ಅಡುಗೆ ಮನೆಯಲ್ಲಿರುವ ಮನೆ ಮದ್ದುಗಳಲ್ಲಿ ಅರಿಶಿನ ಒಂದು. ಜನರು ಅತಿಯಾಗಿ ಬಳಸುವ ಈ ಪದಾರ್ಥ ಆರೋಗ್ಯ ಸುಧಾರಿಸುವ ಜೊತೆ ಹಾಳೂ ಮಾಡುತ್ತೆ.
ಶೀತ, ಕೆಮ್ಮು ಕಾಣಿಸಿಕೊಳ್ಳಲಿ ಇಲ್ಲ ರೋಗ ನಿರೋಧಕ ಶಕ್ತಿ (Immunity) ಕಡಿಮೆ ಆಗಿರಲಿ, ಜನರು ಮನೆ ಮದ್ದು ಅಂತ ಬಂದಾಗ ಅರಿಶಿನವನ್ನು ಸಜೆಸ್ಟ್ ಮಾಡ್ತಾರೆ. ಉಷ್ಣವಾದ್ರೂ ಅರಿಶಿನ (Turmeric), ಶೀತವಾದ್ರೂ ಅರಿಶಿನ. ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಅರಿಶಿನ ಸೇವನೆಯಿಂದ ಅನೇಕ ಪ್ರಯೋಜನ ಇದೆ. ಆದ್ರೆ ಅತಿಯಾದ್ರೆ ಅರಿಶಿನವೂ ಅಪಾಯಕಾರಿ. ನಿತ್ಯ ಒಂದು ಮಿತಿಗಿಂತ ಹೆಚ್ಚು ಅರಿಶಿನವನ್ನು ನೀವು ಸೇವನೆ ಮಾಡ್ತಾ ಬಂದ್ರೆ ಅದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ. ಮುಖ್ಯವಾಗಿ ನಿಮ್ಮ ಕಿಡ್ನಿ ಆರೋಗ್ಯ ಹದಗೆಡಲು ಅರಿಶಿನ ಕಾರಣವಾಗುತ್ತೆ.
ಅರಿಶಿನದಲ್ಲಿ ಕರ್ಕ್ಯುಮಿನ್ ಇದೆ. ಇದು ಉರಿಯೂತ, ಉತ್ಕರ್ಷಣ ನಿರೋಧಕ, ಆಂಟಿಮೈಕ್ರೊಬಿಯಲ್ ಮತ್ತು ಇನ್ನೂ ಅನೇಕ ಗುಣಗಳನ್ನು ಹೊಂದಿದೆ. ಆದರೆ ದೇಹದಲ್ಲಿ ಅತಿಯಾದ ಕರ್ಕ್ಯುಮಿನ್ ಹಲವು ಸಮಸ್ಯೆ ಸೃಷ್ಟಿಸುತ್ತದೆ. ಅರಿಶಿನ ಅಥವಾ ಕರ್ಕ್ಯುಮಿನ್ ಸಪ್ಲಿಮೆಂಟರಿ ತೆಗೆದುಕೊಳ್ಳುವ ಜನರು ಹೆಚ್ಚಿನ ಅಪಾಯ ಎದುರಿಸುತ್ತಾರೆ.
ಕಿಡ್ನಿಯಲ್ಲಿ ಕಲ್ಲು : ಅರಿಶಿನದಲ್ಲಿರುವ ಕರ್ಕ್ಯುಮಿನ್ನ ಸುಲಭವಾಗಿ ಜೀರ್ಣವಾಗುವುದಿಲ್ಲ. ಜೀರ್ಣವಾಗದ ಕಾರಣ, ದೇಹವು ಅದನ್ನು ಮೂತ್ರಪಿಂಡದ ಮೂಲಕ ಹೊರಹಾಕುತ್ತದೆ. ಅಮೇರಿಕನ್ ಜರ್ನಲ್ ಆಫ್ ಫಿಸಿಯಾಲಜಿ ಪ್ರಕಾರ, ಅರಿಶಿನವು ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಅನ್ನು ಹೊಂದಿರುತ್ತದೆ. ಇದು ಕ್ಯಾಲ್ಸಿಯಂನೊಂದಿಗೆ ಸೇರಿಕೊಂಡು ಕಿಡ್ನಿ ಸ್ಟೋನ್ ಗೆ ಕಾರಣವಾಗುತ್ತದೆ. ಈ ಸಮಸ್ಯೆ ಮೂತ್ರಪಿಂಡ ಮತ್ತು ಮೂತ್ರನಾಳಕ್ಕೆ ಹಾನಿಯುಂಟು ಮಾಡಿತ್ತದೆ.
ಆಮ್ಲೀಯತೆ : ಅರಿಶಿನ ಸೇವನೆಯು ಪಿತ್ತರಸ ಮತ್ತು ಹೊಟ್ಟೆಯ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈಗಾಗಲೇ ನಿಮ್ಮ ದೇಹ ಸರಿಯಾದ ಪ್ರಮಾಣದಲ್ಲಿ ಆಮ್ಲವನ್ನು ಉತ್ಪಾದಿಸುತ್ತಿದ್ದರೆ ಅರಿಶಿನ ಸೇವನೆಯಿಂದ ಅದು ಹೆಚ್ಚಾಗಬಹುದು. ಆಗ ಹೊಟ್ಟೆ ಉರಿ, ಎದೆಯುರಿ, ಹೊಟ್ಟೆ ನೋವು ಮತ್ತು ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ ನಿಮ್ಮನ್ನು ಕಾಡಬಹುದು.
ರಕ್ತಹೀನತೆ : ದೇಹದಲ್ಲಿ ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಈ ರೋಗವು ರಕ್ತದ ನಷ್ಟಕ್ಕೆ ಕಾರಣವಾಗುತ್ತದೆ. ಹೆಚ್ಚು ಅರಿಶಿನ ಸೇವಿಸುವುದರಿಂದ ರಕ್ತಹೀನತೆ ಉಂಟಾಗುತ್ತದೆ. ಅರಿಶಿನದಲ್ಲಿ ಇರುವ ಕರ್ಕ್ಯುಮಿನ್ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.
ರಕ್ತಸ್ರಾವದ ಅಸ್ವಸ್ಥತೆ : ರಕ್ತ ತೆಳುಗೊಳಿಸುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ಯಾವುದೇ ರಕ್ತಸ್ರಾವದ ಅಸ್ವಸ್ಥತೆ ಇದ್ದರೆ, ಅಂಥವರು ಅರಿಶಿನ ಸೇವವೆಯನ್ನು ತಪ್ಪಿಸಿ. ಏಕೆಂದರೆ ಅರಿಶಿನವನ್ನು ರಕ್ತ ತೆಳುಗೊಳಿಸುವ ಔಷಧಿ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ, ರಕ್ತಸ್ರಾವ ಹೆಚ್ಚಾಗಬಹುದು ಅಥವಾ ರಕ್ತ ಅಗತ್ಯಕ್ಕಿಂತ ತೆಳುವಾಗಬಹುದು. ಇದಲ್ಲದೆ ರಕ್ತದೊತ್ತಡವನ್ನು ಕಡಿಮೆ ಮಾಡುವ ಔಷಧಿಯ ಸಮಯದಲ್ಲಿಯೂ ಅರಿಶಿನವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಹೆಚ್ಚಿನ ಮಟ್ಟದ ಕರ್ಕ್ಯುಮಿನ್ ಬಿಪಿಯನ್ನು ತುಂಬಾ ಕಡಿಮೆ ಮಾಡಬಹುದು. ಇದರೊಂದಿಗೆ, ಹೆಚ್ಚು ಅರಿಶಿನ ಸೇವಿಸುವುದರಿಂದ ತಲೆನೋವು ಮತ್ತು ತಲೆತಿರುಗುವಿಕೆ ಮುಂತಾದ ಸಮಸ್ಯೆಗಳು ಹೆಚ್ಚಾಗಬಹುದು.
ದಿನಕ್ಕೆ ಇಷ್ಟು ಅರಿಶಿನ ಸೇವಿಸಿ : ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಸಾಮಾನ್ಯ ಆರೋಗ್ಯವಂತ ವ್ಯಕ್ತಿ ಒಂದು ದಿನದಲ್ಲಿ ತನ್ನ ತೂಕದ ಪ್ರತಿ ಕಿಲೋಗ್ರಾಂಗೆ 0-3 ಮಿಗ್ರಾಂ ಕರ್ಕ್ಯುಮಿನ್ ತೆಗೆದುಕೊಳ್ಳಬೇಕು. ಇನ್ನೊಂದು ಅಧ್ಯಯನದ ಪ್ರಕಾರ 60 ಕೆಜಿ ತೂಕದ ವ್ಯಕ್ತಿಯು ಸಾಮಾನ್ಯ ಭಾರತೀಯ ಆಹಾರದ ಜೊತೆ ದಿನಕ್ಕೆ ಸುಮಾರು 2-2.5 ಗ್ರಾಂ ಅರಿಶಿನವನ್ನು ತೆಗೆದುಕೊಳ್ಳಬೇಕು. ಇದು ಸುಮಾರು 60-100 ಮಿಗ್ರಾಂ ಕರ್ಕ್ಯುಮಿನ್ ಅನ್ನು ಒದಗಿಸುತ್ತದೆ. ಕರ್ಕ್ಯುಮಿನ್ ನಿಧಾನವಾಗಿ ಜೀರ್ಣವಾಗುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಲು, ಕರಿಮೆಣಸಿನ ಜೊತೆ ಅರಿಶಿನ ಸೇವಿಸಬೇಕು. ಕರಿಮೆಣಸು ಪೈಪರಿನ್ ಸಂಯುಕ್ತವನ್ನು ಹೊಂದಿರುತ್ತದೆ. ಇದು ಕರ್ಕ್ಯುಮಿನ್ನ ಜೀರ್ಣಕ್ರಿಯೆಯನ್ನು ಹಲವು ಪಟ್ಟು ಹೆಚ್ಚಿಸುತ್ತದೆ.
