ಎಲ್ಲರ ಮುಖದ ಮೇಲೂ ಈಗ ಮಾಸ್ಕ್‌ ಕಾಮನ್‌. ಕೊರೋನಾದಿಂದ ರಕ್ಷಿಸಿಕೊಳ್ಳಲು ಸದ್ಯ ನಮಗಿರೋ ಪ್ರಬಲ ಅಸ್ತ್ರ ಅದೊಂದೆ. ಹಾಗಂತ ದೀರ್ಘ ಕಾಲದ ತನಕ ಮಾಸ್ಕ್‌ ಧರಿಸೋದ್ರಿಂದ ಚರ್ಮದ ಸಮಸ್ಯೆಗಳು ಎದುರಾಗುತ್ತಿದ್ದು,ಮುಖದ ಅಂದಗೆಡಿಸುತ್ತಿರೋದು ಅನೇಕರನ್ನು ಚಿಂತೆಗೀಡು ಮಾಡಿದೆ.

ಕೊರೋನೋತ್ತರ ಬದುಕಿನಲ್ಲಿ ಮಾಸ್ಕ್‌ ನಮ್ಮನಿತ್ಯದ ಸಂಗಾತಿಯಾಗಿದೆ. ಮಾಸ್ಕ್‌ ಧರಿಸಿಯೇ ಮನೆಯಿಂದ ಹೊರಗೆ ಕಾಲಿಡೋದು ಅನಿವಾರ್ಯ. ಆಫೀಸ್‌,ಮಾರ್ಕೆಟ್‌ ಸೇರಿದಂತೆ ಎಲ್ಲ ಸ್ಥಳಗಳಲ್ಲೂಬಾಯಿ ಮತ್ತು ಮೂಗು ಮುಚ್ಚೋ ಮಾಸ್ಕ್‌ ಧರಿಸಿಯೇ ಕೆಲಸ ಮಾಡೋದು ಅನಿವಾರ್ಯ. ಅದ್ರಲ್ಲೂ ವೈದ್ಯರು, ನರ್ಸ್‌ಗಳು ಸೇರಿದಂತೆ ಆರೋಗ್ಯ ವಲಯದಲ್ಲಿ ಕೆಲ್ಸ ಮಾಡೋರ ಪಾಡು ಕೇಳೋದೆ ಬೇಡ. ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಬಿಗಿಯಾದ ಮಾಸ್ಕ್‌ ಧರಿಸಿ ದೀರ್ಘಕಾಲದ ತನಕ ಕೆಲ್ಸ ಮಾಡ್ಬೇಕಾಗುತ್ತೆ.ಆದ್ರೆ ದೀರ್ಘಾವಧಿ ತನಕ ಮಾಸ್ಕ್‌ ಧರಿಸೋದ್ರಿಂದ ಹೊಸ ಚರ್ಮ ಸಮಸ್ಯೆಗಳು ಹುಟ್ಟಿಕೊಂಡಿರೋ ಬಗ್ಗೆ ವೈದ್ಯಕೀಯ ತಜ್ಞರು ಮಾಹಿತಿ ನೀಡಿದ್ದಾರೆ. ಮಾಸ್ಕ್‌ನಿಂದ ಕವರ್‌ ಆಗೋ ಮುಖದ ಭಾಗಗಳಲ್ಲಿ ಕಲೆಗಳು, ತುರಿಕೆ ಕಾಣಿಸಿಕೊಳ್ಳುತ್ತಿದೆ.ಈ ಹೊಸ ಚರ್ಮ ವ್ಯಾಧಿಯನ್ನು ʼಮಾಸ್ಕನೆʼ (maskne) ಎಂದು ಕರೆಯಲಾಗುತ್ತಿದೆ.

ಚಳಿ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ರೂ ಕೊರೋನಾ ತೆಕ್ಕೆಗೆ ಫಿಕ್ಸ್‌!

ಚರ್ಮದ ಮೇಲಾಗುತ್ತಿರೋ ಪರಿಣಾಮಗಳೇನು?
ಸುದೀರ್ಘ ಸಮಯದ ತನಕ ಮಾಸ್ಕ್‌ ಧರಿಸೋದ್ರಿಂದ ಚರ್ಮ ಕೆಂಪಾಗೋದು,ತುರಿಕೆ, ಮೊಡವೆ,ಗಾಯ,ಚರ್ಮದ ಬಣ್ಣದಲ್ಲಿ ಬದಲಾವಣೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮಾಸ್ಕ್‌ನಿಂದ ಚರ್ಮದ ತಡೆಗೋಡೆಗಳಿಗೆ ಹಾನಿಯುಂಟಾಗುತ್ತಿದೆ. ಅಲ್ಲದೆ, ಉರಿಯೂತಗಳಿಂದಾಗಿ ಸಂವೇದನಾ ನರಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗುತ್ತಿವೆಯೆಂದ್ರೆ ನೀವು ಮುಖಕ್ಕೆ ಯಾವುದೇ ಕ್ರೀಮ್‌ ಅಥವಾ ಲೋಷನ್‌ ಹಚ್ಚಿದ್ರೂ ಉರಿಯ ಅನುಭವವಾಗುತ್ತದೆ.

ಮಾಸ್ಕ್‌ ಚರ್ಮಕ್ಕೆ ಹೇಗೆ ಹಾನಿ ಮಾಡುತ್ತೆ?
ಮೊದಲನೇಯದಾಗಿ ಮಾಸ್ಕ್‌ ಅಂಚುಗಳು ಹಾಗೂ ಚರ್ಮದ ನಡುವೆ ಸಂರ್ಘಷ ಏರ್ಪಟ್ಟು ತಡೆಗೋಡೆಗಳು ಹಾನಿಗೊಳ್ಳುತ್ತವೆ. ಇದ್ರಿಂದ ಉರಿಯೂತ, ಕಿರಿಕಿರಿ ಉಂಟಾಗುತ್ತದೆ. ಇನ್ನು ಮಾಸ್ಕ್‌ ಧರಿಸೋ ಕಾರಣಕ್ಕೆ ತೇವಾಂಶ, ಎಂಜಲು, ಜಿಡ್ಡಿನಾಂಶ, ಕೊಳೆ, ಬೆವರು ಆ ಭಾಗದ ಚರ್ಮದ ಮೇಲೆ ದೀರ್ಘ ಕಾಲದ ತನಕ ಉಳಿದುಕೊಳ್ಳೋ ಕಾರಣ ಕಲೆ, ಉರಿ, ಚರ್ಮದ ಸಿಪ್ಪೆ ಎದ್ದೇಳೋ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮಹಿಳೆ ಮುಖದ ಕೂದಲು ಬಿಚ್ಚಿಡಬಲ್ಲದು ಆಕೆಯ ಆರೋಗ್ಯದ ಗುಟ್ಟು!

ಕೆಲವರನ್ನು ಮಾತ್ರ ಕಾಡುತ್ತೆ
ಹಾಗಂತ ಮಾಸ್ಕ್‌ ಧರಿಸಿದ ಎಲ್ಲರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳೋದಿಲ್ಲ.ಕೆಲವರ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತೆ.ಸ್ವಲ್ಪ ಏರುಪೇರಾದ್ರೂ ಕಲೆ,ಉರಿಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂಥ ಸೂಕ್ಷ್ಮ ಚರ್ಮದವರು ಮಾಸ್ಕ್‌ ಧರಿಸೋ ಸಂದರ್ಭದಲ್ಲಿ ಎಚ್ಚರಿಕೆ ವಹಿಸೋದು ಅಗತ್ಯ.

ಈ ಟಿಪ್ಸ್‌ ಪಾಲಿಸಿ
-ಮಾಸ್ಕ್‌ ನಿಮ್ಮ ಮೂಗು ಹಾಗೂ ಬಾಯಿಯನ್ನು ಕವರ್‌ ಮಾಡಿದೆಯೋ ಇಲ್ಲವೋ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ. ಆದ್ರೆ ಮಾಸ್ಕ್‌ ತುಂಬಾ ಬಿಗಿಯಾಗಿ ಈ ಭಾಗದ ಚರ್ಮಕ್ಕೆ ಹಾನಿ ಮಾಡದಂತೆ ಎಚ್ಚರ ವಹಿಸಬೇಕು. 
-ನಿಮ್ಮ ಮುಖವನ್ನು ಪ್ರತಿದಿನ ಕನಿಷ್ಠ ಎರಡು ಬಾರಿ ಸೋಪ್‌ ಅಥವಾ ಪೇಸ್‌ವಾಸ್‌ನಿಂದ ತೊಳೆದುಕೊಳ್ಳಲು ಮರೆಯಬೇಡಿ.
-ನೀವು ಆರೋಗ್ಯ ಕಾರ್ಯಕರ್ತರಲ್ಲದಿದ್ರೆ ಅಥವಾ ಅನಗತ್ಯ ಸಂದರ್ಭಗಳಲ್ಲಿ ದೀರ್ಘ ಸಮಯದ ತನಕ ಮಾಸ್ಕ್‌ ಧರಿಸಬೇಡಿ. ಅಂದ್ರೆ ನೀವು ಒಬ್ಬರೇ ಇರೋವಾಗ ಅಥವಾ ಮನೆಯಲ್ಲಿರೋವಾಗ ಮಾಸ್ಕ್‌ ಧರಿಸಬೇಡಿ. 
-ಒದ್ದೆಯಾದ ತಕ್ಷಣ ಮಾಸ್ಕ್‌ ಬದಲಾಯಿಸಿ.
-ಮನೆಯಿಂದ ಹೊರಹೋಗೋ ಸಮಯದಲ್ಲಿ ನೀವು ಧರಿಸಿರೋ ಮಾಸ್ಕ್‌ ಹೊರತುಪಡಿಸಿ 2-3 ಹೆಚ್ಚುವರಿ ಮಾಸ್ಕ್‌ ತೆಗೆದುಕೊಂಡು ಹೋಗಲು ಮರೆಯಬೇಡಿ.ಧರಿಸಿರೋ ಮಾಸ್ಕ್‌ ಬೆವರು ಅಥವಾ ಇನ್ಯಾವುದೇ ಕಾರಣದಿಂದ ಒದ್ದೆಯಾದ್ರೆ ತಕ್ಷಣ ಅದನ್ನು ಬದಲಾಯಿಸಿ ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ಮನೆಗೆ ಹೋದ ಬಳಿಕ ಒಗೆದು ಒಣಗಿಸಿ.

ಕೆಟೋ ಡಯಟ್‌ನಿಂದ ವೀರ್ಯ ವೃದ್ಧಿ!

-ಕಾಟನ್‌ ಫೇಸ್‌ ಮಾಸ್ಕ್‌ಗಳನ್ನುಸೋಪ್‌ ಹಾಗೂ ಬಿಸಿ ನೀರು ಬಳಸಿ ಕೈಯಲ್ಲೇ ತಿಕ್ಕಿ ತೊಳೆಯಿರಿ.
-ಮಾಸ್ಕ್‌ ಧರಿಸೋ ಮುನ್ನ ಹಾಗೂ ತೆಗೆದ ಬಳಿಕ ಹೈಪೋಅಲರ್ಜಿಕ್‌ ಕ್ರೀಮ್‌ ಅನ್ನು ಮೂಗು ಹಾಗೂ ಬಾಯಿ ಸುತ್ತದ ಚರ್ಮದ ಮೇಲೆ ದಪ್ಪವಾಗಿ ಹಚ್ಚಲು ಮರೆಯಬೇಡಿ. ಆಯಿಂಟ್‌ಮೆಂಟ್‌ ಆಧರಿತ ಮಾಯಿಶ್ಚರೈಸರ್‌ಗಳನ್ನುಆದಷ್ಟು ಹಚ್ಚಬೇಡಿ.ಇವು ಬೆವರು ಹಾಗೂ ಎಣ್ಣೆಯಂಶ ಚರ್ಮದ ಮೇಲೆ ಸಂಗ್ರಹಗೊಳ್ಳುವಂತೆ ಮಾಡುತ್ತವೆ.
-ದಿನದಲ್ಲಿ ಅನೇಕ ಬಾರಿ ಆಯಿಲ್‌ ಫ್ರಿ ಮಾಯಿಶ್ಚರೈಸರ್‌ ಬಳಸಿ.ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತೆ.
-ಮಾಸ್ಕ್‌ ಧರಿಸಿದ ಪರಿಣಾಮ ಮುಖದ ಚರ್ಮ ಒಣಗೋದು ಅಥವಾ ಉರಿಯ ಅನುಭವವಿದ್ರೆ ಸ್ಕ್ರಬ್‌ ಬಳಸಬೇಡಿ.ಇದು ಚರ್ಮದ ಮೇಲ್ಮೈಗೆ ಹಾನಿಯುಂಟು ಮಾಡುತ್ತೆ.
-ಒಡೆದ ಚರ್ಮಕ್ಕೆ ರಾತ್ರಿ ಮಲಗೋ ಮುನ್ನ ಪೆಟ್ರೋಲಿಯಂ ಜೆಲ್ಲಿ ಅಥವಾ ಬ್ಯಾರಿಯರ್‌ ಕ್ರೀಮ್‌ ಬಳಸಿ.