Okra Benefits: ಬೆಂಡೆಕಾಯಿಯು ಜಿಗುಟಾದ ರಚನೆಯನ್ನು ಹೊಂದಿದ್ದರೂ, ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಅಂಶಗಳಿಂದ ಸಮೃದ್ಧವಾಗಿದೆ. ಬೆಂಡೆಕಾಯಿಯನ್ನು ನೆನೆಸಿದ ನೀರನ್ನು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಮಧುಮೇಹ, ಕೊಲೆಸ್ಟ್ರಾಲ್ ನಿವಾರಣೆಯಾಗುತ್ತಂತೆ. ವೈದ್ಯರು ಏನೆನ್ನುತ್ತಾರೆ ನೋಡೋಣ.

ಬೆಂಡೆಕಾಯಿಯಿಂದ ಆರೋಗ್ಯ

ಬೆಂಡೆಕಾಯಿ ಆರೋಗ್ಯಕ್ಕೆ ಪ್ರಯೋಜನಕಾರಿ ತರಕಾರಿಗಳಲ್ಲಿ ಒಂದಾಗಿದೆ. ಇದರಿಂದ ರುಚಿಕರವಾದ ಪಲ್ಯ, ಫ್ರೈ ಸೇರಿದಂತೆ ಹಲವು ಖಾದ್ಯಗಳನ್ನು ತಯಾರಿಸಬಹುದು. ಬೆಂಡೆಕಾಯಿಯಲ್ಲಿ ಕರಗುವ ನಾರಿನಂಶವಾದ ಮ್ಯೂಸಿಲೇಜ್ (Mucilage) ಇದ್ದು, ಇದು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಬೆಂಡೆಕಾಯಿ ತಿಂದರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತಾ?

ಗ್ಯಾಸ್ಟ್ರೋಎಂಟರಾಲಜಿಸ್ಟ್ ಪ್ರಕಾರ, ಬೆಂಡೆಕಾಯಿಯಲ್ಲಿರುವ ಮ್ಯೂಸಿಲೇಜ್ ಜೀರ್ಣಾಂಗದಲ್ಲಿ ಜೆಲ್‌ನಂತಹ ಪದರವನ್ನು ರೂಪಿಸುತ್ತದೆ. ಇದು ಕರುಳಿನ ಚಲನೆಗೆ ಸಹಾಯ ಮಾಡಿ, ಮಲಬದ್ಧತೆ (Constipation) ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅಲ್ಲದೆ, ಕರುಳಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳ ಆರೋಗ್ಯಕ್ಕೂ ನಾರಿನಂಶ ಸಹಕಾರಿ. ಈ ಕರಗುವ ನಾರಿನಂಶವು ಪಿತ್ತ ಆಮ್ಲಗಳ (Bile Acids) ವಿಸರ್ಜನೆಗೆ ನೆರವಾಗಬಹುದು. ಪಿತ್ತ ಆಮ್ಲಗಳನ್ನು ಮತ್ತೆ ಉತ್ಪಾದಿಸಲು ಯಕೃತ್ತು ಕೊಲೆಸ್ಟ್ರಾಲ್ ಬಳಸುವುದರಿಂದ, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುವ ಸಾಧ್ಯತೆಯಿದೆ.

ಆದರೆ, ಕೇವಲ ಬೆಂಡೆಕಾಯಿಯಿಂದಲೇ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಸೂಚಿಸುವ ಯಾವುದೇ ಸಂಶೋಧನೆಗಳಿಲ್ಲ. ನಿಮ್ಮ ಒಟ್ಟಾರೆ ಆಹಾರ ಪದ್ಧತಿಯೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಬೆಂಡೆಕಾಯಿಯಂತಹ ಆರೋಗ್ಯಕರ ಆಹಾರಗಳನ್ನು ಸೇವಿಸಿದರೂ, ಜಂಕ್ ಫುಡ್‌ಗಳನ್ನು ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಮತ್ತೆ ಹೆಚ್ಚಾಗಬಹುದು. ಇದರ ಜೊತೆಗೆ, ನಿಯಮಿತ ವ್ಯಾಯಾಮವೂ ಅತ್ಯಗತ್ಯ. ಬೆಂಡೆಕಾಯಿಯಲ್ಲಿರುವ ಗುಣಲಕ್ಷಣಗಳ ಪ್ರಯೋಜನವನ್ನು ನಿಮ್ಮ ದೇಹವು ಪಡೆಯುವಂತಾಗಲು, ವಾರಕ್ಕೆ ಕನಿಷ್ಠ ಒಂದೆರಡು ಬಾರಿಯಾದರೂ ಇದನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಿ.

ಬೆಂಡೆಕಾಯಿ ನೆನೆಸಿದ ನೀರು ಕುಡಿದರೆ ಮಧುಮೇಹ ನಿಯಂತ್ರಣವಾಗುತ್ತಾ?

ಬೆಂಡೆಕಾಯಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುವ ಪದ್ಧತಿ ಜನಪ್ರಿಯವಾಗಿದೆ. ಇದರಲ್ಲಿರುವ ನಾರಿನಂಶ ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು ಎಂದು ಹೇಳಲಾಗುತ್ತದೆ. ಆದರೆ ಬೆಂಡೆಕಾಯಿ ನೆನೆಸಿದ ನೀರು ಮಧುಮೇಹವನ್ನು ನಿಯಂತ್ರಿಸುತ್ತದೆ ಎಂಬುದಕ್ಕೆ ದೃಢವಾದ ವೈಜ್ಞಾನಿಕ ಪುರಾವೆಗಳು ಸೀಮಿತವಾಗಿವೆ.