Asianet Suvarna News Asianet Suvarna News

ಗರ್ಭಿಣಿಯರಿಗೆ ಮಾರಕವಾಗುತ್ತಿದೆ ಕೊರೋನಾ ಸೋಂಕು!

ಹೆಚ್ಚಿದ ಆತಂಕ: ಹೆರಿಗೆಗೆ 15 ದಿನ ಬಾಕಿ ಇರುವ 8 ಗರ್ಭಿಣಿಯರಿಗೆ ಸೋಂಕು| ಇನ್ನೂ 57 ಮಂದಿ ವರದಿ ಬಾಕಿ

Coronavirus Harming The Pregnant Ladies
Author
Bangalore, First Published Jun 21, 2020, 7:44 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜೂ.21): ಸಿಲಿಕಾನ್‌ ಸಿಟಿಯಲ್ಲಿ ಕೊರೋನಾ ಸೋಂಕು ಗರ್ಭಿಣಿಯರ ಪಾಲಿಗೆ ತೀವ್ರ ಮಾರಕವಾಗತೊಡಗಿದೆ. ಹೆರಿಗೆಗೆ ಕೇವಲ 15 ದಿನ ಬಾಕಿ ಇರುವ ಎಂಟು ಮಂದಿಗೆ ನಗರದಲ್ಲಿ ಕೊರೋನಾ ಸೋಂಕು ದೃಢಪಟಿದೆ. ಇನ್ನು 57 ಗಂರ್ಭಿಣಿಯರ ಕೊರೋನಾ ಸೋಂಕು ಪರೀಕ್ಷಾ ವರದಿ ಬಾಕಿಯಿದ್ದು, ಈ ಸಂಖ್ಯೆ ಮತ್ತಷ್ಟುಹೆಚ್ಚಾಗುವ ಸಂಭವವಿದೆ.

ಗರ್ಭಿಣಿಯರಿಗೆ ಕೊರೋನಾ ಸೋಂಕಿನ ಅಪಾಯ ಹೆಚ್ಚಾಗಿರುವುದರಿಂದ ಮತ್ತು ಗರ್ಭಿಣಿಯರಲ್ಲಿ ಹೆಚ್ಚಾಗಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಂಟೈನ್ಮೆಂಟ್‌ ಪ್ರದೇಶದಲ್ಲಿ ವಾಸಿಸುವ ಮುಂದಿನ 15 ದಿನದಲ್ಲಿ ಹೆರಿಗೆ ಆಗುವ ಸಾಧ್ಯತೆ ಇರುವ ಗರ್ಭಿಣಿಯರನ್ನು ಕಡ್ಡಾಯವಾಗಿ ಕೊರೋನಾ ಸೋಂಕು ಪರೀಕ್ಷೆ ನಡೆಸುವಂತೆ ಆದೇಶಿಸಲಾಗಿತ್ತು.

ಅದರಂತೆ ಬಿಬಿಎಂಪಿ ಆರು ರೆಫರಲ್‌ ಆಸ್ಪತ್ರೆಗಳಲ್ಲಿ ಈವರೆಗೆ ಒಟ್ಟು 398 ಮಂದಿ ಗರ್ಭಿಣಿಯರ ಗಂಟಲ ದ್ರವವನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಎಂಟು ಮಂದಿ ಗರ್ಭಿಣಿಯರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನು 57 ಮಂದಿ ಗರ್ಭಿಣಿಯರ ಕೊರೋನಾ ಸೋಂಕು ಪರೀಕ್ಷಾ ವರದಿ ಬರುವುದು ಬಾಕಿ ಇದೆ.

ಈ ವರೆಗೆ ಕೊರೋನಾ ಸೋಂಕು ದೃಢಪಟ್ಟಗರ್ಭಿಣಿಯರ ಪೈಕಿ ಪಾದರಾಯನಪುರ ಕಂಟೈನ್ಮೆಂಟ್‌ ಪ್ರದೇಶದಲ್ಲಿ ವಾಸಿಸುತ್ತಿರುವ ಗರ್ಭಿಣಿಯರೇ ಹೆಚ್ಚಾಗಿದ್ದಾರೆ. ಕಳೆದ ಶುಕ್ರವಾರ ಪಾದರಾಯನಪುರದ ಇಬ್ಬರು ಗರ್ಭಿಣಿಯರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿಂದೆಯೂ ಪಾದರಾಯನಪುರದ ಹಲವು ಗರ್ಭಿಣಿಯರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಬಗ್ಗೆ ವರದಿಯಾಗಿತ್ತು.

ಒಂದು ಕಡೆ ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದು ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆಯೂ 250ರ ಗಡಿದಾಟಿದೆ. ನಗರದಲ್ಲಿ ಸುಮಾರು 35 ಸಾವಿರಕ್ಕೂ ಅಧಿಕ ಗರ್ಭಿಣಿಯರು ಮತ್ತು ಬಾಣಂತಿಯರು ಇದ್ದು ಗರ್ಭಿಣಿಯರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವುದು ತೀವ್ರ ಆತಂಕ ಎಡೆಮಾಡಿಕೊಟ್ಟಿದೆ.

ಐದು ಆಸ್ಪತ್ರೆಯಲ್ಲಿ ವಾರದಿಂದ ಪರೀಕ್ಷೆ

ನಗರದಲ್ಲಿ ಕೊರೋನಾ ಹಾಟ್‌ಸ್ಪಾಟ್‌ ಆಗಿರುವ ಪಾದರಾಯನಪುರದ ಜೀವನ್‌ ಭೀಮಾನಗರದ ಬಿಬಿಎಂಪಿಯ ರೆಫರಲ್‌ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಗರ್ಭಿಣಿಯರಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಉಳಿದ ಐದು ಬಿಬಿಎಂಪಿ ರೆಫರಲ್‌ ಆಸ್ಪತ್ರೆಗಳಾದ ಹಲಸೂರು, ಎಚ್‌.ಸಿದ್ಧಯ್ಯ ರಸ್ತೆ, ಶ್ರೀರಾಮ್‌ಪುರ, ಹೊಸಹಳ್ಳಿ ಹಾಗೂ ಬನಶಂಕರಿ ರೆಫರಲ್‌ ಆಸ್ಪತ್ರೆಗಳಲ್ಲಿ ಕಳೆದ ಒಂದು ವಾರದಿಂದ ಗರ್ಭಿಣಿಯರ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಕೊರೋನಾ ಸೋಂಕು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಬಿಬಿಎಂಪಿಯ ಕ್ಲಿನಿಕಲ್‌ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ.ನಿರ್ಮಲಾ ಬುಗ್ಗಿ ಅವರು ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವ ಗರ್ಭಿಣಿಯರಿಗೆ ಹೆಚ್ಚಿನ ಅಪಾಯ ಇರುವುದರಿಂದ ಸರ್ಕಾರದ ನಿರ್ದೇಶನದ ಮೇರೆಗೆ ಹೆರಿಗೆಗೆ 15 ದಿನ ಬಾಕಿ ಇರುವ ಗರ್ಭಿಣಿಯರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

- ಡಾ.ನಿರ್ಮಲಾ ಬುಗ್ಗಿ, ಮುಖ್ಯ ಆರೋಗ್ಯಾಧಿಕಾರಿ ಕ್ಲಿನಿಕಲ್‌ ವಿಭಾಗ, ಬಿಬಿಎಂಪಿ

Follow Us:
Download App:
  • android
  • ios