Asianet Suvarna News Asianet Suvarna News

World Cancer Day: ಆರಂಭದಲ್ಲೇ ಕ್ಯಾನ್ಸರ್‌ ಪತ್ತೆಗೆ ಪರೀಕ್ಷೆ ಮಾಡಿಸಿ: ಡಾ.ತೌಸಿಫ್‌

ಕ್ಯಾನ್ಸರ್‌ ಬಂದರೆ ಬದುಕುವುದು ಕಷ್ಟ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆರಂಭದಲ್ಲೇ ಕ್ಯಾನ್ಸರ್‌ ಪತ್ತೆ ಹಚ್ಚಿದರೆ ಸುಲಭವಾಗಿ ಗುಣಪಡಿಸಬಹುದು. ಆದ್ದರಿಂದ ಕ್ಯಾನ್ಸರ್‌ನ ಗುಣ ಲಕ್ಷಣಗಳು ಪ್ರಕಟಗೊಳ್ಳುವ ತನಕ ಕಾಯದೇ ಪ್ರತಿವರ್ಷ ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾನ್ಸರ್‌ ಪರೀಕ್ಷೆಗೆ ಒಳಪಡಬೇಕು ಎಂದು ನ್ಯೂರಾದ ವೈದ್ಯಕೀಯ ನಿರ್ದೇಶಕ ಡಾ. ತೌಸಿಫ್‌ ಅಹ್ಮದ್‌ ಹೇಳಿದ್ದಾರೆ.

Dr Tausif Ahmed says Get tested for Cancer Detection Early gvd
Author
Bangalore, First Published Feb 4, 2022, 8:08 AM IST

ಬೆಂಗಳೂರು (ಫೆ.04): ಕ್ಯಾನ್ಸರ್‌ (Cancer) ಬಂದರೆ ಬದುಕುವುದು ಕಷ್ಟ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆರಂಭದಲ್ಲೇ ಕ್ಯಾನ್ಸರ್‌ ಪತ್ತೆ ಹಚ್ಚಿದರೆ ಸುಲಭವಾಗಿ ಗುಣಪಡಿಸಬಹುದು. ಆದ್ದರಿಂದ ಕ್ಯಾನ್ಸರ್‌ನ ಗುಣ ಲಕ್ಷಣಗಳು ಪ್ರಕಟಗೊಳ್ಳುವ ತನಕ ಕಾಯದೇ ಪ್ರತಿವರ್ಷ ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾನ್ಸರ್‌ ಪರೀಕ್ಷೆಗೆ ಒಳಪಡಬೇಕು ಎಂದು ನ್ಯೂರಾದ ವೈದ್ಯಕೀಯ ನಿರ್ದೇಶಕ ಡಾ. ತೌಸಿಫ್‌ ಅಹ್ಮದ್‌ (Dr Tausif Ahmed) ಹೇಳಿದ್ದಾರೆ.

ಕ್ಯಾನ್ಸರ್‌ ದಿನದ (World Cancer Day) ಅಂಗವಾಗಿ ವರ್ಚುವಲ್‌ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಯಾನ್ಸರ್‌ ನಾಲ್ಕನೇ ಹಂತ ಪ್ರವೇಶಿಸಿದ ಬಳಿಕ ಪತ್ತೆಯಾದವರಲ್ಲಿ ಶೇಕಡ 24 ಮಂದಿ ಮಾತ್ರ ಬದುಕುಳಿಯುತ್ತಾರೆ. ದೇಶದಲ್ಲಿ ಕ್ಯಾನ್ಸರ್‌ ಪೀಡಿತರ ಸಂಖ್ಯೆ ಪ್ರತಿವರ್ಷ ಶೇ.12ರಷ್ಟುಹೆಚ್ಚಾಗುತ್ತಿದೆ. ಭಾರತದಲ್ಲಿ ಆರೋಗ್ಯವಂತ ಪ್ರತಿ ನಾಲ್ವರು ಮಹಿಳೆಯರಲ್ಲಿ ಒಬ್ಬರಿಗೆ ಗರ್ಭಕಂಠದ ಕ್ಯಾನ್ಸರ್‌ ಮತ್ತು ಐವರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ. ಪ್ರತಿ ಇಪ್ಪತ್ತರಲ್ಲಿ ಒಬ್ಬರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಐವತ್ತರಲ್ಲಿ ಒಬ್ಬರಲ್ಲಿ ಕರುಳು ಅಥವಾ ಪುರುಷರ ಜನನೇಂದ್ರಿಯದ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ. ಕಳೆದ ಹತ್ತು ತಿಂಗಳಿನಲ್ಲಿ 2,400 ಆರೋಗ್ಯವಂತ ವ್ಯಕ್ತಿಗಳ ತಪಾಸಣೆ ನಡೆಸಿ ಈ ಮಾಹಿತಿ ಸಂಗ್ರಹಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕುಟುಂಬದಲ್ಲಿ ಕ್ಯಾನ್ಸರ್‌ನ ಇತಿಹಾಸ ಇರುವವರು 25 ವರ್ಷ ದಾಟಿದ ಬಳಿಕ ಮತ್ತು ಉಳಿದವರು 35 ವರ್ಷದ ಬಳಿಕ ಪ್ರತಿ ವರ್ಷ ಕ್ಯಾನ್ಸರ್‌ ತಪಾಸಣೆಗೆ ಒಳಪಡಬೇಕು. ಗುಟ್ಕಾ, ತಂಬಾಕು ಸೇವನೆ, ಮದ್ಯಪಾನ, ಧೂಮಪಾನ, ಅನಾರೋಗ್ಯಕಾರಿ ಕೆಲಸದ ವಾತಾವರಣ, ಅಸಹಜ ಜೀವನಶೈಲಿ, ಒತ್ತಡದ ಜೀವನ, ಬೊಜ್ಜು ಹೊಂದಿರುವವರು ಕ್ಯಾನ್ಸರ್‌ ಪರೀಕ್ಷೆಯನ್ನು ಪ್ರತಿವರ್ಷ ನಡೆಸಬೇಕು. ಮಹಿಳೆಯರು ಸಂಕೋಚ ಬಿಟ್ಟು ಗರ್ಭಕಂಠದ ಪರೀಕ್ಷೆಗೆ ಒಳಗಾಗಬೇಕು ಎಂದು ಡಾ ತೌಸಿಫ್‌ ಅಹ್ಮದ್‌ ಹೇಳಿದ್ದಾರೆ.

World Cancer Day: ಚಿಕಿತ್ಸೆಗೇ ಬಂದಿಲ್ಲ 25% ಕ್ಯಾನ್ಸರ್‌ ರೋಗಿಗಳು

ಕ್ಯಾನ್ಸರ್‌ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಕೆ: ‘ನ್ಯೂರಾ’ದಲ್ಲಿ ಕಡಿಮೆ ವಿಕಿರಣ ಹೊರಸೂಸುವ, ಆದರೆ ಹೆಚ್ಚು ನಿಖರ ಫಲಿತಾಂಶ ನೀಡುವ ಕೃತಕ ಬುದ್ಧಿಮತ್ತೆ ಆಧಾರಿತ ರೇಡಿಯೋಲಾಜಿ ಅಥವಾ ಇಮೇಜ್‌ ಆಧಾರಿತ ತಂತ್ರಜ್ಞಾನವನ್ನು ಕ್ಯಾನ್ಸರ್‌ ಪತ್ತೆಗೆ ಬಳಸಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್‌ ಪತ್ತೆಗೆ ಕ್ಷ-ಕಿರಣದ ಬದಲು ಆಲ್ಟಾ್ರ ಲೋ ಡೋಸ್‌ ಸಿಟಿ ಸ್ಕಾ್ಯನ್‌ ಹೀಗೆ ವಿವಿಧ ಕ್ಯಾನ್ಸರ್‌ಗಳನ್ನು ಪತ್ತೆ ಹಚ್ಚಲು ಆಧುನಿಕ ಪರೀಕ್ಷಾ ಉಪಕರಣಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದರು.

ಪ್ರತಿ ವರ್ಷ ರಾಜ್ಯದ 78000 ಮಂದಿಯಲ್ಲಿ ಕ್ಯಾನ್ಸರ್‌ ಪತ್ತೆ: ರಾಜ್ಯದಲ್ಲಿ ಪ್ರತಿ ವರ್ಷ 78 ಸಾವಿರ ಮಂದಿಯಲ್ಲಿ ಕ್ಯಾನ್ಸರ್‌ ಪತ್ತೆಯಾಗುತ್ತಿದ್ದು, ಈ ಪೈಕಿ 43 ಸಾವಿರ ಮಂದಿ ಮಹಿಳೆಯರಾಗಿದ್ದಾರೆ. ಕ್ಯಾನ್ಸರ್‌ ಸಾವು ತಡೆಗಟ್ಟುವ ನಿಟ್ಟಿನಲ್ಲಿ ಶೀಘ್ರ ರೋಗ ಲಕ್ಷಣ ಅರಿತು ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯತೆ ಹೆಚ್ಚಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಪ್ರತಿವರ್ಷ 34 ಸಾವಿರ ಪುರುಷರು, 43 ಸಾವಿರ ಮಹಿಳೆಯರು ಸೇರಿ ಪ್ರತಿ ವರ್ಷ ಸರಾಸರಿ 78 ಸಾವಿರ ಮಂದಿಯಲ್ಲಿ ಕ್ಯಾನ್ಸರ್‌ ಪತ್ತೆಯಾಗುತ್ತಿದ್ದು, 2.2 ಲಕ್ಷ ಮಂದಿ ಕ್ಯಾನ್ಸರ್‌ ರೋಗಿಗಳಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಕ್ಯಾನ್ಸರ್‌ ಪ್ರಮಾಣ ಶೇ.20 ರಷ್ಟುಹೆಚ್ಚಿದೆ. ಬಹುತೇಕ ಮಹಿಳೆಯರಲ್ಲಿ ಸ್ತನ, ಗರ್ಭಕೋಶ, ಅಂಡಾಶಯದ ಕ್ಯಾನ್ಸರ್‌ ಕಂಡು ಬಂದರೆ ಪುರುಷರಲ್ಲಿ ಶ್ವಾಸಕೋಶ, ಜಠರ, ಅನ್ನನಾಳ, ಜನನೇಂದ್ರಿಯ ಕ್ಯಾನ್ಸರ್‌ ಹೆಚ್ಚಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

2025ಕ್ಕೆ ಶೇ.11ರಷ್ಟು ಹೆಚ್ಚಳ: ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಪ್ರಕಾರ, ಇತ್ತೀಚಿನ ಕ್ಯಾನ್ಸರ್‌ ಅಂಕಿ-ಅಂಶಗಳ ಆಧಾರದಲ್ಲಿ 2025 ವೇಳೆಗೆ ಕ್ಯಾನ್ಸರ್‌ ರೋಗಿಗಳ ಸಂಖ್ಯೆಯಲ್ಲಿ ಶೇ.11ರಷ್ಟುಹೆಚ್ಚಳವಾಗಲಿದೆ. 0-74 ವರ್ಷದ ಜೀವಿತಾವಧಿಯಲ್ಲಿ ಪುರುಷರಲ್ಲಿ ಪ್ರತಿ ಏಳು ಜನರಲ್ಲಿ ಒಬ್ಬರಿಗೆ, ಮಹಿಳೆಯರಲ್ಲಿ ಪ್ರತಿ ಆರು ಮಂದಿಯಲ್ಲಿ ಒಬ್ಬರಿಗೆ ಕ್ಯಾನ್ಸರ್‌ ತಗುಲುವ ಸಾಧ್ಯತೆಗಳಿವೆ. 19 ವರ್ಷದ ಮಕ್ಕಳಲ್ಲಿಯೂ ಕ್ಯಾನ್ಸರ್‌ ಹರಡುವಿಕೆ ಹೆಚ್ಚಲಿದೆ.

Breast Cancer: ನಗರದ ಮಹಿಳೆಯರಲ್ಲಿ ಹೆಚ್ಚು ಸ್ತನ ಕ್ಯಾನ್ಸರ್‌

ಅಭಿಯಾನಕ್ಕೆ ಇಂದು ಸಿಎಂ ಚಾಲನೆ: ಪ್ರತಿ ವರ್ಷ ಫೆ.4ರಂದು ‘ವಿಶ್ವಕ್ಯಾನ್ಸರ್‌ ಜಾಗೃತಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ ‘ಆರೈಕೆಯ ಅಂತರ ಮುಚ್ಚಿ’ ಎಂಬುದಾಗಿದೆ. ಜಾಗೃತಿ ದಿನದ ಅಂಗವಾಗಿ ಫೆ.4ರಿಂದ 10ರವರೆಗೂ ರಾಜ್ಯದ ನಾಲ್ಕು ವಿಭಾಗೀಯ ಮಟ್ಟದಲ್ಲಿ ಕ್ಯಾನ್ಸರ್‌ ತಪಾಸಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. 

ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಖಾಸಗಿ ಆಸ್ಪತ್ರೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಜಾಗೃತಿ ಶಿಬಿರಗಳು ನಡೆಯಲಿವೆ. ಫೆ.4ರಂದು ಬೆಂಗಳೂರಿನ ಸುಬ್ರಹ್ಮಣ್ಯಪುರ ರಸ್ತೆಯ ಬಿಬಿಎಂಪಿ ಪಿಯು ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿಗಳು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಫೆ.4ರಂದು ಬೆಂಗಳೂರಿನ ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು, ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಕ್ಯಾನ್ಸರ್‌ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Follow Us:
Download App:
  • android
  • ios