಿಭಾಯಿಸಲು ಆರೋಗ್ಯದ ಜೊತೆಗೆ ಈ ಅಂಶಗಳು ಮುಖ್ಯವಾಗಿದೆ.
ಆರ್ಥಿಕ ಭದ್ರತೆ
ಮಗು ಜನಿಸುವಾಗ ಅರ್ಥಿಕವಾಗಿ ಸೆಟ್ಲ್ ಆಗದಿದ್ದರೆ ತುಂಬಾನೇ ಕಷ್ಟ ಪಡಬೇಕಾಗುತ್ತದೆ, ನಮ್ಮ ಮಗುವಿಗೆ ಒಳ್ಳೆಯ ಅಹಾರ, ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ ಕೊಡಿಸುವ ಸಾಮರ್ಥ್ಯ ನಮ್ಮಲ್ಲಿರಬೇಕಾಗುತ್ತದೆ. ನಮ್ಮ ಆರ್ಥಿಕ ಸ್ಥಿತಿ ಮಕ್ಕಳ ಬೆಳವಣಿಗೆ ಮೇಲೆ ತುಂಬಾನೇ ಪರಿಣಾಮ ಬೀರುವುದು. ಹಾಗಾಗಿ ಜೀವನದಲ್ಲಿ ಸ್ವಲ್ಪ ಸೆಟ್ಲ್ ಆದ ಮೇಲೆ ಮಗು ಮಾಡಿಕೊಳ್ಳುವ ನಿರ್ಧಾರ ಒಳ್ಳೆಯದೆ.
ಜವಾಬ್ದಾರಿಯನ್ನು ಸ್ವೀಕರಿಸುವ ಮನಸ್ಸಿರಬೇಕು
ಮಗುವಾದ ಮೇಲೆ ಬದುಕು ಮೊದಲಿನಂತೆ ಇರಲ್ಲ, ಕುಟುಂಬದ ಜವಾಬ್ದಾರಿ ಹೆಚ್ಚಾಗುವುದು, ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಮಕ್ಕಳನ್ನು ಒಳ್ಳೆಯ ಪ್ರಜೆಯನ್ನಾಗಿ ಮಾಡುವಲ್ಲಿ ಪೋಷಕರ ಪಾತ್ರ ತುಂಬಾನೇ ಮುಖ್ಯ, ಆ ಜವಾಬ್ದಾರಿ ನಿಭಾಯಿಸುವ ಪಕ್ವತೆ ಇರಬೇಕು.
ಮಕ್ಕಳನ್ನು ನಾವು ಪ್ರೀತಿಯಿಂದ ಬೆಳೆಸಬೇಕು, ಅವರಿಗೆ ಒಳಿತು ಕೆಡಕುಗಳ ಬಗ್ಗೆ ತಿಳಿ ಹೆಳಬೇಕು, ಮಕ್ಕಳಿಗಾಗಿ ಆಸ್ತಿ ಮಾಡಬೇಕಾಗಿಲ್ಲ, ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು, ಆ ರೀತಿ ಮಾಡಲು ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ಈಗಂತೂ ವಿದ್ಯಾಭ್ಯಾಸ ತುಂಬಾನೇ ದುಬಾರಿಯಾಗುತ್ತಿದೆ, ಹಾಗಾಗಿ ಆರ್ಥಿಕವಾಗಿ ಸ್ವಲ್ಪ ಉತ್ತಮವಾದ ಮೇಲೆ ಮಗು ಮಾಡುವ ಎಂಬ ನಿರ್ಧಾರ ಒಳ್ಳೆಯದು, ಈ ನಿರ್ಧಾರ ಮಾಡಿಕೊಂಡವರು ತಮ್ಮ ಆರೋಗ್ಯದ ಕಡೆಯೂ ಅಷ್ಟೇ ಗಮನಹರಿಸಬೇಕು.
ಹಿಂದಿನಂತಿಲ್ಲ ಈಗಿನ ಪರಿಸ್ಥಿತಿ
ನಮಗೆ 5-6 ಮಕ್ಕಳಿದ್ದರು ಅವರನ್ನೆಲ್ಲಾ ನಾವು ಸಾಕಿ ಬೆಳೆಸಲಿಲ್ವಾ? ನಿಮಗೆ ಹೆಚ್ಚೆಂದರೆ ಎರಡು ಮಕ್ಕಳು, ಅವರನ್ನೂ ನೋಡಿಕೊಳ್ಳಲು ಸಾಧ್ಯವಿಲ್ಲವೇ ಎಂದು ಹಿರಿಯರು ಕೇಳುತ್ತಾರೆ, ಹಿಂದಿನಂತಿಲ್ಲ ಈಗಿನ ಪರಿಸ್ಥಿತಿ, ಹಿಂದೆ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರೆಶ್ನೆ ಬರ್ತಾ ಇರಲಿಲ್ಲ, ಅಜ್ಜ-ಅಜ್ಜಿ, ಮನೆಯ ಇತರ ಸದಸ್ಯರೂ ಎಲ್ಲರೂ ಜೊತೆಗೆ ಇರುತ್ತಿದ್ದರು, ಮಕ್ಕಳು ಬೆಳೆಯುವುದೇ ಗೊತ್ತಾಗುತ್ತಿರಲಿಲ್ಲ, ಆದರೆ ಈಗ ಗಂಡ-ಹೆಂಡತಿ ಮಾತ್ರ ವಾಸ ಮಾಡುತ್ತಿರುತ್ತಾರೆ, ಮಗುವಾದ ಮೇಲೆ ಹೇಗೆ ನೋಡಿಕೊಳ್ಳುವುದು , ಯಾರು ನೋಡಿಕೊಳ್ಳುವುದು ಎಂಬುವುದರ ಬಗ್ಗೆ ಕೂಡ ಯೋಚಿಸಬೇಕು. ಅದರಲ್ಲಿಯೂ ಇಬ್ಬರೂ ವರ್ಕಿಂಗ್ ಅದರೆ ಮಕ್ಕಳನ್ನು 3-4 ವರ್ಷದವರೆಗೆ ಸಾಕುವುದು ದೊಡ್ಡ ಚಾಲೆಂಜ್.
ಈ ಎಲ್ಲಾ ಅಂಶಗಳನ್ನು ಗರ್ಭಧಾರಣೆಯ ಮುನ್ನ ಪರಿಗಣಿಸಬೇಕೆಂದು ಈಗಿನ ಜೋಡಿಗಳು ಬಯಸುತ್ತಿದ್ದಾರೆ, ಹಾಗಾಗಿ ತಮಗೆ ಯಾವ ಒಕೆ ಅನಿಸುವುದೋ ಆವಾಗ ಮಗು ಮಾಡಿಕೊಳ್ಳುವ ನಿರ್ಧಾರ ಮಾಡುತ್ತಿದ್ದಾರೆ...ಈ ಜನರೇಷನ್‌ನ ಈ ಆಲೋಚನೆ ತಪ್ಪೆಂದು ಹೇಳಲು ಹೇಗೆ ತಾನೆ ಸಾಧ್ಯ ಅಲ್ವಾ?
