Breast Cancer: ನಗರದ ಮಹಿಳೆಯರಲ್ಲಿ ಹೆಚ್ಚು ಸ್ತನ ಕ್ಯಾನ್ಸರ್
ರಾಜಧಾನಿಯಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿ 1 ಲಕ್ಷ ಮಹಿಳೆಯರಲ್ಲಿ 41 ಮಂದಿಯಲ್ಲಿ ಈ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಅಲ್ಲದೆ, ಬೆಂಗಳೂರಿನಲ್ಲಿ ಪ್ರತಿ 1 ಲಕ್ಷ ಮಂದಿಯಲ್ಲಿ 126 ಜನರಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿವೆ.
ವಿಶೇಷ ವರದಿ
ಬೆಂಗಳೂರು (ಫೆ.04): ರಾಜಧಾನಿಯಲ್ಲಿ ಸ್ತನ ಕ್ಯಾನ್ಸರ್‌ನಿಂದ (Breast Cancer) ಬಳಲುತ್ತಿರುವ ಮಹಿಳೆಯರ (Woman) ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿ 1 ಲಕ್ಷ ಮಹಿಳೆಯರಲ್ಲಿ 41 ಮಂದಿಯಲ್ಲಿ ಈ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಅಲ್ಲದೆ, ಬೆಂಗಳೂರಿನಲ್ಲಿ ಪ್ರತಿ 1 ಲಕ್ಷ ಮಂದಿಯಲ್ಲಿ 126 ಜನರಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿವೆ.
ನಗರದ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಕ್ಯಾನ್ಸರ್ ಕುರಿತಂತೆ ನಡೆಸಿದ ಅಧ್ಯಯನದಲ್ಲಿ ಈ ಅಂಶಗಳು ತಿಳಿದುಬಂದಿದೆ. ಮಹಿಳೆಯರಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುವ ಪೈಕಿ ಸ್ತನ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಂದು ಲಕ್ಷ ಮಹಿಳೆಯರಲ್ಲಿ 26 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಂಡುಬಂದರೆ, ಬೆಂಗಳೂರಿನಲ್ಲಿ ಪ್ರತಿ ಒಂದು ಲಕ್ಷ ಮಂದಿಯಲ್ಲಿ 41 ಮಹಿಳೆಯರಲ್ಲಿ ಪತ್ತೆಯಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ 1,600 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ಸದ್ಯ ಐದು ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ.ರಾಮಚಂದ್ರ (Dr.Ramachandra) ಮಾಹಿತಿ ನೀಡಿದರು.
ನಗರದಲ್ಲಿ 2018ರಲ್ಲಿ ಪ್ರತಿ ಲಕ್ಷ ಮಹಿಳೆಯರಲ್ಲಿ 34 ಮಂದಿಯಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿತ್ತು. ಸದ್ಯ ಆ ಪ್ರಮಾಣ ವಾರ್ಷಿಕ ಸರಾಸರಿ ಶೇಕಡ 4ರಷ್ಟುಹೆಚ್ಚಳವಾಗಿದೆ. ಇತ್ತೀಚೆಗೆ ಕಿದ್ವಾಯಿ ಆಸ್ಪತ್ರೆಯಲ್ಲಿ 20 ವರ್ಷದ ಯುವತಿಯೊಬ್ಬರು ಸ್ತನ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಪಡೆದಿದ್ದಾರೆ. ಕಳೆದ ವರ್ಷ 20ರಿಂದ 25 ವರ್ಷದ ಐದಾರು ಯುವತಿಯರು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಪಡೆದ್ದಾರೆ ಎಂದು ಕಿದ್ವಾಯಿ ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿಗೆ ದ್ವಿತೀಯ ಸ್ಥಾನ: ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿರುವ ದೇಶದ ಮಹಾನಗರ ಪೈಕಿ ಚೆನ್ನೈ ಮೊದಲ ಸ್ಥಾನದಲ್ಲಿ, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಪ್ರತಿ 1 ಲಕ್ಷಕ್ಕೆ 41 ಮಹಿಳೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ನಂತರ ದೆಹಲಿ, ಹೈದರಾಬಾರ್, ಮುಂಬೈ ಮಹಾನಗರಗಳಿವೆ. ಒಟ್ಟಾರೆ ಕರ್ನಾಟಕದಲ್ಲಿ ವಾರ್ಷಿಕವಾಗಿ 9,800 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಸದ್ಯ 26ರಿಂದ 30 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ತನ ಕ್ಯಾನ್ಸರ್‌ಗೆ ಸಿದ್ಧವಾಯ್ತು ಔಷಧ : ಈ ಬೀಜದಿಂದ ನಿವಾರಣೆ
ಲಕ್ಷಕ್ಕೆ 126 ಮಂದಿಗೆ ಕ್ಯಾನ್ಸರ್-ವಾರ್ಷಿಕ ಶೇ.1ರಷ್ಟುಹೆಚ್ಚಳ: ಬೆಂಗಳೂರಿನಲ್ಲಿ ಪ್ರತಿ ಒಂದು ಲಕ್ಷ ಮಂದಿಯಲ್ಲಿ 126 ಮಂದಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಮಹಿಳೆ ಮತ್ತು ಪುರುಷರಲ್ಲಿ ಶೇ.1ರಷ್ಟುಕ್ಯಾನ್ಸರ್ ಹೆಚ್ಚಳವಾಗುತ್ತಿದೆ ಎಂದು ಕಿದ್ವಾಯಿ ಸಂಸ್ಥೆಯ ಸಂಶೋಧನೆಯಿಂದ ತಿಳಿದುಬಂದಿದೆ.
ಸ್ತನ ಕ್ಯಾನ್ಸರ್ ಲಕ್ಷಣಗಳಿವು: ಸ್ತನದಲ್ಲಿ ಗಂಟು, ಸ್ತನ ಗಾತ್ರ ಜಾಸ್ತಿಯಾಗುವುದು, ತೊಟ್ಟಿನಲ್ಲಿ ಹುಣ್ಣು ಕಾಣಿಸಿಕೊಳ್ಳುವುದು, ಸ್ತನದ ತೊಟ್ಟಿನಲ್ಲಿ ದ್ರವದಂತಹ ವಸ್ತು ಅಥವಾ ರಕ್ತ ಸ್ರಾವ ಕಂಡು ಬರುವುದು, ಸ್ತನದ ಮೇಲಿನ ಚರ್ಮ ಕೆಂಪಾಗುವಿಕೆ, ಕಂಕುಳು ಭಾಗದಲ್ಲಿ ಗಂಟು ಕಾಣಿಸಿಕೊಳ್ಳುವುದು.
ಸ್ತನ ಕ್ಯಾನ್ಸರ್‌ಗೆ ಕಾರಣ
-ಒತ್ತಡದ ಜೀವನ ಶೈಲಿ
-ಮದ್ಯ ಹಾಗೂ ಧೂಮಪಾನ
-ಬೊಜ್ಜು
-ವಿಳಂಬ ಮದುವೆ
-ತಡವಾಗಿ ಮಕ್ಕಳಾಗುವುದು (30 ವರ್ಷದ ನಂತರ)
-ಚಿಕ್ಕವಯಸ್ಸಿನಲ್ಲಿಯೇ ಋುತುಮತಿ ಹಾಗೂ ತಡವಾಗಿ ಮುಟ್ಟು ನಿಲ್ಲುವುದು
-ಋುತು ಚಕ್ರದಲ್ಲಿ ದೀರ್ಘಾವಧಿ ವ್ಯತ್ಯಯ
-ಮಕ್ಕಳಿಗೆ ಸ್ತನ್ಯಪಾನ ಮಾಡಿಸಲು ಹಿಂಜರಿಕೆ
-ವಂಶವಾಹಿ
ಆಧುನಿಕ ಜೀವನ ಶೈಲಿಯಿಂದ ಬೆಂಗಳೂರಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಳವಾಗುತ್ತಿದೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಶೇ.80ಕ್ಕಿಂತ ಹೆಚ್ಚು ರೋಗಿಗಳು ಗುಣಮುಖರಾಗಬಹುದು. ಮೊದಲನೇ ಮತ್ತು ಎರಡನೇ ಹಂತದಲ್ಲಿದ್ದಾಗ ಶೇ.20 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.-ಡಾ.ಸಿ.ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಸ್ಮಾರಕ ಗ್ರಂಥಿ
ಫೋರ್ಟಿಸಲ್ಲಿ ಸ್ತನ ಕ್ಯಾನ್ಸರ್‌ಗೆ 30 ನಿಮಿಷದಲ್ಲಿ ಚಿಕಿತ್ಸೆ ಲಭ್ಯ: ಸ್ತನ ಕ್ಯಾನ್ಸರ್ ವಿಕಿರಣ ಚಿಕಿತ್ಸೆಯನ್ನು ಕೇವಲ 30 ನಿಮಿಷದೊಳಗೆ ನಡೆಸುವ ನೂತನ ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ ಚಿಕಿತ್ಸೆ ನಗರದ ಫೋರ್ಟಿಸ್ ಆಸ್ಪತ್ರೆಯಲ್ಲಿ ಆರಂಭವಾಗಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಫೋಟೀಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕ ಡಾ ಸಂದೀಪ್ ನಾಯಕ್ ಮಾತನಾಡಿ, ಪ್ರಸ್ತುತ ಸ್ತನ ಕ್ಯಾನ್ಸರ್ ಹೊಂದಿದವರಿಗೆ ಗಡ್ಡೆ ತೆಗೆದ ನಂತರ 30ರಿಂದ 40 ದಿನಗಳು ರೇಡಿಯೋಥೆರಪಿ ನೀಡಲಾಗುತ್ತದೆ.
ಸಣ್ಣ ವಯಸ್ಸಿನ ಮಹಿಳೆಯರಲ್ಲೂ ಸ್ತನ ಕ್ಯಾನ್ಸರ್
ಇಂತಹ ರೋಗಿಗಳಿಗೆ ಅನುಕೂಲವಾಗಲು ವಿಕಿರಣ ಚಿಕಿತ್ಸಾ ತಂತ್ರಜ್ಞಾನವಾದ ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿಯನ್ನು ಪರಿಚಯಿಸಿದ್ದೇವೆ. ಈ ಚಿಕಿತ್ಸಾ ವಿಧಾನದಿಂದ ಕೇವಲ 30 ನಿಮಿಷಗಳಲ್ಲಿ ಥೆರಪಿ ಪೂರ್ಣ ಮಾಡಬಹುದು. ಇದು ಅತ್ಯಂತ ಪರಿಣಾಮಕಾರಿ ಎಂದು ಈಗಾಗಲೇ ಸಾಬೀತಾಗಿದೆ. ದೇಶದಲ್ಲಿ ಕೆಲವು ಆಸ್ಪತ್ರೆಗಳು ಮಾತ್ರ ಈ ಚಿಕಿತ್ಸಾ ವಿಧಾನವನ್ನು ಹೊಂದಿದ್ದು, ಕರ್ನಾಟಕದಲ್ಲಿ ಈ ತಂತ್ರಜ್ಞಾನವನ್ನು ಫೋರ್ಟಿಸ್‌ನಲ್ಲಿ ಮಾತ್ರ ಅಳವಡಿಸಲಾಗಿದೆ ಎಂದರು.
ಫೋರ್ಟಿಸ್ ಆಸ್ಪತ್ರೆ ಶಾಖೆ ನಿರ್ದೇಶಕ ಡಾ ಮನೀಶ್ ಮಟ್ಟೂ ಮಾತನಾಡಿ, ಈ ಚಿಕಿತ್ಸೆ ಮೂಲಕ 40 ದಿನಗಳು ತೆಗೆದುಕೊಳ್ಳಬೇಕಾದ ವಿಕಿರಣ ಚಿಕಿತ್ಸೆ ಕೇವಲ 30 ನಿಮಿಷದೊಳಗೆ ಪೂರ್ಣಗೊಳ್ಳಲಿದೆ. ಡಿಸೆಂಬರ್‌ನಿಂದ ಜನವರಿಯೊಳಗೆ ನಾಲ್ಕು ಸ್ತನ ಕ್ಯಾನ್ಸರ್ ರೋಗಿಗಳಿಗೆ ಕೇವಲ 30 ನಿಮಿಷದಲ್ಲಿ ಥೆರಪಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ತಂತ್ರಜ್ಞಾನದಿಂದ ಗಡ್ಡೆ ತೆರವುಗೊಳಿಸಿದ ಜಾಗಕ್ಕೆ ವಿಕಿರಣಗಳು ನೇರವಾಗಿ ಮುಟ್ಟುವುದರಿಂದ, ಇತರೆ ಅಂಗಗಳಿಗೆ ವಿಕಿರಣ ತಗುಲುವ ಅಪಾಯ ಇರುವುದಿಲ್ಲ ಎಂದು ತಿಳಿಸಿದರು.