Beauty Secret: 'ಸೀತೆ'ಯ ಬ್ಯೂಟಿ ಸೀಕ್ರೆಟ್ ಬಗ್ಗೆ ಬಲ್ಲಿರಾ ?
ಸೀತಾರಾಮಂನ ಸೀತೆಯ ಬಗ್ಗೆ ನಿಮಗೆ ಗೊತ್ತೇ ಇದೆ. ದುಲ್ಖರ್ ಸಲ್ಮಾನ್ ಅಭಿನಯದ ಅದ್ಭುತ ಚಿತ್ರದಲ್ಲಿ ಮೃಣಾಲ್ ಠಾಕೂರ್ ಸೀತೆಯಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದರು. ಎಲ್ಲರ ಮನಸೂರೆಗೊಳಿಸಿದ ಸೀತೆಯ ಬ್ಯೂಟಿ ಸೀಕ್ರೇಟ್ಸ್ ಏನು ನಿಮ್ಗೆ ಗೊತ್ತಿದ್ಯಾ ?
ಮೃಣಾಲ್ ಠಾಕೂರ್. ಸದ್ಯಕ್ಕೆ ಈ ಹೆಸರಿಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಎಲ್ಲರಿಗೂ ಈ ನಟಿಯ ಪರಿಚಯವಿದೆ. ತೆಲುಗು ಚಿತ್ರ ಸೀತಾರಾಮಂ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿದವರು ಮೃಣಾಲ್ ಠಾಕೂರ್. ಆ ಚಿತ್ರದಲ್ಲಿ ಆಕೆಯ ಸೌಂದರ್ಯ ಮತ್ತು ನಟನೆಗೆ ಎಲ್ಲರೂ ಮಾರುಹೋಗಿದ್ದರು. ಆ ಸಿನಿಮಾದಲ್ಲಿ ಸೀತಾ ಪಾತ್ರಕ್ಕೆ ಮೃಣಾಲ್ ಬಿಟ್ಟರೆ ಬೇರೆ ಯಾರೂ ಸೂಟ್ ಆಗಲಾರರು ಎಂಬ ಮಾತು ಕೇಳಿ ಬಂತು. ಆ ಮಟ್ಟಿಗೆ ಮೃಣಾಲ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಚಿತ್ರ ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ ಅಭಿಮಾನಿಗಳು ಇನ್ನೂ ಸೀತೆಯ ಸೌಂದರ್ಯದ ಗುಂಗಿನಿಂದ ಹೊರಬಂದಿಲ್ಲ. ಮುಗ್ಧವಾಗಿ, ಸುಂದರವಾಗಿ ಕಾಣುವ ಮೃಣಾಲ್ ಸೌಂದರ್ಯದ ರಹಸ್ಯವೇನು ಎಂದು ಗೂಗಲ್ ಮಾಡುತ್ತಿರುತ್ತಾರೆ. ಹಾಗಿದ್ರೆ ಮೃಣಾಲ್ ಠಾಕೂರ್ ತಮ್ಮ ಸೌಂದರ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಏನು ಮಾಡುತ್ತಾರೆ ? ಅವರ ಸೌಂದರ್ಯದ ಗುಟ್ಟೇನು ತಿಳಿಯೋಣ.
ಮೃಣಾಲ್ ತನ್ನ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತ್ವಚೆಯನ್ನು ಕಾಪಾಡಲು ಕೆಮಿಕಲ್ ಇರುವ ಉತ್ಪನ್ನದ ಬದಲು ಸಾವಯವ ಉತ್ಪನ್ನಗಳನ್ನು ಬಳಸುತ್ತಾರೆ. ಮೃಣಾಲ್ ಹೆಚ್ಚಾಗಿ ಅಲೋವೆರಾ ತಿರುಳನ್ನು ಸನ್ ಸ್ಕ್ರೀನ್ ಲೋಷನ್ ಆಗಿ ಬಳಸುತ್ತಾರೆ. ಇದುವೇ ನನ್ನ ಸೌಂದರ್ಯದ ಗುಟ್ಟೆಂದು ಅವರು ಹೇಳುತ್ತಾರೆ.
ಮೃಣಾಲ್ ಠಾಕೂರ್ ಬಳಸುವ ಫೇಸ್ ಮಾಸ್ಕ್ ಸಹ ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಲ್ಪಟ್ಟಿದೆ. ನಟಿ ಯಾವಾಗಲೂ ತಮ್ಮ ಮುಖಕ್ಕೆ ಪಪ್ಪಾಯಿ, ಜೇನುತುಪ್ಪ ಮತ್ತು ಸಕ್ಕರೆ ಬೆರೆಸಿದ ಸ್ಕ್ರಬ್ ಅನ್ನು ಬಳಸುತ್ತಾರೆ.
ತ್ವಚೆ ಆರೋಗ್ಯಪೂರ್ಣವಾಗಿರಲು ಸಾಕಷ್ಟು ನೀರು ಕುಡಿಯುವುದು ಅತೀ ಅಗತ್ಯ. ಹೀಗಾಗಿ ನಟಿ ತನ್ನ ದೇಹವನ್ನು ಹೈಡ್ರೇಟ್ ಆಗಿರಿಸಲು ಸಾಕಷ್ಟು ಎಳನೀರು ಕುಡಿಯುತ್ತಾರೆ. ಇದು ಚರ್ಮವನ್ನು ತಾಜಾವಾಗಿ ಕಾಣುವಂತೆ ಮಾಡುತ್ತದೆ.
ಮೃಣಾಲ್ ಠಾಕೂರ್ ತನ್ನ ತ್ವಚೆಯ ಜೊತೆಗೆ ದೇಹವನ್ನು ಸಹ ಫಿಟ್ ಆಗಿ ಇಟ್ಟುಕೊಳ್ಳುತ್ತಾರೆ. ಅದಕ್ಕಾಗಿ ಪ್ರತಿದಿನ ವರ್ಕೌಟ್ ಮಾಡುತ್ತಾರೆ. ವರ್ಕೌಟ್‌ಗಳಿಂದಲೂ ಚರ್ಮವು ನೈಸರ್ಗಿಕವಾಗಿ ಸುಂದರವಾಗಿ ಕಾಣುತ್ತದೆ. ತಿನ್ನುವ ಆಹಾರದ ಬಗ್ಗೆಯೂ ನಟಿ ಎಚ್ಚರ ವಹಿಸುತ್ತಾರೆ. ಜಂಕ್ ಫುಡ್‌ಗಳಿಂದ ದೂರವಿರುತ್ತಾರೆ. ಹೆಚ್ಚಾಗಿ ಅವರು ಸಲಾಡ್ ಮತ್ತು ತಾಜಾ ಹಣ್ಣಿನ ರಸವನ್ನು ಮಾತ್ರ ಕುಡಿಯುತ್ತಾರೆ.