ಕಹಿ ಬೇವಿನಲಿ ಅಡಗಿದೆ ಸದ್ಗುಣ, ಹಲವು ಸಮಸ್ಯೆಗೆ ಹೇಳಿ ಗುಡ್ ಬೈ
ಬೇವಿನ ಎಲೆಯು ಅನೇಕ ರೀತಿಯ ದೈಹಿಕ ಕಾಯಿಲೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಇದು ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ಕಹಿಯಾದ ರುಚಿ ನೀಡುವ ಆಹಾರಗಳಿಂದ ನಮ್ಮ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ. ಹಾಗಲಕಾಯಿ, ಕಹಿ ಸೋರೆಕಾಯಿ ಸೇರಿ ಹಲವು ತರಕಾರಿಗಳಿಂದ ನಮ್ಮ ಆರೋಗ್ಯ ಹಿಡಿತದಲ್ಲಿರುತ್ತದೆ. ಅದೇ ರೀತಿ ಕಹಿಯಾದ ಬೇವು ಕೂಡ. ಬೇವು ಎಂದಾಕ್ಷಣ ಕಹಿ ನೆನಪಾಗುತ್ತದೆ. ಆದರೆ ಇದರಲ್ಲಿರುವ ಕಹಿ ಅಂಶ ಆರೋಗ್ಯಕ್ಕೆ ಎಷ್ಟು ಸಿಹಿ ಎನ್ನುವ ಬಗ್ಗೆ ಹಲವರಿಗೆ ತಿಳಿದಿರಲ್ಲ. ಬೇವು ಅನೇಕ ಔಷಧೀಯ ಗುಣಗಳಿಂದ ಕೂಡಿದ್ದು, ಸಾವಿರಾರು ವರ್ಷಗಳಿಂದ ಬೇವನ್ನು ಔಷಧಿ ತಯಾರಿಸಲು ಬಳಸಲಾಗುತ್ತದೆ. ಒಂದು ಬೇವಿನ ಮರವು 130ಕ್ಕೂ ಅಧಿಕ ಜೈವಿಕ ಗುಣಗಳನ್ನು ಹೊಂದಿದ್ದು, ಎಲೆಗಳು, ಕೊಂಬೆ, ತೊಗಟೆ, ಬೀಜ, ಬೇರು, ಹಣ್ಣು, ಹೂವುಗಳಲ್ಲಿಯೂ ಸಹ ಔಷಧಿಯ ಗುಣಗಳಿವೆ. ನಮ್ಮ ದೇಹದ ಚರ್ಮ, ಕೂದಲು, ರಕ್ತ ಸೇರಿ ಮೊದಲಾದ ಭಾಗಗಳಿಗೆ ಬೇವು ಅತ್ಯುತ್ತಮವಾಗಿದೆ. ಹೀಗಾಗಿ ಬೇವಿನ ಎಲೆಗಳನ್ನು ಪ್ರತಿದಿನ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮೊಡವೆಗಳಿಗೆ ಹೇಳಿ ಗುಡ್ ಬೈ:
ಬೇವಿನ ಎಲೆಯು(Neem Leaves) ಆಯುರ್ವೇದದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಪಳಪಳ ಹೊಳೆಯುವ ಚರ್ಮದ ಕಾಂತಿಗೆ ಬೇವಿನ ಎಲೆ ಮಹತ್ವದ್ದಾಗಿದೆ. ಬೇವಿನ ಎಲೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆ, ಬ್ಲಾಕ್ ಅಂಡ್ ವೈಟ್ ಹೆಡ್ಸ್’ಗಳನ್ನು ಕಡಿಮೆ ಮಾಡುತ್ತದೆ. ಇದು ಚರ್ಮದಲ್ಲಿರುವ ದದ್ದುಗಳು, ತುರಿಕೆ, ಸೋಂಕು, ಸುಟ್ಟ ಗಾಯಗಳನ್ನು ಸಹ ಗುಣಪಡಿಸುತ್ತದೆ. ಮುಖ್ಯವಾಗಿ ಬೇವಿನಿಂದ ಮೊಡವೆಗಳಿಗೆ (Pimples) ಪರಿಹಾರ ದೊರೆಯುತ್ತದೆ. ಬೇವಿನ ಪುಡಿಯನ್ನು ಶ್ರೀಗಂಧ, ಗುಲಾಬಿ(Rose), ಅರಿಶಿನ (Turmeric) ಸೇರಿ ಮೊಡವೆಗಳ ವಿರುದ್ಧ ಹೋರಾಡುವ ಇತರ ಗಿಡಮೂಲಿಕೆಗಳೊಂದಿಗೆ ಬೆರೆಸಿ, ಮೊಸರು(Curd) ಅಥವಾ ನೀರಿನಿಂದ ಪೇಸ್ಟ್ ತಯಾರಿಸಿ ಫೇಸ್ ಪ್ಯಾಕ್‌ನಂತೆ ಬೆರೆಸಿ ಮುಖಕ್ಕೆ ಲೇಪಿಸಬಹುದು. ಅಥವಾ ಬಹಳ ದಿನಗಳಿಂದ ಮೊಡವೆಗಳ ಸಮಸ್ಯೆಯಿಂದ ಬಳಲುತ್ತಿರುವವರು ಬೇವಿನ ಎಲೆಗಳ ರಸವನ್ನು ಮುಖದ ಮೇಲೆ ಮೊಡವೆಗಳಿರುವ ಜಾಗಕ್ಕೆ ಹಚ್ಚಿ ಮೊಡವೆಗಳಿಂದ ಗುಣ ಕಾಣಬಹುದು. ಹಾಗೂ ಬೇವಿನ ನೀರಿನಿಂದ ಮುಖವನ್ನು ಮಸಾಜ್ ಮಾಡಿದರೆ, ಮುಖದಲ್ಲಿರುವ ತೇವಾಂಶ ಹಾಗೆ ಉಳಿದು ಚರ್ಮದ ಮೃದುತ್ವ ಮತ್ತು ಕಾಂತಿ ಹೆಚ್ಚಾಗುತ್ತದೆ.
ಡಯಾಬಿಟಿಸ್’ಗೆ ಬೇವು ಮನೆಮದ್ದು:
ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಅಥವಾ ಸಕ್ಕರೆ ಕಾಯಿಲೆಯು ಜನರನ್ನು ಹೆಚ್ಚಾಗಿ ಕಾಡುತ್ತಿದೆ. ಮಧುಮೇಹವು ದೀರ್ಘ ಕಾಲ ಕಾಡುವ ಕಾಯಿಲೆ. ಒಮ್ಮೆ ಬಂದರೆ ಹುಷಾರಾಗುವುದು ಸುಲಭದ ಮಾತಲ್ಲ. ಆದರೆ ಪ್ರತಿದಿನ ಬೇವಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದಲ್ಲಿನ ಸಕ್ಕರೆ ಪ್ರಮಾಣ ಸೀಮಿತ ಸ್ಥಿತಿ ಕಾಯ್ದುಕೊಂಡು ಡಯಾಬಿಟಿಸ್’ನಿಂದ ದೂರ ಉಳಿಯಬಹುದು. ಈಗಾಗಲೇ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಬೇವಿನ ಜ್ಯೂಸ್ (Neem Juice) ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಾಮಾನ್ಯ ಸ್ಥಿತಿಗೆ ತರಬಹುದು. ಇದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ರಕ್ತ ಶುದ್ಧೀಕರಣ, ಜೀರ್ಣಕ್ರಿಯೆಗೆ ಸಹಾಯಕಾರಿ:
ಬೇವಿನ ರಸವು ಮನುಷ್ಯನ ದೇಹದ ರಕ್ತವನ್ನು ಶುದ್ಧಗೊಳಿಸಲು ಸಹಾಯಕಾರಿಯಾಗಿದೆ. ರಕ್ತ ಶುದ್ಧಿಯಾಗುವುದರಿಂದ ದೇಹದಲ್ಲಿ ರಕ್ತ ಸಂಚಾರ ಕೂಡ ಉತ್ತಮಗೊಂಡು ದೇಹದ ಇನ್ನಿತರ ಭಾಗಗಳಿಗೂ ಸರಾಗವಾಗಿ ರಕ್ತ ಹರಿಯುತ್ತದೆ. ರಕ್ತದ ಒತ್ತಡ ಸಹ ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ಹೃದಯದ ತೊಂದರೆಗಳು ಸಹ ದೂರಾಗುತ್ತವೆ. ಇನ್ನು ಜೀರ್ಣಕ್ರಿಯೆಗೂ (digestion)
ಇದನ್ನೂ ಓದಿ: ಹಲವು ಚಮತ್ಕಾರಗಳ ‘ಬ್ರೊಕೊಲಿ’, ಈ ಸೂಪರ್ ಫುಡ್ ಉತ್ತಮ ಆರೋಗ್ಯಕ್ಕೆ ಸಹಾಯಕಾರಿ
ಸಹ ಬೇವು ಸಹಕಾರಿಯಾಗಿದೆ. ಉತ್ತಮ ಜೀರ್ಣಕ್ರಿಯೆ ಉಂಟಾಗಲು ಬೇವಿನ ಸೊಪ್ಪು ತಿಂದರೆ ಒಳ್ಳೆಯದು. ಇದು ಇಡೀ ಜೀರ್ಣಾಂಗ ವ್ಯವಸ್ಥೆಯ ಜೊತೆಗೆ ಕರುಳಿನ ಆರೋಗ್ಯಕ್ಕೂ ಉಪಯುಕ್ತವಾಗುತ್ತವೆ.
ಕೂದಲಿನ ಕೇರ್ ಟೇಕರ್:
ಬೇವು ಕೂದಲಿನ (Hair) ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ತಲೆಹೊಟ್ಟು ಮತ್ತು ಶುಷ್ಕ ನೆತ್ತಿಗೆ ಬೇವಿನ ಸೊಪ್ಪು ಬಳಸುವುದರಿಂದ ಸಮಸ್ಯೆ ನಿವಾರಣೆಯಾಗಲಿದೆ. ವಾತಾವರಣದಲ್ಲಿ ಹವಾಮಾನ ಬದಲಾದರೆ ನಿಮ್ಮ ನೆತ್ತಿಯ ಪಿಎಚ್ ಏರುಪೇರಾಗಿ ನಿಮ್ಮ ತಲೆಕೂದಲು ಜಿಡ್ಡುಜಿಡ್ಡಾಗಿ ಹೊಟ್ಟು ಉತ್ಪತ್ತಿಯಾಗುತ್ತದೆ. ಆದರೆ ಬೇವಿನ ಎಲೆಯಲ್ಲಿರುವ (Neem Leaves) ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿಂದ ಒಣ ನೆತ್ತಿ ಮತ್ತು ತಲೆಹೊಟ್ಟನ್ನು ನಿವಾರಿಸಬಹುದು. ತಲೆಕೂದಲು ಉದುರುವುದನ್ನು ಕೂಡ ನಿಯಮಿತವಾಗಿ ಹಚ್ಚುತ್ತಾ ಬಂದರೆ ತಡೆಯಬಹುದು.
ಇದನ್ನೂ ಓದಿ: Benefits of Pomegranate: ದಾಳಿಂಬೆ ಹಣ್ಣು ಟೇಸ್ಟಿ ಅಷ್ಟೆ ಅಲ್ಲ, ನೂರಾರು ಖಾಯಿಲೆಗೆ ರಾಮಬಾಣವೂ ಹೌದು
ಒಟ್ಟಿನಲ್ಲಿ ಬೇವಿನ ಉಪಯೋಗವನ್ನು ನಮ್ಮ ದೇಶದ ಆಯುರ್ವೇದ ಪದ್ದತಿಯಿಂದ ಹಿಡಿದು, ವಿದೇಶಗಳ ಔಷಧ ಪದ್ಧತಿಗೂ ಉಪಯೋಗ ಮಾಡುತ್ತಾ ಬಂದಿದ್ದಾರೆ. ಈ ಕಹಿಯಾದ ಬೇವಿನಲ್ಲಿ ಹಲವು ಸದ್ಗುಣಗಳ ತುಂಬಿದ್ದು, ನಮಗೆ ಸಹಕಾರಿಯಾಗಿವೆ.