Good Girl Syndrome: ಎಲ್ಲರನ್ನೂ ಖುಷಿಯಾಗಿಡಬೇಕು, ಯಾರಿಗೂ ಬೇಸರ ಮಾಡಬಾರದು ಎಂಬ ಅಭ್ಯಾಸ ಮಹಿಳೆಯರಲ್ಲಿ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಗುಡ್ ಗರ್ಲ್ ಸಿಂಡ್ರೋಮ್ ಎಂದರೇನು, ಅದರ ಲಕ್ಷಣಗಳು, ಕಾರಣಗಳು ಮತ್ತು ಅದರಿಂದ ಹೊರಬರಲು ಅನುಸರಿಸಬೇಕಾದ ಸರಳ ಮಾರ್ಗಗಳ ಬಗ್ಗೆ ತಿಳಿದುಕೊಳ್ಳಿ.

ಗುಡ್ ಗರ್ಲ್ ಸಿಂಡ್ರೋಮ್?

“ನನ್ನ ಬಗ್ಗೆ ಬೇರೆಯವರು ಏನು ಅಂದುಕೊಳ್ಳುತ್ತಾರೆ?”, “ನನ್ನ ಈ ವರ್ತನೆಯಿಂದ ಯಾರಿಗಾದರೂ ಬೇಸರವಾಗಬಹುದೇ?” ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯೇ? ನಿಮ್ಮ ಸಮಸ್ಯೆಗಳನ್ನು ಮುಚ್ಚಿಟ್ಟುಕೊಂಡು, ಇತರರ ಸಂತೋಷಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದೀರಾ? ಹಾಗಿದ್ದರೆ, ನೀವು Good Girl Syndrome ಅಂದರೆ ಗುಡ್ ಗರ್ಲ್ ಸಿಂಡ್ರೋಮ್‌ ಗೆ ಒಳಗಾಗಿದ್ದೀರಿ.

ಗುಡ್ ಗರ್ಲ್ ಸಿಂಡ್ರೋಮ್ ಎಂದರೇನು?

ಗುಡ್ ಗರ್ಲ್ ಸಿಂಡ್ರೋಮ್ ಎಂಬುದು ವೈದ್ಯಕೀಯ ಅಥವಾ ಮನೋವೈಜ್ಞಾನಿಕ ಕಾಯಿಲೆಯಲ್ಲ. ಬದಲಾಗಿ, ಇತರರ ನಿರೀಕ್ಷೆಗಳನ್ನು ಪೂರೈಸಲು ಮತ್ತು ಅವರನ್ನು ಸಂತೋಷವಾಗಿಡಲು ತಮ್ಮ ಅಗತ್ಯಗಳನ್ನು ಪಕ್ಕಕ್ಕಿಡುವಂತಹ ಗುಣವಾಗಿದೆ.

ಮಹಿಳೆಯರಲ್ಲಿ ಗುಡ್ ಗರ್ಲ್ ಸಿಂಡ್ರೋಮ್‌ನ ಆರಂಭಿಕ ಲಕ್ಷಣಗಳು

  1. ಇಂತಹ ಮಹಿಳೆಯರು ತಮ್ಮ ಸುತ್ತಮುತ್ತಲಿರುವ ಪ್ರತಿಯೊಬ್ಬರೂ ತಮ್ಮಿಂದ ಸಂತೋಷವಾಗಿರಬೇಕು ಎಂದು ಬಯಸುತ್ತಾರೆ. ಬೇರೆಯವರು ಬೇಸರಗೊಳ್ಳಬಾರದು ಎಂಬ ಕಾರಣಕ್ಕೆ ತಮ್ಮ ಇಷ್ಟಗಳು ಮತ್ತು ಅಗತ್ಯಗಳನ್ನು ಹಿಂದೆ ಸರಿಸುತ್ತಾರೆ. ಕ
  2. ಕೆಲವು ಮಹಿಳೆಯರಿಗೆ ಯಾವುದೇ ಕೆಲಸ ಮಾಡಲು ಮನಸ್ಸಿಲ್ಲದಿದ್ದರೂ, ಸಮಯವಿಲ್ಲದಿದ್ದರೂ ಅಥವಾ ಆರೋಗ್ಯ ಸರಿಯಿಲ್ಲದಿದ್ದರೂ ಬೇರೆಯವರಿಗೆ 'ಇಲ್ಲ' ಎಂದು ಹೇಳಲು ಕಷ್ಟವಾಗುತ್ತದೆ. ನಿರಾಕರಿಸಿದರೆ ಎದುರಿನ ವ್ಯಕ್ತಿ ಬೇಸರ ಮಾಡಿಕೊಳ್ಳಬಹುದು ಎಂಬ ಭಯ ಅವರಲ್ಲಿರುತ್ತದೆ.
  3. ಇಂತಹ ಮಹಿಳೆಯರು ಪ್ರತಿಯೊಂದು ಪಾತ್ರದಲ್ಲಿಯೂ ಪರಿಪೂರ್ಣವಾಗಿರಬೇಕು ಎಂದು ಭಾವಿಸುತ್ತಾರೆ. ಅವರು ಮಗಳಾಗಿರಲಿ, ಪತ್ನಿಯಾಗಿರಲಿ, ತಾಯಿಯಾಗಿರಲಿ, ಸೊಸೆಯಾಗಿರಲಿ ಅಥವಾ ಉದ್ಯೋಗಸ್ಥೆಯಾಗಿರಲಿ, ಎಲ್ಲೆಡೆಯೂ ಇತರರ ನಿರೀಕ್ಷೆಗಳನ್ನು ಪೂರೈಸಬೇಕು ಎಂಬ ಹಂಬಲ ಹೊಂದಿರುತ್ತಾರೆ.
  4. ಕೆಲವು ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಇತರರು ಮಾಡುವ ಹೊಗಳಿಕೆಯ ಆಧಾರದ ಮೇಲೆ ಅಳೆಯುತ್ತಾರೆ. ಯಾರಾದರೂ ತಮ್ಮನ್ನು ಹೊಗಳದಿದ್ದರೆ ಅಥವಾ ತಮ್ಮ ಕೆಲಸಕ್ಕೆ ಪ್ರಾಮುಖ್ಯತೆ ನೀಡದಿದ್ದರೆ, ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.

ಮಹಿಳೆಯರಲ್ಲಿ ಗುಡ್ ಗರ್ಲ್ ಸಿಂಡ್ರೋಮ್ ಉಂಟಾಗಲು ಕಾರಣಗಳೇನು?

  1. ಅನೇಕ ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಹೆಚ್ಚು ವಾದ ಮಾಡಬಾರದು, ಹಿರಿಯರು ಹೇಳಿದ ಪ್ರತಿಯೊಂದು ಮಾತನ್ನೂ ಕೇಳಬೇಕು ಮತ್ತು ಯಾವಾಗಲೂ ಪ್ರೀತಿಯಿಂದ ವರ್ತಿಸಬೇಕು ಎಂದು ಕಲಿಸಲಾಗುತ್ತದೆ. ಕ್ರಮೇಣ ಅವರು ತಮ್ಮ ಆಸೆಗಳಿಗಿಂತ ಬೇರೆಯವರ ಬಗ್ಗೆ ಹೆಚ್ಚು ಯೋಚಿಸಲು ಆರಂಭಿಸುತ್ತಾರೆ.
  2. ಸಮಾಜದಲ್ಲಿ ಮಹಿಳೆಯರು ಇತರರನ್ನು ನೋಡಿಕೊಳ್ಳಬೇಕು ಎಂಬ ನಿರೀಕ್ಷೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ತಮ್ಮ ಅಗತ್ಯಗಳಿಗೆ ಗಮನ ನೀಡದೆ, ಇತರರ ಬಗ್ಗೆ ಮಾತ್ರ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
  3. ತಾವು ಬೇರೆಯವರ ಮಾತನ್ನು ಕೇಳದಿದ್ದರೆ, ಜನರು ತಮ್ಮಿಂದ ದೂರವಾಗಬಹುದು ಅಥವಾ ತಮ್ಮನ್ನು ಇಷ್ಟಪಡುವುದನ್ನು ನಿಲ್ಲಿಸಬಹುದು ಎಂಬ ಭಯ ಕೆಲವರಿಗಿರುತ್ತದೆ. ಇದೇ ಕಾರಣದಿಂದ ಅವರು ಎಲ್ಲರನ್ನೂ ಖುಷಿಯಾಗಿಡಲು ಪ್ರಯತ್ನಿಸುತ್ತಾರೆ.

ಗುಡ್ ಗರ್ಲ್ ಸಿಂಡ್ರೋಮ್ ಒತ್ತಡಕ್ಕೆ ಕಾರಣವಾಗುವುದು ಹೇಗೆ?

ಮಹಿಳೆಯರು ತಮಗೆ ಇಷ್ಟವಿಲ್ಲದಿದ್ದರೂ ಇತರರ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸಿದಾಗ ಒತ್ತಡಕ್ಕೆ ಒಳಗಾಗುತ್ತಾರೆ. ಅಲ್ಲದೇ ಇತರರ ಭಾವನೆಗಳ ಬಗ್ಗೆ ಕಾಳಜಿ ವಹಿಸುವ ಭರದಲ್ಲಿ ತಮ್ಮದೇ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಮರೆತುಬಿಡುತ್ತಾರೆ. ಇದರಿಂದ ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ತಮ್ಮ ಸಾಮರ್ಥ್ಯ ಮತ್ತು ನಿರ್ಧಾರಗಳ ಮೇಲೆ ನಂಬಿಕೆ ಇಡುವ ಬದಲು, ಇತರರ ಒಪ್ಪಿಗೆಗಾಗಿ ಕಾಯುತ್ತಿದ್ದರೆ ಕ್ರಮೇಣ ಆತ್ಮವಿಶ್ವಾಸ ಕಡಿಮೆಯಾಗಬಹುದು. ಯಾವಾಗಲೂ ಇತರರಿಗಾಗಿ ಲಭ್ಯವಿರುವುದರಿಂದ ಸಂಬಂಧಗಳಲ್ಲಿ ಜವಾಬ್ದಾರಿಗಳು ಏಕಪಕ್ಷೀಯವಾಗಬಹುದು. ಇದರಿಂದ ಎದುರಿನ ವ್ಯಕ್ತಿ ಅವರ ಅಗತ್ಯಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಮರೆತುಬಿಡಬಹುದು.

ಗುಡ್ ಗರ್ಲ್ ಸಿಂಡ್ರೋಮ್‌ನಿಂದ ಹೊರಬರಲು ಏನು ಮಾಡಬೇಕು?

  • ಪ್ರತಿಯೊಬ್ಬರಿಗೂ ಸಹಾಯ ಮಾಡುವುದು ನಿಮ್ಮ ಜವಾಬ್ದಾರಿಯಲ್ಲ. ನಿಮ್ಮ ಬಳಿ ಸಮಯವಿಲ್ಲದಿದ್ದರೆ, 'ಇಲ್ಲ' ಎಂದು ಹೇಳಲು ಕಲಿಯಿರಿ.
  • ಇತರರನ್ನು ನೋಡಿಕೊಳ್ಳುವುದರ ಜೊತೆಗೆ ನಿಮಗಾಗಿ ಸಮಯವನ್ನು ಮೀಸಲಿಡಿ. ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡಿ, ವಿಶ್ರಾಂತಿ ಪಡೆಯಿರಿ ಮತ್ತು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಿ.
  • ಯಾವತ್ತೂ ನಿಮ್ಮನ್ನು ನಿರ್ಲಕ್ಷಿಸಬೇಡಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡಿ. ಯಾರಾದರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಅದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಡಿ.