ಬರೋಡಾದ ಈ ಮಹಾರಾಣಿ (radhika raje gaekwad) ಮುಖೇಶ್ ಅಂಬಾನಿ ಅವರ ಆಂಟಿಲಿಯಾಗಿಂತ 62 ಪಟ್ಟು ದೊಡ್ಡದಾದ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. 2000 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದರೂ, ಈ ಹಿಂದೆ ಕೆಲಸ ಮಾಡುವಾಗ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸರಳ ವ್ಯಕ್ತಿತ್ವ ಇವರದು.
ಶ್ರೀಮಂತರೆಲ್ಲರೂ ತಮ್ಮ ಶ್ರೀಮಂತಿಕೆಯನ್ನು ತೋರಿಸುವುದಿಲ್ಲ. ಮಲ್ಟಿ ಬಿಲಿಯನೇರ್ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ತಮ್ಮ ವಿಲಾಸಿ ಸ್ವತ್ತುಗಳಿಗೆ ಹೆಸರುವಾಸಿ. ತಮ್ಮ ಬಳಿ ಇರುವ ದುಡ್ಡನ್ನು ತಮಗೆ ಬೇಕಾದಂತೆ ಖರ್ಚು ಮಾಡುತ್ತಾರೆ ಎನ್ನೋಣ. ಆದರೆ ಇಲ್ಲೊಬ್ಬರಿದ್ದಾರೆ ನೋಡಿ. ಬಸ್‌ನಲ್ಲಿ ಓಡಾಡುವ ಪರಿಸ್ಥಿತಿ ಬಂದರೆ ಅದಕ್ಕೂ ಸೈ. ನೋಡಲು ಅತ್ಯಂತ ಸುಂದರಿ. ಇವರ ಮನೆ ಬಲು ದೊಡ್ಡದು. ಎಷ್ಟು ದೊಡ್ಡದೆಂದರೆ ಮುಖೇಶ್ ಅಂಬಾನಿ ಮನೆಗಿಂತ 62 ಪಟ್ಟು ದೊಡ್ಡದು!
ಹೌದು, ದೇಶದ ಅತ್ಯಂತ 'ಸುಂದರ ರಾಣಿ'ಯ ಕಿರೀಟವನ್ನು ಧರಿಸಿದ ಈಕೆ ರಾಧಿಕರಾಜೇ ಗಾಯಕ್ವಾಡ್. 2000 ಕೋಟಿ ರೂ. ಮೌಲ್ಯದ ಆಸ್ತಿಯ ಒಡತಿ. 25,000 ಕೋಟಿ ರೂ. ಮೌಲ್ಯದ ವಿಶ್ವದ ಅತಿದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮುಖೇಶ್ ಅಂಬಾನಿಯವರ ಆಂಟಿಲಿಯಾ ಕೂಡ ಇದರ ಮುಂದೆ ಸಾಧಾರಣವಾಗಿ ಕಾಣುವ ಒಂದು ದೊಡ್ಡ ನಿವಾಸ. ಗುಜರಾತ್‌ನಲ್ಲಿರುವ ಬರೋಡಾದ ರಾಜಮನೆತನದ ಲಕ್ಷ್ಮಿ ವಿಲಾಸ್ ಅರಮನೆ ಈಕೆಯ ಮನೆ; ಅದು ವಿಶ್ವದ ಅತಿದೊಡ್ಡ ಖಾಸಗಿ ಒಡೆತನದ ನಿವಾಸವಂತೆ. ಇದು ಪ್ರವಾಸಿ ತಾಣವೂ ಹೌದು, ಗಾಯಕ್ವಾಡ್ ಕುಟುಂಬದ ನಿವಾಸವೂ ಹೌದು. ರಾಧಿಕಾ ರಾಜೆಯನ್ನು ಫೋರ್ಬ್ಸ್ ಪತ್ರಿಕೆ ಭಾರತದ ಅತ್ಯಂತ ಸುಂದರ ರಾಣಿ ಎಂದು ಘೋಷಿಸಿದೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಆ ಸುದ್ದಿ ನಿಜವಲ್ಲ. ಆದರೆ ಆಕೆ ಸುಂದರಿಯಂತೂ ಹೌದು.
ಚೀತಾ ಮನುಷ್ಯನ ಮಗಳು
ಒಂದೆಡೆ, ರಾಧಿಕರಾಜೆ ಗಾಯಕ್ವಾಡ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಆಸಕ್ತಿ ಹೊಂದಿದ್ದರೆ, ಮತ್ತೊಂದೆಡೆ, ಸಮಾಜದ ಕಲ್ಯಾಣಕ್ಕಾಗಿ ಗಂಭೀರವಾಗಿ ಕೆಲಸ ಮಾಡುತ್ತಾರೆ. ನಿಮಗೆ ಗೊತ್ತಿರಲಿ, ಈಕೆ 'ಭಾರತದ ಚೀತಾ ಮನುಷ್ಯ' ಎಂದೇ ಹೆಸರಾದ ಡಾ. ಎಂ.ಕೆ. ರಂಜಿತ್‌ಸಿನ್ಹ್ ಝಾಲಾ ಅವರ ಮಗಳು. ರಂಜಿತ್‌ಸಿನ್ಹ್ ಝಾಲಾ ತಮ್ಮ ಇಡೀ ಜೀವನವನ್ನು ವನ್ಯಜೀವಿಗಳ ರಕ್ಷಣೆಗೆ ಮುಡಿಪಾಗಿಟ್ಟಿದ್ದರು. ಅವರು ಸೌರಾಷ್ಟ್ರದ ವಂಕನೇರ್ ರಾಜಮನೆತನದಲ್ಲಿ ಜನಿಸಿದರು. ಪ್ರತಿಷ್ಠಿತ ರಾಜಮನೆತನಕ್ಕೆ ಸೇರಿದವರಾಗಿದ್ದರೂ, ರಂಜಿತ್‌ಸಿನ್ಹ್ ಐಎಎಸ್ ಅಧಿಕಾರಿಯಾಗಲು ತಮ್ಮ ರಾಜಮನೆತನದ ಸ್ಥಾನಮಾನ ತೊರೆದರು. ಭಾರತದ ಅರಣ್ಯ ಮತ್ತು ವನ್ಯಜೀವಿಗಳ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1972 ರ ಭಾರತದ ವನ್ಯಜೀವಿ (ರಕ್ಷಣಾ) ಕಾಯ್ದೆಯನ್ನು ಬರೆದವರು ಅವರೇ. ಭಾರತೀಯ ವನ್ಯಜೀವಿಗಳ ಸಂರಕ್ಷಣೆ ಮತ್ತು ಆಫ್ರಿಕಾದಿಂದ ಚೀತಾಗಳನ್ನು ಭಾರತಕ್ಕೆ ತರುವಲ್ಲಿ ಅವರು ಮಾಡಿದ ಅದ್ಭುತ ಕಾರ್ಯಕ್ಕಾಗಿ, ರಂಜಿತ್‌ಸಿನ್ಹ ಅವರಿಗೆ 'ಭಾರತದ ಚೀತಾ ಮನುಷ್ಯ' ಎಂಬ ಬಿರುದು ನೀಡಲಾಯಿತು.
ರಾಧಿಕರಾಜೆ ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಮಹಿಳಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅವರು ಎಲ್‌ಎಸ್‌ಆರ್‌ನಿಂದ ಭಾರತೀಯ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸ್ನಾತಕೋತ್ತರ ಪದವಿ ಪಡೆಯುತ್ತಲೇ, ರಾಧಿಕರಾಜೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಬರಹಗಾರರಾಗಿಯೂ ಕೆಲಸ ಮಾಡಿದರು. "ರಾಣಿಯಾಗಿರುವುದು ಎಂದರೆ ಸದಾ ಕಿರೀಟ ಧರಿಸುವುದು ಎಂದು ಜನ ಭಾವಿಸುತ್ತಾರೆ. ಆದರೆ ವಾಸ್ತವ ಹಾಗಿಲ್ಲ. ನಾನು ಸಾಂಪ್ರದಾಯಿಕ ಸ್ಟೀರಿಯೊಟೈಪ್‌ಗಳನ್ನು ಮುರಿದಿದ್ದೇನೆ" ಎಂದಿದ್ದಾರೆ ಅವರು. ಉದ್ಯೋಗದಲ್ಲಿದ್ದಾಗ ಆಕೆ ಡಿಟಿಡಿಸಿ ಬಸ್ಸಿನಲ್ಲಿ ಓಡಾಡುತ್ತಿದ್ದರು.
ರಾಧಿಕರಾಜೆ ಗಾಯಕ್ವಾಡ್ ಅವರು ಮಾಜಿ ಕ್ರಿಕೆಟಿಗ ಸಮರ್ಜಿತ್‌ಸಿಂಗ್ ರಂಜಿತ್‌ಸಿಂಹ ಗಾಯಕ್ವಾಡ್ ಅವರೊಂದಿಗೆ ಸಂತೋಷದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ಈ ದಂಪತಿಗಳು ಫೆಬ್ರವರಿ 27, 2002 ರಂದು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಮರ್ಜಿತ್‌ಸಿಂಗ್ ಅವರನ್ನು ಮದುವೆಯಾದ ನಂತರ, ರಾಧಿಕರಾಜೆ ಗಾಯಕ್ವಾಡ್ ಬರೋಡಾದ ಮಹಾರಾಣಿಯಾದರು ಮತ್ತು 23 ವರ್ಷ ಹಳೆಯ ನಿವಾಸವಾದ ಲಕ್ಷ್ಮಿ ವಿಲಾಸ್ ಪ್ಯಾಲೇಸ್‌ನಲ್ಲಿ ತಮ್ಮ ಪತಿಯೊಂದಿಗೆ ವಾಸಿಸಲು ಪ್ರಾರಂಭಿಸಿದರು. ಲಕ್ಷ್ಮಿ ವಿಲಾಸ್ ಪ್ಯಾಲೇಸ್ ಭಾರತದ ಅತಿದೊಡ್ಡ ನಿವಾಸ. 3,04,92,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ಕೇವಲ 828,821 ಚದರ ಅಡಿಗಳನ್ನು ಹೊಂದಿರುವ ಐತಿಹಾಸಿಕ ಬಕಿಂಗ್‌ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಮುಖೇಶ್ ಅಂಬಾನಿಯವರ ಆಂಟಿಲಿಯಾದ ಮೌಲ್ಯ ರೂ. 18,000 ಕೋಟಿ ಮತ್ತು ಆ ಭವನದ ವಿಸ್ತೀರ್ಣ 48,780 ಚದರ ಅಡಿ. ಅಂದರೆ ಈಕೆಯ ಮನೆ ಮುಖೇಶ್ ಅಂಬಾನಿ ಮನೆಗಿಂತ 62 ಪಟ್ಟು ದೊಡ್ಡದು!


