ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ತಾರಕಕ್ಕೇರಿದೆ. ಕಳೆದ ಕೆಲವು ದಿನಗಳಿಂದ ನಗರದ ನಿವಾಸಿಗಳು ಬಿಸಿಲ ಧಗೆಯಿಂದ ತತ್ತರಿಸುತ್ತಿದ್ದಾರೆ. ಇಲ್ಲಿನವರು ಈ ಹಠಾತ್ ತಾಪಮಾನ ಏರಿಕೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

- ಡಾ. ಕಿರಣ್ ರೆಡ್ಡಿವಾರಿ, ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿಸ್ಟ್, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು

ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ತಾರಕಕ್ಕೇರಿದೆ. ಕಳೆದ ಕೆಲವು ದಿನಗಳಿಂದ ನಗರದ ನಿವಾಸಿಗಳು ಬಿಸಿಲ ಧಗೆಯಿಂದ ತತ್ತರಿಸುತ್ತಿದ್ದಾರೆ. ಇಲ್ಲಿನವರು ಈ ಹಠಾತ್ ತಾಪಮಾನ ಏರಿಕೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಅತಿಯಾದ ಉಷ್ಣತೆಯಿಂದಾಗಿ ಜೀರ್ಣಾಂಗವ್ಯೂಹವು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ, ಹೀಟ್‌ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಇರುತ್ತದೆ ಮತ್ತು ವಯಸ್ಸಾದವರಲ್ಲಿ ಹೃದಯರಕ್ತನಾಳದ ಅಪಾಯಗಳು ಹೆಚ್ಚಾಗಬಹುದು.

ಹಲವು ದಶಕಗಳ ಕಾಲ ಉದ್ಯಾನ ನಗರಿ ಮತ್ತು ನಿವೃತ್ತರ ಸ್ವರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ನಗರ ಇಂದು ಸಂಪೂರ್ಣ ವಿರುದ್ಧವಾದ ವಾತಾವರಣ ಹೊಂದಿದೆ. ಅಂದಿನ ಕಾಲದಲ್ಲಿ ಕಡು ಬೇಸಿಗೆಯಲ್ಲೂ ಬೆಂಗಳೂರಿನ ಗಾಳಿ ತಂಪಾಗಿರುತ್ತಿತ್ತು ಮತ್ತು ಪಾದರಸದ ಮಟ್ಟವು ಎಂದಿಗೂ ಮಿತಿ ಮೀರುತ್ತಿರಲಿಲ್ಲ. ಆದರೆ ಈಗಿನ ಈ ಉಷ್ಣ ವೈಪರೀತ್ಯವು ನಿವಾಸಿಗಳನ್ನು ಕಂಗಾಲಾಗಿಸಿದೆ ಮತ್ತು ಅವರು ಸೆಕೆ ಜೊತೆಗೆ ಸಂಬಂಧಿತ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುವಂತಾಗಿದೆ.

ಹವಾಮಾನದ ಈ ಬದಲಾವಣೆಗೆ ಕಾರಣವೇನು? ದಕ್ಕನ್ ಪ್ರಸ್ಥಭೂಮಿ ಸುಡುತ್ತಿರುವುದೇಕೆ?

ಈ ಅನಿರೀಕ್ಷಿತ ಹವಾಮಾನ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಭೌಗೋಳಿಕ ಮತ್ತು ವಾತಾವರಣದ ಪ್ರಕ್ರಿಯೆಗಳನ್ನು ಗಮನಿಸಬೇಕಾಗುತ್ತದೆ. ಬೆಂಗಳೂರು, ಮೈಸೂರು ಪ್ರಸ್ಥಭೂಮಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿದೆ. ಹಾಗಾಗಿ ಇಲ್ಲಿ ತಂಪಾದ ಗಾಳಿ ಬೀಸುತ್ತಿತ್ತು. ಆದರೆ, ಈಗ ಈ ರಕ್ಷಣಾ ಕವಚವು 'ಎಲ್ ನಿನೋ' ವಿದ್ಯಮಾನದಿಂದಾಗಿ ದುರ್ಬಲಗೊಳ್ಳುತ್ತಿದೆ. ಈ ವಿದ್ಯಮಾನವು ಸಾವಿರಾರು ಮೈಲಿ ದೂರದ ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಆಗಿದ್ದರೂ, ಅದರ ಪರಿಣಾಮವಾಗಿ ಈಗ ಇಲ್ಲಿ ತಾಪಮಾನ ಏರಿಕೆಯಾಗುತ್ತಿದೆ.

ಪೂರ್ವ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವುದನ್ನು 'ಎಲ್ ನಿನೋ ಸದರ್ನ್ ಆಸಿಲೇಷನ್' (ಇಎನ್ಎಸ್ಓ) ಪ್ರಕ್ರಿಯೆ ಎನ್ನಲಾಗುತ್ತದೆ. ಭಾರತೀಯ ಉಪಖಂಡಕ್ಕೆ ಸಂಬಂಧಿಸಿದಂತೆ, ಇದು ಮಳೆಯ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ. ಅಷ್ಟೇ ಅಲ್ಲದೆ, ವಾತಾವರಣದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿ ಮೇಲ್ಮಟ್ಟದ ಒಣ ಮತ್ತು ಬಿಸಿ ಗಾಳಿಯು ಕೆಳಮುಖವಾಗಿ ಚಲಿಸುವಂತೆ ಮಾಡುತ್ತದೆ. ಈ ಗಾಳಿಯು ಭೂಮಿಗೆ ಹತ್ತಿರವಾಗುತ್ತಿದ್ದಂತೆ ಸಂಕುಚಿತಗೊಂಡು ಮತ್ತಷ್ಟು ಬಿಸಿಯಾಗುತ್ತದೆ. ಇದರ ಜೊತೆಗೆ, ಸ್ಥಳೀಯವಾಗಿ ಉಂಟಾಗಿರುವ 'ಅರ್ಬನ್ ಹೀಟ್ ಐಲ್ಯಾಂಡ್' (ಯುಎಚ್ಐ) ಪರಿಣಾಮವು ಈಗ ಅಪಾಯಕಾರಿ ಹಂತವನ್ನು ತಲುಪಿದೆ.

ಒಂದು ಕಾಲದಲ್ಲಿ ಬೆಂಗಳೂರು ಹಸಿರು ಹೊದಿಕೆಗೆ ಹೆಸರಾಗಿತ್ತು. ಆದರೆ ಈಗ ಆ ಹಸಿರು ಹೊದಿಕೆ ಮಾಯವಾಗಿವೆ, ನಿರಂತರವಾಗಿ ನಗರ ಬೆಳೆಯುತ್ತಿದೆ. ಮೂಲಸೌಕರ್ಯ ವ್ಯವಸ್ಥೆ ಮತ್ತು ಮಾನವ ಚಟುವಟಿಕೆಗಳು ಬೆಳೆದಿವೆ. ಇದರಿಂದಾಗಿ ಸೂರ್ಯನ ಶಾಖವು ಸೂರ್ಯಾಸ್ತದ ನಂತರವೂ ವಾತಾವರಣದಲ್ಲೇ ಉಳಿಯುವಂತಹ 'ಮೈಕ್ರೋಕ್ಲೈಮೇಟ್' ಸೃಷ್ಟಿಯಾಗಿದೆ. ಇದು ಬೆಂಗಳೂರು ಮೊದಲು ಹೊಂದಿದ್ದ ರಾತ್ರಿಯ ತಂಪಾದ ವಾತಾವರಣವನ್ನು ತೊಡೆದಿದ್ದು, ನಗರವು ದೀರ್ಘಕಾಲದವರೆಗೆ ಉಷ್ಣದ ಒತ್ತಡಕ್ಕೆ ಸಿಲುಕುವಂತೆ ಮಾಡಿದೆ.

ಶಾರೀರಿಕ ಪರಿಣಾಮಗಳು: ಸಾರ್ವಜನಿಕ ಆರೋಗ್ಯ ಸಮಸ್ಯೆ ಹೆಚ್ಚಳ

ನಗರ ಪರಿಸರದ ತಾಪಮಾನವು ನಿರಂತರವಾಗಿ 35 ಡಿಗ್ರಿ ಸೆಲ್ಸಿಯಸ್‌ ಗಿಂತಲೂ ಹೆಚ್ಚಿರುತ್ತಿದ್ದೆ. ಅಷ್ಟೇ ಅಲ್ಲದೆ, ವಾತಾವರಣದಲ್ಲಿನ ತೇವಾಂಶದಿಂದಾಗಿ ಅದಕ್ಕಿಂತಲೂ ಹೆಚ್ಚಿನ ತಾಪಮಾನ ಇರುವಂತೆ ಭಾಸವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಾನವನ ದೇಹವು ಉಷ್ಣತೆಯನ್ನು ನಿಯಂತ್ರಿಸಲಾಗದ ಸಂಘರ್ಷದ ಸ್ಥಿತಿಗೆ ತಲುಪುತ್ತದೆ. ಸಮಾಜದ ದುರ್ಬಲ ವರ್ಗದವರು, ಅದರಲ್ಲೂ ಮುಖ್ಯವಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಇದರಿಂದ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯಿದೆ. ಸದ್ಯ ಬೆಂಗಳೂರಿನ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ತಲುಪಿದ್ದರೂ, ಅದು ಮೇ ತಿಂಗಳ ದೆಹಲಿಯ ಮಧ್ಯಾಹ್ನದಂತೆ ಭಾಸವಾಗುತ್ತಿದೆ!

ಮಕ್ಕಳ ಮೇಲಾಗುವ ಪರಿಣಾಮ: ಮಕ್ಕಳು ತಮ್ಮ ವಿಶಿಷ್ಟ ಶಾರೀರಿಕ ರಚನೆಯಿಂದಾಗಿ 'ಹೈಪರ್ ಥರ್ಮಿಯಾ'ಗೆ (ದೇಹದ ಉಷ್ಣತೆ ಅತಿಯಾಗಿ ಏರುವುದು) ಬೇಗನೆ ತುತ್ತಾಗುತ್ತಾರೆ. ಅವರು ವಯಸ್ಕರಿಗಿಂತ ವೇಗವಾಗಿ ಪರಿಸರದಿಂದ ಶಾಖವನ್ನು ಹೀರಿಕೊಳ್ಳುತ್ತಾರೆ. ಜೊತೆಗೆ, ಅವರ ಬೆವರಿನ ಗ್ರಂಥಿಗಳು ಇನ್ನೂ ಪೂರ್ಣವಾಗಿ ಬೆಳೆದಿರುವುದಿಲ್ಲ. ಇದರಿಂದ ಬೆವರಿನ ಮೂಲಕ ಶಾಖವನ್ನು ಹೊರಹಾಕಿ ದೇಹವನ್ನು ತಂಪುಗೊಳಿಸುವ ಅವರ ಸಾಮರ್ಥ್ಯವು ಕಡಿಮೆ ಇರುತ್ತದೆ. ಮಕ್ಕಳಲ್ಲಿ ಉಂಟಾಗುವ 'ಹೀಟ್ ಎಕ್ಸಾಶನ್' (ಶಾಖದ ದಣಿವು) ತಕ್ಷಣವೇ 'ಹೀಟ್‌ ಸ್ಟ್ರೋಕ್' ಆಗಿ ಬದಲಾಗಬಹುದು. ಈ ಸ್ಥಿತಿಯಲ್ಲಿ ದೇಹದ ಆಂತರಿಕ ಉಷ್ಣತೆಯು 40 ಡಿಗ್ರಿ ಸೆಲ್ಸಿಯಸ್‌ ಮೀರುತ್ತದೆ ಮತ್ತು ಅದರಿಂದ ನರಮಂಡಲಕ್ಕೆ ತೊಂದರೆ ಉಂಟಾಗಬಹುದು.

ಹಿರಿಯ ನಾಗರಿಕರ ಮೇಲಿನ ಒತ್ತಡ: ಹಿರಿಯ ನಾಗರಿಕರಲ್ಲಿ ಈ ಬಿಸಿಲಿನ ಧಗೆಯು ಹೃದಯದ ಮೇಲಿನ ಒತ್ತಡ ಮತ್ತು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ದೇಹವು ತನ್ನನ್ನು ತಾನು ತಂಪುಗೊಳಿಸಲು ಪ್ರಯತ್ನಿಸುವಾಗ, ರಕ್ತವು ಆಂತರಿಕ ಅಂಗಗಳಿಂದ ಚರ್ಮದ ಕಡೆಗೆ ಹರಿಯಲು ಪ್ರಾರಂಭಿಸುತ್ತದೆ, ಇದನ್ನು 'ಪೆರಿಫೆರಲ್ ವಾಸೋಡಿಲೇಶನ್' ಎಂದು ಕರೆಯಲಾಗುತ್ತದೆ. ಇದರಿಂದಾಗಿ ಹೃದಯವು ಹೆಚ್ಚು ವೇಗವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿ, ಅದರ ಮೇಲೆ ವಿಪರೀತ ಒತ್ತಡ ಬೀಳುತ್ತದೆ. ಈಗಾಗಲೇ ರಕ್ತದೊತ್ತಡ ಅಥವಾ ಎರಡನೇ ಹಂತದ ಮಧ್ಯಾಮೇಹದಂತಹ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯರಲ್ಲಿ, ಅತಿಯಾದ ಉಷ್ಣತೆಯು ಈ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಇದು ತೀವ್ರತರದ ಮೂತ್ರಪಿಂಡದ ಹಾನಿ ಅಥವಾ ಸೈಲೆಂಟ್ ಹಾರ್ಟ್ ಅಟ್ಯಾಕ್‌ ಗೆ ದಾರಿಯಾಗುವ ಸಾಧ್ಯತೆ ಇರುತ್ತದೆ.

ವೈದ್ಯಕೀಯ ದೃಷ್ಟಿಕೋನ: ಜೀರ್ಣಾಂಗವ್ಯೂಹದ ಮೇಲೆ ನಿಗಾ ಇರಲಿ

ಸಾಮಾನ್ಯವಾಗಿ ಅತಿಯಾದ ಉಷ್ಣತೆಯು ಜೀರ್ಣಾಂಗವ್ಯೂಹದ ಮೇಲೆ ಬೀರುವ ಆಳವಾದ ಪರಿಣಾಮವನ್ನು ಜನರು ನಿರ್ಲಕ್ಷಿಸುತ್ತಾರೆ. ನಾವು ಬಿಸಿಗಾಳಿ ಅಥವಾ 'ಹೀಟ್‌ ವೇವ್' ಬಗ್ಗೆ ಮಾತನಾಡುವಾಗ, ನಮ್ಮ ಗಮನವು ಕೇವಲ ಚರ್ಮ ಮತ್ತು ಹೃದಯದ ಮೇಲೆ ಮಾತ್ರ ಇರುತ್ತದೆ. ಆದರೆ, ದೇಹದ ವ್ಯವಸ್ಥಿತ ವೈಫಲ್ಯಕ್ಕೆ ಜೀರ್ಣಾಂಗವ್ಯೂಹವು ಮೊದಲ ತಾಣವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ದೇಹವು ತನ್ನನ್ನು ತಾನು ತಂಪುಗೊಳಿಸಲು ಮೊದಲ ಆದ್ಯತೆ ನೀಡಿದಾಗ, ಅದು 'ಸ್ಪ್ಲಾಂಕ್ನಿಕ್ ಹೈಪೋಪರ್ಫ್ಯೂಷನ್' ಎಂಬ ಸ್ಥಿತಿಯನ್ನು ಉಂಟುಮಾಡುತ್ತದೆ. ಅಂದರೆ, ಇದು ಜಠರ ಮತ್ತು ಕರುಳಿನ ಭಾಗಕ್ಕೆ ಹರಿಯಬೇಕಾದ ರಕ್ತವನ್ನು ಬೇರೆಡೆಗೆ (ಚರ್ಮದ ಕಡೆಗೆ) ತಿರುಗಿಸುತ್ತದೆ. ಹೀಗೆ ಜೀರ್ಣಾಂಗವ್ಯೂಹಕ್ಕೆ ರಕ್ತದ ಹರಿವು ಕಡಿಮೆಯಾದಾಗ ಕರುಳಿನ ಒಳಪದರದ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇದು ಸಾಮಾನ್ಯ ಭಾಷೆಯಲ್ಲಿ 'ಲೀಕಿ ಗಟ್' ಎಂದು ಕರೆಯಲ್ಪಡುವ ಸಮಸ್ಯೆಗೆ ಮತ್ತು ದೇಹದಲ್ಲಿ ಉರಿಯೂತದ ಪ್ರತಿಕ್ರಿಯೆ ಹೆಚ್ಚಾಗಲು ಕಾರಣವಾಗುತ್ತದೆ.

ಮುನ್ನೆಚ್ಚರಿಕೆಗಳು ಮತ್ತು ಪರಿಹಾರಗಳು: ವೈದ್ಯಕೀಯ ಮಾರ್ಗಸೂಚಿಗಳು

ಈ 'ಸೂಪರ್ ಎಲ್ ನಿನೋ' ಪ್ರಭಾವದ ಕಡು ಬೇಸಿಗೆಯನ್ನು ಸುರಕ್ಷಿತವಾಗಿ ಎದುರಿಸಲು, ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅತ್ಯಗತ್ಯ:

ಸಕ್ಕರೆಯುಕ್ತ ಪಾನೀಯಗಳಿಗಿಂತ ಐಸೋಟೋನಿಕ್ ಹೈಡ್ರೇಶನ್ ಉತ್ತಮ: ಬಾಯಾರಿಕೆಯಾಗುವುದು ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆ ಅಥವಾ ಡೀಹೈಡ್ರೇಷನ್ ಆಗಿದೆ ಎಂಬುದನ್ನು ಸೂಚಿಸುವ ಕೊನೆಯ ಹಂತದ ಸಂಕೇತ. ಆದ್ದರಿಂದ ಸತತವಾಗಿ ನೀರು ಕುಡಿಯುತ್ತಿರಬೇಕು. ಆದರೆ, ಕಾರ್ಬೊನೇಟೆಡ್ ಪಾನೀಯಗಳು ಅಥವಾ ಅತಿಯಾದ ಸಕ್ಕರೆಯುಳ್ಳ ಜ್ಯೂಸ್‌ ಗಳ ಮೊರೆ ಹೋಗಬೇಡಿ. ಇವು ಜೀವಕೋಶಗಳಿಂದ ನೀರನ್ನು ಹೊರಕ್ಕೆಳೆದು ಜೀರ್ಣಾಂಗವ್ಯೂಹಕ್ಕೆ ತಳ್ಳುತ್ತವೆ, ಇದರಿಂದ ಡೀಹೈಡ್ರೇಷನ್ ಮತ್ತಷ್ಟು ಉಲ್ಬಣಗೊಂಡು ಸ್ನಾಯುಗಳ ಸೆಳೆತಕ್ಕೆ ಕಾರಣವಾಗಬಹುದು. ಬದಲಾಗಿ, ಓ.ಆರ್.ಎಸ್ ಅಥವಾ ಸ್ವಲ್ಪ ಉಪ್ಪು ಬೆರೆಸಿದ ಮಜ್ಜಿಗೆಯನ್ನು ಸೇವಿಸಿ.

ಆಹಾರದ ಸುರಕ್ಷತೆ: ಇಂತಹ ಬಿಸಿ ಹವಾಮಾನದಲ್ಲಿ ಆಹಾರವು ದಿನಗಳಲ್ಲಲ್ಲ, ಬದಲಾಗಿ ಕೆಲವೇ ಗಂಟೆಗಳಲ್ಲಿ ಹಾಳಾಗುತ್ತದೆ. ಆದ್ದರಿಂದ 'ತಯಾರಿಸಿದ ತಕ್ಷಣವೇ ಸೇವಿಸುವ' ಕ್ರಮವನ್ನು ಅನುಸರಿಸುವುದು ಉತ್ತಮ. ರಸ್ತೆ ಬದಿಯ ಕತ್ತರಿಸಿದ ಹಣ್ಣುಗಳು ಅಥವಾ ಸಲಾಡ್‌ ಗಳನ್ನು ಸೇವಿಸಬೇಡಿ; ಯಾಕೆಂದರೆ ಇವು ಬೇಸಿಗೆಯಲ್ಲಿ ಹರಡುವ ನೀರು-ಆಧಾರಿತ ಜಠರಗರುಳಿನ ಸೋಂಕುಗಳಿಗೆ ಪ್ರಮುಖ ಕಾರಣಗಳಾಗಿವೆ.

ವ್ಯಾಯಾಮದ ಸಮಯದಲ್ಲಿ ಬದಲಾವಣೆ: ನಿಮ್ಮ ಬೆಳಗಿನ ನಡಿಗೆಯನ್ನು ಸೂರ್ಯೋದಯಕ್ಕಿಂತ ಮುಂಚೆಯೇ ಪೂರ್ಣಗೊಳಿಸಿ. ಬೆಳಗ್ಗೆ 11:00 ರಿಂದ ಸಂಜೆ 4:00 ರ ನಡುವೆ ಯುವಿ ಕಿರಣಗಳು ಮತ್ತು ಉಷ್ಣತೆಯ ಮಟ್ಟವು ಗರಿಷ್ಠವಾಗಿರುತ್ತದೆ. ಈ ಅವಧಿಯಲ್ಲಿ ದೈಹಿಕ ಶ್ರಮ ಪಡುವುದು ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಬಹುದು. ಹಿರಿಯರು ಮತ್ತು ಮಕ್ಕಳು ಚೆನ್ನಾಗಿ ಗಾಳಿ ಬರುವ ಮತ್ತು ನೆರಳಿರುವ ಸ್ಥಳದಲ್ಲಿರಬೇಕು. ಒಂದು ವೇಳೆ ಏಸಿ ಸೌಲಭ್ಯವಿಲ್ಲದಿದ್ದರೆ, ಒದ್ದೆಯಾದ ಬಟ್ಟೆಯನ್ನು ಮೈಮೇಲೆ ಹಾಕಿಕೊಳ್ಳುವಂತಹ ಸಾಂಪ್ರದಾಯಿಕ ತಂಪು ವಿಧಾನಗಳನ್ನು ಅನುಸರಿಸಬಹುದು.

ಔಷಧಿಗಳ ಬಗ್ಗೆ ಎಚ್ಚರವಿರಲಿ: ರಕ್ತದೊತ್ತಡಕ್ಕಾಗಿ ಮೂತ್ರವರ್ಧಕ ಮಾತ್ರೆಗಳನ್ನು ತೆಗೆದುಕೊಳ್ಳುವವರಿಗೆ ಎಲೆಕ್ಟ್ರೋಲೈಟ್ ಅಸಮತೋಲನ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ನಿಮ್ಮ ವೈದ್ಯರ ಸಲಹೆ ಇಲ್ಲದೆ ಔಷಧಿಗಳಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಆದರೆ, ಮೂತ್ರ ವಿಸರ್ಜನೆಯ ಪ್ರಮಾಣ ಮತ್ತು ಚರ್ಮದ ದೃಢತೆಯ ಮೇಲೆ ಸದಾ ನಿಗಾ ಇರಲಿ.

ಅಂತಿಮವಾಗಿ, ಬೆಂಗಳೂರಿನ ಹಿತಕರವಾದ ಹವಾಮಾನವು ಇಂದು ಸುಡುವ ಮತ್ತು ಕಡು ಬೇಸಿಗೆಯ ವಾತಾವರಣವಾಗಿ ಪರಿವರ್ತಿತವಾಗಿರುವುದು ನಾವು ಎದುರಿಸುತ್ತಿರುವ ಆಧುನಿಕ ಯುಗದ ಅಸ್ಥಿರತೆಗೆ ಒಂದು ಎಚ್ಚರಿಕೆಯಾಗಿದೆ. ನೈಸರ್ಗಿಕವಾಗಿಯೇ 'ಹವಾನಿಯಂತ್ರಿತ' ವಾತಾವರಣಕ್ಕೆ ಹೆಸರಾಗಿದ್ದ ಈ ನಗರವು, ಇಂದು ಭೂಮಿಯ ಭೌತಿಕ ಬದಲಾವಣೆಗಳು ಮತ್ತು ಮಾನವನ ಶಾರೀರಿಕ ಮಿತಿಗಳು ಸಂಧಿಸುವ ಒಂದು ಪ್ರಮುಖ ಅಧ್ಯಯನ ಕೇಂದ್ರವಾಗಿ ನಿಂತಿದೆ. ಒಬ್ಬ ಹಿರಿಯ ವೈದ್ಯನ ದೃಷ್ಟಿಯಲ್ಲಿ ಹೇಳುವುದಾದರೆ, ಈ ಬದಲಾವಣೆಯು ತಡೆಗಟ್ಟುವ ವೈದ್ಯಕೀಯ ಶಾಸ್ತ್ರದ ಹೊಸ ಹಾದಿಯನ್ನು ಸೂಚಿಸುತ್ತಿದೆ. ಈ ಹಾದಿಯಲ್ಲಿ ನಮ್ಮ ಮುಂದಿರುವ 'ಪ್ರಿಸ್ಕ್ರಿಪ್ಷನ್' ಕೇವಲ ಒಂದು ಮಾತ್ರೆಯಲ್ಲ, ಬದಲಾಗಿ ನಮ್ಮ ಪರಿಸರದೊಂದಿಗೆ ನಾವು ಹೇಗೆ ಬದುಕುತ್ತಿದ್ದೇವೆ ಎಂಬುದನ್ನು ಮೂಲಭೂತವಾಗಿ ಪುನರ್ ರೂಪಿಸಿಕೊಳ್ಳುವುದೇ ಆಗಿದೆ.