Asianet Suvarna News Asianet Suvarna News

ಪ್ರತಿ ಸಿಗರೇಟ್ ಮೇಲೂ ಎಚ್ಚರಿಕೆಯ ಸಂದೇಶ ಮುದ್ರಿಸಲು ಕೆನಡಾ ಸರ್ಕಾರ ನಿರ್ಧಾರ

ಧೂಮಪಾನ ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹೀಗಿದ್ರೂ ಜನ್ರು ಸಿಗರೇಟ್ ಸೇದೋದನ್ನು ಮಾತ್ರ ಬಿಡಲ್ಲ. ಪ್ಯಾಕೆಟ್‌ನಲ್ಲಿ ಸಿಗರೇಟ್‌ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ವಾರ್ನಿಂಗ್ ಕೊಟ್ಟಿದ್ರೂ ಕಡೆಗಣಿಸ್ತಾರೆ. ಹೀಗಿರುವಾಗ ಕೆನಡಾ ಸರ್ಕಾರ ಪ್ಯಾಕೆಟ್ ಮೇಲಲ್ಲ, ಪ್ರತಿ ಸಿಗರೇಟ್ ಮೇಲೂ ಎಚ್ಚರಿಕೆಯ ಸಂದೇಶ ಮುದ್ರಿಸಲು ತೀರ್ಮಾನಿಸಿದೆ.

Canada to become 1st country to put health warnings on individual cigarettes Vin
Author
First Published Jun 1, 2023, 12:04 PM IST

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಹೀಗಂತ ಪ್ಯಾಕೆಟ್ ಮೇಲೆಯೇ ಬರೆದಿರ್ತಾರೆ. ಆದ್ರೂ ಜನರು ಸಿಗರೇಟ್‌ ಸೇದೋದನ್ನು ಮಾತ್ರ ಬಿಡೋದಿಲ್ಲ. ತಂಬಾಕು ಅಧಿಕ ಸೇವನೆಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗಿದ್ರೂ ದಿನ ದಿನಕ್ಕೂ ಧೂಮಪಾನಿಗಳ ಸಂಖ್ಯೆ ಹೆಚ್ಚಾಗ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಈ ಚಟಕ್ಕೆ ಬೀಳುವ ಜನರು ನಂತ್ರ ಚಟ ಬಿಡಲು ಸಾಧ್ಯವಾಗದೆ ತೊಂದರೆ ಅನುಭವಿಸ್ತಾರೆ. ಸಿಗರೇಟ್ ಸೇವನೆಯಿಂದ ಸಣ್ಣ ವಯಸ್ಸಿನಲ್ಲಿಯೇ ಸಾವು ತಂದುಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ. ಸಿಗರೇಟ್ ಪ್ಯಾಕೆಟ್ ಮೇಲೆಯೇ, ವಾರ್ನಿಂಗ್ ಮೆಸೇಜ್ ಹಾಕಿದ್ರೂ ಜನ್ರು ಸ್ಟೈಲೋ, ಚಟಾನೋ ಸ್ಮೋಕಿಂಗ್ ಅಭ್ಯಾಸವನ್ನು ಮಾತ್ರ ಬಿಡೋದಿಲ್ಲ. ಹೀಗಾಗಿ ಕೆನಡಾ ಸರ್ಕಾರ ಒಂದು ಹೊಸ ನಿರ್ಧಾರ ತೆಗೆದುಕೊಂಡಿದೆ.

ಹಲವಾರು ರಾಷ್ಟ್ರಗಳಲ್ಲಿ ಸಿಗರೇಟ್‌ ಸೇವನೆಯಿಂದ ಆರೋಗ್ಯದ (Health) ಮೇಲಾಗುವ ಪರಿಣಾಮಗಳ ಕುರಿತಾದ ಜಾಗೃತಿ (Awareness) ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ.  ಭಾರತದಲ್ಲೂ ಸಿಗರೇಟ್ ಪ್ಯಾಕ್‌ಗಳ ಮೇಲೆ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶಗಳನ್ನು ನಮೂದಿಸಿರಲಾಗಿರುತ್ತದೆ. ಈ ವಿಚಾರದಲ್ಲಿ ಕೆನಡಾ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಸಿಗರೇಟ್ ಸೇದುವುದರಿಂದಾಗುವ ಹಾನಿಯ ಬಗ್ಗೆ ಹೆಚ್ಚು ಜನ ಜಾಗೃತಿ ಮೂಡಿಸಲು ಕೆನಡಾದಲ್ಲಿ ಪ್ರತಿ ಸಿಗರೇಟಿನ ಮೇಲೆ ಲಿಖಿತ ವಾರ್ನಿಂಗ್ ಮುದ್ರಿಸಲಾಗುತ್ತಿದೆ. ಇದು ಸಿಗರೇಟಿನ ಮೇಲೆ ಲಿಖಿತ ಎಚ್ಚರಿಕೆ (Warning) ಪರಿಚಯಿಸುವ ಮೊದಲ ರಾಷ್ಟ್ರವಾಗಿದೆ.

ಶೀಘ್ರದಲ್ಲೇ ಬಿಡಿ ಸಿಗರೇಟ್‌ ಸೇಲ್‌ ನಿಷೇಧ..! ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿ ಸಲಹೆ

ಸಿಗರೇಟಿನ ಮೇಲೆ ಎಚ್ಚರಿಕೆ ಸಂದೇಶ ಮುದ್ರಿಸುತ್ತಿರುವ ಮೊದಲ ದೇಶ ಕೆನಡಾ
ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆಯ ಸಂದೇಶವನ್ನು ಸಾಮಾನ್ಯವಾಗಿ ಸಿಗರೇಟಿನ ಪ್ಯಾಕಿನ ಮೇಲೆ ಮುದ್ರಿಸಲಾಗುತ್ತದೆ. ಆದರೆ ಪ್ರತೀ ಸಿಗರೇಟಿನ ಮೇಲೆ ಈ ಸಂದೇಶ ಮುದ್ರಿಸುವ ಮೂಲಕ ಈ ರೀತಿಯ ಕ್ರಮ ಕೈಗೊಂಡ ಮೊದಲ ದೇಶವಾಗಿ ಕೆನಡಾ ಗುರುತಿಸಿಕೊಂಡಿದೆ. ಸಿಗರೇಟ್‌ ಪ್ಯಾಕ್‌ನ ಸುತ್ತಲೂ, ಸಿಗರೇಟ್‌ಗಳಲ್ಲಿಯೂ ತಂಬಾಕು ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆಗಳ (Health problem) ಚಿತ್ರಗಳು, ಸಂದೇಶಗಳನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ.

ಕೆನಡಾ ಸರ್ಕಾರ, ಪ್ರತಿಯೊಂದು ಸಿಗರೇಟಿನ ಮೇಲೂ 'ಸಿಗರೇಟು ಸೇವನೆ ನಿಮ್ಮನ್ನು ಕೊಲ್ಲುತ್ತದೆ' ಎಂಬ ವಾಕ್ಯವನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ. ಸಿಗರೇಟು ಪ್ಯಾಕ್‌ನ ಮುಂಭಾಗದಲ್ಲಿ ಅಸ್ವಸ್ಥ  ಶ್ವಾಸಕೋಶದ (Lungs) ಚಿತ್ರ ಹಾಕಿ, ಸಿಗರೇಟ್‌ನಿಂದ ಶ್ವಾಸಕೋಶಕ್ಕೇನು ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ (Information) ಹಾಕಬೇಕೆಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಸ್ಮೋಕ್ ಮಾಡ್ಬೇಕಿಲ್ಲ, ಸಿಗರೇಟ್‌ ಸೇದೋರ ಬಳಿ ನಿಂತ್ರೂ ಹೊಗೆ ಹಾಕಿಸ್ಕೊಳ್ಳೋ ಚಾನ್ಸಸ್ ಹೆಚ್ಚು

2035ರ ವೇಳೆಗೆ ತಂಬಾಕು ಬಳಕೆ ಶೇಕಡಾ 5ಕ್ಕಿಂತ ಕಡಿಮೆಗೊಳಿಸುವ ಗುರಿ ಹೊಂದಿರುವ ಕೆನಡಾ
'ತಂಬಾಕು ಹೊಗೆ ಮಕ್ಕಳಿಗೆ ಹಾನಿ ಮಾಡುತ್ತದೆ. ಸಿಗರೇಟ್‌ಗಳು ಲ್ಯುಕೇಮಿಯಾವನ್ನು ಉಂಟುಮಾಡುತ್ತವೆ. ಸಿಗರೇಟ್‌ನ ಪ್ರತಿ ಪಫ್‌ನಲ್ಲಿ ವಿಷವಿದೆ' ಇಂತಹ ಆರೋಗ್ಯ ಎಚ್ಚರಿಕೆಗಳು ಕೆನಡಾದಲ್ಲಿ ಮಾರಾಟವಾಗುವ ಪ್ರತಿಯೊಂದು ಸಿಗರೇಟಿನ ಮೇಲೆ ಶೀಘ್ರದಲ್ಲೇ ಮುದ್ರಿಸಲ್ಪಡುತ್ತವೆ' ಎಂದು ಕೆನಡಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಲೇಬಲ್‌ಗಳನ್ನು ಟಿಪ್ಪಿಂಗ್ ಪೇಪರ್‌ನಲ್ಲಿ ಮುದ್ರಿಸಲಾಗುತ್ತದೆ, ಇದು ಫಿಲ್ಟರ್ ವಿಭಾಗದ ಹೊರಭಾಗದ ಕಾಗದವಾಗಿದೆ. ಪ್ರತ್ಯೇಕ ಸಿಗರೇಟ್‌ಗಳು, ಚಿಕ್ಕ ಸಿಗಾರ್‌ಗಳು, ಟ್ಯೂಬ್‌ಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಜೊತೆಗೆ. ಎಚ್ಚರಿಕೆಗಳನ್ನು ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯಲ್ಲಿ ಬರೆಯಲಾಗುತ್ತದೆ ಎಂದು ತಿಳಿದುಬಂದಿದೆ.

ಹೊಸ ನಿಯಮಗಳು ಆಗಸ್ಟ್ 1ರಿಂದ ಜಾರಿಗೆ ಬರುತ್ತವೆ, ಆದರೆ ಇದನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತಂಬಾಕು ಉತ್ಪನ್ನ ಪ್ಯಾಕೇಜ್‌ಗಳನ್ನು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳು ಏಪ್ರಿಲ್ 2024 ರ ಅಂತ್ಯದ ವೇಳೆಗೆ ಹೊಸ ಎಚ್ಚರಿಕೆಗಳುಳ್ಳ ಪ್ಯಾಕೆಟ್‌ಗಳನ್ನು ಹೊಂದಿರಬೇಕು. ದೊಡ್ಡ ಗಾತ್ರದ ಸಿಗರೇಟ್‌ಗಳು ಜುಲೈ 2024 ರ ಅಂತ್ಯದ ವೇಳೆಗೆ ಇಂಥಾ ವಾರ್ನಿಂಗ್ ಮೆಸೇಜ್ ಒಳಗೊಂಡಿರಬೇಕು. ಏಪ್ರಿಲ್ 2025ರ ಅಂತ್ಯದ ವೇಳೆಗೆ ಸಾಮಾನ್ಯ ಗಾತ್ರದ ಸಿಗರೇಟ್ ಮತ್ತು ಇತರ ಉತ್ಪನ್ನಗಳನ್ನು ಇದು ಅಳವಡಿಸಿರಬೇಕು ಎಂದು ತಿಳಿಸಲಾಗಿದೆ. ಕೆನಡಾ ಸರ್ಕಾರ, 2035ರ ವೇಳೆಗೆ ತಂಬಾಕು ಬಳಕೆಯನ್ನು ಶೇಕಡಾ 5ಕ್ಕಿಂತ ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.

Follow Us:
Download App:
  • android
  • ios