ಈ 10 ಅಂಗಗಳಿಲ್ಲದೆಯೂ ಸಹ ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ಬದುಕಬಹುದು. ಆದರೆ ವೈದ್ಯಕೀಯ ಮೇಲ್ವಿಚಾರಣೆ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಬಹಳ ಅವಶ್ಯಕ.

ದೇಹದ ಪ್ರತಿಯೊಂದು ಅಂಗವೂ ಬಹಳ ಮುಖ್ಯ. ಅದು ನಿಜವೂ ಹೌದು. ಆದರೆ ಕೆಲವು ಅಂಗಗಳಿಲ್ಲದೆಯೂ ಸಹ ವ್ಯಕ್ತಿ ಆರೋಗ್ಯಕರ ಜೀವನ ನಡೆಸಬಹುದಂತೆ. ವೈದ್ಯಕೀಯ ತಜ್ಞರ ಪ್ರಕಾರ, ಕೆಲವು ಅಂಗಗಳನ್ನು ತೆಗೆದುಹಾಕಿದರೂ ಸಹ ನಾರ್ಮಲ್ ಲೈಫ್ ನಡೆಸಬಹುದು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಡಾ. ಇಂದ್ರಾನಿಲ್ ಮುಖರ್ಜಿ ಅಂತಹ 10 ಅಂಗಗಳನ್ನು ಗುರುತಿಸಿದ್ದು, ಅವು ಯಾವುವು ಎಂದು ನೋಡೋಣ.

ಅಪೆಂಡಿಕ್ಸ್ (Appendix)
ಇದು ಕರುಳಿನ ಬಳಿ ಇರುವ ಸಣ್ಣ ಚೀಲದಂತಹ ಅಂಗ. ಹಿಂದೆ ಇದು ಸಸ್ಯ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತಿತ್ತು. ಆದರೆ ಇಂದಿನ ಲೈಫ್‌ಸ್ಟೈಲ್‌ಗೆ ಅಗತ್ಯವಿಲ್ಲ. ಹಾಗಾಗಿ ಅಪೆಂಡಿಕ್ಸ್ ತೆಗೆದುಹಾಕಿದ್ರೂ ದೊಡ್ಡ ಸಮಸ್ಯೆಯಾಗಲ್ಲ. ಕೆಲವೇ ದಿನಗಳಲ್ಲಿ ಸಾಮಾನ್ಯ ಜೀವನಕ್ಕೆ ಮರಳಬಹುದು.

ಪಿತ್ತಕೋಶ (Gallbladder)
ಇದು ಲಿವರ್‌ನಿಂದ ಪಿತ್ತರಸವನ್ನು ಸಂಗ್ರಹಿಸುತ್ತದೆ. ಇದು ಜೀರ್ಣಕ್ರಿಯೆಯಲ್ಲಿ ಉಪಯುಕ್ತವಾಗಿದೆ. ಒಂದು ವೇಳೆ ಇದನ್ನು ತೆಗೆದುಹಾಕಿದ್ರೂ ಲಿವರ್‌ ಪಿತ್ತರಸವನ್ನು ನೇರವಾಗಿ ಕರುಳಿಗೆ ಕಳುಹಿಸುತ್ತದೆ. ಮೊದಲಿಗೆ ಸ್ವಲ್ಪ ಅಸ್ವಸ್ಥತೆ ಕಾಡಿದರೂ ಕಾಲಕ್ರಮೇಣ ದೇಹ ಅದಕ್ಕೆ ಒಗ್ಗಿಕೊಳ್ಳುತ್ತದೆ.

ಕಿಡ್ನಿ( Kidney)
ನಿಮಗೆಲ್ಲಾ ಗೊತ್ತಿರುವಂತೆ ಎರಡು ಕಿಡ್ನಿಯಿದ್ದರೂ ನಾವು ಒಂದರಿಂದ ಮಾತ್ರ ಬದುಕಬಹುದು. ಒಂದು ತೆಗೆದುಹಾಕಿದರೆ, ಇನ್ನೊಂದು ತನ್ನ ಕೆಲಸವನ್ನು ಮಾಡಬಹುದು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಯಾವುದೇ ಸಮಸ್ಯೆ ಇರಲ್ಲ.

ಹೊಟ್ಟೆ (Stomach)
ಹೌದು, ನೀವು ಹೊಟ್ಟೆಯಿಲ್ಲದೆಯೂ ಬದುಕಬಹುದು. ಆಹಾರವು ನೇರವಾಗಿ ಕರುಳಿಗೆ ಹೋಗುತ್ತದೆ. ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ವಿಟಮಿನ್ ಮಾತ್ರೆ, ಸರಿಯಾದ ಆಹಾರ ಪದ್ಧತಿ ಮತ್ತು ವೈದ್ಯರ ಸೂಚನೆಗಳು ಅವಶ್ಯಕ.

ಸಣ್ಣ ಕರುಳು (Small bowel)
ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವ ಭಾಗ. ಇದರಲ್ಲಿ ಹೆಚ್ಚಿನದನ್ನು ತೆಗೆದುಹಾಕುವುದರಿಂದ ಶಾರ್ಟ್ ಗಟ್ ಸಿಂಡ್ರೋಮ್ ಉಂಟಾಗಬಹುದು. ಇದು ಅತಿಸಾರ ಮತ್ತು ಅಪೌಷ್ಟಿಕತೆಗೆ ಕಾರಣವಾಗಬಹುದು. ಕೆಲವು ರೋಗಿಗಳಿಗೆ ಚುಚ್ಚುಮದ್ದಿನ ಮೂಲಕ ಪೋಷಕಾಂಶಗಳನ್ನು ನೀಡಬೇಕಾಗುತ್ತದೆ.

ದೊಡ್ಡ ಕರುಳು(Colon)
ಇದು ನೀರನ್ನು ಹೀರಿಕೊಳ್ಳಲು ಮತ್ತು ಮಲವನ್ನು ರೂಪಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ಇದನ್ನು ತೆಗೆದರೆ ಆಗಾಗ್ಗೆ ಮಲ ವಿಸರ್ಜನೆ ಉಂಟಾಗುತ್ತದೆ. ಕೆಲವರ ಹೊಟ್ಟೆಯಲ್ಲಿ ಕೊಲೊಸ್ಟೊಮಿ ಚೀಲವನ್ನು ಇರಿಸಲಾಗುತ್ತದೆ. ಸರಿಯಾದ ಆರೈಕೆಯಿಂದ ಇದಿಲ್ಲದೆ ಜೀವನ ಸಾಧ್ಯ.

ಗುದದ್ವಾರ (Anus)
ಇದನ್ನು ತೆಗೆದುಹಾಕಿದರೂ ಸರ್ಜರಿ ಮೂಲಕ ಹೊಸ ಮಾರ್ಗವನ್ನು ಕ್ರಿಯೇಟ್ ಮಾಡ್ತಾರೆ. ಬದಲಾವಣೆ ಶಾಶ್ವತವಾಗಿದ್ದರೂ ರೋಗಿಯು ಆರೋಗ್ಯಕರ ಜೀವನವನ್ನು ನಡೆಸಬಹುದು.

ಅನ್ನನಾಳ (Esophagus)
ಇದು ಇಲ್ಲದಿದ್ದರೆ ವೈದ್ಯರು ಕರುಳಿನ ಅಥವಾ ಹೊಟ್ಟೆಯ ಒಂದು ಭಾಗವನ್ನು ಬಳಸಿಕೊಂಡು ಹೊಸ ಮಾರ್ಗವನ್ನು ರಚಿಸುತ್ತಾರೆ. ಆರಂಭದಲ್ಲಿ, ಆಹಾರವನ್ನು ಕೊಳವೆಯ ಮೂಲಕ ನೀಡಲಾಗುತ್ತದೆ. ನಂತರ ಹೊಸ ಅಭ್ಯಾಸಗಳೊಂದಿಗೆ ಜೀವನ ಮುಂದುವರಿಯಬಹುದು.

ಮೂತ್ರಕೋಶ (Urinary bladder)
ಇದು ಇಲ್ಲದಿದ್ದರೆ ದೇಹದಲ್ಲಿ ಮೂತ್ರವನ್ನು ಚೀಲಕ್ಕೆ ಹರಿಸಲು ಹೊಸ ಮಾರ್ಗವು ಸೃಷ್ಟಿಯಾಗುತ್ತದೆ. ಇದು ಶಾಶ್ವತ ಬದಲಾವಣೆಯಾಗಿದ್ದರೂ ಸರಿಯಾದ ಕಾಳಜಿಯಿಂದ ಜೀವನ ಸಾಧ್ಯ.

ಶ್ವಾಸಕೋಶ (Lung)
ಎರಡು ಶ್ವಾಸಕೋಶಗಳಿದ್ದರೂ ಒಬ್ಬ ವ್ಯಕ್ತಿಯು ಕೇವಲ ಒಂದು ಶ್ವಾಸಕೋಶದಿಂದ ಬದುಕಬಹುದು. ಆದರೆ ದೈಹಿಕ ಪರಿಶ್ರಮ ಮತ್ತು ವ್ಯಾಯಾಮ ಸ್ವಲ್ಪ ಕಷ್ಟಕರವಾಗುತ್ತದೆ. ಮಾಲಿನ್ಯ ಮತ್ತು ಸೋಂಕುಗಳ ವಿರುದ್ಧ ಹೆಚ್ಚಿನ ಕಾಳಜಿ ವಹಿಸಬೇಕು.

ನೆನಪಿಡಿ..ಈ 10 ಅಂಗಗಳಿಲ್ಲದೆಯೂ ಸಹ ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ಬದುಕಬಹುದು. ಆದರೆ ಲೈಫ್‌ಸ್ಟೈಲ್‌ನಲ್ಲಿ ಕೆಲವು ಬದಲಾವಣೆಗಳು ಬೇಕಾಗುತ್ತವೆ. ವಿಶೇಷವಾಗಿ ವೈದ್ಯಕೀಯ ಮೇಲ್ವಿಚಾರಣೆ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಬಹಳ ಅವಶ್ಯಕ.