ಟಾಯ್ಲೆಟ್ ನಲ್ಲಿ ತುಂಬಾ ಹೊತ್ತು ಕುಳಿತ್ರೆ ಅನಾರೋಗ್ಯ ಕಾಡೋದು ಗ್ಯಾರಂಟಿ
ಟಾಯ್ಲೆಟ್ ಗೆ ಹೋದ್ರೆ ಗಂಟೆಯಾದ್ರೂ ಬರಲ್ಲ, ಅಲ್ಲೇನು ಮಾಡ್ತಾರೋ ನಾ ಕಾಣೆ ಎಂಬ ದೂರನ್ನು ನೀವು ಕೇಳಿರಬಹುದು. ಅನೇಕರಿಗೆ ಟಾಯ್ಲೆಟ್ ನೆಮ್ಮದಿ ನೀಡುವ ತಾಣವಾಗಿದೆ. ಶಾಂತತೆ ನೀಡುವ, ಹೊಸ ಐಡಿಯಾ ಬರುವ ಈ ಟಾಯ್ಲೆಟ್ ನಿಮ್ಮ ಆರೋಗ್ಯ ಹಾಳು ಮಾಡುತ್ತೆ ಅನ್ನೋದು ನೆನಪಿರಲಿ.
ಈಗಿನ ದಿನಗಳಲ್ಲಿ ಶೌಚಾಲಯ ಕೇವಲ ಮಲ, ಮೂತ್ರ ವಿಸರ್ಜನೆಗೆ ಸೀಮಿತವಾಗಿಲ್ಲ. ಶೌಚಾಲಯಕ್ಕೆ ಹೋದ ಜನರು ಒಂದು ಗಂಟೆಯಾದ್ರೂ ಹೊರಗೆ ಬರೋದಿಲ್ಲ. ಮಲ ವಿಸರ್ಜನೆಗೆ ತೊಂದರೆಯಾಗಿ ಅಲ್ಲಿಯೇ ತುಂಬಾ ಸಮಯ ಕಳೆಯುವವರ ಸಂಖ್ಯೆ ಬಹಳ ಕಡಿಮೆ. ಕೆಲವರು ದಿನದಲ್ಲಿ ಮೂರ್ನಾಲ್ಕು ಬಾರಿ ಟಾಯ್ಲೆಟ್ ಗೆ ಹೋಗ್ತಾರೆ. ಅಂದ್ರೆ ದಿನದ ಮೂರು ಗಂಟೆಯನ್ನು ಅಲ್ಲಿಯೇ ಕಳೆಯುತ್ತಾರೆ. ಟಾಯ್ಲೆಟ್ ನಲ್ಲಿ ಕುಳಿತುಕೊಂಡು ಜಗತ್ತು ಮರೆಯುವವರಿದ್ದಾರೆ. ಯಾವುದೇ ಗಲಾಟೆ, ಜಂಜಾಟವಿಲ್ಲದೆ ಮೊಬೈಲ್ ನೋಡ್ತಾ, ಗೇಮ್ ಆಡ್ತಾ, ಪುಸ್ತಕ ಓದುತ್ತಾ ಕಾಲ ಕಳೆಯೋರನ್ನು ನೀವು ನೋಡಿರಬಹುದು. ಟಾಯ್ಲೆಟ್ ನಲ್ಲಿ ಕುಳಿತ್ರೆ ಹೊಸ ಹೊಸ ಆಲೋಚನೆ ಬರುತ್ತೆ ಎನ್ನುವವರಿದ್ದಾರೆ. ನಿಮಗೂ ಟಾಯ್ಲಟ್ ಮೇಲೆ ಪ್ರೀತಿ ಇರಬಹುದು. ನಾವಿಂದು ಈ ಟಾಯ್ಲೆಟ್ ಅಡಿಕ್ಟೆಡ್ ಜನರ ಬಗ್ಗೆ ನಿಮಗೆ ಹೇಳ್ತೆವೆ.
ಟಾಯ್ಲೆಟ್ (Toilet) ಅಡಿಕ್ಟೆಡ್ ಅಂದ್ರೇನು? : ಮಲ, ಮೂತ್ರ ಬಂದಾಗ ಹೋಗೋದು ಕಾಮನ್. ಆದ್ರೆ ಟಾಯ್ಲೆಟ್ ಅಡಿಕ್ಟೆಡ್ ಜನರಿಗೆ ಶೌಚಕ್ಕೆ ಹೋಗುವ ಅಗತ್ಯವಿರೋದಿಲ್ಲ. ಆದ್ರೆ ಟಾಯ್ಲೆಟ್ ಗೆ ಹೋಗಿ ಕುಳಿತುಕೊಳ್ಳಬೇಕು. ದಿನದಲ್ಲಿ ಮೂರ್ನಾಲ್ಕು ಬಾರಿ ಇಲ್ಲವೆ ಒಂದರ್ಧ ಗಂಟೆ ಅಲ್ಲಿ ಕುಳಿತಿಲ್ಲವೆಂದ್ರೆ ಸಮಾಧಾನ ಇರೋದಿಲ್ಲ. ಏನೋ ಕಳೆದುಕೊಂಡ ಅನುಭವ. ಧೂಮಪಾನ (Smoking), ಮದ್ಯಪಾನ ಚಟದಂತೆ ಇದು ಕೂಡ ಒಂದು ಚಟ ಎನ್ನಬಹುದು.
ಗರ್ಭಿಣಿಯಾದ್ರೆ ಓಕೆ, ಅಲ್ಲದಿದ್ದರೆ ಬೆಳಗ್ಗೆ ಎದ್ದ ಕೂಡಲೇ ವಾಂತಿಯಾದ್ರೆ ನಿರ್ಲಕ್ಷಿಸಬೇಡಿ!
ಇದ್ರಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ :
ಪೈಲ್ಸ್ (Piles) ಗೆ ಕಾರಣವಾಗುತ್ತೆ ನಿಮ್ಮ ಚಟ : ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆದಷ್ಟು ನಿಮಗೆ ಹೆಚ್ಚು ಸಂತೋಷ (Happiness) ಸಿಗಬಹುದು. ಅಲ್ಲಿ ಹೋದ್ರೆ ಸಮಯ ಕಳೆದಿದ್ದೇ ತಿಳಿಯದೆ ಇರಬಹುದು. ಆದ್ರೆ ಶೌಚಾಲಯದಲ್ಲಿ ಸಮಯ ಕಳೆಯುವ ಈ ಚಟವನ್ನು ನೀವು ಬಿಡ್ಲೇಬೇಕು. ಯಾಕೆಂದ್ರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶೌಚಾಲಯದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಮೂಲವ್ಯಾಧಿಗೆ ಕಾರಣವಾಗಬಹುದು. ಗುದದ್ವಾರದ ಸುತ್ತ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದ್ರಿಂದ ಸಮಸ್ಯೆ ಎದುರಾಗುತ್ತದೆ.
ಮೊಬೈಲ್ ಗೆ ಅಂಟಿಕೊಳ್ಳುತ್ತೆ ಬ್ಯಾಕ್ಟೀರಿಯಾ : ಟಾಯ್ಲೆಟ್ ನಲ್ಲಿ ಮೊಬೈಲ್ ಬಳಕೆ ಮಾಡುವುದು ಅತ್ಯಂತ ಕೆಟ್ಟ ಹಾಗೂ ಅಪಾಯಕಾರಿ ಚಟವಾಗಿದೆ. ಟಾಯ್ಲೆಟ್ ನಲ್ಲಿ ಹೆಚ್ಚು ಸೂಕ್ಷ್ಮಾಣುಜೀವಿಗಳಿರುತ್ತವೆ. ಫೋನ್‌ನೊಂದಿಗೆ ಟಾಯ್ಲೆಟ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ 18 ಪಟ್ಟು ಹೆಚ್ಚು ಸೂಕ್ಷ್ಮಾಣುಗಳು ಮೊಬೈಲ್ ಗೆ ಅಂಟಿಕೊಳ್ಳುತ್ತವೆ. ಒಂದು ಅಧ್ಯಯನದ ಪ್ರಕಾರ, 6 ಫೋನ್‌ಗಳಲ್ಲಿ 1 ಫೋನ್ ನಲ್ಲಿ ಮಲದ ಕುರುಹು ಇರುತ್ತದೆ. ವಾಸ್ತವವಾಗಿ ಇದು ವ್ಯಕ್ತಿಗೆ ತಿಳಿಯೋದಿಲ್ಲ. ಕೊಳಕು ಫೋನನ್ನೇ ಊಟದ ಸಂದರ್ಭದಲ್ಲಿಯೂ ಬಳಸುವುದ್ರಿಂದ ಅದು ನಮ್ಮ ದೇಹವನ್ನು ಸೇರುತ್ತದೆ. ಇದ್ರಿಂದ ಅನಾರೋಗ್ಯ ಕಾಡುತ್ತದೆ.
ಶೌಚಾಲಯದಲ್ಲಿ ಎಷ್ಟು ಹೊತ್ತು ಇರಬೇಕು? : ತಜ್ಞರ ಪ್ರಕಾರ, ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯೋದು ಸೂಕ್ತವಲ್ಲ. ವೈದ್ಯಕೀಯ ತಜ್ಞರ ಪ್ರಕಾರ, ಶೌಚಾಲಯದಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಸಮಯ ಕಳೆಯಬಾರದು. ವಾಸ್ತವವಾಗಿ ಇನ್ನೂ ಕಡಿಮೆ ಸಮಯ ತೆಗೆದುಕೊಂಡ್ರೆ ಒಳ್ಳೆಯದು. ಹಾಗೆಯೇ ಶೌಚಾಲಯಕ್ಕೆ ಹೋಗುವ ವೇಳೆ ಮೊಬೈಲ್ ತೆಗೆದುಕೊಂಡು ಹೋಗ್ಬಾರದು.
ಮೂತ್ರದಲ್ಲಿ ರಕ್ತ ಮೂತ್ರಪಿಂಡದ ಕ್ಯಾನ್ಸರ್ ಸಂಕೇತವೇ? ಹೀಗೆ ತಿಳಿಯಿರಿ
ಟಾಯ್ಲೆಟ್ ಚಟದಿಂದ ಹೊರ ಬರೋದು ಹೇಗೆ? : ನೀವೂ ಗಂಟೆಗಟ್ಟಲೆ ಟಾಯ್ಲೆಟ್ ನಲ್ಲಿ ಕಳೆಯುತ್ತೀರಿ ಅಂದ್ರೆ ಮೊದಲು ಈ ಚಟದಿಂದ ಹೊರಗೆ ಬನ್ನಿ. ಟಾಯ್ಲೆಟ್ ಗೆ ಹೋಗುವಾಗ ಮೊಬೈಲ್ ಬಿಟ್ಟು ಹೋದ್ರೆ ನೀವು ಚಟದಿಂದ ಆದಷ್ಟು ಹೊರಬಂದಂತೆ. ಪುಸ್ತಕ ಓದುವ ಅಭ್ಯಾಸವಿದ್ರೆ, ಧೂಮಪಾನ ಮಾಡುವ ಅಭ್ಯಾಸವಿದ್ರೆ ಅಂಥವರು ಕೂಡ ಅಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ನೀವು ಯಾವುದೇ ಕಾರಣಕ್ಕೂ ಪುಸ್ತಕ ಅಥವಾ ಸಿಗರೇಟ್ ನೊಂದಿಗೆ ಟಾಯ್ಲೆಟ್ ಗೆ ಹೋಗ್ಬೇಡಿ. ಅಲ್ಲಿ ವಿನಾಕಾರಣ ಆಲೋಚನೆ ಮಾಡ್ತಾ ಸಮಯ ಹಾಳು ಮಾಡ್ಬೇಡಿ. ನಿಮಗೆ ನೀವೇ ಟಾರ್ಗೆಟ್ ಹಾಕಿಕೊಂಡು ಹೊರಗೆ ಬರೋದು ರೂಢಿ ಮಾಡಿಕೊಳ್ಳಿ.