Toxic Plants for Pets: ಮನೆಯಲ್ಲಿ ಬೆಳೆಸುವ ಕೆಲವು ಸುಂದರ ಗಿಡಗಳು ನಾಯಿಗಳು ಮತ್ತು ಬೆಕ್ಕುಗಳ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಸಾಕುಪ್ರಾಣಿಗಳಿಗೆ ಹಾನಿ ಮಾಡಬಹುದಾದ 5 ಗಿಡಗಳ ಬಗ್ಗೆ ತಿಳಿದುಕೊಳ್ಳಿ. ಇಲ್ಲಾಂದ್ರೆ ಪ್ರಾಣಿಗಳ ಆರೋಗ್ಯಕ್ಕೆ ಅಪಾಯವಾಗಬಹುದು.
ಸಾಕುಪ್ರಾಣಿಗಳಿಗೆ ಹಾನಿಕಾರಕವಾಗಬಹುದಾದ ಈ 5 ಗಿಡಗಳ ಬಗ್ಗೆ ಎಚ್ಚರ!
ಅಮೆರಿಕನ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್ (ASPCA) ಮತ್ತು ಮರ್ಕ್ ವೆಟರ್ನರಿ ಮ್ಯಾನುಯಲ್ನ ಮಾಹಿತಿಯ ಪ್ರಕಾರ, ಮನೆಯಲ್ಲಿ ಸಾಮಾನ್ಯವಾಗಿ ಬೆಳೆಸುವ ಹಲವು ಗಿಡಗಳು ನಾಯಿಗಳು ಮತ್ತು ಬೆಕ್ಕುಗಳಿಗೆ ವಿಷಕಾರಿಯಾಗಬಹುದು. ಇವುಗಳಲ್ಲಿ ಕೆಲವು ಗಿಡಗಳು ಬಾಯಿಯಲ್ಲಿ ಉರಿ ಉಂಟುಮಾಡಿದರೆ, ಇನ್ನು ಕೆಲವು ದೇಹದ ಆಂತರಿಕ ಅಂಗಗಳಿಗೂ ಹಾನಿ ಉಂಟುಮಾಡಬಹುದು.
1. ಮನಿ ಪ್ಲಾಂಟ್ (Pothos)
ಮನಿ ಪ್ಲಾಂಟ್ ಮನೆಗಳಲ್ಲಿ ಸುಲಭವಾಗಿ ಕಾಣಸಿಗುವ ಒಳಾಂಗಣ ಗಿಡವಾಗಿದೆ. ಇದರ ಎಲೆಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳಿರುತ್ತವೆ. ನಾಯಿಗಳು ಅಥವಾ ಬೆಕ್ಕುಗಳು ಈ ಗಿಡದ ಎಲೆಗಳನ್ನು ಜಗಿದರೆ, ಬಾಯಿಯಲ್ಲಿ ಉರಿ, ಅತಿಯಾಗಿ ಜೊಲ್ಲು ಸುರಿಯುವುದು, ವಾಂತಿ ಮತ್ತು ಆಹಾರ ಅಥವಾ ನೀರನ್ನು ನುಂಗಲು ತೊಂದರೆಯಾಗಬಹುದು.
2. ಡೈಫೆನ್ಬ್ಯಾಕಿಯಾ (Dieffenbachia)
ದೊಡ್ಡ ಮತ್ತು ಆಕರ್ಷಕ ಎಲೆಗಳನ್ನು ಹೊಂದಿರುವ ಈ ಗಿಡವು ಮನೆಯ ಅಲಂಕಾರಕ್ಕೆ ಸುಂದರವಾಗಿ ಕಾಣುತ್ತದೆ. ಆದರೆ ಇದನ್ನು ಸಾಕುಪ್ರಾಣಿಗಳಿಂದ ದೂರವಿಡಬೇಕು. ಇದರ ಎಲೆಗಳನ್ನು ಜಗಿಯುವುದರಿಂದ ನಾಲಿಗೆ ಮತ್ತು ಬಾಯಿಯಲ್ಲಿ ಉರಿ, ಊತ ಹಾಗೂ ಜೊಲ್ಲು ಸುರಿಯುವ ಸಮಸ್ಯೆ ಉಂಟಾಗಬಹುದು.
3. ಪೀಸ್ ಲಿಲಿ (Peace Lily)
ಬಿಳಿ ಹೂವುಗಳನ್ನು ಹೊಂದಿರುವ ಪೀಸ್ ಲಿಲಿ ನೋಡಲು ಅತ್ಯಂತ ಸುಂದರವಾಗಿರುತ್ತದೆ. ಆದರೆ ಈ ಗಿಡವನ್ನು ಜಗಿಯುವುದರಿಂದ ನಾಯಿಗಳು ಮತ್ತು ಬೆಕ್ಕುಗಳಿಗೆ ಬಾಯಿಯಲ್ಲಿ ಉರಿ, ವಾಂತಿ ಹಾಗೂ ನುಂಗಲು ತೊಂದರೆಯಾಗಬಹುದು. ಆದ್ದರಿಂದ ಈ ಗಿಡವನ್ನು ಸಾಕುಪ್ರಾಣಿಗಳ ಕೈಗೆಟುಕದ ಸ್ಥಳದಲ್ಲಿ ಇಡಬೇಕು.
4. ಸಾಗೋ ಪಾಮ್ (Sago Palm)
ಸಾಗೋ ಪಾಮ್ ಸಾಕುಪ್ರಾಣಿಗಳಿಗೆ ಅತ್ಯಂತ ಅಪಾಯಕಾರಿಯಾದ ಗಿಡಗಳಲ್ಲಿ ಒಂದಾಗಿದೆ. ಈ ಗಿಡದ ಎಲ್ಲಾ ಭಾಗಗಳೂ ವಿಷಕಾರಿಯಾಗಿದ್ದು, ಇದರ ಬೀಜಗಳು ವಿಶೇಷವಾಗಿ ಅಪಾಯಕಾರಿ. ಇದನ್ನು ತಿಂದರೆ ವಾಂತಿ, ಯಕೃತ್ತಿಗೆ ಗಂಭೀರ ಹಾನಿ ಉಂಟಾಗಬಹುದು. ಕೆಲವೊಮ್ಮೆ ಪ್ರಾಣಿಗಳ ಜೀವಕ್ಕೂ ಅಪಾಯ ಎದುರಾಗಬಹುದು.
5. ಅಲೋವೆರಾ (Aloe Vera)
ಅಲೋವೆರಾವನ್ನು ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತದೆ. ಆದರೆ ಇದು ಸಾಕುಪ್ರಾಣಿಗಳಿಗೆ ಸುರಕ್ಷಿತವಲ್ಲ. ಇದರ ಎಲೆಗಳನ್ನು ತಿನ್ನುವುದರಿಂದ ವಾಂತಿ, ಭೇದಿ, ಸುಸ್ತು ಮತ್ತು ಹಸಿವು ಕಡಿಮೆಯಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
















