ಮಣಿಪಾಲ್ ಆಸ್ಪತ್ರೆಯಲ್ಲಿರುವ ಆನಂದ್ ಮಾಮನಿ ಮತ್ತು ಶ್ರೀಮಂತ ಇಲ್ಲಾಳ್ ಆರೋಗ್ಯ ವಿಚಾರಿಸಿದ ಸಿಎಂ
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳಗಾವಿಯ ಯಲ್ಲಮ್ಮ ಕ್ಷೇತ್ರದ ಶಾಸಕರಾಗಿರುವ ಆನಂದ್ ಮಾಮನಿ ಅವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಬೆಂಗಳೂರು (ಅ.10): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಬೆಳಗಾವಿಯ ಯಲ್ಲಮ್ಮ ಕ್ಷೇತ್ರದ ಶಾಸಕರಾಗಿರುವ ಆನಂದ್ ಮಾಮನಿ ಅವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಆನಂದ್ ಮಾಮನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರು ಕೊಲ್ಲಾಪುರದಿಂದ ಬೆಂಗಳೂರಿಗೆ ವಾಪಸ್ ಆದ ಬಳಿಕ ನೇರವಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿ ಆನಂದ್ ಮಾಮಾನಿಯವರ ಆರೋಗ್ಯ ವಿಚಾರಿಸಿದರು. ಸಿಎಂ ಜೊತೆ ಸಚಿವರಾದ ವಿ. ಸೋಮಣ್ಣ, ಮುರುಗೇಶ್ ನಿರಾಣಿ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಕೂಡ ಆಸ್ಪತ್ರೆಗೆ ತೆರಳಿದ್ದರು. ಇನ್ನು ಇದೇ ವೇಳೆ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾದ ಕಲಬುರಗಿ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಕೂಡ ಸಿಎಂ ಬಸವರಾಜ ಬೊಮ್ಮಾಯಿ ವಿಚಾರಿಸಿದರು. ಇನ್ನು ಕಳೆದ ಸೆಪ್ಟೆಂಬರ್ ನಲ್ಲಿ ಆನಂದ್ ಮಾಮನಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬೆಂಗಳೂರು ಬಿಟ್ಟು ಚೆನ್ನೈಗೆ ಶಿಪ್ಟ್ ಮಾಡಿದ್ದರಿಂದ ಸಹಜವಾಗಿಯೇ ಅಭಿಮಾನಿಗಳಲ್ಲಿ, ಕಾರ್ಯಕರ್ತರಲ್ಲಿ ಅತಂಕ ಮನೆ ಮಾಡಿತ್ತು.
ಬೆಂಗಳೂರು ಬಿಟ್ಟು ಚೆನ್ನೈಗೆ ಏಕೆ ಶಿಫ್ಟ್ ಮಾಡಿದ್ರು? ಸೀರಿಯಸ್ ಇರುವುದರಿಂದ ಚೆನ್ನೈಗೆ ಶಿಫ್ಟ್ ಮಾಡಲಾಗಿದೆ ಅಂತೆಲ್ಲಾ ಚರ್ಚೆಗಳು ನಡೆದಿತ್ತು. ಅಲ್ಲದೇ ಸಾಮಾಜಿ ಜಾಲತಾಣಗಳಲ್ಲಿ ಅವರ ಆರೋಗ್ಯ ಸ್ಥಿತಿ ಚಿಂತಾಜನದಲ್ಲಿದೆ ಅಂತೆಲ್ಲಾ ಸುದ್ದಿಗಳು ಹರಿದಾಡಿತ್ತು. ಈ ವೇಳೆ ಸ್ವತಃ ಆನಂದ್ ಮಾಮನಿ ಅವರೇ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದರು.
ಆನಂದ್ ಮಾಮನಿ ವಿಡಿಯೋ ಹೇಳಿಕೆ
ಚೆನ್ನೈನ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಆನಂದ ಮಾಮನಿ, ಮನುಷ್ಯನಿಗೆ ಜೀವನದಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರಿಳಿತ ಸಹಜ. ಕೆಲವು ವರ್ಷಗಳಿಂದ ನನಗೆ ಮಧುಮೇಹ ಖಾಯಿಲೆ ಇದೆ. ಅದರ ಜೊತೆಗೆ ಬೇರೆ ಬೇರೆ ಕಾರಣ ಹೇಳಿ ಸುಳ್ಳು ವದಂತಿ ಕೆಲ ಮಾಧ್ಯಮಗಳಲ್ಲಿ ಬರ್ತಿದೆ. ಮನೆ ದೇವರಾದ ಜಾಲಿಕಟ್ಟಿ ಬಸವಣ್ಣ, ತಂದೆ-ತಾಯಿ, ರಾಜ್ಯದ ಜನರ ಆಶೀರ್ವಾದ ಇದೆ. ಸುಳ್ಳು ವಂದತಿಗೆ ನಮ್ಮ ಕಾರ್ಯಕರ್ತರು ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದರು.
ಚೆನ್ನೈನಲ್ಲಿ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿಗೆ ಚಿಕಿತ್ಸೆ: ಆರೋಗ್ಯದ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ
ನನ್ನ ಕುಟುಂಬ ಸದಸ್ಯರು ನನ್ನ ಬೆನ್ನಿಗೆ ನಿಂತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ, ಮಾಧ್ಯಮ ಸ್ನೇಹಿತರ ಸಹಕಾರ ಇದೆ. ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಯಾವುದೇ ಕಾರಣಕ್ಕೂ ಧೈರ್ಯಗೆಡುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ನಿಮ್ಮ ಬೆನ್ನಿಗಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿಎಸ್‌ವೈ ಸೇರಿದಂತೆ ಅನೇಕ ಶಾಸಕರು ನನಗೆ ಸಲಹೆ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಾನು ಧೈರ್ಯವಾಗಿ ಬಂದು ತಮ್ಮೆಲ್ಲರ ಸೇವೆಗೆ ಮತ್ತೆ ಅಣಿಯಾಗುತ್ತೇನೆಂದು ಆತ್ಮವಿಶ್ವಾಸ ನೀಡುತ್ತೇನೆ ಎಂದಿದ್ದರು.
ಕಲಬುರಗಿ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ: 3 ದಿನ ಆಯ್ತು, ಅಪ್ಪ ಕಣ್ಣುಬಿಟ್ಟು ನಮ್ಮನ್ನ ನೋಡಿಲ್ಲ..!
ನಾನು ಚೆನ್ನೈನಲ್ಲಿರುವ ಕಾರಣಕ್ಕೆ ಚಿಂತಾಜನಕ, ಶಿಫ್ಟ್ ಮಾಡ್ತಾರೆ ಅನ್ನೋದು ಯಾವುದು ಇಲ್ಲ. ಚೆನ್ನೈ ಆಸ್ಪತ್ರೆಗೆ ದೊಡ್ಡ ವೈದ್ಯರು ಬಂದ ಬಳಿಕ ತಪಾಸಣೆ ಮಾಡಿಸಿ ಔಷಧಿ ತೆಗೆದುಕೊಂಡು ಬರುವೆ. ಆದಷ್ಟು ಬೇಗ ರಾಜಧಾನಿಗೆ ಬಂದು ತಮ್ಮ ಸಂಪರ್ಕಕ್ಕೆ ಸಿಗುತ್ತೇನೆ ಎಂದು ಹೇಳಿದ್ದರು. ಬಳಿಕ ಚೆನ್ನೈನಿಂದ ಬೆಂಗಳೂರಿನ ಮಣಿಪಾಲ್ ಗೆ ದಾಖಲಿಸಲಾಗಿತ್ತು.