ನೀವು ಹತ್ತಿರ ಸಂಬಂಧಿಯ ಮದುವೆ ಕಾರ್ಯಕ್ರಮಕ್ಕೆ ಹೋಗಿರುತ್ತೀರಿ. ಅಲ್ಲಿ ನಿಮ್ಮ ಅತ್ತೆ ಮಗ ಅವನ ಸ್ನೇಹಿತನನ್ನು ನಿಮಗೆ ಪರಿಚಯಿಸುತ್ತಾನೆ. ನೀವು ಅವರೊಂದಿಗೆ ಮಾತನಾಡುತ್ತೀರಿ. ಆದರೆ,ಇದಾದ ಕೆಲವೇ ಸಮಯದಲ್ಲಿ ನಿಮಗೆ ಅವರ ಹೆಸರು ಮರೆತು ಹೋಗುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ನೆನಪಾಗುವುದಿಲ್ಲ. ಇನ್ನೊಮ್ಮೆ ಕೇಳೋಣ ಎಂದರೆ ಏನಂದುಕೊಳ್ಳುತ್ತಾರೋ ಎಂಬ ಮುಜುಗರ.

ತಲೆದಿಂಬಿನ ಕವರ್ ಆಗಾಗ ಬದಲಿಸುತ್ತಿದ್ದೀರಾ?

ದೈನಂದಿನ ಬದುಕಿನಲ್ಲಿ ಇಂಥ ಅನೇಕ ಮರೆವುಗಳನ್ನು ಎಲ್ಲರೂ ಅನುಭವಿಸುತ್ತಾರೆ. ಆದರೆ,ಕೆಲವೊಮ್ಮೆ ಇಂಥ ಮರೆವುಗಳಿಂದ ಪೇಚಿಗೆ ಸಿಲುಕಿದ, ಅಪೂರ್ವ ಅವಕಾಶವನ್ನು ಕಳೆದುಕೊಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆಗೆಲ್ಲ ಇದರಿಂದ ಹೊರಬರುವುದು ಹೇಗಪ್ಪ ಎಂಬ ಯೋಚನೆ ನಿಮ್ಮ ತಲೆಹೊಕ್ಕಿ ಕೊರೆಯುತ್ತದೆ. ನಿಮಗೆ ಗಂಭೀರವಾದ ಮರೆವಿನ ಕಾಯಿಲೆ ಇಲ್ಲವೆಂದಾದರೆ ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ

1. ನಿತ್ಯ ದೈಹಿಕ ಚಟುವಟಿಕೆ ಕೈಗೊಳ್ಳಿ: ‘ಹೆಲ್ತಿ ಮೈಂಡ್ ಇನ್ ಹೆಲ್ತಿ ಬಾಡಿ’ ಎಂಬ ಮಾತನ್ನು ನೀವು ಕೇಳಿಯೇ ಇರುತ್ತೀರಿ. ದೈಹಿಕ ಚಟುವಟಿಕೆಯಿಂದ ಮಿದುಳು ಸೇರಿದಂತೆ ದೇಹದಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಮಿದುಳಿಗೆ ರಕ್ತ ಸಂಚಾರ ಹೆಚ್ಚುವುದರಿಂದ ನೆನಪಿನ ಶಕ್ತಿ ಚುರುಕುಗೊಳ್ಳುತ್ತದೆ. ವೈದ್ಯಕೀಯ ವರದಿಗಳ ಪ್ರಕಾರ ಉತ್ತಮ ಆರೋಗ್ಯಕ್ಕೆ ವಯಸ್ಕರು ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ನಡಿಗೆ ಅಥವಾ ಇನ್ಯಾವುದಾದರೂ ಲಘ ವ್ಯಾಯಾಮ ಕೈಗೊಳ್ಳಬೇಕು ಇಲ್ಲವೆ 75 ನಿಮಿಷಗಳ ಕಾಲ ಜಾಗಿಂಗ್ ಅಥವಾ ಅಂಥದ್ದೇ ಸ್ವಲ್ಪ ಬಿರುಸಿನ ವ್ಯಾಯಾಮವೇನಾದರೂ ಮಾಡುವುದು ಅಗತ್ಯ. ಒಂದು ವೇಳೆ ನಿಮಗೆ ಒಮ್ಮೆಗೇ ಪೂರ್ತಿ ವರ್ಕ್‍ಔಟ್ ಮಾಡಲು ಸಾಧ್ಯವಾಗುವುದಿಲ್ಲ ಎಂದಾದರೆ ವರ್ಕ್‍ಔಟ್ ಸಮಯವನ್ನು ಇಡೀ ದಿನಕ್ಕೆ 10 ನಿಮಿಷಗಳಂತೆ ವಿಂಗಡಿಸಿಕೊಳ್ಳಬಹುದು. 

ಉದಾಸೀನ ಬಿಟ್ಟು ಬ್ರಷ್ ಮಾಡಿ, ಇಲ್ಲವಾದರೆ ಹೃದಯಕ್ಕೆ ಹಾನಿಯಾದೀತು ಎಚ್ಚರ!

2. ಮಿದುಳಿಗೆ ಕೆಲಸ ನೀಡಿ: ದೇಹಕ್ಕೆ ವ್ಯಾಯಾಮ ಎಷ್ಟು ಅಗತ್ಯವೋ ಮಿದುಳಿಗೂ ಕೂಡ ಕೆಲಸ ನೀಡುವುದು ಅಗತ್ಯ. ಒಗಟು ಬಿಡಿಸುವುದು, ಪದಬಂಧ ತುಂಬಿಸುವುದು, ರಸಪ್ರಶ್ನೆಗಳಿಗೆ ಉತ್ತರಿಸುವುದು, ಮೆಂಟಲ್ ಎಬಿಲಿಟಿ ಟೆಸ್ಟ್‍ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು...ಹೀಗೆ ಮಿದುಳಿಗೆ ಕೆಲಸ ನೀಡುವ ಯಾವುದಾದರೂ ಒಂದು ಚಟುವಟಿಕೆಯನ್ನು ಪ್ರತಿದಿನ ಮಾಡಿ. ಜೊತೆಗೆ ಮನಸ್ಸಿಗೆ ಖುಷಿ ನೀಡುವ ಸಂಗೀತ, ಪೇಂಟಿಂಗ್ ಸೇರಿದಂತೆ ಯಾವುದಾದರೊಂದು ಚಟುವಟಿಕೆಯಲ್ಲಿ ಕೂಡ ತೊಡಗಿಕೊಳ್ಳಿ. ಇದರಿಂದ ನಿಮ್ಮ ಸ್ಮರಣಶಕ್ತಿ ಚುರುಕುಗೊಳ್ಳುತ್ತದೆ.

3. ಎಲ್ಲರೊಂದಿಗೂ ಬೆರೆಯಿರಿ: ಸ್ನೇಹಿತರು, ಬಂಧುಗಳು ಸೇರಿದಂತೆ ಪ್ರೀತಿಪಾತ್ರರನ್ನು ಆಗಾಗ ಭೇಟಿ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಖಿನ್ನತೆ ಕೂಡ ದೂರವಾಗುತ್ತದೆ. ಒತ್ತಡ ಹಾಗೂ ಖಿನ್ನತೆ ಸ್ಮರಣಶಕ್ತಿಯ ಮೇಲೆ ಪರಿಣಾಮ ಬೀರಿ ಅದನ್ನು ಕುಂಠಿತಗೊಳಿಸಬಲ್ಲವು.

4.ಶಿಸ್ತು ಅಳವಡಿಸಿಕೊಳ್ಳಿ: ನೀವು ಮಾಡುವ ಪ್ರತಿ ಕಾರ್ಯದಲ್ಲೂ ಶಿಸ್ತು ಅಳವಡಿಸಿಕೊಳ್ಳಿ. ಮನೆಯಲ್ಲಿರುವ ಪ್ರತಿ ವಸ್ತುವನ್ನು ವ್ಯವಸ್ಥಿತವಾಗಿ ಜೋಡಿಸಿಡಿ. ಇದರಿಂದ ನಿಮಗೆ ಆ ವಸ್ತುವನ್ನು ಎಲ್ಲಿಟ್ಟಿದ್ದೇನೆ ಎಂದು ನೆನಪಿಸಿಕೊಳ್ಳಲು ಸುಲಭವಾಗುತ್ತದೆ. ಇನ್ನು ಪ್ರತಿದಿನ ನೀವು ಮಾಡಬೇಕಾದ ಕಾರ್ಯಗಳನ್ನು ಅಂದು ಬೆಳಗ್ಗೆ ಒಂದು ಪುಸ್ತಕದಲ್ಲಿ ಕ್ರಮಬದ್ಧವಾಗಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಯಾವ ಕೆಲಸವನ್ನೂ ಮರೆಯದೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಅದೇರೀತಿ ನೀವು ಮಾಡುವ ಕೆಲಸದಲ್ಲೂ ಶಿಸ್ತಿರಲಿ. ಒಮ್ಮೆಗೆ ಅನೇಕ ಕೆಲಸಗಳನ್ನು ಮಾಡಬೇಡಿ. ನೀವು ಒಂದೇ ಕಾರ್ಯದ ಮೇಲೆ ಗಮನ ಕೇಂದ್ರೀಕರಿಸಿದರೆ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಮಿದುಳು ಮರೆಯವುದಿಲ್ಲ.

ಉದಾಸೀನ ಬಿಟ್ಟು ಬ್ರಷ್ ಮಾಡಿ, ಇಲ್ಲವಾದರೆ ಹೃದಯಕ್ಕೆ ಹಾನಿಯಾದೀತು ಎಚ್ಚರ!

5. ಕಣ್ತುಂಬ ನಿದ್ರೆ ಮಾಡಿ: ನಿದ್ರೆ ಕೂಡ ನಮ್ಮ ಸ್ಮರಣಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಮಿದುಳಿನ ಆರೋಗ್ಯಕ್ಕೆ ದಿನಕ್ಕೆ 8-9 ಗಂಟೆಗಳ ನಿದ್ರೆ ಅಗತ್ಯ. ರಾತ್ರಿ ನಿದ್ರೆ ಸಮರ್ಪಕವಾಗಿರದಿದ್ದರೆ ಮರುದಿನ ನೀವು ಮಾಡುವ ಕಾರ್ಯಗಳ ಮೇಲೆ ಅದು ಪ್ರಭಾವ ಬೀರುತ್ತದೆ. ತಲೆ ಗೊಂದಲದ ಗೂಡಾಗಿರುತ್ತದೆ. ಕೆಲವೊಮ್ಮೆ ನಿಮಗೆ ಚೆನ್ನಾಗಿ ತಿಳಿದಿರುವ ಸಂಗತಿಗಳೇ ನೆನಪಿಗೆ ಬಾರದೇ ಹೋಗುವ ಸಾಧ್ಯತೆಯಿದೆ. ಪರೀಕ್ಷೆಯ ಹಿಂದಿನ ದಿನ ಚೆನ್ನಾಗಿ ನಿದ್ರೆ ಮಾಡಬೇಕು ಎಂದು ಹೇಳುವುದು ಇದೇ ಕಾರಣಕ್ಕೆ.

6. ಸಮತೋಲಿತ ಆಹಾರ ಸೇವಿಸಿ: ಮಿದುಳಿನ ಆರೋಗ್ಯಕ್ಕೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸುವುದು ಅಗತ್ಯ. ಹಣ್ಣುಗಳು, ತರಕಾರಿಗಳು ಹಾಗೂ ಕಾಳುಗಳು, ಕೊಬ್ಬು ಕಡಿಮೆಯಿರುವ ಪ್ರೋಟೀನ್ ಸಮೃದ್ಧ ಆಹಾರಗಳಾದ ಮೀನು, ಬೀನ್ಸ್ ಮಿದುಳಿನ ಆರೋಗ್ಯಕ್ಕೆ ಅತ್ಯುತ್ತಮವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಮಿತಿಮೀರಿದ ಆಲ್ಕೋಹಾಲ್ ಸೇವನೆಯಿಂದ ಗೊಂದಲ ಮೂಡುವ ಜೊತೆಗೆ ನೆನಪಿನಶಕ್ತಿ ಕುಂದುವ ಸಾಧ್ಯತೆಯಿದೆ.

ಮಕ್ಕಳನ್ನು ಬಲಿ ಪಡೆಯೋ ಡಿಫ್ತೀರಿಯಾ ಬಗ್ಗೆ ನಿಮಗೆಷ್ಟುಗೊತ್ತು?

7. ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಿರಿ: ಖಿನ್ನತೆ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ. ನೀವು ನಿಮ್ಮ ದೈಹಿಕ ಆರೋಗ್ಯವನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೀರೋ ಅಷ್ಟು ಚೆನ್ನಾಗಿ ನಿಮ್ಮ ಮಾನಸಿಕ ಆರೋಗ್ಯವೂ ಇರುತ್ತದೆ.