ಮಹಿಳೆ ಉದರದಲ್ಲಿದ್ದ ದೊಡ್ಡ ಗಾತ್ರದ ಗಡ್ಡೆ ಹೊರತೆಗೆದ ವೈದ್ಯರು
- ಮಹಿಳೆ ಉದರದಲ್ಲಿದ್ದ ದೊಡ್ಡ ಗಾತ್ರದ ಗಡ್ಡೆ ಹೊರತೆಗೆದ ವೈದ್ಯರು
- ಮಣಿಪಾಲ ಆಸ್ಪತ್ರೆ, ಕಿಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆ ನಿರಾಕರಣೆ
- ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ
ಹಾವೇರಿ (ಡಿ.11) : ಹರ್ನಿಯಾ, ನ್ಯುಮೋನಿಯಾ, ಶ್ವಾಸಕೋಶ ಸಮಸ್ಯೆ, ರಕ್ತಹೀನತೆ ಸೇರಿದಂತೆ ಅತ್ಯಂತ ಸಂಕೀರ್ಣ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 186 ಕೆಜಿ ತೂಕದ 46 ವರ್ಷದ ಮಹಿಳೆಯೋರ್ವರ ಉದರದ ಭಾಗದಲ್ಲಿನ ದೊಡ್ಡ ಗಾತ್ರದ ಗಡ್ಡೆಯನ್ನು ಜಿಲ್ಲಾಸ್ಪತ್ರೆ ತಜ್ಞ ವೈದ್ಯ ಡಾ. ನಿರಂಜನ ಮಾನಿಬಣಕಾರ ನೇತೃತ್ವದ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದಿದೆ.
ರಾಣಿಬೆನ್ನೂರ ತಾಲೂಕಿನ ಸೋಮಲಾಪುರ ಗ್ರಾಮದ ಚಂದ್ರಮ್ಮ ಪುಟ್ಟಮ್ಮನವರ ಎಂಬುವರು ಉಸಿರಾಟದ ತೊಂದರೆ, ರಕ್ತಹೀನತೆ ಕಾರಣ ಉದರ ಭಾಗದಲ್ಲಿ ಬೆಳೆದಿದ್ದ ದೊಡ್ಡ ಗಾತ್ರದ ಗಡ್ಡೆಯ ಗಂಭೀರ ಆರೋಗ್ಯ ಸಮಸ್ಯೆ ಕಾರಣ ವಿವಿಧ ಆಸ್ಪತ್ರೆಗೆ ಅಲೆದಾಡಿದ್ದರು. ಅಲ್ಲಿಯ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದರೆ ಬದುಕುವುದಿಲ್ಲ ಎಂಬ ಕಾರಣ ನೀಡಿ ಮಹಿಳೆಯನ್ನು ಬಿಡುಗಡೆಗೊಳಿಸಿದ್ದರು.
ಮಣಿಪಾಲ್ ಆಸ್ಪತ್ರೆಯಲ್ಲಿರುವ ಆನಂದ್ ಮಾಮನಿ ಮತ್ತು ಶ್ರೀಮಂತ ಇಲ್ಲಾಳ್ ಆರೋಗ್ಯ ವಿಚಾರಿಸಿದ ಸಿಎಂ
ಮಹಿಳೆಯ ಆರೋಗ್ಯ ಮತ್ತಷ್ಟುಗಂಭೀರವಾದ ಕಾರಣ ನ. 16ರಂದು ಜಿಲ್ಲಾಸ್ಪತ್ರೆಗೆ ಮರಳಿ ದಾಖಲಾಗಿದ್ದರು. ಉಸಿರಾದ ತೊಂದರೆ, ಉದರ ಗಡ್ಡೆಯಲ್ಲಿ ದೊಡ್ಡ ಕರುಳು ಮತ್ತು ಸಣ್ಣಕರುಳು ಸುತ್ತಿ ಹಾಕಿಕೊಂಡು ಗಡ್ಡೆಯ ಮೇಲ್ಭಾಗದ ಚರ್ಮ ಕೊಳೆಯುತ್ತಿರುವುದು ಕಂಡಬಂದ ಹಿನ್ನೆಲೆಯಲ್ಲಿ ರೋಗಿಯ ಪರಿಸ್ಥಿತಿಯ ಗಂಭೀರತೆ ಕುರಿತು ಕುಟುಂಬದವರೊಂದಿಗೆ ಚರ್ಚಿಸಿ ಅಂತಿಮವಾಗಿ ಕುಟುಂಬದ ಒಪ್ಪಿಗೆ ಪಡೆದು, ಮಹಿಳೆಯನ್ನು ಶಸ್ತ್ರ ಚಿಕಿತ್ಸೆಗೊಳಪಡಿಸಿ ಯಶಸ್ವಿಯಾಗಿದ್ದಾರೆ.
ಡಾ. ನಿರಂಜನ ಮಾನಿಬಣಕಾರ ಶಸ್ತ್ರ ಚಿಕಿತ್ಸೆ ಕುರಿತಂತೆ ಮಾಹಿತಿ ನೀಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯ ತಪಾಸಣೆ ನಡೆಸಿದ ನಾವು, ಅವಳ ಕ್ಲಿಷ್ಟಕರವಾದ ಆರೋಗ್ಯ ಪರಿಸ್ಥಿತಿ ಅರಿತು ಹುಬ್ಬಳ್ಳಿ ಕಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗಿತ್ತು. ಅಲ್ಲಿನ ವೈದ್ಯರು ಮಹಿಳೆಯ ಪರಿಸ್ಥಿತಿಯನ್ನು ಅರಿತು ಶಸ್ತ್ರ ಚಿಕಿತ್ಸೆಗೆ ನಿರಾಕರಿಸಿ ವಾಪಸ್ ಕಳುಹಿಸಿದ್ದರು. ಮಹಿಳೆ ಪುನಃ ಹಾವೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದಾಗ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಪಿ.ಆರ್. ಹಾವನೂರ ನೇತೃತ್ವದಲ್ಲಿ ಚರ್ಚಿಸಿ, ಮಹಿಳೆಯ ಕುಟುಂಬದವರೊಂದಿಗೆ ಕ್ಲಿಷ್ಟಕರ ಆರೋಗ್ಯ ಪರಿಸ್ಥಿತಿಯನ್ನು ಚರ್ಚಿಸಿ ಅಂತಿಮವಾಗಿ ಕುಟುಂಬದವರಿಂದ ಒಪ್ಪಿಗೆ ಪತ್ರ ಪಡೆದು ಶಸ್ತ್ರ ಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ವಿವಿಧ ತಜ್ಞವೈದ್ಯರ ತಂಡ ರಚಿಸಿಕೊಂಡು ಶಸ್ತ್ರಚಿಕಿತ್ಸೆ ಮಾಡಲಾಯಿತು. ಡಾ. ಮಹದೇವ ಬಣಕಾರ, ಫಿಜಿಷಿಯನ್ ಡಾ. ವಿಶ್ವನಾಥ ಸಾಲಿಮಠ, ಡಾ. ಅಶೋಕ ಜಿ., ಅರವಳಿಕೆ ತಜ್ಞ ಡಾ. ಸಂದೀಪ ರೆಡ್ಡಿ, ಡಾ. ವಿವೇಕ ಚಾವಡಿ ನೇತೃತ್ವದಲ್ಲಿ ಸತತ ನಾಲ್ಕು ತಾಸು ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ವೈದ್ಯರೊಂದಿಗೆ ನರ್ಸಿಂಗ್ ಸಿಬ್ಬಂದಿ ಸಹಕಾರ ನೀಡಿದರು ಎಂದು ತಿಳಿಸಿದರು.
Yoga Asana: ಗ್ಯಾಸ್, ಅಸಿಡಿಟಿಯಿಂದ ನಿದ್ರೆ ಬರ್ತಿಲ್ಲವೆಂದ್ರೆ ಈ ಯೋಗ ಬೆಸ್ಟ್
ಕಳೆದ ಮೂರ್ನಾಲ್ಕು ವರ್ಷದಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೆ. ಮಣಿಪಾಲ ಹಾಗೂ ಹುಬ್ಬಳ್ಳಿಗೆ ಹೋಗಿದ್ದೆವು. ಅಲ್ಲಿಯ ವೈದ್ಯರು ನೀವು ಬದುಕುವುದಿಲ್ಲ ಎಂದು ಹೇಳಿದ್ದರು. ಮರಳಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದೆವು. ಇಲ್ಲಿನ ವೈದ್ಯರಾದ ಡಾ. ನಿರಂಜನ ಹಾಗೂ ಡಾ. ಹಾವನೂರ ಅವರು ನಮಗೆ ಧೈರ್ಯ ತುಂಬಿ ಶಸ್ತ್ರ ಚಿಕಿತ್ಸೆಗೆ ಒಪ್ಪಿ ಮರುಜೀವ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಚಂದ್ರಮ್ಮಾ ಪುಟ್ಟಮ್ಮನವರ, ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆ