ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸಮಸ್ಯೆಗಳು ಮತ್ತು ಮಾನಸಿಕ ಆರೋಗ್ಯದ ನಡುವೆ ನೇರ ಸಂಬಂಧವಿದೆ. ಹವಾಮಾನ ಬದಲಾವಣೆ, ಮಾಲಿನ್ಯದಂತಹ ಸಮಸ್ಯೆಗಳು ಆತಂಕ, ಖಿನ್ನತೆಗೆ ಕಾರಣವಾಗಬಹುದು ಎಂದು ಅಧ್ಯಯನಗಳು ಹೇಳುತ್ತವೆ.

ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 5 ರಂದು 'ವಿಶ್ವ ಪರಿಸರ ದಿನ(World Environment Day)'ವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1973ರಲ್ಲಿ ಈ ದಿನಾಚರಣೆಯನ್ನು ಆರಂಭಿಸಿತು. 'ಪ್ರಕೃತಿಯಿಂದ ಸ್ಫೂರ್ತಿ, ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ' ಎಂಬುದು ಈ ಬಾರಿಯ ಧ್ಯೇಯವಾಕ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾನಸಿಕ ಆರೋಗ್ಯದಲ್ಲಿ ಪರಿಸರದ ಪಾತ್ರವೇನು?

ನಮ್ಮ ಮಾನಸಿಕ ಆರೋಗ್ಯ(Mental health)ವನ್ನು ಉತ್ತಮವಾಗಿಡಲು ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. 2017ರಲ್ಲಿ ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್(American Psychiatric Association) ನೀಡಿದ ವರದಿಯ ಪ್ರಕಾರ, ಹವಾಮಾನ ಬದಲಾವಣೆಯು ಉದ್ಯಮಗಳ ಮೇಲೆ ಪರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲ ಅದು ಇದರ ಪರಿಣಾಮವಾಗಿ ಜನರು ವಲಸೆ ಹೋಗಲು ಕಾರಣವಾಗುತ್ತಿದೆ. ಇಂತಹ ಪರಿಸರ ಸಮಸ್ಯೆಗಳಿಂದಾಗಿ ಸಾಮಾಜಿಕ ಬೆಂಬಲ ಕಳೆದುಕೊಂಡ ಜನರಲ್ಲಿ ಆತಂಕ, ಖಿನ್ನತೆ ಮತ್ತು ಆತ್ಮಹತ್ಯೆಯಂತಹ ಯೋಚನೆಗಳು ಹೆಚ್ಚಾಗುತ್ತಿವೆ ಎಂದು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ.

ನಾವು ಬದುಕುವ ಪರಿಸರವು ನಮ್ಮ ಮೆದುಳಿನ ಕಾರ್ಯವೈಖರಿ ಮತ್ತು ಒತ್ತಡದ ಮೇಲೆ ನೇರ ಪರಿಣಾಮ ಬೀರುತ್ತದೆ. ಸರಿಯಿಲ್ಲದ ಪರಿಸರದಲ್ಲಿ ಬೆಳೆಯುವ ಮಕ್ಕಳ ಮೆದುಳಿನ ಬೆಳವಣಿಗೆ ಕುಂಠಿತವಾಗಬಹುದು. ಇದರಿಂದಾಗಿ ಅವರಿಗೆ ನೆನಪಿನ ಶಕ್ತಿ ಕೊರತೆ, ಕಲಿಕೆಯಲ್ಲಿ ತೊಂದರೆ ಮತ್ತು ವರ್ತನೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಮಕ್ಕಳ ಮೇಲಿನ ಸಂಶೋಧನೆಗಳು ಹೇಳುತ್ತವೆ.

ಹವಾಮಾನ ಬದಲಾವಣೆ ಮಕ್ಕಳಲ್ಲಿ ಅಪೌಷ್ಠಿಕತೆಗೆ ಕಾರಣವಾಗುತ್ತೆ!

ಹವಾಮಾನ ಬದಲಾವಣೆಯು ಮಕ್ಕಳಲ್ಲಿ ಅಪೌಷ್ಟಿಕತೆಗೂ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳು ಅವರ ಮಾನಸಿಕ ಬೆಳವಣಿಗೆಯ ಮೇಲೆ ಮತ್ತು ನಂತರ ಶಿಕ್ಷಣದ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ಗಾಳಿ ಮತ್ತು ಮಣ್ಣಿನ ಮಾಲಿನ್ಯ, ಹವಾಮಾನ ಬದಲಾವಣೆಯಿಂದ ಉಂಟಾಗುವ ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಕುಟುಂಬಗಳಲ್ಲಿ ಸಾಕಷ್ಟು ಒತ್ತಡವನ್ನು ಸೃಷ್ಟಿಸುತ್ತವೆ. ಇದು ಭಾವನಾತ್ಮಕ ಮತ್ತು ಮಾನಸಿಕ ಸಂಘರ್ಷಗಳಿಗೆ ದಾರಿ ಮಾಡಿಕೊಡುತ್ತದೆ.

ಪರಿಸರದ ಗುಣಮಟ್ಟವು ನಮ್ಮ ಒತ್ತಡದ ಮಟ್ಟವನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು. ಶಬ್ದ, ನೈಸರ್ಗಿಕ ಬೆಳಕು, ಗಾಳಿಯ ಗುಣಮಟ್ಟ ಮತ್ತು ನಮ್ಮ ಸಾಮಾಜಿಕ ಪರಿಸರ—ಇವೆಲ್ಲವೂ ನಮ್ಮ ಆಲೋಚನೆ ಮತ್ತು ಭಾವನೆಗಳನ್ನು ರೂಪಿಸುತ್ತವೆ. ಇದು ನಮ್ಮ ಒಟ್ಟಾರೆ ಮಾನಸಿಕ ಆರೋಗ್ಯವನ್ನೇ ಬದಲಾಯಿಸಬಹುದು. ಹೆಚ್ಚು ಮಾಲಿನ್ಯವಿರುವ ಪ್ರದೇಶಗಳಲ್ಲಿ ಖಿನ್ನತೆಯ ಪ್ರಮಾಣ ಹೆಚ್ಚಿರುವುದನ್ನು ಸಂಶೋಧನೆಗಳು ಪತ್ತೆಹಚ್ಚಿವೆ. ದೀರ್ಘಕಾಲ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ವ್ಯಕ್ತಿಯಲ್ಲಿ ಆತಂಕದ ಸಮಸ್ಯೆ ಹೆಚ್ಚಾಗಬಹುದು ಎಂಬುದು ಈ ಸಂಶೋಧನೆಗಳು ಸೂಚಿಸುತ್ತವೆ.