ಬೆಂಗಳೂರಿನಲ್ಲಿ ಇತ್ತೀಚೆಗೆ ಒಂದು ವಿಚಿತ್ರ ಪ್ರಕರಣ ವರದಿಯಾಯಿತು. ಐವತ್ತ ಐದು ವರ್ಷದ ಹಿರಿಯರೊಬ್ಬರಿಗೆ ಜ್ವರ ಬಂದಿತ್ತು. ಯಾವುದೋ ಅನುಮಾನ ಬಂದು ಕೋವಿಡ್‌ ಪರೀಕ್ಷೆ ಸೆಂಟರ್‌ಗೆ ಹೋಗಿ ಸ್ವಾಬ್ ಕೊಟ್ಟು ಬಂದರು. ಮರುದಿನ ರಿಸಲ್ಟ್‌ ಬರಬೇಕಿತ್ತು. ಆದರೆ ಈ ವ್ಯಕ್ತಿ ತುಂಬಾ ಟೆನ್ಷನ್‌. ಅವರಿಗೆ ಮೊದಲೇ ಸ್ವಲ್ಪ ಹೃದಯದ ಒತ್ತಡ ಇದ್ದುದು ನಿಜ. ವರದಿ ತರಲೆಂದು ಅವರ ಮಗ ಹೋಗಿದ್ದ. ಕೊರೋನಾ ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದರೇನು ಗತಿ ಎಂಬ ಭಯದಲ್ಲಿ ಇತ್ತ ಮನೆಯಲ್ಲೇ ಇದ್ದ ಆ ಹಿರಿಯರಿಗೆ ಕೈಕಾಲು ನಡುಗಿತು. ತಲೆ ಬಿಸಿಯೇರಿತು. ಹೃದಯದ ಬಡಿತ ತಪ್ಪಿತು. ಕಡೆಗೆ ಹೃದಯಾಘಾತವಾಯಿತು. ಅವರ ಪತ್ನಿಗೆ ಏನು ಮಾಡುವುದೆಂದೇ ಗೊತ್ತಾಗಲಿಲ್ಲ. ಅತ್ತ ವರದಿ ತರಲು ಹೋದ ಮಗ ವರದಿ ನೋಡಿದಾಗ, ಅದರಲ್ಲಿ ಕೊರೋನಾ ನೆಗೆಟಿವ್‌ ಬಂದಿತ್ತು. ಇತ್ತ ಮನೆಯಲ್ಲಿದ್ದ ಜ್ವರದ ಪೇಷೆಂಟ್‌ ಹೆದರಿಯೇ ಜೀವ ಬಿಟ್ಟಿದ್ದರು! ಹೆದರದೇ ಆತಂಕಪಡದೇ ಉಳಿದಿದ್ದರೆ ಅವರು ಚಿಕಿತ್ಸೆ ಪಡೆದು ಬದುಕಿಕೊಳ್ಳುವ ಸಾಧ್ಯತೆಯಾದರೂ ಇತ್ತು. 

ಇದು ವಿಚಿತ್ರ ಅಥವಾ ಉತ್ಪ್ರೇಕ್ಷೆ ಅನಿಸಬಹುದು. ಆದರೆ ಬಹು ಕಡೆ ನಡೆಯುತ್ತಿರುವುದೇ ಇದು. ಕೊರೋನಾ ಬಂದಿರಬಹುದು ಎಂಬ ಭಯದಿಂದಲೇ ಕೆಲವರಿಗೆ ಹಾರ್ಟ್‌ ಅಟ್ಯಾಕ್‌ ಆಗಿಬಿಡುತ್ತದೆ. ಶುಗರ್‌ ಇದ್ದವರು, ಕೊರೋನಾ ಬಂತು ಎಂದುಕೊಂಡು ಮನಸ್ಸು ಕೆಟ್ಟು ಯದ್ವಾತದ್ವಾ ಶುಗರ್‌ ಲೆವೆಲ್‌ ಏರಿಸಿಕೊಳ್ಳುತ್ತಾರೆ. ಕೊರೋನಾ ಇಲ್ಲದವರೂ ಅದರ ಭಯದಿಂದ ಜೀವ ಬಿಡುವಾಗ, ಕೊರೋನಾ ಬಂದವರು ಭಯ ಆತಂಕಗಳಿಂದ ಪ್ರಾಣ ಕಳೆದುಕೊಳ್ಳುವುದು ವಿಚಿತ್ರವೇನೂ ಅಲ್ಲ. ನಮ್ಮ ಪ್ರಜ್ಞೆಯೇ ನಮ್ಮ ಆರೋಗ್ಯವನ್ನು ಕಾಯುವ ತಾಯಿ. ಅದನ್ನು ನಾವು ಹೇಗೆ ಇಟ್ಟುಕೊಂಡಿದ್ದೇವೆ ಎಂಬುದರ ಮೇಲೂ ನಮ್ಮ ದೇಹಾರೋಗ್ಯ ಅವಲಂಬಿಸಿರುತ್ತದೆ. ಬಿಪಿ ಹಾಗೂ ಶುಗರ್‌ಗಳನ್ನು ನಮ್ಮ ಮನಸ್ಸಿನ ಶಾಂತಿ ಸಮಾಧಾನಗಳಿಂದಲೇ ಗೆಲ್ಲಬಹುದು. ಆದರೆ ಇಂಥವರು ಕೊರೋನಾ ಪೀಡಿತರಾದರೆ ಸಾಯುವ ಸಂಭವ ಹೆಚ್ಚು ಎಬ ಮಾತನ್ನೂ ನಾವು ನಂಬಿಬಿಟ್ಟಿದ್ದೇವೆ. ಹಾಗೇನೂ ಇಲ್ಲ. ಅರುವತ್ತಕ್ಕಿಂತ ಹೆಚ್ಚು ವಯಸ್ಸಾದವರೂ ಕೋವಿಡ್‌ ಬಂದು ಚಿಕಿತ್ಸೆ ಪಡೆದುಕೊಂಡು ಬದುಕಿ ಉಳಿದಿದ್ದಾರೆ. ಬಿಪಿ, ಶುಗರ್‌ ಇದ್ದವರೂ ಕೋವಿಡ್‌ ಬಂದ ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 

ಇನ್ನೂ ಕೆಲವು ಸುದ್ದಿಗಳನ್ನು ನೀವು ಗಮನಿಸಿರಬಹುದು, ಕೊರೋನಾ ಬಂತು ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡವರ ಕತೆಗಳನ್ನು ಗಮನಿಸಿದ್ದೀರಾ? ಇವರಲ್ಲಿ ಯಾರಿಗೂ ಮೇಜರ್ ಅನ್ನಿಸುವಂಥ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಕೊರೋನಾ ಪಾಸಿಟಿವ್‌ ಬಂದಿತ್ತು ಅಷ್ಟೇ. ಅಷ್ಟಕ್ಕೇ ಹೆದರಿ, ಸಾವು ನನ್ನ ಮನೆಯ ಮೆಟ್ಟಿಲ ಬಳಿಗೇ ಬಂದುಬಿಟ್ಟಿದೆ ಎಂದು ಭಾವಿಸಿ, ಹೆದರಿ ತಲ್ಲಣಗೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕೊರೋನಾ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ಕೊಡಿಸೋದು ಹೇಗೆ ? ...

ಪಾಸಿಟಿವ್‌ ಚಿಂತನೆ, ಧನಾತ್ಮಕ ಮಾತು ನಡೆ ನುಡಿಗಳು ನಮ್ಮನ್ನು ಕಾಪಾಡುತ್ತವೆ ಅನ್ನುವುದು ಇದಕ್ಕೇ. ಹಲವು ಉದಾಹರಣೆಗಳು ಸಿಗುತ್ತವೆ. ಹಲವು ಮಂದಿ ಕ್ಯಾನ್ಸರ್‌ ಪೀಡಿತರು ನಮ್ಮ ಮಧ್ಯೆ ಆರೋಗ್ಯದಿಂದ ಬದುಕುತ್ತಿರುವುದನ್ನು ನಾವು ಕಾಣಬಹುದು. ಇವರಲ್ಲಿ ಕೆಲವರಿಗೆ ಸ್ಟೇಜ್‌ ೨, ಸ್ಟೇಜ್‌ ೩ ಕ್ಯಾನ್ಸರ್‌ ಬಂದವರಿದ್ದರೂ ಸರಿಯಾದ ಚಿಕಿತ್ಸೆ ಪಡೆದುಕೊಂಡು, ಜೀವನಾಸಕ್ತಿ ಉಳಿಸಿಕೊಂಡು ಲವಲವಿಕೆಯಿಂದ ಬದುಕಿರುತ್ತಾರೆ. ಬಾಲಿವುಡ್‌ ನಟ ಇರ್ಫಾನ್‌ ಖಾನ್‌, ಅತ್ಯಂತ ಮಾರಕವಾದ ಕ್ಯಾನ್ಸರ್‌ ಬಂದಿದ್ದರೂ ಕೊನೆಯ ಕ್ಷಣದವರೆಗೂ ಲವಲವಿಕೆಯಿಂದ ನಟಿಸುತ್ತ ಬದುಕಿದ್ದರು. ಯುವರಾಜ್‌ ಸಿಂಗ್‌, ಲಿಸಾ ರೇ ಮುಂತಾದವರು ಯಾವುದೇ ಕ್ಷಣದಲ್ಲಿ ಉಲ್ಬಣಗೊಳ್ಳಬಹುದಾದ ಕ್ಯಾನ್ಸರ್‌ ತಮ್ಮೊಳಗೆ ಇದ್ದರೂ ಅದನ್ನು ಕಡೆಗಣಿಸಿ, ಧನಾತ್ಮಕ ಚಿಂತನೆಯಿಂದಲೇ ಬದುಕುತ್ತಿದ್ದಾರೆ. ಬದುಕು ಸಾಗಿಸಲು ಬೇಕಾದ್ದು ಹಿಡಿಯಷ್ಟು ಅನ್ನ, ನೀರು ಮತ್ತು ಜೀವನಾಸಕ್ತಿ.

ಬಂತು ನೋಡಿ ಕೊರೋನಾ ಫ್ಯಾಷನ್ ಟ್ರೆಂಡ್! 
ಸಾವಿರಾರು ಮಂದಿ ವಲಸೆ ಕಾರ್ಮಿಕರು, ಲಾಕ್‌ಡೌನ್‌ ಸಂದರ್ಭದಲ್ಲಿ ದುಡಿಮೆಯ ಎಲ್ಲ ಅವಕಾಶಗಳನ್ನು ಕಳೆದುಕೊಂಡರೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಬದಲಾಗಿ ಮಕ್ಕಳು ಮರಿಗಳನ್ನು ಎತ್ತಿಕೊಂಡು, ಗಂಟುಮುಟೆ ಕಟ್ಟಿಕೊಂಡು, ಸಾವಿರಾರು ಮೈಲಿ ನಡೆದಾದರೂ ಸರಿ ಊರು ಸೇರುತ್ತೇನೆ, ಅಲ್ಲಿ ಕೂಲಿ ನಾಲಿ ಮಾಡಿಯಾದರೂ ಬದುಕುತ್ತೇನೆ ಎಂಬ ಛಲದಿಂದ ನಡೆದೇ ಹೊರಟರು. ಬದುಕುವ ಛಲ ಎಂದರೆ ಇದೇ. ಛಲ ಹಾಗೂ ಧನಾತ್ಮಕ ಚಿಂತನೆಯ ಮುಂದೇ ಬೇರಿನ್ನೇನೂ ಇರುವುದಿಲ್ಲ. ಆದ್ದರಿಂದಲೇ ಪಾಸಿಟಿವ್‌ ಚಿಂತನೆ ನಿಮ್ಮದಾಗಿರಲಿ. ಕೊರೋನಾ ದೂರವಿರಲಿ.

ಗರ್ಭಿಣಿಯರಿಗೆ ಮಾರಕವಾಗುತ್ತಿದೆ ಕೊರೋನಾ ಸೋಂಕು!