ಬೆಂಗಳೂರಿನಲ್ಲಿ ಬೇಸಿಗೆಯ ಸೆಕೆಯಿಂದಾಗಿ ರಾತ್ರಿ ಮನೆಯ ಬಾಗಿಲು ತೆರೆದು ಮಲಗಿದ್ದ ಮಹಿಳೆಯ ಮನೆಯೊಳಗೆ ನುಗ್ಗಿದ ಕಳ್ಳರು, ಚಿನ್ನದ ತಾಳಿ ಹಾಗೂ ಎರಡು ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಬೆಂಗಳೂರು (ಏ.8): ಬೇಸಿಗೆಯ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರಿ ಮನೆಯ ಬಾಗಿಲು ತೆರೆದಿಟ್ಟು ನಿದ್ರಿಸಿದ್ದ ಮಹಿಳೆಗೆ ಕಳ್ಳರು ದುಬಾರಿ ಪಾಠ ಕಲಿಸಿದ್ದಾರೆ. ಮನೆಯೊಳಗೆ ನುಗ್ಗಿದ ಅಪರಿಚಿತರು ಬಂಗಾರದ ಸರ ಹಾಗೂ ಮೊಬೈಲ್‌ಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಆನೆಪಾಳ್ಯದ 38 ವರ್ಷದ ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮಾ.3ರ ರಾತ್ರಿ 1.30 ರ ಸುಮಾರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾತ್ರೆಯನ್ನು ನುಂಗಿ ಮಲಗಲು ಮುಂದಾಗಿದೆ. ಈ ವೇಳೆ ನನ್ನ ಕೊರಳಿನಲ್ಲಿದ್ದ ಚಿನ್ನದ ತಾಳಿ, ನನ್ನ ಮೊಬೈಲ್‌ ಹಾಗೂ ಪತಿಯ ಮೊಬೈಲ್‌ಗಳನ್ನು ನೆಲದ ಮೇಲೆ ಇಟ್ಟಿದೆ. ಆ ಸಮಯದಲ್ಲಿ ಹೆಚ್ಚಿನ ಸೆಕೆಯಾಗುತ್ತಿದ್ದ ಕಾರಣ ಮನೆಯ ಬಾಗಿಲನ್ನು ತೆರೆದಿಟ್ಟು ಮಲಗಿದೆ. ನಂತರ ಬೆಳಿಗ್ಗೆ 6 ಗಂಟೆಗೆ ಎಚ್ಚರವಾಗಿ ನೋಡಿದ್ದಾಗ ಎರಡು ಮೊಬೈಲ್‌ ಮತ್ತು 18 ಗ್ರಾಂ ತಾಳಿ ಮತ್ತು 4 ತಾಳಿ ಗುಂಡುಗಳು ಕಂಡುಬರಲಿಲ್ಲ. ಹೀಗಾಗಿ ತಾನು ಮಲಗಿದ್ದ ವೇಳೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.