ಮೂರೇ ದಿನದ ಅಂತರದಲ್ಲಿ ನಡೆದ ಎರಡು ಘಟನೆಗಳು ನನ್ನನ್ನು ಒಂದಷ್ಟು ಕಾಡಿದ್ದು ನಿಜ. ಮೊನ್ನೆ ಸುಮ್ಮನೆ ಬಸ್ ಹತ್ತಿ ಎಲ್ಲಿಗೋ ಹೋಗುತ್ತಿದ್ದಾಗ ಗೊತ್ತೇ ಇರದ, ಅಂದಿನವರೆಗೂ ಎಲ್ಲಿಯೂ ಹತ್ತಿರದಿಂದ ನೋಡಿರದ ಆಕೃತಿಯೊಂದು ಎದುರಾಗಿ ‘ಸರ್ ನೀವು ...... ಅಲ್ವೇ? ನಾನು ನಿಮ್ಮ ಫೇಸ್‌ಬುಕ್ ಫ್ರೆಂಡು ಸರ್. ನನ್ನ ಹೆಸರು ..... ಅಂತ. ಇಲ್ಲೇ ರಾಜಾಜಿನಗರದಲ್ಲಿ ರೂಮ್ ಮಾಡಿಕೊಂಡಿದ್ದೀನಿ.

ಒಂದು ಸಲ ನಿಮ್ಮನ್ನ ದೊಡ್ಡ ಫಂಕ್ಷನ್ನಲ್ಲಿ ನೋಡಿದ್ದೆ, ನಿಮ್ಮ ಮಾತು ಕೇಳಿದ್ದೆ. ತುಂಬಾ ಚೆನ್ನಾಗಿ ಮಾತಾಡ್ತೀರಿ ಸರ್. ನಿಮ್ಮ ಮಾತು ಕೇಳಿಯೇ ನನಗೆ ಜೀವನದಲ್ಲಿ ಏನಾದರೂ ಮಾಡಬೇಕು ಅನ್ನಿಸಿದ್ದು ಸರ್. ಲೈಫ್ ಅಂದ್ರೆ ತುಂಬಾ ಚೆನ್ನಾಗಿರುವ ಹೂವಿನ ತೋಟ ಇದ್ದ ಹಾಗೆ ಎಂಬುದನ್ನು ನಿಮ್ಮ ಮಾತುಗಳಿಂದ ತಿಳಿದುಕೊಂಡೆ ಸರ್’ ಎಂದು ಪಟಾಕಿಯ ರೀತಿ ಮಾತನಾಡಿ ಮುಗಿಸಿದ. ನಾನು ‘ಓಹ್ ವೆರಿ ನೈಸ್. ಗುಡ್, ಆಲ್ ದಿ ಬೆಸ್ಟ್ ಮೈ ಡಿಯರ್’ ಎಂದಷ್ಟೇ ಹೇಳಿ ಒಂದಷ್ಟು ಕೃತಕವಾಗಿ ನಕ್ಕೆ. ಅಲ್ಲಿಗೆ ಅದೊಂದು ಘಟನೆ ಸಪ್ಪೆಯಾಗಿ ಕೊನೆಗೊಂಡಿತು.

ಮೌನಿ ಹುಡುಗನ ಗೆಳೆತನದ ದಿನಗಳು!

ಇನ್ನೊಂದು ಘಟನೆ ನಡೆದದ್ದು ನಿನ್ನೆ. ನಾನು ಇಷ್ಟಪಡುವ ನಟರೊಬ್ಬರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಆ ನಟನಿಗೂ ನನಗೂ ತುಂಬಾ ಆತ್ಮೀಯತೆ. ಅದೂ ಸೋಷಲ್ ಮೀಡಿಯಾದಲ್ಲಿ ಮಾತ್ರ. ಕಾರ್ಯ ನಿಮಿತ್ತ ಏನಾದರೂ ಮಾತನಾಡಬೇಕು ಎಂದರೆ ವಾಟ್ಸಪ್ ನಲ್ಲಿ ಹಾಯ್ ಎನ್ನುತ್ತೇನೆ.

ಅವರು ಬಿಡುವಿದ್ದರೆ ತಕ್ಷಣ ಸ್ಪಂದಿಸುತ್ತಾರೆ. ಉಭಯ ಕುಶಲೋಪರಿಯ ನಂತರ ಮಾತುಕತೆ ಶುರುವಾಗುತ್ತದೆ. ಅವರ ಫೇಸ್‌ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್‌ನಲ್ಲಿ ಹಾಕಿದ ಎಲ್ಲಾ ಪೋಸ್ಟ್‌ಗಳಿಗೂ ನನ್ನದೊಂದು ಲೈಕ್, ಕಾಮೆಂಟ್, ರೀಟ್ವೀಟ್ ಇದ್ದೇ ಇರುತ್ತದೆ. ಇದು ಒಂದು ವರ್ಷದಿಂದಲೂ ನಡೆದುಕೊಂಡು ಬಂದಿದ್ದರೂ ಒಮ್ಮೆಯೂ ನೇರವಾಗಿ ಭೇಟಿಯಾಗಿಲ್ಲ.

ಭೇಟಿಯಾಗುವ ಅವಕಾಶ ಬಂದರೂ ಮನಸ್ಸು ಭೇಟಿಗೆ ಅಣಿಯಾಗುತ್ತಲೇ ಇರಲಿಲ್ಲ. ಇದೇ ರೀತಿಯ ಅವಕಾಶ ನಿನ್ನೆ ಬಂದಿತ್ತು. ಅವರಿಗೆ ನಾನು ತುಂಬಾ ಹತ್ತಿರದಲ್ಲಿ ಇದ್ದರೂ, ಸಣ್ಣ ಗುಂಪಲ್ಲಿ ನನ್ನನ್ನು ಅವರು ಸ್ಪಷ್ಟವಾಗಿ ನೋಡಿದರೂ ಪರಸ್ಪರ ಮನಸ್ಸು ಬೆಸೆಯಲೇ ಇಲ್ಲ. ಈ ಸೋಷಲ್ ಮೀಡಿ ಯಾ ಎನ್ನುವ ಕಾಣದ ಲೋಕದಲ್ಲಿ ಸೃಷ್ಟಿಯಾಗಿದ್ದ ಆತ್ಮೀಯತೆಯಲ್ಲಿ ಒಂದರ್ಧ ಭಾಗವೂ ಇಲ್ಲಿ ಇರಲಿಲ್ಲ. ನಾನಾಗಿಯೇ ಹೋಗಿ ನನ್ನ ಪರಿಚಯ ಮಾಡಿಕೊಂಡು ಮಾತನಾಡಿಸುವ ಎನ್ನುವ ಮನಸ್ಸಾದರೂ ಅದಕ್ಕೆ ನನ್ನೊಳಗು ಪೂರ್ತಿಯಾಗಿ ಸಮ್ಮತಿ ನೀಡಲೇ ಇಲ್ಲ. ಸುಮ್ಮನೆ ವಾಪಸ್ಸಾಗುವ ದಾರಿಯಲ್ಲಿ
ನನಗೆ ಬಸ್ಸಿನಲ್ಲಿ ಸಿಕ್ಕ ಹುಡುಗ ನೆನಪಾದ.

ಅಭಿಪ್ರಾಯ ಕೇಳಿದಷ್ಟೇ ಸುಲಭವಲ್ಲ, ಅಳವಡಿಸಿಕೊಳ್ಳುವುದು!

ಪ್ರಶ್ನೆಗಳು ಏಳತೊಡಗಿದವು. ನನಗೆ ಯಾರು ಎಂದೇ ಗೊತ್ತಿರದ ಆ ಹುಡುಗ ಕಂಡೊಡನೆಯೇ ಬಂದು ಎಷ್ಟೋ ವರ್ಷದ ಆತ್ಮೀಯತೆ ಇದೆ ಎನ್ನುವ ರೀತಿ ಮಾತನಾಡಿಸಿ ಹೋದ. ಅವನಿಗೆ ನಾನು ಸರಿಯಾದ ಪ್ರತಿಕ್ರಿಯೆಯನ್ನೂ ನೀಡದೇ ಹೋದೆ. ಅದೇ ವರ್ಷಗಟ್ಟಲೆ ಸೋಷಲ್ ಮೀಡಿಯಾದಲ್ಲಿ ಆತ್ಮೀಯತೆ ಇದ್ದಾಗ್ಯೂ, ನಾನಾಗಿಯೇ ಹೋಗಿ ನನ್ನ ಪರಿಚಯ ಹೇಳಿಕೊಂಡು ಚೆಂದದೊಂದು ಮುಖ ಪರಿಚಯವನ್ನು ಮಾಡಿಕೊಳ್ಳಲು ಯಾಕೆ ಹಿಂದೇಟು ಹಾಕಿದೆ. ನನ್ನ ಒಳ ಮನಸ್ಸೇಕೆ ನನಗೆ ಅಡ್ಡ ಬಂದು ನಿಂತಿತು. ಎನ್ನುವ ಪ್ರಶ್ನೆಗಳು ಸಾಲಾಗಿ ಏಳುತ್ತಲೇ ಬರುತ್ತಿವೆಯಾದರೂ ಉತ್ತರ ಸಿಕ್ಕುತ್ತಿಲ್ಲ.

ಇದೇ ರೀತಿಯ ಮನೋವ್ಯಾಪಾರ ಸಾಕಷ್ಟು ಮಂದಿಯೊಂದಿಗೆ ನಡೆಯುತ್ತಿದೆ. ನನ್ನೊಂದಿಗೇ ಕೆಲಸ ಮಾಡು ವವರು ನನಗೆ ವಾಟ್ಸಪ್‌ನಲ್ಲಿ ಗುಡ್ ಮಾರ್ನಿಂಗ್ ಹೇಳಿದರೂ ಎದುರಿಗೆ ಸಿಕ್ಕಾಗ ಸಣ್ಣ ನಗುವನ್ನೂ ಚೆಲ್ಲದೇ ಹಾಗೇ ಹೋಗುತ್ತಾರೆ. ನಾನೂ ತುಂಬಾ ಮಂದಿಗೆ ಹಾಗೆಯೇ ಮಾಡಿದ್ದೇನೆ.

ಆಗ ತಕ್ಷಣಕ್ಕೆ ಅದು ಬೇರೆ ಲೋಕವಾ, ಇದು ಬೇರೆ ಲೋಕವಾ? ಎನ್ನಿಸುತ್ತದೆ. ಅಷ್ಟು ಹೊತ್ತಿಗೆ ಮೊಬೈಲ್‌ನಲ್ಲಿ ನೊಟಿಫಿಕೇಷನ್ ಸೌಂಡ್ ಬರುತ್ತದೆ. ಯಾರೋ ವಾಟ್ಸಪ್‌ನಲ್ಲಿ ಮೆಸೇಜ್ ಮಾಡಿರುತ್ತಾರೆ. ನಿಮಗೆ ತುಂಬಾ ಹತ್ತಿರದಲ್ಲಿ ಇಂತಹ ನಿಮ್ಮ ಸ್ನೇಹಿತರು ಇದ್ದಾರೆ ಎನ್ನುವ ನೊಟಿಫಿಕೇಷನ್ ಅದಾಗಿದ್ದರೂ ಅಲ್ಲಿಗೆ ಹೋಗುವ ಸಣ್ಣ ತುಡಿತವೂ ಹುಟ್ಟುವುದಿಲ್ಲ.

- ಕೆಂಡಪ್ರದಿ