ಚಳಿ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ರೂ ಕೊರೋನಾ ತೆಕ್ಕೆಗೆ ಫಿಕ್ಸ್‌!

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಚಳಿಯ ವಾತಾವರಣ ಸೃಷ್ಟಿ| ಚಳಿಯಿಂದ ವಿಷಮಶೀತ ಜ್ವರ, ಅಸ್ತಮಾ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕುಸಿತ| ಹೊರಗಿನ ತಿಂಡಿ ತಿನಿಸು, ಎಣ್ಣೆ ಪದಾರ್ಥ ಹಾಗೂ ಮಾಂಸಹಾರ ಸೇವನೆ ಹೆಚ್ಚಾಗಿ ಮಾಡಬಾರದು| 

Doctors Says Care should be taken during Winter

ಬೆಂಗಳೂರು(ಸೆ.13): ಉದ್ಯಾನನಗರಿ ಬೆಂಗಳೂರಿನ ಸುತ್ತಮುತ್ತ ಮಂಗಳವಾರ ರಾತ್ರಿಯಿಂದ ಅಬ್ಬರಿಸುತ್ತಿರುವ ಮಳೆಯಿಂದಾಗಿ ತೀವ್ರ ಚಳಿಯ ವಾತಾವರಣ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಷಮಶೀತ ಜ್ವರದಂತಹ ಸಾಂಕ್ರಾಮಿಕ ಕಾಯಿಲೆಗಳ ಜತೆ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳು ಉಲ್ಬಣಿಸಲಿವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಕೊರೋನಾ ಸೋಂಕು ರಣಕೇಕೆ ಹಾಕುತ್ತಿದೆ. ಶೀತ ಮೂಲದ ಸೋಂಕಾಗಿರುವ ಕೊರೋನಾದಿಂದಾಗಿ ಈಗಾಗಲೇ ನಿತ್ಯ ನೂರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರ ನಡುವೆಯೇ ಚಳಿಯಿಂದಾಗಿ ವಿಷಮಶೀತ ಜ್ವರ, ಅಸ್ತಮಾ ಹಾಗೂ ನ್ಯುಮೋನಿಯಾ ರೋಗಿಗಳಲ್ಲಿ ರೋಗ ಉಲ್ಬಣದಂತಹ ಸಮಸ್ಯೆಗಳು ಉಂಟಾಗಿ ರೋಗ ನಿರೋಧಕ ಶಕ್ತಿ ಕುಸಿದರೆ ಕೊರೋನಾಗೆ ಸುಲಭ ತುತ್ತಾಗಲಿದ್ದಾರೆ. ಹೀಗಾಗಿ ಚಳಿಯ ಬಗ್ಗೆ ಕೊರೋನಾ ಕಾಲದಲ್ಲಿ ತೀವ್ರ ಮುನ್ನೆಚ್ಚರಿಕೆ ಅಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕರಾವಳಿ ಭಾಗದ ಅರಬ್ಬಿ ಸಮುದ್ರ ಮಟ್ಟದಲ್ಲಿ ಸ್ಟ್ರಫ್‌ ಹಾಗೂ ಮೇಲ್ಮೈ ಸುಳಿಗಾಳಿ ಬೀಸಿರುವುದರಿಂದ ಕರಾವಳಿ, ಮಲೆನಾಡು ಭಾಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುತ್ತಿದೆ. ಈ ಮೋಡ ಕವಿದ ಸ್ಥಿತಿಯಿಂದಾಗಿ ಚಳಿಯ ವಾತಾವರಣ ಉಂಟಾಗಿದೆ.

ಕೊರೋನಾ ಸೋಂಕು: ಅಕ್ಟೋಬರ್‌ ಮೊದಲ ವಾರ ಭಾರತ ವಿಶ್ವ ನಂ.1 ಸಾಧ್ಯತೆ!

ಪ್ರಸ್ತುತ ಚಳಿಯ ವಾತಾವರಣ ತಾತ್ಕಾಲಿಕವಾಗಿದ್ದು, ಇನ್ನೆರಡು ದಿನ (ಸೆ. 15ರವರೆಗೆ) ಮುಂದುವರಿದು ನಂತರ ಸಹಜ ಸ್ಥಿತಿಗೆ ಮರಳಲಿದೆ. ಅಲ್ಲಿವರೆಗೆ ಚಳಿ ಇರಲಿದೆ. ಮಳೆ ಕಡಿಮೆಯಾದರೂ ಸಹ ಹಂತ-ಹಂತವಾಗಿ ತಾಪಮಾನ ಹೆಚ್ಚುತ್ತದೆಯೇ ಹೊರತು ಏಕಾಏಕಿ ತಾಪಮಾನ ಹೆಚ್ಚಾಗಿ ಚಳಿ ಕಡಿಮೆಯಾಗಲ್ಲ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಡಾ.ಸುನೀಲ್‌ ಗವಾಸ್ಕರ್‌ ಮಾಹಿತಿ ನೀಡಿದರು.

ಆರೋಗ್ಯದ ಬಗ್ಗೆ ಎಚ್ಚರವಿರಲಿ:

ನಿರ್ಲಕ್ಷ್ಯ ವಹಿಸಿದರೆ ಚಳಿಯಿಂದ ಉಂಟಾಗುವ ನೆಗಡಿ, ಕೆಮ್ಮು, ಶೀತ, ಜ್ವರದಂಥಹ ವೈರಸ್‌ ರೋಗಗಳು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ. ತೀವ್ರ ಚಳಿಯಿಂದಾಗಿ ವಿಷಮ ಶೀತ ಜ್ವರ, ಜ್ವರ ಉಂಟಾಗುತ್ತದೆ. ಜತೆಗೆ ಈಗಾಗಲೇ ನ್ಯುಮೋನಿಯಾ ಸಮಸ್ಯೆ ಎದುರಿಸುತ್ತಿರುವವರಿಗೆ ಶ್ವಾಸಕೋಶ ಸೋಂಕು, ತೀವ್ರ ಉಸಿರಾಟ ತೊಂದರೆ ಉಂಟಾಗುತ್ತದೆ. ಜತೆಗೆ ಚಳಿಯ ವೇಳೆ ಹೃದಯಾಘಾತಗಳು ಹೆಚ್ಚಾಗುವುದರಿಂದ ಬೆಚ್ಚನೆಯ ವಾತಾವರಣ ಸೃಷ್ಟಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಚಳಿಗಾಲದ ಕಾಳಜಿ ಹೀಗಿರಲಿ:

ಮುಂಜಾಗ್ರತೆ ದೃಷ್ಟಿಯಿಂದ ಬೆಳಗಿನ ವಾಕಿಂಗ್‌, ಸಂಜೆ ಆರು ಗಂಟೆ ನಂತರ ಹೊರ ಹೋಗುವುದನ್ನು ಆದಷ್ಟೂನಿಲ್ಲಿಸಬೇಕು. ಆದಷ್ಟುದೇಹ ಬಿಸಿಯಾಗಿರುವಂತೆ ನೋಡಿಕೊಳ್ಳಬೇಕು. ಹೊರಗಿನ ತಿಂಡಿ ತಿನಿಸು, ಎಣ್ಣೆ ಪದಾರ್ಥ ಹಾಗೂ ಮಾಂಸಹಾರ ಸೇವನೆ ಹೆಚ್ಚಾಗಿ ಮಾಡಬಾರದು. ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ತರಕಾರಿಗಳು, ಹಣ್ಣು, ಕಾಳಿನ ಪದಾರ್ಥ ಸೇವಿಸಬೇಕು. ಬಿಸಿ ನೀರು ಕುಡಿಯುವುದನ್ನು ತಪ್ಪದೇ ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅನ್ಸರ್‌ ಅಹಮದ್‌ ಹೇಳಿದರು.

ಹೃದಯ ಆರೋಗ್ಯದ ಬಗ್ಗೆ ಎಚ್ಚರ

ಚಳಿ ಹೆಚ್ಚಿದ್ದಾಗ ತೀವ್ರ ಚಳಿಯಿಂದ ಹೃದಯದ ಅಪಧಮನಿಗಳು ಪೆಡಸಾಗುತ್ತವೆ. ಆಗ ರಕ್ತದೊತ್ತಡ ಮತ್ತು ಪ್ರೋಟಿನ್‌ ಪ್ರಮಾಣ ಹೆಚ್ಚಾಗಿ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಹೃದಯಾಘಾತದಂಥ ಸಮಸ್ಯೆಗಳು ಎದುರಾಗುತ್ತವೆ. ಅಸ್ತಮಾ ರೋಗಿಗಳಿಗೂ ತೊಂದರೆ ಹೆಚ್ಚು. ಇದೇ ವೇಳೆ ಕೊರೋನಾ ತಗುಲಿದರೆ ಸಾವೂ ಸಂಭವಿಸಬಹುದು. ಹೀಗಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ 70 ವರ್ಷ ಮೇಲ್ಪಟ್ಟವರು ಜೊತೆಗೆ ಆರು ವರ್ಷದ ಒಳಗಿನ ಮಕ್ಕಳು ವಿಶೇಷ ಕಾಳಜಿ ವಹಿಸಬೇಕು ಎನ್ನುತ್ತಾರೆ ವೈದ್ಯರು.

ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ತಾತ್ಕಾಲಿಕವಾಗಿ ಚಳಿಯ ವಾತಾವರಣೆ ಸೃಷ್ಟಿಯಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡಿನ ಜಿಲ್ಲೆಗಳಲ್ಲಿ ಇನ್ನೆರಡು ದಿನ ಚಳಿ ಇರಲಿದೆ. ನಂತರ ತಾಪಮಾನ ಸಹಜ ಸ್ಥಿತಿಗೆ ಮರಳಬಹುದು ಎಂದು ಭಾರತೀಯ ಹವಾಮಾನ ಬೆಂಗಳೂರು ವಿಭಾಗ ನಿರ್ದೇಶಕ ಸಿ.ಎಸ್‌. ಪಾಟೀಲ್‌ ಅವರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios