ಒತ್ತಡ, ನಿದ್ರಾಹೀನತೆ, ಜಡ ಜೀವನಶೈಲಿ, ಅತಿಯಾದ ಸಂಸ್ಕರಿತ ಆಹಾರ ಸೇವನೆ, ಕೈ ತೊಳೆಯದೇ ಊಟ, ಹಣ್ಣು-ತರಕಾರಿಗಳ ಕೊರತೆಗಳು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ದೀರ್ಘಕಾಲದ ಒತ್ತಡ ಕಾರ್ಟಿಸೋಲ್ ಮಟ್ಟ ಹೆಚ್ಚಿಸಿ, ಸೋಂಕುಗಳಿಗೆ ದಾರಿ ಮಾಡಿಕೊಡುತ್ತದೆ. ಸಾಕಷ್ಟು ನಿದ್ದೆ, ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ ಹಾಗೂ ನೈರ್ಮಲ್ಯ ರೋಗನಿರೋಧಕ ಶಕ್ತಿ ವೃದ್ಧಿಸಲು ಅತ್ಯಗತ್ಯ.

ಋತು ಬದಲಾಗ್ತಿದ್ದಂತೆ ನೀವು ಅನಾರೋಗ್ಯ (Illness)ಕ್ಕೆ ಒಳಗಾಗ್ತಿದ್ದೀರಿ, ಪ್ರತಿ ದಿನ ಸುಸ್ತು, ಮೈಕೈ ನೋವು, ನೆಗಡಿಯಂತ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಡ್ತಿದೆ ಅಂದ್ರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿದೆ ಎಂದೇ ಅರ್ಥ. ನಮಗೆಲ್ಲ ರೋಗ ನಿರೋಧಕ ಶಕ್ತಿಯ ಮಹತ್ವ ಗೊತ್ತಾಗಿದ್ದು ಕೊರೊನಾ ಟೈಂನಲ್ಲಿ. ದೇಹವನ್ನು ರೋಗದಿಂದ ದೂರ ಇಡ್ಬೇಕು ಅಂದ್ರೆ ದೇಹದಲ್ಲಿ ರೋಗದ ವಿರುದ್ಧ ಹೋರಾಡುವ ಶಕ್ತಿ ಅಗತ್ಯ. ಇದು ಒಂದು ದಿನದಲ್ಲಿ ಬರುವಂತಹದ್ದಲ್ಲ. ನಮ್ಮ ದೇಹ ರೋಗ ನಿರೋಧಕ ಶಕ್ತಿ (Immunity)ಯನ್ನು ಉತ್ಪಾದಿಸುತ್ತೆ. ಆದ್ರೆ ಅದಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನಾವು ನೀಡ್ಬೇಕು. ನಿತ್ಯ ನಾವು ಮಾಡುವ ಕೆಲ ಯಡವಟ್ಟು, ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತೆ. ಯಾವೆಲ್ಲ ಕೆಲ್ಸ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತೆ ಎಂಬ ಮಾಹಿತಿ ಇಲ್ಲಿದೆ. 

ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತೆ ಈ ಕೆಲ್ಸ : 

ಒತ್ತಡ : ಒತ್ತಡ ಮತ್ತು ನಿರಂತರ ಚಿಂತೆ, ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡಲು ನಮ್ಮ ದೇಹವನ್ನು ದುರ್ಬಲಗೊಳಿಸುತ್ತದೆ. 30 ನಿಮಿಷಗಳ ಆತಂಕ, ರೋಗನಿರೋಧಕವನ್ನು ಕಡಿಮೆ ಮಾಡುತ್ತೆ. ದೀರ್ಘಕಾಲದ ಒತ್ತಡ ದೇಹವನ್ನು ಹಾನಿಗೊಳಿಸುತ್ತೆ. ವಿವಿಧ ಸೋಂಕುಗಳಿಗೆ ನಮ್ಮ ದೇಹ ಗುರಿಯಾಗುವಂತೆ ಮಾಡುತ್ತೆ. ಸಣ್ಣಪುಟ್ಟ ವಿಷ್ಯಕ್ಕೂ ನೀವು ಟೆನ್ಷನ್ ಮಾಡಿಕೊಳ್ತಿದ್ದು, ಅದು ನಿಮ್ಮ ದೈನಂದಿನ ಜೀವನಕ್ಕೆ ತೊಂದ್ರೆ ನೀಡ್ತಿದೆ ಎಂದಾದ್ರೆ ವೈದ್ಯರನ್ನು ಸಂಪರ್ಕಿಸಿ. ಶಾರ್ಟ್ ಟೈಂ ಸ್ಟ್ರೆಸ್ ಇಮ್ಯೂನಿಟಿಯನ್ನು ಬೂಸ್ಟ್ ಮಾಡುತ್ತೆ. ಅದೇ ದೀರ್ಘಕಾಲೀನ ಸ್ಟ್ರೆಸ್, ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಕಾರ್ಟಿಸೋಲ್ ಮಟ್ಟವನ್ನು ಇದು ಹೆಚ್ಚಿಸುತ್ತದೆ ಎಂದು ವರದಿ ಹೇಳಿದೆ. 

ತಡರಾತ್ರಿಯವರೆಗೆ ಎಚ್ಚರವಾಗಿರುವುದು : ಮಧ್ಯರಾತ್ರಿಯಾದ್ರೂ ಜನರು ಹಾಸಿಗೆಗೆ ಹೋಗ್ತಿಲ್ಲ. ಕೆಲ್ಸ, ಟಿವಿ, ಮೊಬೈಲ್ ಅಂತ ಸಮಯ ಕಳಿತಿದ್ದಾರೆ. ಇದು ನಮ್ಮ ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುತ್ತೆ. ನಿದ್ರೆಯ ಕೊರತೆಯು ವೈರಲ್ ಅಥವಾ ಸೂಕ್ಷ್ಮಜೀವಿಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತೆ. ಸೋಂಕುಗಳ ವಿರುದ್ಧ ಹೋರಾಡಲು ಅಗತ್ಯವಿರುವ ಜೀವಕೋಶಗಳು ಮತ್ತು ಪ್ರೋಟೀನ್ಗಳನ್ನು ಉತ್ಪಾದಿಸುವ ಸಾಮರ್ಥ್ಯ ಇದ್ರಿಂದ ಕಡಿಮೆ ಆಗುತ್ತದೆ. ರೋಗನಿರೋಧಕ ವ್ಯವಸ್ಥೆಗೆ ಸಹಾಯ ಮಾಡುವ ನಿರ್ದಿಷ್ಟ ಪ್ರೋಟೀನ್ಗಳನ್ನು ಸೈಟೊಕಿನ್ಗಳು ಎಂದು ಕರೆಯಲಾಗುತ್ತದೆ. ಇವು ನಿದ್ರೆಯ ಸಮಯದಲ್ಲಿ ಮಾತ್ರ ಉತ್ಪತ್ತಿಯಾಗುತ್ತವೆ. 

ಕುಳಿತಲ್ಲೇ ಕೆಲ್ಸ : ಒಂದೇ ಕಡೆ ಬಹಳ ಹೊತ್ತು ಕುಳಿತುಕೊಳ್ಳೋದು ಉತ್ತಮವಲ್ಲ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಜಡ ಜೀವನಶೈಲಿ ನಮ್ಮನ್ನು ರೋಗಕ್ಕೆ ನೂಕುತ್ತದೆ. ನಿಯಮಿತ ವ್ಯಾಯಾಮದ ಜೊತೆ ಕೆಲ್ಸದ ಮಧ್ಯೆ ಬ್ರೇಕ್ ಅನಿವಾರ್ಯ.

ಅಲ್ಟ್ರಾ ಸಂಸ್ಕರಿತ ಆಹಾರ : ಅಪರೂಪಕ್ಕೊಮ್ಮೆ ಫಾಸ್ಟ್ ಫುಡ್ ಸೇವನೆ ಮಾಡೋದು ಆರೋಗ್ಯಕ್ಕೆ ಹಾನಿಕರವಲ್ಲ. ಆದ್ರೆ ಆಗಾಗ ಫಾಸ್ಟ್ ಫುಡ್ ಸೇವನೆ ಮಾಡೋದು ಅಪಾಯಕಾರಿ. ಪ್ಯಾಕ್ ಮಾಡಿದ ಆಹಾರ, ಸಕ್ಕರೆಯುಕ್ತ ಪಾನೀಯ, ರೆಡಿ ಟು ಈಟ್ ಆಹಾರ ಸೇವನೆ ಮಾಡುವುದು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. 

ಕೈ ತೊಳೆಯದೆ ಆಹಾರ ಸೇವನೆ : ಕೈನಲ್ಲಿ ಕೊಳೆಯಿಲ್ಲ, ಎಲ್ಲೂ ಟಚ್ ಮಾಡಿಲ್ಲ ಎನ್ನುವ ಸಬೂಬು ನೀಡಿ ಅನೇಕರು ಹ್ಯಾಂಡ್ ವಾಶ್ ಮಾಡದೆ ಆಹಾರ ಸೇವನೆ ಮಾಡ್ತಾರೆ. ಇದು ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಕೈನಲ್ಲಿಯೇ ಅತಿ ಹೆಚ್ಚು ಬ್ಯಾಕ್ಟೀರಿಯಾ ಇದ್ದು, ಅದು ಹೊಟ್ಟೆ ಸೇರಿ, ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. 

ಹಣ್ಣು – ತರಕಾರಿ ಕೊರತೆ : ತಾಜಾ ತರಕಾರಿಗಳು ಮತ್ತು ಹಣ್ಣು ನಿಮ್ಮ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಅಗತ್ಯವಿರುವ ಹೆಚ್ಚಿನ ಬಿಳಿ ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಅವು ಸತು, ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ಸಿ ಮತ್ತು ಇ, ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ನೀವು ಇವುಗಳಿಂದ ದೂರವಿದ್ರೆ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ.