ಧ್ಯಾನ ಅಂದ್ರೆ ಮನಸ್ಸು ಹಾಗೂ ದೇಹದ ಮಧ್ಯೆ ಸಂಪರ್ಕ ಬೆಳೆಸುವ ಸಾಧನ. ಇದಕ್ಕೆ ಹೆಚ್ಚಿನ ಸಮಯದ ಅಗತ್ಯವಿಲ್ಲ. ಕುಳಿತಲ್ಲೇ ನೀವು ಧ್ಯಾನ ಮಾಡ್ಬಹುದು. ಪ್ರತಿ ದಿನ ಐದು ನಿಮಿಷ ಧ್ಯಾನ ಮಾಡಿದ್ರೆ ಏನೆಲ್ಲ ಲಾಭ ಇದೆ ಗೊತ್ತಾ? 

ಧ್ಯಾನ (meditation) ಮಾಡಿ, ಮನಸ್ಸು ರಿಲ್ಯಾಕ್ಸ್ ಆಗುತ್ತೆ ಅಂದಾಗ ಅನೇಕರು, ನಮಗೆ ಗಂಟೆಗಟ್ಟಲೆ ಕುಳಿತು ಧ್ಯಾನ ಮಾಡೋಕೆ ಪುರಸೊತ್ತಿಲ್ಲ. ಅದು ವಯಸ್ಸಾದ್ಮೇಲೆ ಮಾಡೋ ಕೆಲ್ಸ ಎನ್ನುತ್ತಾರೆ. ಧ್ಯಾನದ ಪರಿಣಾಮ ನಿಮ್ಮ ಮೇಲಾಗೋಕೆ ನೀವು ಗಂಟೆ ಸಮಯ ನೀಡ್ಬೇಕಾಗಿಲ್ಲ. ಪ್ರತಿ ದಿನ ಐದು ನಿಮಿಷ ಧ್ಯಾನ ಮಾಡಿದ್ರೆ ಸಾಕು. ಇದು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ. ಒತ್ತಡ ಕಡಿಮೆ ಮಾಡಲು, ಗಮನ ಕೇಂದ್ರೀಕರಿಸೋದು ಸೇರಿದಂತೆ ನಿಮ್ಮ ಆರೋಗ್ಯ (health) ಸುಧಾರಣೆಗೆ ಧ್ಯಾನ ಬಹಳ ಮುಖ್ಯ.

ನಿಯಮಿತವಾಗಿ ನೀವು ಧ್ಯಾನ ಮಾಡೋದ್ರಿಂದ ಆಳವಾದ ಪರಿಣಾಮ ನಿಮ್ಮಲ್ಲಾಗೋದನ್ನು ನೀವು ಕಾಣ್ಬುಹುದು. ಧ್ಯಾನ ಅನ್ನೋದು ಪ್ರಾಚೀನ ಸಂಪ್ರದಾಯಗಳಲ್ಲಿ ಬೇರೂರಿರುವ ಕಾಲಾತೀತ ಆಧ್ಯಾತ್ಮಿಕ ಅಭ್ಯಾಸವಾಗಿದೆ. ಆದ್ರೆ ಅದರ ಪ್ರಯೋಜನವನನ್ನು ಆಧುನಿಕ ವಿಜ್ಞಾನ ಹೆಚ್ಚು ಮೌಲ್ಯೀಕರಿಸ್ತಿದೆ. ಪ್ರತಿದಿನ ಕೇವಲ ಐದು ನಿಮಿಷ ನೀವು ಧ್ಯಾನಕ್ಕೆ ಮೀಸಲಿಡೋದ್ರಿಂದ ನಿಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಸಮನ್ವಯಗೊಳಿಸಬಹುದು. ನಿಮ್ಮ ದೈಹಿಕ ಆರೋಗ್ಯದ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಆಂತರಿಕ ಆತ್ಮದೊಂದಿಗೆ ಆಳವಾದ ಸಂಪರ್ಕವನ್ನು ಸೃಷ್ಟಿಸುತ್ತದೆ.

ಧ್ಯಾನವು ಅಲ್ಪಾವಧಿ ಮತ್ತು ದೀರ್ಘಾವಧಿ ಫಲಿತಾಂಶಗಳನ್ನು ನೀಡುತ್ತದೆ.

• ಧ್ಯಾನದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ ಎಂಬುದು ಅಧ್ಯಯನದಿಂದ ಬಹಿರಂಗಗೊಂಡಿದೆ. ಪ್ರತಿ ದಿನ ಐದು ನಿಮಿಷ ಸತತ ಎರಡು ತಿಂಗಳು ಧ್ಯಾನ ಅಭ್ಯಾಸ ಮಾಡಿದವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು. ಉರಿಯೂತದ ವಿರುದ್ಧ ಹೋರಾಡಲು, ರೋಗಪೀಡಿತ ಕೋಶಗಳನ್ನು ಕೊಲ್ಲಲು ಮತ್ತು ದೇಹವನ್ನು ಕ್ಯಾನ್ಸರ್ನಿಂದ ರಕ್ಷಿಸಲು ಸಹಾಯ ಮಾಡುವ ಎಲ್ಲಾ ಜೀನ್ಗಳು ದೇಹದೊಳಗೆ ಸಕ್ರಿಯಗೊಳ್ಳಲು ಪ್ರಾರಂಭಿಸಿದ್ದವು.

• ಉತ್ತಮ ನಿದ್ರೆಗೆ ಧ್ಯಾನ ಬಹಳ ಸಹಕಾರಿ. ಕೇವಲ ಆರು ದಿನಗಳಲ್ಲಿಯೇ ಧ್ಯಾನದ ಪರಿಣಾಮ ಕಾಣಲು ಶುರುವಾಗುತ್ತದೆ. ದೈನಂದಿನ ಧ್ಯಾನದಿಂದ ನಿದ್ರಾಹೀನತೆ, ಆಯಾಸ ಮತ್ತು ಖಿನ್ನತೆ ಮಟ್ಟ ಕಡಿಮೆಯಾಗಿರೋದನ್ನು ಸಂಶೋಧಕರು ಗಮನಿಸಿದ್ದಾರೆ.

• ಒತ್ತಡ ಮತ್ತು ನೋವು ನಿಕಟ ಸಂಬಂಧ ಹೊಂದಿವೆ. ಧ್ಯಾನ ಒತ್ತಡ ಕಡಿಮೆ ಮಾಡುವ ಮೂಲಕ ನೋವನ್ನು ನಿಯಂತ್ರಿಸುತ್ತದೆ. ತಲೆನೋವು, ಕೆಳ ಬೆನ್ನು ನೋವು, ಎದೆ ನೋವು ಮತ್ತು ಜಠರಗರುಳಿನ ಅಸ್ವಸ್ಥತೆ ಸೇರಿದಂತೆ ವಿವಿಧ ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರಿಗೆ ಧ್ಯಾನದಿಂದ ಲಾಭವಿದೆ.

• ಧ್ಯಾನವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಧ್ಯಾನ ಮಾಡ್ತಾ ಬಂದ್ರೆ ಅದು ಮಾತ್ರೆಗಿಂತ ಪರಿಣಾಮಕಾರಿ ಎಂದು ತಜ್ಞರು ಹೇಳಿದ್ದಾರೆ.

• ಧ್ಯಾನವು ಮೆದುಳನ್ನು ಸಕ್ರಿಯ ಬೀಟಾ ತರಂಗಗಳಿಂದ (ಎಚ್ಚರಿಕೆ) ಶಾಂತಗೊಳಿಸುವ ಆಲ್ಫಾ ತರಂಗಗಳಿಗೆ (ವಿಶ್ರಾಂತಿ) ಮತ್ತು ಥೀಟಾ ತರಂಗಗಳಿಗೆ (ಆಳವಾದ ಧ್ಯಾನ ಮತ್ತು ಸೃಜನಶೀಲತೆ) ಬದಲಾಯಿಸುತ್ತದೆ. ಇದು ವಿಶ್ರಾಂತಿ ಮತ್ತು ಅರಿವಿನ ಸಾಮರಸ್ಯವನ್ನು ಹೆಚ್ಚಿಸುತ್ತದೆ.

• ಧ್ಯಾನವು ನಿರ್ಧಾರ ತೆಗೆದುಕೊಳ್ಳುವಿಕೆಗೆ ಕಾರಣವಾದ ಪ್ರಿಫ್ರಂಟಲ್ ಕಾರ್ಟೆಕ್ಸ್ ಅನ್ನು ಬಲಗೊಳಿಸುತ್ತದೆ.

• ಧ್ಯಾನವು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಇದನ್ನು ಸಾಮಾನ್ಯವಾಗಿ ವಿಶ್ರಾಂತಿ ಮತ್ತು ಡೈಜೆಸ್ಟ್ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಇದು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಉಸಿರಾಟವನ್ನು ನಿಧಾನಗೊಳಿಸುತ್ತದೆ ಮತ್ತು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

ಐದು ನಿಮಿಷದ ಧ್ಯಾನವನ್ನು ಹೇಗೆ ಮಾಡ್ಬೇಕು? : ಆರಂಭ ಬಹಳ ಮುಖ್ಯ. ಮೊದಲು ಧ್ಯಾನಕ್ಕೆ ಐದು ನಿಮಿಷವನ್ನು ಮೀಸಲಿಡಿ. ಶಾಂತವಾದ, ಸ್ವಚ್ಛವಾದ ಸ್ಥಳದಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ಕಣ್ಣುಗಳನ್ನು ಮುಚ್ಚಿ. ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. ಓಂ ಅಥವಾ ಶಾಂತಿಯಂತಹ ಮಂತ್ರವನ್ನು ಉಚ್ಚರಿಸಿ. ಪದೆ ಪದೆ ಓಡಿ ಹೋಗುವ ನಿಮ್ಮ ಮನಸ್ಸನ್ನು ಎಳೆದು ತಂದು ಉಸಿರಾಟದ ಮೇಲೆ ಕೇಂದ್ರೀಕರಿಸುವ ಪ್ರಯತ್ನ ಮಾಡಿ.