ದಿನಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಬ್ರಷ್ ಮಾಡುವುದರಿಂದ ಹೃದಯ ಬಡಿತದಲ್ಲಿ ವ್ಯತ್ಯಾಸ ಹಾಗೂ ಹೃದಯ ಸ್ತಂಭನವಾಗುವ ಸಾಧ್ಯತೆ ಕಡಿಮೆ ಎಂದು ದಕ್ಷಿಣ ಕೊರಿಯಾದಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ.

ಹಲ್ಲುಗಳಿಗೆ ಬ್ಯಾಟರಿ ಆ್ಯಸಿಡ್‌ನಷ್ಟೇ ಕ್ರೂರ ಹುಳಿ ಕ್ಯಾಂಡಿಗಳು !

ಆದರೆ, ಬ್ರಷ್ ಮಾಡುವುದಕ್ಕೂ ಹೃದಯದ ಆರೋಗ್ಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಈ ರಹಸ್ಯವನ್ನು ತಿಳಿಯಬೇಕೆಂದರೆ ಇದಕ್ಕೂ ಮುನ್ನ ನಡೆದ ಅಧ್ಯಯನವೊಂದರ ವರದಿಯನ್ನು ಅರಿಯುವುದು ಅಗತ್ಯ. ಈ ಹಿಂದೆ ನಡೆದ ಅಧ್ಯಯನವೊಂದರ ಪ್ರಕಾರ ಬಾಯಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡದಿದ್ದರೆ ಬ್ಯಾಕ್ಟೀರಿಯಾಗಳು ರಕ್ತವನ್ನು ಸೇರಿಕೊಂಡು ದೇಹದೆಲ್ಲೆಡೆ ಸಂಚರಿಸಿ ಉರಿಯೂತಗಳಿಗೆ ಕಾರಣವಾಗುತ್ತವೆ. ಉರಿಯೂತ ಹೃತ್ಕರ್ಣದಲ್ಲಿ ಕಂಪನ ಸೃಷ್ಟಿಸುವ ಅಥವಾ ಅಸಹಜ ಹೃದಯ ಬಡಿತಕ್ಕೊಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದರಿಂದ ಹೃದಯ ಸ್ತಂಭನವಾಗುವ ಸಾಧ್ಯತೆಯೂ ಅಧಿಕ ಎಂದಿದೆ.

ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯೋಲಜಿಯಲ್ಲಿ ಇತ್ತೀಚೆಗೆ ಪ್ರಕಟವಾದ ಹೊಸ ಅಧ್ಯಯನವು ಬಾಯಿ ಸ್ವಚ್ಛತೆ ಮತ್ತು ಹೃತ್ಕರ್ಣದಲ್ಲಿ ಕಂಪನ ಹಾಗೂ ಹೃದಯ ಸ್ತಂಭನದ ನಡುವೆ ಇರುವ ಸಂಬಂಧವನ್ನು ಪರಿಶೀಲಿಸಿದೆ. ಕೊರಿಯನ್ ನ್ಯಾಷನಲ್ ಹೆಲ್ತ್ ಇನ್ಶ್ಯೂರೆನ್ಸ್ ಸಿಸ್ಟ್ಂನಲ್ಲಿನ 40-79 ವರ್ಷದ ನಡುವಿನ ಇಲ್ಲಿಯ ತನಕ ಯಾವುದೇ ಹೃದಯ ಸಮಸ್ಯೆಗೊಳಗಾಗದ ಜನರನ್ನು ಅಧ್ಯಯನಕ್ಕೊಳಪಡಿಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಇವರನ್ನು ಸುಮಾರು 10.5 ವರ್ಷಗಳ ಕಾಲ ನಿರಂತರವಾಗಿ ಆರೋಗ್ಯ ತಪಾಸಣೆಗೊಳಪಡಿಸಿದಾಗ ಬ್ರಷ್ ಮಾಡುವುದಕ್ಕೂ ಹೃದಯದ ಆರೋಗ್ಯಕ್ಕೂ ಸಂಬಂಧವಿದೆ ಎಂಬುದು ಬೆಳಕಿಗೆ ಬಂದಿದೆ. 

ಸೆನ್ಸಿಟಿವ್ ಹಲ್ಲಿನ ಸಮಸ್ಯೆಯೇ? ಇಲ್ಲಿದೆ ಮನೆ ಮದ್ದು

ದಿನಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಬ್ರಷ್ ಮಾಡುವ ಅಭ್ಯಾಸ ನಿಮಗಿದ್ದರೆ ನಿಮಗೆ ಹೃತ್ಕರ್ಣದಲ್ಲಿ ಕಂಪನವುಂಟಾಗುವ ತೊಂದರೆ ಕಾಡುವ ಸಾಧ್ಯತೆ ಶೇ.10ರಷ್ಟು ಕಡಿಮೆ. ಹೃದಯ ಸ್ತಂಭನವಾಗುವ ಸಾಧ್ಯತೆಯೂ ಶೇ.12ರಷ್ಟು ಕಡಿಮೆ ಎಂದಿದೆ ಕೊರಿಯಾದ ಈ ಅಧ್ಯಯನ. 

ದಿನದಲ್ಲಿ 3 ಬಾರಿ ಬ್ರಷ್ ಮಾಡುವುದರಿಂದ ಹಲ್ಲು ಹಾಗೂ ಅದರ ಗಮ್ಗಳ ನಡುವಿನ ಚೀಲದಲ್ಲಿ ವಾಸಿಸುವ ಬ್ಯಾಕ್ಟೀರಿಯಾಗಳ ಪ್ರಮಾಣ ತಗ್ಗುತ್ತದೆ. ಈ ಮೂಲಕ ರಕ್ತಕ್ಕೆ ಸೇರ್ಪಡೆಗೊಳ್ಳುವ ಬ್ಯಾಕ್ಟೀರಿಯಾಗಳ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಹೀಗಾಗಿ ಹೃದಯದ ಮೇಲೆ ಇವುಗಳಿಂದಾಗುವ ಹಾನಿಯೂ ತಗ್ಗುತ್ತದೆ.

ನಮ್ಮ ದೇಹದಲ್ಲಿನ ಎಲ್ಲ ಅಂಗಗಳೂ ಒಂದಕ್ಕೊಂದು ಸಂಬಂಧ ಹೊಂದಿವೆ ಎನ್ನುವುದಕ್ಕೆ ಈ ಅಧ್ಯಯನ ಮತ್ತೊಂದು ನಿದರ್ಶನವಾಗಿದೆ. ದೇಹದ ಇತರ ಭಾಗಗಳ ಆರೋಗ್ಯಕ್ಕೆ ನೀಡುವಷ್ಟು ಮಹತ್ವವನ್ನು ನಾವು ಬಾಯಿಯ ಸ್ವಚ್ಛತೆಗೆ ನಿಡುವುದಿಲ್ಲ. ಬಹುತೇಕರು ದಿನದಲ್ಲಿ ಕೇವಲ ಒಂದೇ ಬಾರಿ ಬ್ರಷ್ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಅಲ್ಲದೆ, ದಂತ ಸಮಸ್ಯೆ ಎದುರಾದಾಗ  ವೈದ್ಯರ ಬಳಿ ಹೋಗದೆ ಅದನ್ನು ಅಲಕ್ಷಿಸುತ್ತಾರೆ ಕೂಡ. ಆದರೆ, ಈ ಅಧ್ಯಯನದಿಂದ ಬಾಯಿ ಆರೋಗ್ಯಕ್ಕೆ ಮಹತ್ವ ನೀಡುವುದು ಎಷ್ಟು ಮುಖ್ಯ ಎಂಬುದು ಸಾಬೀತಾಗಿದೆ.

ಹಲ್ಲು ತಿಕ್ಕದ ಮಕ್ಕಳಿಗೆ ಬರಬಹುದು ಹಾರ್ಟ್ ಪ್ರಾಬ್ಲಂ!

ಹಲ್ಲು ಮತ್ತು ವಸಡಿನ ಆರೋಗ್ಯ ರಕ್ಷಣೆಗೆ ಹೀಗೆ ಮಾಡಿ: 

•ದಿನಕ್ಕೆ 2-3 ಬಾರಿ ಬ್ರಷ್ ಮಾಡಿ. ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ ಬ್ರಷ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

•ಬ್ರಷ್ ಮಾಡಿದರಷ್ಟೇ ಸಾಲದು, ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು ಕೂಡ ಮುಖ್ಯ. ಬ್ರಷ್ ಮಾಡುವ ಸರಿಯಾದ ವಿಧಾನವನ್ನು ಅರಿತು ಅನುಸರಿಸಿ.

•ಹುಳುಕಾದ ಹಲ್ಲುಗಳನ್ನು ಹಾಗೆಯೇ ಬಿಡಬೇಡಿ. ಬದಲಿಗೆ ದಂತ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆಯಿರಿ.

•ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ದಂತ ವೈದ್ಯರನ್ನು ಭೇಟಿಯಾಗಿ ಹಲ್ಲು ಮತ್ತು ವಸಡಿನ ಆರೋಗ್ಯ ಪರೀಕ್ಷಿಸಿಕೊಳ್ಳಿ.