ಮಾನಸಿಕ ಅಸ್ವಸ್ಥತೆಯಾದ ಬೈಪೋಲಾರ್ ಡಿಸಾರ್ಡರ್, ಉನ್ಮಾದ ಮತ್ತು ಖಿನ್ನತೆಯ ಏರಿಳಿತದ ಮನಸ್ಥಿತಿಗೆ ಕಾರಣವಾಗುತ್ತದೆ. ಉನ್ಮಾದದಲ್ಲಿ ಅತಿಯಾದ ಉತ್ಸಾಹ, ಖರ್ಚು, ನಿದ್ರಾಹೀನತೆ ಕಂಡುಬಂದರೆ, ಖಿನ್ನತೆಯಲ್ಲಿ ದುಃಖ, ಆಯಾಸ, ಆತ್ಮವಿಶ್ವಾಸ ಕೊರತೆ ಕಾಡುತ್ತದೆ. ಚಿಕಿತ್ಸೆ ಲಭ್ಯವಿದ್ದು, ಸಕಾಲಿಕ ಔಷಧಿ, ನಿದ್ರೆ, ಮಾದಕ ವಸ್ತುಗಳಿಂದ ದೂರವಿರುವುದು ಮುಖ್ಯ. ಲಕ್ಷಣಗಳು ಗಮನಕ್ಕೆ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ದೈಹಿಕ ರೋಗ ಮಾತ್ರ ಅನಾರೋಗ್ಯವಲ್ಲ. ನಮ್ಮನ್ನು ಸಂಪೂರ್ಣವಾಗಿ ನಿಯಂತ್ರಿಸೋದು ಮನಸ್ಸು, ಅದು ಗಟ್ಟಿಯಾಗಿರ್ಬೇಕು, ಆರೋಗ್ಯವಾಗಿರಬೇಕು. ಮನಸ್ಸು ಹಾಳಾದ್ರೆ ನಾನಾ ಮಾನಸಿಕ ರೋಗ (Mental illness) ನಮ್ಮನ್ನು ಆವರಿಸುತ್ತದೆ. ಆದ್ರೆ ಅನೇಕರು ಮಾನಸಿಕ ಖಾಯಿಲೆಯನ್ನು ಖಾಯಿಲೆ ಅಂತ ಪರಿಗಣಿಸೋದಿಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯೋದಿಲ್ಲ. ಈ ಎಲ್ಲ ಕಾರಣಕ್ಕೆ ಸಮಸ್ಯೆ ಉಲ್ಬಣಿಸುತ್ತದೆ. ಈಗ ದೆಹಲಿಯ ಏಮ್ಸ್ ಬೈಪೋಲಾರ್ ಡಿಸಾರ್ಡರ್ (Bipolar disorder) ಬಗ್ಗೆ ಜನರನ್ನು ಜಾಗೃತಿಗೊಳಿಸುವ ಪ್ರಯತ್ನ ನಡೆಸಿದೆ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಡಾ. ಮಮತಾ ಜನರಿಗೆ ವಿನಂತಿ ಮಾಡಿದ್ದಾರೆ.
ಬೈಪೋಲಾರ್ ಡಿಸಾರ್ಡರ್ ಎಂದರೇನು? : ಬೈಪೋಲಾರ್ ಡಿಸಾರ್ಡರ್ ಮಾನಸಿಕ ಅಸ್ವಸ್ಥತೆ. ಮನಸ್ಥಿತಿ, ಭಾವನೆಗಳ ಬದಲಾವಣೆ. ಇದ್ರಲ್ಲಿ ಉನ್ಮಾದ ಮತ್ತು ಖಿನ್ನತೆ ಎರಡನ್ನೂ ಕಾಣ್ಮಬಹುದು. ಒಂದು ಸಮಯದಲ್ಲಿ ನೀವು ತುಂಬಾ ಉತ್ಸುಕರಾಗಿರ್ತೀತಿ, ಸಂತೋಷವಾಗಿರ್ತೀರಿ ಮತ್ತೆ ಕೆಲ ಸಮಯ, ಕಿರಿಕಿರಿ ಅಸಮಾಧಾನ ಅನುಭವಿಸ್ತೀರಿ.
ಉನ್ಮಾದ ಮತ್ತು ಖಿನ್ನತೆ ನಡುವಿನ ವ್ಯತ್ಯಾಸವೇನು? : ಉನ್ಮಾದದ ಲಕ್ಷಣಗಳ ಬಗ್ಗೆ AIIMS ವೈದ್ಯರು ಮಾಹಿತಿ ನೀಡಿದ್ದಾರೆ. ಬಡಾಯಿ ಕೊಚ್ಚಿಕೊಳ್ಳುವುದು, ವ್ಯರ್ಥ ಖರ್ಚು ಮಾಡುವುದು, ಅಸಂಬದ್ಧ ಯೋಜನೆಗಳನ್ನು ರೂಪಿಸುವುದು, ಕಡಿಮೆ ನಿದ್ರೆ ಮಾಡುವುದು ಉನ್ಮಾದದ ಲಕ್ಷಣವಾಗಿದೆ. ಸಾಮಾನ್ಯಕ್ಕಿಂತ ಹೆಚ್ಚು ಕ್ರಿಯಾಶೀಲ, ಶಕ್ತಿಯುತ ಅಥವಾ ಉತ್ಸಾಹಭರಿತವಾಗಿ ವರ್ತಿಸೋದು. ಅತಿಯಾದ ಆತ್ಮವಿಶ್ವಾಸದ ಭಾವನೆ.,ವೇಗವಾಗಿ ಮಾತನಾಡುವುದು, ಯಾವುದೆ ವಿಷಯವನ್ನು ಆಳವಾಗಿ ಆಲೋಚನೆ ಮಾಡದೆ ತರಾತುರಿಯಲ್ಲಿ ನಿರ್ಧಾರ ತೆತಗೆದುಕೊಳ್ಳುವುದು, ಸುಲಭವಾಗಿ ಗಮನ ಬೇರೆಡೆ ಸೆಳೆಯುವುದು. ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಇದ್ರ ಲಕ್ಷಣ.
ಆದ್ರೆ ಖಿನ್ನತೆ ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಖಿನ್ನತೆಗೆ ಒಳಗಾಗುವ ವ್ಯಕ್ತಿ ದುಃಖ, ಸುಸ್ತು ಅನುಭವಿಸುತ್ತಾನೆ. ಹಸಿವು ಕಡಿಮೆಯಾಗುತ್ತದೆ. ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ. ಕೆಲವರು ಆತ್ಮಹತ್ಯೆಯ ಬಗ್ಗೆಯೂ ಯೋಚಿಸುತ್ತಾರೆ. ಖಿನ್ನತೆಗೆ ಒಳಗಾದ ಮಕ್ಕಳು ಮತ್ತು ಹದಿಹರೆಯದವರು ಕಿರಿಕಿರಿ, ಕೋಪ ತೋರಿಸ್ತಾರೆ. ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಆಹಾರ ಸೇವನೆಯಲ್ಲೂ ವ್ಯತ್ಯಾಸವಾಗುತ್ತದೆ. ಕೆಲವರು ಅತಿಯಾಗಿ ತಿಂದ್ರೆ ಮತ್ತೆ ಕೆಲವರು ಕಡಿಮೆ ಸೇವನೆ ಮಾಡ್ತಾರೆ. ಮಕ್ಕಳು ನಿರೀಕ್ಷಿಸಿದಷ್ಟು ತೂಕ ಹೆಚ್ಚಾಗದಿದ್ದರೆ, ಅದು ಖಿನ್ನತೆಯ ಸಂಕೇತವಾಗಿರಬಹುದು. ಚಡಪಡಿಕೆ ನಿಧಾನವಾದ ವರ್ತನೆ, ತಮ್ಮನ್ನು ತಾವು ನಿಷ್ಪ್ರಯೋಜಕನೆಂದು ಭಾವಿಸುವುದು, ಅತಿಯಾದ ತಪ್ಪಿತಸ್ಥ ಭಾವನೆ ಇದ್ರ ಲಕ್ಷಣವಾಗಿದೆ.
ಬೈಪೋಲಾರ್ ಡಿಸಾರ್ಡರ್ ಗೆ ಚಿಕಿತ್ಸೆ ಏನು? : ತಜ್ಞರ ಪ್ರಕಾರ, ಸದ್ಯ ಸುಮಾರು ಶೇಕಡಾ ಎರಡು ರಷ್ಟು ಜನರು ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿದ್ದಾರೆ. ಇದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಔಷಧಿ ಲಭ್ಯವಿದೆ. ಆದ್ರೆ ಸರಿಯಾದ ಸಮಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವುದು ಮುಖ್ಯ. ರಾತ್ರಿ 8 ಗಂಟೆ ಸರಿಯಾಗಿ ನಿದ್ರೆ ಮಾಡ್ಬೇಕು. ಯಾವುದೇ ಮಾದಕ ವಸ್ತು ಸೇವಿಸಬಾರದು. ನಿಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ವಿಶೇಷ ಗಮನ ನೀಡುವುದು ಮುಖ್ಯ ಎಂದು ಏಮ್ಸ್ ವೈದ್ಯರು ಹೇಳಿದ್ದಾರೆ.
ಬೈಪೋಲಾರ್ ಡಿಸಾರ್ಡರ್ ಯಾವುದೇ ವಯಸ್ಸಿನಲ್ಲಿ ಶುರು ಆಗ್ಬಹುದು. ಆದ್ರೆ ಇದು ಸಾಮಾನ್ಯವಾಗಿ ಹದಿಹರೆಯದಲ್ಲಿ ಹೆಚ್ಚಾಗಿ ಕಾಡುತ್ತದೆ. ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಮತ್ತು ಕಾಲಾನಂತರದಲ್ಲಿ ರೋಗಲಕ್ಷಣಗಳು ಬದಲಾಗಬಹುದು. ನಿಮಗೆ ಮೇಲಿನ ಎರಡೂ ಲಕ್ಷಣ ಒಂದೇ ದಿನದಲ್ಲಿ ಕಾಣಿಸೋದಿಲ್ಲ. ಆಗಾಗ ಮನಸ್ಥಿತಿ ಬದಲಾಗೋದನ್ನು ನೀವು ಗಮನಿಸಬಹುದು. ಮನಸ್ಸು ಸಂಪೂರ್ಣ ಹದಗೆಟ್ಟಿದೆ ಎಂಬುದು ನಿಮ್ಮ ಅರಿವಿಗೆ ಬಂದ್ರೆ ಅಥವಾ ನಿಮ್ಮ ಆಪ್ತರಲ್ಲಿ ಈ ಲಕ್ಷಣ ಕಾಣಿಸಿಕೊಳ್ತಿದ್ದು, ಅವರು ಆತ್ಮಹತ್ಯೆ ಬಗ್ಗೆ ಆಲೋಚನೆ ಮಾಡ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬಂದ್ರೆ ತಕ್ಷಣ ಅವರನ್ನು ವೈದ್ಯರ ಬಳಿ ಕರೆತನ್ನಿ ಎಂದು ತಜ್ಞರು ಹೇಳಿದ್ದಾರೆ.


