ಡಯಾಬಿಟಿಸ್ ಬರೋ ಮುನ್ನ ಈ ಲಕ್ಷಣಗಳನ್ನು ತೋರಿಸುತ್ತೆ!
ಡಯಾಬಿಟಿಸ್ ಇದ್ದವರು ಉಳಿದೆಲ್ಲ ಕಾಯಿಲೆಗಳ ಬಗೆಗೂ ಎಚ್ಚರಿಕೆ ವಹಿಸಲೇ ಬೇಕು. ಡಯಾಬಿಟಿಸ್ ಇಲ್ಲದವರೂ ತಮಗೆ ಡಯಾಬಿಟಿಸ್ ಬರದಿರಲಿ ಅಂತ ಎಚ್ಚರಿಕೆಯಿಂದ ಗಮನ ಇಟ್ಟಿರಬೇಕು. ನಮಗೆ ಡಯಾಬಿಟಿಸ್ ಬರಬಹುದಾ ಅಂತ ಕೆಲವು ಲಕ್ಷಣಗಳ ಮೂಲಕ ತಿಳಿಯಬಹುದು. ಅದೇನು?
ಆಗಾಗ ಮೂತ್ರ ಬರೋದು
ಸಾಮಾನ್ಯವಾಗಿ ಮೂತ್ರ ಹೋಗುವ ಪ್ರಮಾಣಕ್ಕಿಂತ ಹೆಚ್ಚು ಮೂತ್ರ ಹೋಗುವುದು ಹಾಗೂ ಹೆಚ್ಚು ಬಾರಿ ಮೂತ್ರಕ್ಕೆ ಹೋಗಬೇಕು ಅನಿಸುವುದು ಮಧುಮೇಹದ ಎಚ್ಚರಿಕೆ ಲಕ್ಷಣಗಳಲ್ಲಿ ಒಂದು. ರಕ್ತದಲ್ಲಿರುವ ಗ್ಲುಕೋಸ್ ಅಂಶವನ್ನು ಬಳಸುವ ಸಾಮರ್ಥ್ಯವನ್ನು ಬಾಡಿ ಕಳೆದುಕೊಂಡುಬಿಡುತ್ತೆ. ಹೀಗಾಗಿ ಕಿಡ್ನಿಗಳು, ರಕ್ತದಲ್ಲಿರುವ ಹೆಚ್ಚಿನ ಗ್ಲುಕೋಸ್ ಅಂಶವನ್ನು ಮೂತ್ರದ ಮೂಲಕ ಹೊರಹಾಕಲು ಪ್ರಯತ್ನ ಮಾಡುತ್ತಲೇ ಇರುತ್ತವೆ. ಹೀಗಾಗಿ ಹಗಲು ಹೆಚ್ಚಿನ ಸಲ ಹಾಗೂ ರಾತ್ರಿ ಆಗಾಗ ಮೂತ್ರಕ್ಕೆ ಎಚ್ಚರವಾಗಿಬಿಡಬಹುದು.
ದಾಹ ಹೆಚ್ಚಾಗುತ್ತೆ
ಕಿಡ್ನಿಗಳು ರಕ್ತದಲ್ಲಿರುವ ಗ್ಲುಕೋಸ್ ಅಂಶದ ಜೊತೆಗೆ ನೀರಿನ ಅಂಶವನ್ನು ಹೊರಗೆ ಹಾಕುವುದರಿಂದ, ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಹೀಗಾಗಿ ಹೆಚ್ಚಿನ ದಾಹ ಕಾಣಿಸಿಕೊಳ್ಳಬಹುದು. ಕಳೆದುಕೊಂಡ ದ್ರವವನ್ನು ಮರಳಿ ಗಳಿಸಿಕೊಳ್ಳುವವರೆಗೂ ದೇಹ ನೀರನ್ನು ಬೇಡುತ್ತಲೇ ಇರುತ್ತದೆ.
ತೂಕ ಇಳಿಯುತ್ತೆ
ಡಯಾಬಿಟಿಸ್‌ನ ಪರಿಣಾಮವಾಗಿ ದೇಹದ ತೂಕ ಹೆಚ್ಚಾಗೋದು. ಆದರೆ ಕೆಲವರಲ್ಲಿ ಹೆಚ್ಚಿನ ತೂಕ ಇಳಿಕೆಯೂ ಆಗಬಹುದು. ಇದಕ್ಕೆ ಕಾರಣ, ಗ್ಲುಕೋಸ್ ಬಳಕೆಗೆ ದೇಹದ ಅಸಾಮರ್ಥ್ಯದಿಂದಾಗಿ ಆಹಾರ ಸಮಸ್ಯೆ ಉಂಟಾಗಿದೆ ಎಂದೇ ದೇಹ ಭಾವಿಸುತ್ತದೆ. ಹೀಗಾಗಿ ಮೂಳೆಗಳಲ್ಲಿರುವ ಪ್ರೊಟೀನನ್ನೂ ಸೆಳೆದುಕೊಂಡು ಖರ್ಚು ಮಾಡಿಬಿಡುತ್ತದೆ. ಎರಡು ಮೂರು ತಿಂಗಳ ಅವಧಿಯಲ್ಲಿ ಐದೋ ಹತ್ತೋ ಕಿಲೋ ಇಳಿದುಬಿಡುವುದು ಆರೋಗ್ಯಕಾರಿಯಲ್ಲ.
ಯಾವಾಗ್ಲೂ ಹಸಿವು
ದೇಹದ ಹಸಿವಿನ ಭಾವನೆಯನ್ನು ಹೆಚ್ಚು ತೋರಿಸ್ತಾ ಇರುತ್ತದೆ. ದೇಹದ ಪಚನಾಂಗ, ಜೀರ್ಣಾಂಗಗಳಿಗೆ, ದೇಹದಲ್ಲಿ ಬರಗಾಲ ಬಂದಿದೆ ಎಂದು ತಿಳಿದುಕೊಂಡು, ಹೆಚ್ಚಿನ ಆಹಾರ ಸಾಮಗ್ರಿಗಾಗಿ ಬೇಡಿಕೆ ಮಂಡಿಸ್ತಾ ಇರುತ್ತವೆ. ಹೀಗಾಗಿ ಉಂಡರೂ ಹಸಿವಿನ ಭಾವ ಉಳಿದುಬಿಡಬಹುದು.
ಡಯಾಬಿಟಿಸ್ ಇರೋರಿಗೆ ಕೊರೋನಾ ತಗುಲದಂತೆ ಮಾಡಲು ಏನು ಮಾಡಬೇಕು..?
ಚರ್ಮದ ಸಮಸ್ಯೆಗಳು
ಡಯಾಬಿಟಿಸ್ ಬರುವ ಮುನ್ಸೂಚನೆಯಾಗಿ ಚರ್ಮದ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಒಣಗಬಹುದು, ತುರಿಕೆಯ ಪ್ಯಾಚ್‌ಗಳು ಚರ್ಮದ ಮೇಲೆ ಕಾಣಿಸಿಕೊಳ್ಳಬಹುದು, ಕುತ್ತಿಗೆ ಹಾಗೂ ಕಂಕುಳಿನ ಸುತ್ತ ಕಪ್ಪಾಗುವ ಅಕಂಥಸಿಸ್ ನೈಜೀರಿಕನ್ಸ್ ಎಂಬ ಸಮಸ್ಯೆ ಸೃಷ್ಟಿಯಾಗಬಹುದು.
ಗಾಯ ಗುಣವಾಗುವುದು ಲೇಟು
ಕೈಗೋ ಕಾಲಿಗೋ ಗಾಯ ಮಾಡಿಕೊಂಡರೆ ಒಂದೆರಡು ವಾರದಲ್ಲಿ ಅದು ಗುಣವಾಗುತ್ತದೆ, ಸಾಮಾನ್ಯವಾಗಿ. ಆದರೆ ಡಯಾಬಿಟಿಸ್ ಇದ್ದವರಲ್ಲಿ ಈ ಗುಣವಾಗುವ ಪ್ರಕ್ರಿಯೆ ನಿಧಾನವಾಗಿಬಿಡುತ್ತದೆ. ರಕ್ತದಲ್ಲಿರುವ ಹೆಚ್ಚಿನ ಗ್ಲುಕೋಸ್ ಅಂಶ, ರಕ್ತನಾಳಗಳನ್ನು ಹಾನಿಗೊಳಿಸಿ, ಗಾಯಗೊಂಡ ಜಾಗಕ್ಕೆ ದೊರೆಯಬೇಕಾದ ಸಮರ್ಪಕ ರಕ್ತ ಪೂರೈಕೆಗೆ ಕಲ್ಲು ಹಾಕುತ್ತವೆ.
ನೈಸರ್ಗಿಕವಾಗಿ ಬಿಪಿ ಕಂಟ್ರೋಲ್ ಮಾಡುತ್ತೆ ಈ ಆಹಾರಗಳು..!
ಫಂಗಲ್ ಇನ್‌ಫೆಕ್ಷನ್
ಡಯಾಬಿಟಿಸ್ ಇದ್ದವರಲ್ಲಿ ದೇಹದ ಪ್ರತಿರೋಧ ಶಕ್ತಿ ಕೂಡ ಕಡಿಮೆಯಾಗಿರುತ್ತದೆ. ಹೀಗಾಗೀ ಫಂಗಲ್ ಸೋಂಕುಗಳು ಉಂಟಾಗಬಹುದು. ನಾಲಿಗೆ, ಗಂಟಲುಗಳಲ್ಲಿ ಇನ್‌ಫೆಕ್ಷನ್ ಕಾಣಿಸಿಕೊಳ್ಳಬಹುದು.
ದೃಷ್ಟಿ ಮಂಕು
ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇದ್ದರೆ ಅದು ದೃಷ್ಟಿಯ ಸಾಮರ್ಥ್ಯವನ್ನೂ ಕುಂಠಿತಗೊಳಿಸಿಬಿಡುತ್ತದೆ. ನೋಟ ಬ್ಲರ್ ಆಗಿಬಿಡುತ್ತದೆ. ನೋಟಗಳು ತೇಲಿದಂತೆ ಆಗುವುದು, ಮಿಂಚಿದಂತೆ ಆಗುವುದೆಲ್ಲ ಇದರದೇ ಸಮಸ್ಯೆಯ ಮುಂದುವರಿದ ಭಾಗಗಳು. ಸಕ್ಕರೆ ಅಂಶ ಕಡಿಮೆಯಾದಾಗ ಇವು ಸರಿಹೋಗುತ್ತವೆ.
ಕೈಕಾಲು ಮರಗಟ್ಟುವಿಕೆ
ತುಂಬ ಹೊತ್ತು ಕುಳಿತಿದ್ದರೆ ಕಾಲು ಮರಗಟ್ಟುವುದು ಎಲ್ಲರಿಗೂ ಆಗುತ್ತದೆ. ಆದರೆ ಪದೇ ಪದೆ ಕಾಲು ಅಥವಾ ಕೈ ಮರಗಟ್ಟಿದಂತಾಗುವುದು, ಆಗಾಗ ಜುಂ ಜುಂ ಎನಿಸುವುದು- ಇವೆಲ್ಲ ಡಯಾಬಿಟಿಸ್‌ನ ಸೂಚನೆಗಳು. ಇವನ್ನು ಗುರುತಿಸಿ ಪರಿಹಾರ ಒದಗಿಸದೆ ಇದ್ದರೆ ಶಾಶ್ವತ ನಿಷ್ಕ್ರಿಯತೆಗೆ ಕಾರಣವಾಗಬಹುದು.