ಮೊಟ್ಟೆ ನಿಜವಾಗಿಯೂ ‘ಸೂಪರ್ ಫುಡ್’ ಹೌದೇ? ವಿಜ್ಞಾನ ಏನು ಹೇಳುತ್ತೆ?
ಪೌಷ್ಠಿಕಾಂಶ ಹೆಚ್ಚಾಗಿರುವ "ಸೂಪರ್‌ಫುಡ್" ಎಂದೇ ಕರೆಯಲಾಗಿರುವ ಮೊಟ್ಟೆಗಳನ್ನು ಕೆಲವರು ಅತಿಯಾಗಿ ಸೇವಿಸುತ್ತಾರೆ . ಆದರೆ ಇದರಿಂದ ಏನಾದರೂ ಸಮಸ್ಯೆ ಇದೆಯೇ ನೋಡೋಣ.

ಮೊಟ್ಟೆಗಳು (eggs) ಸಂಪೂರ್ಣ ಪ್ರೋಟೀನ್ ಮೂಲವಾಗಿದ್ದು, ಎಲ್ಲಾ ಅಗತ್ಯ ಅಮೈನೋ ಆಮ್ಲಗಳು (amino acids) ಸಹ ಇದರಲ್ಲಿವೆ. ಅವುಗಳ ಪೌಷ್ಟಿಕಾಂಶದ ಸಾಂದ್ರತೆಯಿಂದಾಗಿ ಇದನ್ನು ಹೆಚ್ಚಾಗಿ "ಸೂಪರ್‌ಫುಡ್" ಎನ್ನಲಾಗುತ್ತೆ. ಆದರೆ, ಕೆಲವರು ಮೊಟ್ಟೆಗಳನ್ನು ಅತಿಯಾಗಿ ಸೇವನೆ ಮಾಡುತ್ತಾರೆ. ಆದಾರೆ ದೀರ್ಘಕಾಲದ ಕಾಯಿಲೆಗಳು, ಕೊಲೆಸ್ಟ್ರಾಲ್ ಅಥವಾ ಪದೇ ಪದೇ ರೋಗಗಳಿಗೆ ಒಳಗಾಗುವವರು, ಮೊಟ್ಟೆ ಸೇವನೆ ಬಗ್ಗೆ ಜಾಗರೂಕರಾಗಿರಬೇಕು.
ತಜ್ಞರು ಹೇಳುವಂತೆ ಮೊಟ್ಟೆ ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಸೇವಿಸಲ್ಪಡುವ ಮತ್ತು ಚರ್ಚೆಯಲ್ಲಿರುವ ಆರೋಗ್ಯಕರ ಆಹಾರಗಳಲ್ಲಿ (Healthy foods) ಒಂದಾಗಿದೆ. ಆದರೆ ಮೊಟ್ಟೆಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಯೀಸ್ಟ್‌ಗಳ ಬೆಳವಣಿಗೆಯಿಂದಾಗಿ ಆರೋಗ್ಯಕ್ಕೆ ಮಾರಕವಾಗಬಹುದು ಎನ್ನುವ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಇದು ನಿಜವೇ? ಖಂಡಿತಾ ಇಲ್ಲ, ಯಾಕಂದ್ರೆ "ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳಲ್ಲಿ ಮೊಟ್ಟೆ ಸೇವನೆಯು ಮಾನವ ದೇಹದಲ್ಲಿ ರೋಗಕಾರಕ ಜೀವಿಗಳನ್ನು ಪೋಷಿಸುತ್ತದೆ ಎಂದು ಸಾಬೀತುಪಡಿಸುವ ಯಾವುದೇ ಬಲವಾದ ವೈದ್ಯಕೀಯ ಪುರಾವೆಗಳಿಲ್ಲ. ಹಾಗಿದ್ದ ಮೇಲೆ ಮೊಟ್ಟೆ ಸೇವನೆಯಿಂದ ವೈರಸ್, ಬ್ಯಾಕ್ಟೀರಿಯಾ ದೇಹದಲ್ಲಿ ಬೆಳೆಯುತ್ತೆ ಎನ್ನಲು ಸಾಧ್ಯವಾಗೋದಿಲ್ಲ.
ವಿಜ್ಞಾನ ಏನು ಹೇಳುತ್ತದೆ?
ನ್ಯೂಟ್ರಿಯೆಂಟ್ಸ್‌ನಲ್ಲಿ ಪ್ರಕಟವಾದ 2022 ರ ಅಧ್ಯಯನದಲ್ಲಿ ತಿಳಿಸಿದಂತೆ, ಮಿತವಾದ ಮೊಟ್ಟೆ ಸೇವನೆಯು (eating egg) ಆರೋಗ್ಯವಂತ ವಯಸ್ಕರಲ್ಲಿ ಕರುಳಿನ ಸೂಕ್ಷ್ಮಜೀವಿಯ ವೈವಿಧ್ಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ವಾಸ್ತವವಾಗಿ, ಮೊಟ್ಟೆಗಳು ಯಕೃತ್ತು ಮತ್ತು ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಕೋಲೀನ್‌ನಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ, ಆದರೆ ಕೆಲವು ಕರುಳಿನ ಬ್ಯಾಕ್ಟೀರಿಯಾಗಳಿಂದಾಗಿ, ಅದು ಟ್ರೈಮಿಥೈಲಮೈನ್-ಎನ್-ಆಕ್ಸೈಡ್ ಅನ್ನು ಉತ್ಪಾದಿಸುತ್ತದೆ ಎನ್ನುತ್ತೆ ವಿಜ್ಞಾನ.
ಕರುಳಿನ ಸೂಕ್ಷ್ಮಜೀವಿಯ ಸಮತೋಲನವಾಗಿರುವುದು ಸಹ ತುಂಬಾನೆ ಮುಖ್ಯ. ಯಾಕಂದ್ರೆ ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಗಳ ಸಂಖ್ಯೆ ಕಡಿಮೆ ಇದ್ದರೆ, ಅದರಿಂದ ಕೂಡ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇದೆ. ಹಾಗಾಗಿ ಮೊಟ್ಟೆ ತಿನ್ನುವಾಗ ಹುಷಾರಾಗಿರಬೇಕು. ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು.
ನಿಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಏಕೆ ಸೇರಿಸಿಕೊಳ್ಳಬೇಕು
ಒಂದು ದೊಡ್ಡ ಮೊಟ್ಟೆಯು ಸುಮಾರು 6-7 ಗ್ರಾಂ ಪ್ರೋಟೀನ್ ಅನ್ನು ಒದಗಿಸುತ್ತದೆ, ಅಮೈನೊ ಆಸಿಡ್ ಸ್ಕೋರ್ 1.0 ಆಗಿದೆ, ಇದು ಡೈರಿ ಮತ್ತು ಮಾಂಸಕ್ಕೆ ಸಮನಾಗಿರುತ್ತದೆ "ಆಲ್ಬುಮಿನ್’ (ಮೊಟ್ಟೆಯ ಬಿಳಿ ಭಾಗ) ಪ್ರೋಟೀನ್‌ನ ಬಹುಪಾಲು ಭಾಗವನ್ನು ಹೊಂದಿರುತ್ತದೆ, ಪ್ರಾಥಮಿಕವಾಗಿ ಓವಲ್ಬ್ಯುಮಿನ್, ಅಂದರೆ ಹಳದಿ ಲೋಳೆಯು ಲೆಸಿಥಿನ್, ಕೊಬ್ಬುಗಳು, ವಿಟಮಿನ್ ಎ, ಡಿ, ಇ ಮತ್ತು ಬಿ 12, ಜೊತೆಗೆ ಕೋಲೀನ್ ಅನ್ನು ಒದಗಿಸುತ್ತದೆ - ಇದು ಸೆಲ್ಯುಲಾರ್ ಮತ್ತು ನರಗಳ ಕಾರ್ಯಕ್ಕೆ ಪ್ರಮುಖವಾಗಿದೆ.
ನೀವು ಮೊಟ್ಟೆ ತಿನ್ನೋದಿಲ್ಲ ಎಂದಾದರೆ, ಅಷ್ಟೇ ಪ್ರೊಟೀನ್, ಪೌಷ್ಟಿಕಾಂಶ ಹೊಂದಿರುವ ಇತರ ಆಹಾರಗಳನ್ನು ಸೇವಿಸಬಹುದು. ಅವುಗಳೇಂದರೆ
• ಮಸೂರ ಮತ್ತು ದ್ವಿದಳ ಧಾನ್ಯಗಳು
• ಚಿಯಾ ಬೀಜಗಳು (chea seeds) ಮತ್ತು ಸೆಣಬಿನ ಬೀಜಗಳು (ಒಮೆಗಾ-3ಗಳು ಮತ್ತು ಸಂಪೂರ್ಣ ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ)
• ಟೋಫು (ಕರುಳಿನ ಸ್ನೇಹಿ ಗುಣಲಕ್ಷಣಗಳೊಂದಿಗೆ ಹುದುಗಿಸಿದ ಸೋಯಾ ಉತ್ಪನ್ನಗಳು)
• ಕ್ವಿನೋವಾ (ಅಪರೂಪದ ಸಸ್ಯ ಆಧಾರಿತ ಸಂಪೂರ್ಣ ಪ್ರೋಟೀನ್)
• ಸಾವಯವ ಗ್ರೀಕ್ ಮೊಸರು ಅಥವಾ ಪನೀರ್ (ಸಸ್ಯಾಹಾರಿಗಳಿಗೆ)
• ಕೋಳಿ ಮಾಂಸ ಅಥವಾ ಸಾಲ್ಮನ್ ನಂತಹ ಮೀನು ಸಹ ಸೇವಿಸಬಹುದು.