Asianet Suvarna News Asianet Suvarna News

ನಾನು ಸೋಷಿಯಲ್‌ ಮೀಡಿಯಾಗಳ ಪರ!: ಸಂದರ್ಶನದಲ್ಲಿ ಮೋದಿ ಮಾತು

ಭಾರತದಲ್ಲಿ ನಡೆಯುತ್ತಿರುವ ಬದಲಾವಣೆಯ ಪರ್ವವನ್ನು ಜಗತ್ತು ಕುತೂಹಲದಿಂದ ನೋಡುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಅತಿದೊಡ್ಡ ಬದಲಾವಣೆ ಹೇಗೆ ಸಾಧ್ಯವಾಗುತ್ತಿದೆ ಎಂಬ ಪ್ರಶ್ನೆ ಅನೇಕ ದೇಶಗಳಿಗೆ ಇದೆ. ಈ ಬಗ್ಗೆ ಅಮೆರಿಕದಲ್ಲಿ ನಡೆದ ಬ್ಲೂಮ್‌ಬರ್ಗ್‌ ಬಿಸಿನೆಸ್‌ ಶೃಂಗದಲ್ಲಿ ಸಂದರ್ಶನವೊಂದನ್ನು ನೀಡಿರುವ ಪ್ರಧಾನಿ ಮೋದಿ, ಹಲವಾರು ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

Narendra Modi interview At Bloomberg Business Summit
Author
Bangalore, First Published Sep 27, 2019, 11:07 AM IST

ಹವಾಮಾನ ಬದಲಾವಣೆ ತಡೆಯಲು ಸ್ವಚ್ಛ ಇಂಧನ ಅಗತ್ಯ. ಸ್ವಚ್ಛ ಇಂಧನವನ್ನು ಅತ್ಯಂತ ಕಡಿಮೆ ಬೆಲೆಗೆ ಜನರಿಗೆ ಒದಗಿಸುವಲ್ಲಿ ಭಾರತವು ಜಗತ್ತಿನಲ್ಲೇ ಮುಂದಿದೆ. ಈ ಸಾಧನೆ ಮಾಡಲು ಸಾಧ್ಯವಾಗಿದ್ದು ಹೇಗೆ?

ಭಾರತೀಯರ ಜೀವನಶೈಲಿ ಜಗತ್ತಿಗೇ ಮಾದರಿ. ನಾವು ಪೃಥ್ವಿ ನಮ್ಮ ತಾಯಿ ಎಂದು ನಂಬುತ್ತೇವೆ. ಭೂಮಿಯನ್ನು ಶೋಷಿಸುವ ಅಧಿಕಾರ ನಮಗಿಲ್ಲ. ನಮಗೆ ಕೇವಲ ಅದನ್ನು ಬಳಕೆ ಮಾಡುವ ಅಧಿಕಾರವಿದೆ. ಭೂಮಿಯು ನಮ್ಮ ಅಗತ್ಯಗಳನ್ನು ಪೂರೈಸಲು ಶಕ್ತವಿದೆ, ಆದರೆ ದುರಾಸೆಯನ್ನು ಪೂರೈಸಲು ಶಕ್ತವಿಲ್ಲ ಎಂಬುದು ನಮ್ಮ ಸಿದ್ಧಾಂತ. ಹೀಗಾಗಿ ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಯನ್ನು ಯಾವುದೇ ದೇಶದ ಸರ್ಕಾರಗಳಿಗಿಂತ ಹೆಚ್ಚಾಗಿ ಜನಸಾಮಾನ್ಯರೇ ತಮ್ಮ ನಡತೆಯ ಮೂಲಕ ತಡೆಯಲು ಸಾಧ್ಯವಿದೆ. ಮನುಷ್ಯ ತನ್ನ ಬದುಕನ್ನು ನಿಸರ್ಗದೊಂದಿಗೆ ಜೋಡಿಸಿ ಮುನ್ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇನ್ನು, ಭಾರತ ಸರ್ಕಾರ ಕೂಡ ಸ್ವಚ್ಛ ಇಂಧನ ತಯಾರಿಕೆಗೆ ಬಹಳ ಮಹತ್ವ ನೀಡಿದೆ.

ಮೊದಲಿಗೆ ನಾವು 175 ಗಿಗಾವ್ಯಾಟ್‌ ಸ್ವಚ್ಛ ಇಂಧನ ತಯಾರಿಸುವ ನಿರ್ಧಾರ ಮಾಡಿದ್ದೆವು. ಸಮಯಕ್ಕಿಂತ ಮೊದಲೇ ಅದರಲ್ಲಿ 120 ಗಿಗಾವ್ಯಾಟ್‌ ಗುರಿ ತಲುಪಿದ್ದೇವೆ. ಹೀಗಾಗಿ ನಮ್ಮ ಗುರಿಯನ್ನು ನಾವೇ ಎತ್ತರಿಸಿಕೊಂಡು, 450 ಗಿಗಾವ್ಯಾಟ್‌ ಸ್ವಚ್ಛ ಇಂಧನ ತಯಾರಿಕೆಯ ಗುರಿ ಹಾಕಿಕೊಂಡಿದ್ದೇವೆ. ಇದಕ್ಕಾಗಿ ಸರ್ಕಾರದ ನೀತಿಯಲ್ಲಿ ಬದಲಾವಣೆ ತರುವುದರ ಜೊತೆಗೆ, ಸ್ವಚ್ಛ ಇಂಧನ ತಯಾರಿಸುವವರಿಗೆ ಪ್ರೋತ್ಸಾಹ ಕೂಡ ನೀಡುತ್ತಿದ್ದೇವೆ. ಇವೆಲ್ಲವುಗಳಿಂದಾಗಿ ನವೀಕರಿಸಬಹುದಾದ ಇಂಧನಗಳ ಉತ್ಪಾದನೆ ಹೆಚ್ಚಿದ್ದು, ಜನರಿಗೆ ಕಡಿಮೆ ಬೆಲೆಗೆ ಸ್ವಚ್ಛ ಇಂಧನ ಲಭ್ಯವಾಗುತ್ತಿದೆ. ಇಲ್ಲಿ ನಮಗೊಂದು ಸಮಸ್ಯೆಯಿದೆ. ಅದು ಅಣವಿದ್ಯುತ್ತಿನದು. ಭಾರತ ಅಣುಶಕ್ತಿ ಉತ್ಪಾದಕ ರಾಷ್ಟ್ರಗಳ ಸಮೂಹದ ಸದಸ್ಯನಲ್ಲದೆ ಇರುವುದರಿಂದ ನಮಗೆ ಕಚ್ಚಾವಸ್ತುಗಳು ಸಿಗುತ್ತಿಲ್ಲ. ಇದೊಂದು ಸಮಸ್ಯೆ ಬಗೆಹರಿದರೆ ನವೀಕರಿಸಬಹುದಾದ ಇಂಧನ ಉತ್ಪಾದನೆ ಹಾಗೂ ಬಳಕೆಯಲ್ಲಿ ನಾವು ಜಗತ್ತಿಗೇ ಮಾದರಿಯಾಗುತ್ತೇವೆ.

* ನವೀಕರಿಸಬಹುದಾದ ಇಂಧನದ ಜೊತೆಗೆ ಇನ್ನಾವ ಪರಿಸರಸ್ನೇಹಿ ಕಾರ್ಯಗಳನ್ನು ಭಾರತ ಕೈಗೊಂಡಿದೆ?

ಜನರಿಗೆ ಸ್ವಚ್ಛ ನೀರು ಪೂರೈಸಲು ಹಾಗೂ ನೀರಿನ ಸಂರಕ್ಷಣೆ ಮಾಡಲು ಭಾರತ ‘ಜಲಜೀವನ ಮಿಶನ್‌’ ಎಂಬ ದೊಡ್ಡ ಯೋಜನೆ ಕೈಗೆತ್ತಿಕೊಂಡಿದೆ. ಇದರಡಿ ಮಳೆ ನೀರು ಕೊಯ್ಲು, ನೀರಿನ ಶುದ್ಧೀಕರಣ ಹಾಗೂ ಪುನರ್ಬಳಕೆಗೆ ಒತ್ತು ನೀಡುತ್ತಿದ್ದೇವೆ. ಒಣಗುತ್ತಿರುವ ನದಿಗಳನ್ನು ಪುನಶ್ಚೇತನಗೊಳಿಸಲು ಹಾಗೂ ನದಿಗಳನ್ನು ಜೋಡಿಸುವುದಕ್ಕೂ ಆದ್ಯತೆ ನೀಡುತ್ತಿದ್ದೇವೆ. ಇದರ ಜೊತೆಗೆ, ಒಂದು ಸಾರಿ ಬಳಸಿ ಬಿಸಾಕುವ ಪ್ಲಾಸ್ಟಿಕ್‌ ನಿಷೇಧಿಸಲು ಬಹುದೊಡ್ಡ ಆಂದೋಲನ ಹಮ್ಮಿಕೊಂಡಿದ್ದೇವೆ. ಅಕ್ಟೋಬರ್‌ 2ರಂದು ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ದೇಶಾದ್ಯಂತ ಪ್ಲಾಸ್ಟಿಕ್‌ ಬಳಕೆಯ ವಿರುದ್ಧ ಜಾಗೃತಿ ಮೂಡಿಸಲಾಗುತ್ತದೆ. ಈ ಎಲ್ಲ ಕ್ರಮಗಳ ಮೂಲಕ ಹವಾಮಾನ ಹಾಗೂ ಪರಿಸರ ಸಂರಕ್ಷಣೆಗೆ ಗಂಭೀರವಾದ ಹೆಜ್ಜೆಗಳನ್ನು ಭಾರತ ಇರಿಸುತ್ತಿದೆ.

* ವಿದ್ಯುತ್‌ ತಯಾರಿಕೆಗೆ ಭಾರತ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲು ಬಳಸುತ್ತಿದೆ. ಅದನ್ನು ಕಡಿಮೆ ಮಾಡಲು ಏನಾದರೂ ಯೋಜನೆಯಿದೆಯೇ?

ಜಗತ್ತಿನಲ್ಲೇ ಮೂರನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪ ಭಾರತದಲ್ಲಿದೆ. ಬಡ ದೇಶಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ಸಂಪೂರ್ಣ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಅದಕ್ಕೊಂದು ಉಪಾಯವಿದೆ. ಪರಿಸರಕ್ಕೆ ಹಾನಿಯಾಗದಂತೆ ಕಲ್ಲಿದ್ದಲು ಗಣಿಗಾರಿಕೆ ನಡೆಸುವುದು ಒಂದು ಮಾರ್ಗ. ಇನ್ನೊಂದು ಮಾರ್ಗವೆಂದರೆ, ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸುವುದು. ಆಗ ವಾಹನ ಹಾಗೂ ಇನ್ನಿತರ ಯಂತ್ರಗಳ ಬಳಕೆಗೆ ಕಲ್ಲಿದ್ದಲಿನ ಸ್ವಚ್ಛ ಅನಿಲ ಸಿಗುತ್ತದೆ. ಹೀಗೆ ಕಲ್ಲಿದ್ದಲಿನಿಂದ ಸ್ವಚ್ಛ ಅನಿಲ ತೆಗೆಯುವ ತಂತ್ರಜ್ಞಾನ ಯಾವ ದೇಶದ ಬಳಿಯಿದ್ದರೂ ದಯವಿಟ್ಟು ಭಾರತಕ್ಕೆ ಬಂದು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಎಂದು ಆಹ್ವಾನಿಸುತ್ತೇನೆ.

* ಭಾರತವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯಾಗಿ ರೂಪಿಸುತ್ತೇವೆಂದು ಹೇಳಿದ್ದೀರಿ. ಅದಕ್ಕಾಗಿ ನಿಮ್ಮಲ್ಲಿರುವ ಯೋಜನೆಗಳೇನು?

ಜಗತ್ತಿನಲ್ಲಿ ಯಾವ ದೇಶವೂ ಇಂದು ಏಕಾಂಗಿಯಾಗಿ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲ. ದೇಶಗಳು ಪರಸ್ಪರರ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಜಾಗತಿಕ ಮಾನದಂಡಗಳ ಮೂಲಕವೇ ನಾವು ಮುನ್ನಡೆಯಬೇಕು. ಈ ಮಾನದಂಡಗಳಿಗೆ ಪೂರಕವಾಗುವಂತೆ ನಮ್ಮ ದೇಶದಲ್ಲಿನ ವ್ಯವಸ್ಥೆಯನ್ನು ಬದಲಿಸುತ್ತಿದ್ದೇವೆ. ಎರಡನೆಯದಾಗಿ, ಹೂಡಿಕೆದಾರರಿಗೆ ರಕ್ಷಣೆ ನೀಡುವುದು. ಭಾರತದಲ್ಲಿ ಬಂಡವಾಳ ಹೂಡಿದವರಿಗೆ ಅದಕ್ಕೆ ತಕ್ಕಂತೆ ಲಾಭ ಸಿಗಬೇಕು. ನಮ್ಮಲ್ಲಿರುವ ಪ್ರಜಾಪ್ರಭುತ್ವ ಹಾಗೂ ಇಂಗ್ಲಿಷ್‌ನ ವ್ಯಾಪಕ ಬಳಕೆಯಿಂದಾಗಿ ಹೂಡಿಕೆದಾರರಿಗೆ ಯಾವುದೇ ಅಂಜಿಕೆ ಇರುವುದಿಲ್ಲ. ಹೀಗಾಗಿ ನಿಶ್ಚಿಂತೆಯಿಂದ ಮತ್ತು ಸುಲಭವಾಗಿ ನಮ್ಮಲ್ಲಿ ವ್ಯವಹಾರ ನಡೆಸಬಹುದು.

ಮೂರನೆಯದಾಗಿ, ನಾವು ದೇಶದಲ್ಲಿನ ಮೂಲಸೌಕರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಸುಧಾರಣೆ ಮಾಡುತ್ತಿದ್ದೇವೆ. ಹೊಸ ವಿಮಾನ ನಿಲ್ದಾಣಗಳು, ಹೊಸ ರೈಲ್ವೆ ಮಾರ್ಗಗಳು, ಹೊಸ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ದೇಶದ ಪ್ರತಿಯೊಬ್ಬರಿಗೂ ಮನೆ ಸಿಗುವಂತೆ ಮಾಡುತ್ತಿದ್ದೇವೆ. ಕೃಷಿಯಲ್ಲಿ ನಮ್ಮ ದೇಶವನ್ನು ಜಗತ್ತಿನ ‘ಫುಡ್‌ ಬಾಸ್ಕೆಟ್‌’ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ದೇಶವನ್ನು ಮುಂಚೂಣಿಗೆ ತರಲು ಕೆಲಸ ಮಾಡುತ್ತಿದ್ದೇವೆ. ಆಯುಷ್ಮಾನ್‌ ಭಾರತ ಎಂಬ ಜಗತ್ತಿನ ಅತಿದೊಡ್ಡ ವಿಮಾ ಯೋಜನೆ ಜಾರಿಗೆ ತಂದಿರುವುದರಿಂದ 2000 ಹೊಸ ಆಸ್ಪತ್ರೆ ನಿರ್ಮಿಸುವ ಅವಕಾಶ ಸೃಷ್ಟಿಯಾಗಿದೆ. ಹಾಗೆಯೇ ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಇವೆಲ್ಲವುಗಳಿಂದಾಗಿ ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿಗೆ ತಲುಪುವುದು ನಮಗೆ ಕಷ್ಟವೇನಲ್ಲ.

* ಭಾರತದ ಅರ್ಧಕ್ಕರ್ಧ ಜನರು 25 ವರ್ಷಕ್ಕಿಂತ ಕೆಳಗಿನವರು. ಹೀಗಾಗಿ ಕೆಲಸ ಮಾಡುವ ಕೈಗಳು ಸಾಕಷ್ಟಿವೆ. ಆದರೆ, ಯುವಕರಿಗೆ ಕೌಶಲ್ಯದ ತರಬೇತಿ ಹೇಗೆ ನೀಡುತ್ತೀರಿ?

ಸೃಜನಶೀಲತೆಗೆ ನಾವು ಹೆಚ್ಚು ಒತ್ತು ನೀಡುತ್ತೇವೆ. ಇದಕ್ಕಾಗಿ ಪ್ರಾಥಮಿಕ ಶಾಲೆಗಳಿಂದಲೇ ಅಟಲ್‌ ಟಿಂಕರಿಂಗ್‌ ಸೆಂಟರ್‌ ಮೂಲಕ ಮಕ್ಕಳಿಗೆ ಸೃಜನಶೀಲತೆಗೆ ಉತ್ತೇಜನ ನೀಡುತ್ತಿದ್ದೇವೆ. ಯುವಕರಿಗಾಗಿ ಸ್ಟಾರ್ಟಪ್‌ ಇನ್‌ಕ್ಯುಬೇಶನ್‌ ಸೆಂಟರ್‌ ಆರಂಭಿಸಿದ್ದೇವೆ. ಅಲ್ಲಿ ಕೌಶಲ್ಯಾಧಾರಿತ ತರಬೇತಿಯಿಂದ ಹಿಡಿದು ಆರ್ಥಿಕ ನೆರವಿನವರೆಗೆ ಸರ್ವವೂ ಲಭ್ಯವಿದೆ. ಮೂರನೆಯದಾಗಿ, ಜಗತ್ತಿನ ಯಾವ್ಯಾವ ದೇಶಗಳಿಗೆ ಮಾನವ ಸಂಪನ್ಮೂಲದ ಅಗತ್ಯವಿದೆಯೋ ಆ ದೇಶಗಳಿಗೆ ಅವುಗಳ ಅಗತ್ಯಕ್ಕೆ ತಕ್ಕಂತೆ ನಮ್ಮ ದೇಶದ ಯುವಶಕ್ತಿಯನ್ನು ತರಬೇತುಗೊಳಿಸಿ ಪೂರೈಕೆ ಮಾಡಲು ಯೋಜನೆ ರೂಪಿಸಿದ್ದೇವೆ. ಜಪಾನ್‌ ಜೊತೆ ಈಗಾಗಲೇ ಈ ಕೆಲಸ ನಡೆಯುತ್ತಿದೆ.

* ಇಂದು ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದಾಗಿ ಸಮಾಜದಲ್ಲಿ ಅನಗತ್ಯ, ಅಪಾಯಕಾರಿ ಅಥವಾ ಸುಳ್ಳು ಮಾಹಿತಿಗಳು ಹೆಚ್ಚೆಚ್ಚು ಹರಡುತ್ತಿವೆ. ಅವುಗಳ ಜೊತೆಗೆ ಮುಖ್ಯವಾಹಿನಿಯ ಮಾಧ್ಯಮಗಳು ಪೈಪೋಟಿಗೆ ಬಿದ್ದಿರುವುದರಿಂದ ಮಾಧ್ಯಮ ಕ್ಷೇತ್ರವೂ ದಾರಿ ತಪ್ಪುತ್ತಿದೆ. ಇದಕ್ಕೆ ಏನಾದರೂ ಪರಿಹಾರವಿದೆಯೇ?

ಬಹಳ ವರ್ಷಗಳ ಹಿಂದೆ ಭಾರತದ ಒಂದು ವಿಮಾನ ಅಪಹರಣವಾಗಿತ್ತು. ನೂರಾರು ಜನರಿದ್ದ ಆ ವಿಮಾನವನ್ನು ಉಗ್ರರು ಕಂದಹಾರ್‌ಗೆ ಕೊಂಡೊಯ್ದಿದ್ದರು. ಆ ಸಮಯದಲ್ಲಿ ಭಾರತದಲ್ಲಿ ಸರ್ಕಾರದ ಮಟ್ಟದಲ್ಲಿ ಉಂಟಾಗಿದ್ದ ಆತಂಕವನ್ನು ಟೀವಿ ಚಾನಲ್‌ಗಳು ರೋಚಕವಾಗಿ ವರದಿ ಮಾಡಿದ್ದವು. ಅದನ್ನು ನೋಡಿದ ಉಗ್ರರು ಈಗ ನಾವು ಏನು ಕೇಳಿದರೂ ಅದನ್ನು ಈಡೇರಿಸುವ ಸಂಕಷ್ಟದಲ್ಲಿ ಭಾರತವಿದೆ ಎಂದು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ನಂತರ ಈ ತಪ್ಪು ಅರಿತ ಟೀವಿ ಚಾನಲ್ಲುಗಳು ತಮ್ಮಲ್ಲೇ ಸಭೆ ನಡೆಸಿ ಮುಂದೆ ಹೀಗೆ ಮಾಡಬಾರದು ಎಂದು ನಿರ್ಧರಿಸಿದ್ದವು. ನಾನದನ್ನು ತಿಳಿದು ಖುಷಿಪಟ್ಟಿದ್ದೆ. ಆದರೆ ಈಗ ಮತ್ತೆ ಪರಿಸ್ಥಿತಿ ಬಿಗಡಾಯಿಸಿದೆ. ಮಾಧ್ಯಮಗಳು ಅದನ್ನೆಲ್ಲ ಮರೆತು ಮತ್ತೆ ರೋಚಕತೆಯ ಬೆನ್ನಿಗೆ ಬಿದ್ದಿವೆ. ಇದನ್ನು ಮಾಧ್ಯಮಗಳೇ ತಿದ್ದಿಕೊಳ್ಳಬೇಕು. ಇನ್ನು, ಸಾಮಾಜಿಕ ಜಾಲತಾಣಗಳ ವಿಷಯದಲ್ಲಿ ಹೇಳುವುದಾದರೆ ಅವು ಜನರಿಗೆ ಸಬಲೀಕರಣದ ಅಸ್ತ್ರ ನೀಡಿವೆ. ನಾನಿದನ್ನು ಧನಾತ್ಮಕವಾಗಿ ನೋಡುತ್ತೇನೆ.

ಸೋಷಿಯಲ್‌ ಮೀಡಿಯಾಗಳನ್ನು ಪ್ರತಿಯೊಬ್ಬರೂ ರಚನಾತ್ಮಕ ಕಾರ್ಯಗಳಿಗೆ ಬಳಸಿಕೊಂಡು ಮೇಲೆ ಬರಲು ಸಾಧ್ಯವಿದೆ. ಆದರೆ, ಋುಣಾತ್ಮಕ ಸಂಗತಿಗಳೇ ಅವುಗಳಲ್ಲಿ ಹೆಚ್ಚುತ್ತಿರುವುದು ದುರದೃಷ್ಟಕರ. ಮಾಧ್ಯಮಗಳು ಹಾಗೂ ಸೋಷಿಯಲ್‌ ಮೀಡಿಯಾಗಳು ಫೇಕ್‌ ನ್ಯೂಸ್‌ಗಳನ್ನು ಪತ್ತೆಹಚ್ಚಿ ನಿಜ ತಿಳಿಸುವ ಕೆಲಸ ಮಾಡಿದರೆ ಒಳ್ಳೆಯದು. ಜನರು ತಮಗೆ ಬಂದ ಸುದ್ದಿ ಹಾಗೂ ಸಂದೇಶಗಳನ್ನೆಲ್ಲ ಸುಮ್ಮನೆ ಫಾರ್‌ವರ್ಡ್‌ ಮಾಡುವುದನ್ನು ನಿಲ್ಲಿಸಿ, ಯಾವುದು ಸರಿ ಮತ್ತು ಯಾವುದು ಸರಿಯಲ್ಲ ಎಂಬ ವಿವೇಕ ಬಳಸತೊಡಗಿದರೆ ಈ ಸಮಸ್ಯೆಯಿಂದ ಹೊರಬರಬಹುದು. ನಾನಂತೂ ಸೋಷಿಯಲ್‌ ಮೀಡಿಯಾಗಳ ಪರ ಇದ್ದೇನೆ! ಸ್ವತಃ ನಾನು ಸಾಮಾಜಿಕ ಜಾಲತಾಣಗಳನ್ನು ಸಾಕಷ್ಟುಬಳಸುತ್ತೇನೆ. ಏಕೆಂದರೆ ಅವು ಜನಸಾಮಾನ್ಯರ ತಳಮಟ್ಟದ ಸಮಸ್ಯೆಗಳನ್ನು ನೇರವಾಗಿ ನಮಗೆ ತಿಳಿಸುತ್ತವೆ. ಅದರಿಂದಾಗಿ ಜನರಿಗೆ ಉತ್ತಮ ಆಡಳಿತ ನೀಡಲು ನಮಗೆ ಸಾಧ್ಯವಾಗುತ್ತದೆ.

ಸೆ.27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios