ಕೊರೋನಾ ಸೆಕ್ಸ್‌ ಇದ್ದಂತೆ, ಕೊರೋನಾ ಫ್ಯಾಷನ್‌ ಕೂಡ ಬಂದುಬಿಟ್ಟಿದೆ. ಇನ್ನೊಬ್ಬರನ್ನು ದೂರವಿಡುವುದೇ ಈ ಫ್ಯಾಷನ್‌ನ ಪ್ರಧಾನ ಸೂತ್ರ. 

ಮಾಸ್ಕ್‌ಗಳು ನಿತ್ಯ ಜೀವನದ ಭಾಗ ಆಗಿಬಿಟ್ಟಿವೆ. ಹಾಗೇ ಫ್ಯಾಷನ್‌ ಶೋ‌ಗಳೂ ಆರಂಭ ಆಗಿವೆ. ಆದರೆ ಫ್ಯಾಷನ್‌ನಲ್ಲಿ ಸೌಂದರ್ಯ ಹಾಗೂ ಅದನ್ನು ಆಧರಿಸಿ ದೇಹದ ಮೇಲೆ ಇರುವ ಅಥವಾ ಇಲ್ಲದ ಬಟ್ಟೆಯ ಹೊದಿಕೆಯೇ ಪ್ರಧಾನ. ಆದರೆ ಈಗ ಮಾಡೆಲ್‌ಗಳು ಮೈ ಪೂರ್ತಿ ತೆರೆದುಕೊಂಡು ಫ್ಯಾಷನ್‌ ಶೋ‌ ನಡೆಸುವುದು ಸಾಧ್ಯವಿಲ್ಲ. ಫ್ಯಾಷನ್‌ ಉದ್ಯಮ ಕೂಡ ಅಪ್‌ಡೇಟ್‌ ಆಗಿದೆ. ಧರಿಸುವ ಬಟ್ಟೆಯಲ್ಲಿ, ಹ್ಯಾಟ್‌ನಲ್ಲಿ, ಶೂನಲ್ಲಿ ಕೂಡ ಕೋವಿಡ್‌ ಹರಡದಂಥ ಮುನ್ನೆಚ್ಚರಿಕೆಯ ಡಿಸೈನ್‌ಗಳನ್ನು ಡಿಸೈನರ್‌ಗಳು ಎಚ್ಚರಿಕೆಯಿಂದ ರೂಪಿಸುತ್ತಿದ್ದಾರೆ.

ಉದಾಹರಣೆಗೆ ಇತ್ತೀಚೆಗೆ ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ಫ್ಯಾಶನ್‌ ಶೋದಲ್ಲಿ ಅಗಲವಾದ ಹ್ಯಾಟ್‌ ಒಂದು ಎಲ್ಲ ಜನರ ಮೆಚ್ಚುಗೆ ಗಳಿಸಿತು. ಹ್ಯಾಟ್‌ ಇಂಗ್ಲೆಂಡ್‌ ಸೇರಿದಂತೆ ಯುರೋಪ್‌ನ ಜನಜೀವನದ ಒಂದು ಪ್ರಮುಖ ಭಾಗವಾಗಿತ್ತು. ನಿಧಾನವಾಗಿ ಅದು ಕ್ಷೀಣಿಸುತ್ತಿದ್ದು, ಚಳಿಗಾಲದಲ್ಲಿ ಅಷ್ಟೆ ಧರಿಸುವುದು ರೂಢಿಯಾಗಿದೆ. ಈಗ ಆ ಅಭ್ಯಾಸವನ್ನು ಮತ್ತೆ ರೂಢಿಸಲು ಫ್ಯಾಶನ್‌ ಡಿಸೈನರ್‌ಗಳು ಮುಂದಾಗಿದ್ದಾರೆ. ಹ್ಯಾಟ್‌ನಿಂದ ಏನು ಉಪಯೋಗ? ಅಗಲವಾದ ಹ್ಯಾಟ್‌, ನಿಮ್ಮ ಮುಖದ ಸಮೀಪ ಮತ್ತೊಬ್ಬರ ಮುಖ ಬಾರದಂತೆ ತಡೆಯುತ್ತದೆ. ಸಾಮಾನ್ಯವಾಗಿ ಹ್ಯಾಟ್‌ಗಳು ಒಂದುವರೆ ಅಡಿ ಅಗಲವಿದ್ದರೆ, ಕೊರೊನಾ ಹ್ಯಾಟ್‌ಗಳು ಮೂರಡಿ, ನಾಲ್ಕಡಿ ಅಗಲವಿವೆ.
ಗ್ರಿಗೋರ್‌ ಲೂಪ್‌ ಎಂಬ ಇನ್ನೊಬ್ಬ ಡಿಸೈನರ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ೭೫ ಸೈಜಿನ ಶೂಗಳನ್ನು ತಯಾರಿಸಿದ್ದಾನೆ, ಈ ಶೂಗಳನ್ನು ಧರಿಸಿದರು ಇಬ್ಬರು ಎದುರುಬದುರಾದರೆ, ಅವರಿಬ್ಬರೂ ಪರಸ್ಪರ ಒಂದೂವರೆ ಮೀಟರ್‌ ದೂರದಲ್ಲಿರುವುದು ಅನಿವಾರ್ಯ. ಇಲ್ಲವಾದರೆ ಒಬ್ಬನ ಬೂಟುಗಳ ಮೇಲೆ ಇನ್ನೊಬ್ಬನ ಬೂಟುಗಳು ಬಂದುಬಿಡುತ್ತವೆ.

ಇದೇ ರೀತಿ ಮೈಮೇಲೆ ಮುಳ್ಳುಮುಳ್ಳಾದ ಕಿರೀಟದಂಥ ರಚನೆಗಳಿರುವ ಮೇಲಂಗಿ, ಕಥಕ್ಕಳಿಯ ಪಾತ್ರಧಾರಿಗಳ ಅಗಲವಾದ ಲಂಗದ ಹಾಗಿರುವ ಸ್ಕರ್ಟ್‌ಗಳು ಇತ್ಯಾದಿಗಳು ಈ ಫ್ಯಾಶನ್‌ ಶೋಗಳಲ್ಲಿ ಗಮನ ಸೆಳೆಯುತ್ತಿವೆ. 
ಇಂಥ ಆವಿಷ್ಕಾರಗಳೂ ಹೊಸತೇನೂ ಅಲ್ಲ ಎಂದು ಆ ಡಿಸೈನರ್‌ಗಳೇ ಹೇಳುತ್ತಾರೆ. ಈಗ ಚಾಲ್ತಿಯಲ್ಲಿರುವ ಕೆಲವು ಡಿಸೈನುಗಳು, ಈ ಶತಮಾನ ಹಾಗೂ ಕಳೆದ ಶತಮಾನದಲ್ಲಿ ಹಬ್ಬಿದ ಕೆಲವು ರೋಗಗಳ ಹಿನ್ನೆಲೆಯಲ್ಲಿ ಬಳಕೆಗೆ ಬಂದಿವೆ, ಉದಾಹರಣೆಗೆ ದಡಾರ, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ, ಇನ್ನೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬರದಂತೆ ಮೈತುಂಬ ಬಟ್ಟೆ ಧರಿಸುವುದು ರೂಢಿಯಾಗಿತ್ತು. ಪ್ಲೇಗ್‌ನ ಸಂದರ್ಭದಲ್ಲೂ ಹೀಗೇ ಆಗಿತ್ತು. ಅಂದರೆ ಸಾಂಕ್ರಾಮಿಕ ರೋಗಗಳು ಕೂಡ ಬಟ್ಟೆ ಧರಿಸುವಿಕೆಯನ್ನು, ಫ್ಯಾಶನ್‌ ಪ್ರಜ್ಞೆಯನ್ನು ಬದಲಾಯಿಸುತ್ತ ಬಂದಿವೆ.

ಕ್ವಾರಂಟೈನ್ ಅವಧಿಯಲ್ಲಿ ಬಯಲಾಗ್ತಿದೆ ಬಾಲಿವುಡ್ ಬೆಡಗಿಯರ ಬ್ಯೂಟಿ ಸೀಕ್ರೆಟ್ಸ್ ...

೧೭ನೇ ಶತಮಾನದಲ್ಲಿ ಪ್ಲೇಗ್‌ ಹರಡಿದಾಗ, ಪೇಷೆಂಟ್‌ಗಳನ್ನು ಪರೀಕ್ಷಿಸುತ್ತಿದ್ದ ಡಾಕ್ಟರ್‌ಗಳು ಮೂಗಿನ ಬಳಿ ಹದ್ದಿನ ಉದ್ದ ಕೊಕ್ಕಿನಂಥ ರಚನೆಗಳಿದ್ದ ಮಾಸ್ಕ್‌ಗಳನ್ನು ತೊಡುತ್ತಿದ್ದರು. ಇದು ಬಗ್ಗಿ ಪರೀಕ್ಷಿಸುವಾಗಲೂ ಪೇಷೆಂಟ್‌ನಿಂದ ಸುರಕ್ಷಿತ ದೂರದಲ್ಲಿ ಇರಲು ವೈದ್ಯರಿಗೆ ನೆರವು ಆಗುತ್ತಿತ್ತು. 

ಮಾಸ್ಕ್ ಮಹಿಮೆ; ಲಿಪ್‌ಸ್ಟಿಕ್‌ಗೆ ಬೈಬೈ, ಕಾಜಲ್‌ಗೆ ಜೈಜೈ 

ಸಾಂಕ್ರಾಮಿಕ ರೋಗಗಳು ಹೆಚ್ಚಾದಾಗಲೆಲ್ಲ ಹತ್ತಿ ಬಟ್ಟೆಯ ಬಳಕೆ ಹೆಚ್ಚಾಗಿದೆ. ಯಾಕೆಂದರೆ ಅದನ್ನು ಹಲವು ಬಾರಿ ಧರಿಸಬಹುದು, ಧರಿಸಿದ ನಂತರ ಕೂಡಲೇ ತೊಳೆಯಬಹುದು ಹಾಗೂ ಸುಲಭವಾಗಿ ಒಣಗಿಸಬಹುದು. ಆದರೆ ನೈಲಾನ್‌ ಮತ್ತಿತರ ಕಚ್ಚಾವಸ್ತುಗಳಿಂದ ಸಿದ್ಧಪಡಿಸಿದ, ಗ್ರಾಂಡ್‌ ಆದ ಹಾಗೂ ಹೆಚ್ಚು ವಿನ್ಯಾಸಗಳಿರುವ ಬಟ್ಟೆಗಳನ್ನು ಡ್ರೈ ವಾಷ್‌ ಮಾತ್ರವೇ ಮಾಡಬೇಕಿರುತ್ತದೆ. ಆದರೆ ಪದೇ ಪದೇ ಹೀಗೆ ಡ್ರೈವಾಷ್‌ ಮಾಡಿಸುವುದು ಕಷ್ಟ. ಹೀಗಾಗಿ ಎಲ್ಲರೂ ಹತ್ತಿಯ ಬಟ್ಟೆಗಳ ಮೊರೆ ಹೋಗುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ ಸಾಮಾಜಿಕ ಹಾಗೂ ಅದ್ದೂರಿ ಕಾರ್ಯಕ್ರಮಗಳು ಕಡಿಮೆಯಾಗಲಿವೆ, ಶ್ರೀಮಂತರು ಕೂಡ ಮನೆಯಲ್ಲೇ ಉಳಿಯಲಿದ್ದಾರೆ. ತುಂಬಾ ಮಂದಿಗೆ ಕೆಲಸಗಳು ಹೋಗಲಿವೆ. ಹೀಗಾಗಿ ಫ್ಯಾಶನ್‌ ಟ್ರೆಂಡ್‌ಗಳು ಮತ್ತು ದುಬಾರಿ ಬಟ್ಟೆಗಳು ಮರೆಯಾಗಬಹುದು ಅಂತಲೂ ತಜ್ಞರು ಹೇಳಿದ್ದಾರೆ.

ಈ ವಿಷಯ ತಿಳಿದ್ರೆ ದುಪ್ಪಟ್ಟಾ ಮೇಲಿನ ಹೆಣ್ಮಕ್ಕಳ ಪ್ರೀತಿ ದುಪ್ಪಟ್ಟಾಗೋದು ಪಕ್ಕಾ!