ಮಾಸ್ಕ್ ಈಗ ಎಲ್ಲ ದೇಶಗಳಲ್ಲೂ ಕಡ್ಡಾಯ. ಇದ್ದಕ್ಕಿದ್ದಂತೆ ನಾವೆಲ್ಲರೂ ಮಾಸ್ಕ್ ಧರಿಸಿಯೇ ಹುಟ್ಟಿದ್ದಾ ಅಂತ ಅನಿಸಲು ಶುರುವಾಗಿದೆ. ಮಾಸ್ಕ್ ಧರಿಸುವ ಕಿರಿಕಿರಿಗಳು ಏನೇ ಇರಲಿ, ಮುಖಗವುಸಿನೊಂದಿಗೆ ಬದುಕುವುದನ್ನು ನಾವು ಇದೀಗಷ್ಟೇ ಕಲಿಯುತ್ತಿದ್ದೇವೆ. ಹೀಗಾಗಿ ನಾವು ಇದ್ದಕ್ಕಿದ್ದಂತೆ ಕ್ರಿಯೇಟಿವ್ ಆಗಿಬಿಟ್ಟಿದ್ದೇವೆ.ಬೇಕಾದರೆ ನೋಡಿ. ಮನೆಯಿಂದ ನೀವು ಹೊರಡುವಾಗ ಪಕ್ಕದ ಮನೆಯವರು ಎದುರಾಗುತ್ತಾರೆ. ಮೊದಲಾದರೆ ನಸುನಕ್ಕು ಹಾಯ್ ಎನ್ನಬಹುದಾಗಿತ್ತು. ಈಗ ನಕ್ಕರೂ ನಗದಿದ್ದರೂ ತಿಳಿಯುವುದೇ ಇಲ್ಲ. ಸ್ವಲ್ಪ ದೂರದಲ್ಲಿದ್ದರೆ ಕಣ್ಣುಗಳು ಯಾವ ಭಾವನೆ ಸೂಸುತ್ತಿವೆ ಎಂದು ತಿಳಿಯುವುದೇ ಕಷ್ಟ. ಹಾಗಾಗಿ ನಸುನಗುವುದರ ಜೊತೆಗೆ ಆಂಗಿಕ ಚೇಷ್ಟೆಗಳನ್ನೂ ಮಾಡಬೇಕಾಗುತ್ತದೆ. ಎರಡೂ ಕೈ ಎತ್ತಿ ನಮಸ್ಕರಿಸುವುದೋ, ಒಂದು ಕೈ ಎತ್ತಿ ಹಾಯ್‌ ಹೇಳುವುದೋ, ವೇವ್‌ ಮಾಡುವುದೋ, ಒಂದು ಬೆರಳು ತೋರಿಸಿ ಶೂಟ್‌ ಮಾಡುವದೋ- ಹೀಗೆ. ಹೀಗೆ ನಾನಾ ಅವತಾರಗಳನ್ನು ಮಾಡಲು ನಾವು ಕಲಿತಿರುವುದರಿಂದ, ನಮ್ಮ ಮಕ್ಕಳೂ ನಮ್ಮನ್ನು ನೋಡಿ ಅನುಕರಿಸುತ್ತಾರೆ. ಮುಂದಿನ ಹಲವು ವರ್ಷಗಳ ಕಾಲ ಈ ಮಾಸ್ಕ್‌ ಹಾಗೂ ಅಂಗಿಕ ಚೇಷ್ಟೆಗಳು ಮುಂದುವರಿಯಲಿದೆ. ಇದರಿಂದ, ಮುಂದಿನ ತಲೆಮಾರುಗಳು ಕೂಡ ಗ್ರೀಟ್‌ ಮಾಡುವ, ನಮಸ್ಕರಿಸುವ ಪದ್ಧತಿಯೇ ಬದಲಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈಗಾಗಲೇ ಕೈಕುಲುಕುವುದು ನಿಂತೇ ಹೋಗಿದೆ. ಅದರ ಬದಲು ವೇವಿಂಗ್, ಹಾಯ್‌, ನಮಸ್ಕಾರಗಳು ಚಾಲ್ತಿಗೆ ಬಂದಿವೆ.

ಮಾಸ್ಕ್ ಧಾರಣೆಯ ದೊಡ್ಡ ಸಮಸ್ಯೆ ಅಂದರೆ ಎದುರಿಗಿರುವ ವ್ಯಕ್ತಿಯ ಭಾವನೆ ನಮಗೆ ಗೊತ್ತಾಗದೆ ಹೋಗುವುದು. ನಮ್ಮ ಭಾವನೆಗಳೆಲ್ಲವನ್ನೂ ಬಿಂಬಿಸಲು ಕಣ್ಣು ಒಂದೇ ಶಕ್ತವಲ್ಲ. ಖುಷಿಯಾದಾಗ ಬಾಯಿ ಅರಳಿಕೊಳ್ಳುತ್ತದೆ. ಲೇವಡಿ ಮಾಡುವಾಗ ನಾಲಿಗೆ ಹೊರಚಾಚುತ್ತದೆ. ಸಿಟ್ಟು ಬಂದಾಗ ಮೂಗು ಕೆಂಪಾಗುತ್ತದೆ. ಬೇಸರವಾದಾಗ ತುಟಿಗಳು ಬಾಡುತ್ತವೆ. ಹಿತವೆನಿಸಿದಾಗ ಕಪೋಲ ಹಿಗ್ಗುತ್ತದೆ. ಈ ಎಲ್ಲ ಎಕ್ಸ್‌ಪ್ರೆಶನ್‌ಗಳೂ ಈಗ ಮಾಸ್ಕ್‌ನ ಒಳಗೆ ಅಡಗಿಹೋಗುತ್ತವೆ. ಹೀಗಾಗಿ ಇವ್ಯಾವುದೂ ಎದುರಿನವರಿಗೆ ಗೊತ್ತಾಗುವುದೇ ಇಲ್ಲ. ಮುಖಭಾವದಿಂದ ಹಾಗೂ ಲಿಪ್‌ ರೀಡಿಂಗ್‌ನಿಂದ ನಾವು ಕೆಲವಷ್ಟು ವಿಷಯಗಳನ್ನು ತಿಳಿದುಕೊಳ್ಳುತ್ತೇವೆ. ಅದರಲ್ಲೂ ಲಿಪ್‌ ರೀಡಿಂಗ್‌ನಿಂದಲೇ ಎಲ್ಲವನ್ನೂ ತಿಳಿಯಬೇಕಾದ, ಶ್ರವಣ ಸಮಸ್ಯೆಯಿರುವವರಿಗೆ ಇದೊಂದು ದೊಡ್ಡ ಸಮಸ್ಯೆಯೇ ಸರಿ. ಮಾಸ್ಕ್ ಹಾಕಿಕೊಂಡು ಮಾತಾಡುವ ಎದುರಿನವರು ಏನು ಹೇಳುತ್ತಿದ್ದಾರೆಂದೇ ಅವರಿಗೆ ತಿಳಿಯುವುದಿಲ್ಲ.

ಮಾಸ್ಕ್‌ ಧರಿಸೋವಾಗ ಎಚ್ಚರ, ಬಿಗಿಯಾದ್ರೆ ಕೆಡುತ್ತೆ ಮುಖದ ಅಂದ! 

ಕೆಲವರು ಇತರ ಸಮಯಗಳಲ್ಲಿ ಮಾಸ್ಕ್ ಧರಿಸಿಕೊಂಡು, ಹತ್ತಿರ ಬಂದು ಮಾತಾಡುವಾಗ ಮಾತ್ರ ಮಾಸ್ಕ್ ಕೆಳಗಿಳಿಸಿ ಮಾತಾಡುತ್ತಾರೆ. ಇದರಿಂದ ಏನೂ ಉಪಯೋಗವಿಲ್ಲ. ಮಾಸ್ಕ್ ಬೇಕಾದ್ದೇ ಮಾತಾಡುವ ಸಮಯದಲ್ಲಿ. ಯಾಕೆಂದರೆ ಬಾಯಿಯಿಂದ ಉಗುಳಿನ ಹನಿಗಳು ಸಿಡಿಯುವ ಸಂಭವ ಜಾಸ್ತಿ. ಅದರಲ್ಲೂ ಎಲೆಅಡಿಕೆ ಹಾಕುವ ಅಭ್ಯಾಸ ಇರುವವರು ಇನ್ನೂ ಡೇಂಜರು. ಇವರ ಮುಂದಿರುವವರೇ ಮಾಸ್ಕ್ ಹಾಕಿಕೊಳ್ಳುವುದು ವಾಸಿ. ಇನ್ನು ಕೆಲವರು ಸಂಜೆ ಅಥವಾ ಮುಂಜಾನೆ ವಾಕಿಂಗ್‌ ಮಾಡುವಾಗ, ಜಾಗಿಂಗ್‌ ಮಾಡುವಾಗಲೂ ಮಾಸ್ಕ್ ಧರಿಸಿರುವುದು ಕಾಣಿಸುತ್ತದೆ. ಇದು ತಪ್ಪು. ವ್ಯಾಯಾಮ ಮಾಡುವಾಗ ದೇಹಕ್ಕೆ ಹೆಚ್ಚಿನ ಆಕ್ಸಿಜನ್‌ ಬೇಕಾಗುತ್ತದೆ. ಆಗ ಮಾಸ್ಕ್‌ ಹಾಕಿಕೊಳ್ಳುವುದರಿಂದ ದೇಹಕ್ಕೆ ಆಮ್ಲಜನಕದ ಪೂರೈಕೆ ಕಡಿಮೆಯಾಗಿ, ಸಮಸ್ಯೆಯಾಗಬಹುದು. ಹೃದಯ ಸಮಸ್ಯೆ ಇರುವವರಿಗೆ ಹೃದಯಾಘಾತ ಆಗಲೂಬಹುದು.

ಡಯಾಬಿಟಿಸ್ ಬರೋ ಮುನ್ನ ಈ ಲಕ್ಷಣಗಳನ್ನು ತೋರಿಸುತ್ತೆ! 
ಅಂತೂ ಇಂತೂ ನಾವು ಮಾಸ್ಕ್ ಧರಿಸಬೇಕೆಂಬುದನ್ನು ಕಲಿಯಲು ಇಷ್ಟು ಸಮಯ ಹಿಡಿಯಿತು. ಆದರೆ ಮಾಸ್ಕ್ ಧಾರಣೆಯ ಶಿಷ್ಟಾಚಾರಗಳನ್ನೂ ಇನ್ನೂ ಕಲಿಯಬೇಕಿದೆ. ದಿನ ಹೋದಂತೆ ಅದೂ ರೂಢಿಯಾಗುತ್ತಾ ಹೋಗುತ್ತದೆ.

ಚಳಿ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ರೂ ಕೊರೋನಾ ತೆಕ್ಕೆಗೆ ಫಿಕ್ಸ್‌!