World Brain Tumor Day: ವಿಪರೀತ ಮೊಬೈಲ್ ಬಳಕೆಯಿಂದ ಬ್ರೈನ್ ಟ್ಯೂಮರ್ ಬರಬಹುದು ಎಚ್ಚರ!
ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ ಅನ್ನೋದು ಹಲವರಿಗೆ ತಿಳಿದಿರೋ ವಿಷ್ಯ. ಇದು ಕಣ್ಣಿನ ದೃಷ್ಟಿಗೆ, ಸ್ನಾಯುಗಳಿಗೆ ಹೀಗೆ ಎಲ್ಲಾ ರೀತಿಯಲ್ಲೂ ಒಳ್ಳೆಯದಲ್ಲ. ಹಾಗೆಯೇ ವಿಪರೀತ ಮೊಬೈಲ್ ಬಳಕೆಯಿಂದ ಬ್ರೈನ್ ಟ್ಯೂಮರ್ ಬಡುತ್ತೆ ಅನ್ನೋದು ನಿಮಗೆ ಗೊತ್ತಿದ್ಯಾ?
ಪ್ರತಿ ವರ್ಷ ಮೇ 8ನ್ನು ವಿಶ್ವ ಬ್ರೈನ್ ಟ್ಯೂಮರ್ ಡೇ (World brain tumor day) ಎಂದು ಆಚರಿಸಲಾಗುತ್ತದೆ. ಬ್ರೈನ್ ಟ್ಯೂಮರ್ ಗಳು ಮೆದುಳಿನಲ್ಲಿ ಅಥವಾ ಸುತ್ತಮುತ್ತಲಿನ ಜೀವಕೋಶಗಳಲ್ಲಿ ಅಸಹಜ ಜೀವಕೋಶಗಳ ಬೆಳವಣಿಗೆಯಾಗಿವೆ. ಅವು ಸೌಮ್ಯ(ಕ್ಯಾನ್ಸರ್ ರಹಿತ) ಅಥವಾ ಉಗ್ರ (ಕ್ಯಾನ್ಸರ್ ಉಂಟು ಮಾಡಬಲ್ಲ) ವಾಗಿರಬಹುದು. ಮೆದುಳಿನ ಟ್ಯೂಮರ್ ಗಳ ನಿರ್ದಿಷ್ಟ ಕಾರಣಗಳು ಬಹಳಷ್ಟು ವೇಳೆ ಅಗೋಚರವಾಗಿರುತ್ತವೆ, ರೇಷಿಯೇಷನ್ ಗೆ ಒಳಗಾಗುವುದು, ಕೌಟುಂಬಿಕ ಇತಿಹಾಸ ಮತ್ತು ವಂಶವಾಹಿ ರೋಗಲಕ್ಷಣಗಳು (Symptoms) ಅವುಗಳ ಬೆಳವಣಿಗೆಯನ್ನು ಹೆಚ್ಚಿಸಬಹುದು.
ಮೆದುಳಿನ ಕೋಶಗಳು ಇದ್ದಕ್ಕಿದ್ದಂತೆ ಅಸಹಜ ಬೆಳವಣಿಗೆ ಹೊಂದಿ, ಒಂದೇ ಕಡೆ ಶೇಖರಣೆಯಾಗಿ ಮೆದುಳಿನ ಕಾರ್ಯಕ್ಷಮತೆಯನ್ನು ಮತ್ತು ನರಮಂಡಲ ವ್ಯವಸ್ಥೆಯನ್ನು ಕುಂಠಿತಗೊಳಿಸಿ, ಗಡ್ಡೆಯ ರೂಪದಲ್ಲಿ ಬೆಳೆಯುತ್ತದೆ. ಬ್ರೈನ್ ಟ್ಯೂಮರ್‌ನಲ್ಲಿ ಮ್ಯಾಲಿಗ್ನನ್ಟ್ ಟ್ಯುಮರ್ ಮತ್ತು ಬೆನಿಗ್ನ್ ಟ್ಯೂಮರ್ ಎಮದು ಎರಡು ವಿಧಗಳಿವೆ. ಇದರಲ್ಲಿ ಮ್ಯಾಲಿಗ್ನನ್ಟ್ ಟ್ಯುಮರ್, ಕ್ಯಾನ್ಸರ್ ಕಾರಕವಾಗಿದ್ದು ಜೀವಕ್ಕೆ ಹಾನಿ ಉಂಟು ಮಾಡುತ್ತದೆ, ಇದರ ಚಿಕಿತ್ಸೆ ಕೂಡ ಕಷ್ಟಕರ. ಇನ್ನು, ಬೆನಿಗ್ನ್ ಟ್ಯೂಮರ್ ಅಷ್ಟಾಗಿ ಮಾರಕವಲ್ಲದಿದ್ದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದೇ ಹೋದರೆ ಇದರಿಂದ ಜೀವ ಹೋಗಬಹುದು. ಬ್ರೈನ್ ಟ್ಯೂಮರ್ ಬಗ್ಗೆ ಇರುವ ಅನುಮಾನಗಳ ಕುರಿತು ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕರಾದ ಡಾ.ಎಸ್ ಎಸ್ ಪ್ರಹರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.
ತಲೆಯ ಗಾಯ ಹಳೆಯದಾಗಿರಬಹುದು. ಆದರ ಇಗ್ನೋರ್ ಮಾಡೋದು ಅಪಾಯ
ಮೆದುಳಿನ ಗಡ್ಡೆಯ ಲಕ್ಷಣಗಳೇನು?
ತಲೆ ನೋವು ನಿಧಾನವಾಗಿ ಆರಂಭಗೊಂಡು ನಂತರ ವಿಪರೀತ ತಲೆ ನೋವಿಗೆ ತಿರುಗುವುದು, ಕಣ್ಣು ಮಂಜಾಗುವುದು, ವಾಕರಿಕೆ ಹಾಗೂ ವಾಂತಿ ಕಾಣಿಸಿಕೊಳ್ಳುವುದು, ಕೈ ಕಾಲಿನ ಭಾಗದಲ್ಲಿ ಸಂವೇದನೆ ಕಳೆದುಕೊಳ್ಳುವುದು, ಮಾತನಾಡಲು ಕಷ್ಟವಾಗುವುದು, ದಿನದ ಕೆಲಸ ಕಾರ್ಯಗಳಲ್ಲಿ ವಿಪರೀತ ಗೊಂದಲ, ಕಿವಿ (Ear) ಕೇಳಿಸದಂತಾಗುವುದು ಸೇರಿದಂತೆ ಇತರೆ ಲಕ್ಷಣಗಳು ಕಾಣಿಸಿಕೊಳ್ಳಲಿದೆ. ಈ ಲಕ್ಷಣ ಬಂದ ಕೂಡಲೇ ನೀವು ತಡ ಮಾಡದೇ ವೈದ್ಯರ ಬಳಿ ತೆರಳಿ ಪರೀಕ್ಷೆ (Test) ಮಾಡಿಸಿಕೊಳ್ಳುವುದು ಉತ್ತಮ.
ಬ್ರೈನ್ ಟ್ಯೂಮರ್ ಪತ್ತೆ ಹಚ್ಚುವುದು ಹೇಗೆ?
ಬ್ರೈನ್ ಟ್ಯೂಮರ್ ಪತ್ತೆ ಹಚ್ಚಲು ಸಿಟಿ ಸ್ಕ್ಯಾನ್ ಮಾಡಿಸಿದರೆ ಸಾಕು. ಇದರಲ್ಲಿ ಶೇ.99ರಷ್ಟ್ರು ನಿಖರವಾಗಿ ತಿಳಿಯಲಿದೆ. ಇದರಲ್ಲಿ ಪಾಸಿಟಿವ್ ಬಂದರೆ, ಎಂಆರ್‌ಐ ಸ್ಕ್ಯಾನ್ ಮಾಡಿಸುವ ಮೂಲಕ ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆದಿದೆ ಎಂಬ ಮಾಹಿತಿಯನ್ನು (Information) ತಿಳಿಯಬಹುದು. ಇದು ವೈದ್ಯರ ಸಲಹೆ ಮೇರೆಗೆ ಸ್ಕ್ಯಾನ್ ಮಾಡಿಸುವುದು ಉತ್ತಮ.
ಯಾವ ವಯಸ್ಸಿನಲ್ಲಿ ಇದು ಕಾಡುತ್ತದೆ?
ಬ್ರೈನ್ ಟ್ಯೂಮರ್‌ಗೆ ಯಾವುದೇ ವಯಸ್ಸಿನ (Age) ಮಿತಿ ಇಲ್ಲ. ಕೆಲವೊಮ್ಮೆ ಹುಟ್ಟಿನ ಮಗುವಿನಲ್ಲಿಯೂ ಗಡ್ಡೆ ಬೆಳೆದಿರುಬಹುದು, ವಯಸ್ಕರು ಹಾಗೂ ವಯಸ್ಸಾದವರಲ್ಲೂ ಈ ಟ್ಯೂಮರ್ ಬರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಬ್ರೈನ್ ಟ್ಯೂಮರ್ ಬಗ್ಗೆ ಹೆಚ್ಚು ಜಾಗೃತರಾಗಿರುವುದು ಉತ್ತಮ. ಟ್ಯೂಮರ್‌ನ ಲಕ್ಷಣಗಳು ಗೋಚರಿಸಿದ ಕೂಡಲೇ ಅದರ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಬ್ರೈನ್ ಟ್ಯೂಮರ್‌ನನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚುವುದರಿಂದ, ಶೀಘ್ರವಾಗಿ ಗುಣಪಡಿಸಬಹುದು.
ಇಂಥಾ ಆಹಾರದ ಸೇವನೆ ಬ್ರೈನ್ ಟ್ಯೂಮರ್‌ಗೆ ಕಾರಣವಾಗುತ್ತೆ ಎಚ್ಚರ
ವಯಸ್ಸಾದವರಿಗೆ ಬ್ರೈನ್ ಟ್ಯೂಮರ್ ಬರುವ ಸಾಧ್ಯತೆ ಇದೆಯೇ?
ವಯ್ಸಾದವರಲ್ಲಿ ಸೆಕೆಂಡರಿ ಬ್ರೈನ್ ಟ್ಯೂಮರ್ ಕಾಣಿಸಿಕೊಳ್ಳುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಈಗಾಗಲೇ ದೇಹದ ಇತರ ಭಾಗದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡು ನಂತರ ಅದು ಮೆದುಳಿಗೆ ಟ್ಯೂಮರ್ ಆಗಿ ಹರಡಲಿದೆ. ಪ್ರೈಮರಿ ಬ್ರೈನ್ ಟ್ಯೂಮರ್ ಸಾಮಾನ್ಯವಾಗಿ ಮೆದುಳಿನಲ್ಲಿಯೇ ಆರಂಭವಾಗುವ ಟ್ಯೂಮರ್ ಆಗಿದ್ದು, ಇದು ಅತ್ಯಂತ ಅಪಾಯಕಾರಿಯೂ (Dangerous) ಹೌದು. ಸೆಕೆಂಡರಿ ಬ್ರೈನ್ ಟ್ಯೂಮರ್‌ಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ವಯಸ್ಸಾದವರಲ್ಲಿ ಮೊದಲು ಬಿಪಿ, ಶುಗರ್‌ನನ್ನು ನಿಯಂತ್ರಣಕ್ಕೆ ತರಬೇಕಾಗುತ್ತದೆ ನಂತರ ಚಿಕಿತ್ಸೆ (Treatment) ನೀಡಬೇಕು, ಇಲ್ಲವಾದರೆ, ಅವರ ಪ್ರಾಣಕ್ಕೆ ಕುತ್ತಾಗಬಹುದು.
ಟ್ಯೂಮರ್ ಗುಣಪಡಿಸೋದು ಹೇಗೆ?
ಒಮ್ಮೆ ಟ್ಯೂಮರ್ ಬೆಳೆದರೆ ಅದನ್ನು ತೆರವುಗೊಳಿಸುವುದೊಂದೇ ಮಾರ್ಗ. ಮೊದಲು ಟ್ಯೂಮರ್ ಮೆದುಳಿನ ಯಾವ ಭಾಗದಲ್ಲಿ ಕಾಣಿಸಿಕೊಂಡಿದೆ ಎಂಬುದನ್ನು ಪತ್ತೆ ಹಚ್ಚಿ, ಅದು ಬೆನಿಗ್ನ್ ಅಥವಾ ಮ್ಯಾಲಿಜ್ಞೆನ್ಟ್ ಬ್ರೈನ್ ಟ್ಯೂಮರ್ ಎಂದು ತಿಳಿದುಕೊಂಡು ನಂತರ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಟ್ಯೂಮರ್ ಚಿಕಿತ್ಸೆಗೆ, ಓಪನ್ ಸರ್ಜರಿ, ರೇಡಿಯೋಥೆರಪಿ, ಕಿಮೋಥೆರಪಿ, ಟಾರ್ಗೆಟೆಡ್ ಡ್ರಗ್ ಥೆರಪಿ ಮೂಲಕ ಅವರಿಗೆ ಗಡ್ಡೆ ಕರಗಿಸಬಹುದು. ಈ ಗಡ್ಡೆ ಮತ್ತೊಮ್ಮೆ ಬೆಳೆಯುವ ಅಪಾಯವಿದೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಕಾಳಜಿ (Care) ವಹಿಸುವುದು ಉತ್ತಮ.
ಬ್ರೈನ್ ಟ್ಯೂಮರ್ ಬಾರದಂತೆ ತಡೆಯೋದು ಹೇಗೆ?
ಬ್ರೈನ್ ಟ್ಯೂಮರ್ ಯಾವ ಕಾರಣದಿಂದ ಬರಲಿದೆ ಎಂಬುದು ಇನ್ನೂ ಸಾಬೀತಾಗಿಲ್ಲ. ಆದರೆ, ಇತ್ತೀಚಿನ ಸಂಶೋಧನೆಗಳ ಪ್ರಕಾರ ಹೆಚ್ಚು ರೇಡಿಯೇಷನ್ ಇರುವ ಮೊಬೈಲ್ ಬಳಕೆಯಿಂದ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದು ತಿಳಿದು ಬಂದಿದೆ. ಇದರಿಂದ ಟ್ಯೂಮರ್ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತದೆ. ಹೀಗಾಗಿ ಹೆಚ್ಚು ಮೊಬೈಲ್ ಬಳಕೆ ಮಾಡುವವರು ಎಚ್ಚರದಿಂದ ಇರುವುದು ಸೂಕ್ತ.