Garlic for Cancer: ಬೆಳ್ಳುಳ್ಳಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿರುವ ವಸ್ತುಗಳಲ್ಲಿ ಒಂದಾಗಿದೆ, ಆದರೆ ಇದು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಂದಲೂ ರಕ್ಷಿಸಬಹುದೇ? ಈ ಹೇಳಿಕೆಯ ಬಗ್ಗೆ ತಜ್ಞರ ಅಭಿಪ್ರಾಯಗಳು ಮತ್ತು ವೈಜ್ಞಾನಿಕ ಸಂಶೋಧನೆಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯಿರಿ.

ಬೆಳ್ಳುಳ್ಳಿ ತಿಂದರೆ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತಾ?

ಬೆಳ್ಳುಳ್ಳಿ ಭಾರತೀಯ ಅಡುಗೆಯ ಅವಿಭಾಜ್ಯ ಅಂಗ. ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂಬ ನಂಬಿಕೆ ಬಹಳ ವರ್ಷಗಳಿಂದ ಇದೆ. ವಿಶೇಷವಾಗಿ, ಬೆಳ್ಳುಳ್ಳಿ ಸೇವಿಸಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತದೆ. ಆದರೆ, ಈ ಹೇಳಿಕೆಗೆ ವೈಜ್ಞಾನಿಕ ಆಧಾರವಿದೆಯೇ? ಇತ್ತೀಚಿನ ಸಂಶೋಧನೆಗಳು ಮತ್ತು ತಜ್ಞರ ಅಭಿಪ್ರಾಯಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ.

ಬೆಳ್ಳುಳ್ಳಿಯಲ್ಲಿ ಏನಿದೆ ವಿಶೇಷ?

ಬೆಳ್ಳುಳ್ಳಿಯಲ್ಲಿ ಅಲಿಸಿನ್ (Allicin) ಸೇರಿದಂತೆ ಹಲವು ಸಲ್ಫರ್ ಸಂಯುಕ್ತಗಳು ಇವೆ. ಇವು ದೇಹದಲ್ಲಿ ಉರಿಯೂತವನ್ನು (Inflammation) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತದೆ. ಹಾನಿಗೊಳಗಾದ ಜೀವಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಹಾಗೂ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸಂಶೋಧನೆಯಲ್ಲಿ ಈ ಸಂಯುಕ್ತಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಲಕ್ಷಣ ತೋರಿಸಿವೆ.

ಹಾಗಾದರೆ ಬೆಳ್ಳುಳ್ಳಿ ಕ್ಯಾನ್ಸರ್ ತಡೆಯುತ್ತದೆಯೇ?

ಮಾನವರ ಮೇಲೆ ನಡೆದ ದೊಡ್ಡ ಪ್ರಮಾಣದ ಅಧ್ಯಯನಗಳು ಮತ್ತು ಮೆಟಾ-ವಿಶ್ಲೇಷಣೆಗಳ ಪ್ರಕಾರ, ಬೆಳ್ಳುಳ್ಳಿ ಸೇವನೆಯಿಂದ ಕ್ಯಾನ್ಸರ್ ಅಪಾಯ ಖಚಿತವಾಗಿ ಕಡಿಮೆಯಾಗುತ್ತದೆ ಎಂದು ಹೇಳಲು ಸಾಕಷ್ಟು ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಕೆಲವು ಅಧ್ಯಯನಗಳು ಹೊಟ್ಟೆ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಅಪಾಯದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಮಾಡಿದರೂ , ಇತರ ಅನೇಕ ಅಧ್ಯಯನಗಳಲ್ಲಿ ಹೆಚ್ಚಿನ ಪ್ರಯೋಜನ ಕಂಡು ಬಂದಿಲ್ಲ.

ತಜ್ಞರ ಅಭಿಪ್ರಾಯ ಏನು?

ಪೌಷ್ಟಿಕಾಂಶ ಮತ್ತು ಕ್ಯಾನ್ಸರ್ ಸಂಶೋಧನಾ ತಜ್ಞರ ಅಭಿಪ್ರಾಯದ ಪ್ರಕಾರ ಬೆಳ್ಳುಳ್ಳಿಯನ್ನು "ಕ್ಯಾನ್ಸರ್ ತಡೆಯುವ ಆಹಾರ" ಎಂದು ಘೋಷಿಸಲು ಸಾಕಷ್ಟು ದೃಢವಾದ ಅಧ್ಯಯನಗಳಿಲ್ಲ. ಪ್ರಯೋಗಾಲಯದಲ್ಲಿ ನಡೆದ ಫಲಿತಾಂಶಗಳು ಮಾನವರಲ್ಲೂ ಅದೇ ರೀತಿ ಕೆಲಸ ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆರೋಗ್ಯಕರ ಆಹಾರದ ಭಾಗವಾಗಿರಬಹುದು, ಆದರೆ ಕ್ಯಾನ್ಸರ್‌ನ್ನು ತಡೆಯುವ ಔಷಧಿಯಂತೆ ಪರಿಗಣಿಸಬಾರದು ಎಂದು ತಿಳಿಸಿದ್ದಾರೆ.

ಯಾವ ರೀತಿಯಲ್ಲಿ ಬೆಳ್ಳುಳ್ಳಿ ಸೇವಿಸಬಹುದು?

ತಜ್ಞರು ಬೆಳ್ಳುಳ್ಳಿಯನ್ನು ಸಮತೋಲಿತ ಆಹಾರದ ಭಾಗವಾಗಿ ಬಳಸಲು ಸಲಹೆ ನೀಡುತ್ತಾರೆ. ಅಡುಗೆಯಲ್ಲಿ ತಾಜಾ ಬೆಳ್ಳುಳ್ಳಿ ಬಳಸಲು, ಹಾಗೂ ಅತಿಯಾಗಿ ಬೆಳ್ಳುಳ್ಳಿ ಸೇವಿಸುವುದನ್ನು ತಪ್ಪಿಸಲು ಸಲಹೆ ನೀಡುತ್ತಾರೆ.

ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಏನು ಮಾಡಬೇಕು?

ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಮುಖ್ಯವಾಗಿ ವೈದ್ಯರು ನೆರವು ಪಡೆಯುವುದು ತುಂಬಾನೆ ಮುಖ್ಯ. ಇದಲ್ಲದೇ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸುವುದು, ನಿಯಮಿತ ವ್ಯಾಯಾಮ ಮಾಡುವುದು, ಧೂಮಪಾನ ಮತ್ತು ತಂಬಾಕು ಸೇವನೆ ಮಾಡದೆ ಇರುವುದು, ಮದ್ಯಪಾನ ಮಾಡದೇ ಇರುವ ಮೂಲಕ ಹಾಗೂ ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದರ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಜಾಗರೂಕರಾಗಿರಬೇಕು ಎಂದು ತಜ್ಞರು ಸೂಚಿಸುತ್ತಾರೆ.